ನವದೆಹಲಿ: ಹವಾಮಾನ ವೈಪರೀತ್ಯದ ಪರಿಣಾಮ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಆತಂಕಕಾರಿ ಬೆಳವಣಿಗೆಗಳು ಕಂಡುಬರುತ್ತಿದ್ದು, ಹಿಮನದಿಗಳು ಕರಗುವ ವೇಗ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿದೆ. ಹೊಸ ಅಧ್ಯಯನವೊಂದರ ಪ್ರಕಾರ, ಕಳೆದ ಒಂದು ದಶಕಕ್ಕೆ ಹೋಲಿಸಿದರೆ ಹಿಮಾಲಯದ ಹಿಮನದಿಗಳು ಇದೀಗ ಶೇ.65ರಷ್ಟು ವೇಗವಾಗಿ ಕರಗುತ್ತಿವೆ.
ಸಿಸ್ಟಮಿಕ್, ಇಂಟಿಗ್ರೇಟೆಡ್ ಮೌಂಟೆನ್ ಇನಿಶಿಯೇಟಿವ್, ಇಸಿಮೋಡ್ (ICIMOD) ಹಾಗೂ ಜಿ.ಬಿ. ಪಂತ್ ರಾಷ್ಟ್ರೀಯ ಹಿಮಾಲಯ ಪರಿಸರ ಸಂಸ್ಥೆ ಜಂಟಿಯಾಗಿ ಈ ಅಧ್ಯಯನ ನಡೆಸಿವೆ ಎಂದು ವರದಿಯಾಗಿದೆ.

ಹಿಮಾಲಯ-ಕಾರಾಕೋರಂ ಶ್ರೇಣಿಯಲ್ಲಿ ಸುಮಾರು 40,000 ಹಿಮನದಿಗಳಿದ್ದು, ಅವುಗಳಲ್ಲಿ ಕೇವಲ 21 ಹಿಮನದಿಗಳ ಮೇಲೆ ಮಾತ್ರ ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ. ಇಷ್ಟು ದೊಡ್ಡ ಪ್ರದೇಶದಲ್ಲಿ ಸಮರ್ಪಕ ಮೇಲ್ವಿಚಾರಣೆಯ ಕೊರತೆಯು ಭವಿಷ್ಯದಲ್ಲಿ ದೊಡ್ಡ ಮಟ್ಟದ ಪ್ರಕೃತಿ ವಿಕೋಪಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಹಿಮನದಿಗಳು ವೇಗವಾಗಿ ಕರಗುತ್ತಿರುವ ಪರಿಣಾಮ ಅವುಗಳಿಂದ ರೂಪುಗೊಳ್ಳುವ ಹಿಮಸರೋವರಗಳ ಗಾತ್ರವೂ ಹೆಚ್ಚುತ್ತಿದೆ. ಇವುಗಳನ್ನು ಬಂಡೆ ಹಾಗೂ ಮಣ್ಣಿನಿಂದ ನಿರ್ಮಾಣವಾಗಿರುವ ನೈಸರ್ಗಿಕ ತಡೆಗೋಡೆಗಳು ಹಿಡಿದಿಟ್ಟುಕೊಂಡಿವೆ. ಆದರೆ ತಾಪಮಾನ ಏರಿಕೆಯಿಂದ ಪರ್ಮಾಫ್ರಾಸ್ಟ್ ಕರಗುತ್ತಿರುವುದು ಈ ನೈಸರ್ಗಿಕ ತಡೆಗಳ ಸ್ಥಿರತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.ಇದರಿಂದ ಹಿಮಸರೋವರ ಸ್ಫೋಟದಿಂದ ಉಂಟಾಗುವ ಆಕಸ್ಮಿಕ ಪ್ರವಾಹದ (GLOF) ಅಪಾಯ ಹೆಚ್ಚುತ್ತಿದೆ. ಸರ್ಕಾರಿ ಸಮೀಕ್ಷೆಯ ಪ್ರಕಾರ ಪ್ರಾದೇಶಿಕ ಮಟ್ಟದಲ್ಲಿ 189 ಜಲಾಶಯಗಳನ್ನು ಪರಿಶೀಲಿಸಲಾಗಿದ್ದು, ಅವುಗಳಲ್ಲಿ 56 ಹಿಮಸರೋವರಗಳನ್ನು ‘ಅತ್ಯಂತ ಅಪಾಯಕಾರಿ’ ಎಂದು ಗುರುತಿಸಲಾಗಿದೆ.

ಹಿಮಾಲಯ ಪ್ರದೇಶದಲ್ಲಿ ಸಂಭವಿಸಿರುವ ಇಂತಹ ದುರಂತಗಳು ಈಗಾಗಲೇ ಭಾರಿ ಪ್ರಮಾಣದ ಜೀವಹಾನಿಗೆ ಕಾರಣವಾಗಿವೆ. 2021ರಲ್ಲಿ ಉತ್ತರಾಖಂಡದ ಋಷಿಗಂಗಾ ದುರಂತದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 2023ರಲ್ಲಿ ಸಿಕ್ಕಿಂನಲ್ಲಿ ಸಂಭವಿಸಿದ ಹಿಮಸರೋವರ ಸ್ಫೋಟದಲ್ಲೂ ಸುಮಾರು 70 ಮಂದಿ ಪ್ರಾಣ ಕಳೆದುಕೊಂಡಿದ್ದರು.
ಹಿಮಾಲಯದಿಂದ ಹುಟ್ಟುವ ನದಿಗಳು ಭಾರತದ ಆರ್ಥಿಕತೆ, ಕೃಷಿ, ಜಲವಿದ್ಯುತ್ ಹಾಗೂ ಪ್ರವಾಸೋದ್ಯಮಕ್ಕೆ ಅತ್ಯಂತ ಮಹತ್ವದ್ದಾಗಿವೆ. ಗೋಧಿ, ಭತ್ತ ಸೇರಿದಂತೆ ಹಲವು ಬೆಳೆಗಳು, ಟೀ ಎಸ್ಟೇಟ್‌ಗಳು, ಜಲವಿದ್ಯುತ್ ಯೋಜನೆಗಳು ಹಾಗೂ ಧಾರ್ಮಿಕ ಪ್ರವಾಸೋದ್ಯಮ ಈ ನದಿಗಳ ನೀರಿನ ಮೇಲೆ ಅವಲಂಬಿತವಾಗಿವೆ.ಹಿಮಾಲಯದ ನದಿಗಳು ಭಾರತದ ಒಟ್ಟು ಆಂತರಿಕ ಉತ್ಪನ್ನದ (GDP) ಸುಮಾರು 20%ರಷ್ಟು ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತವೆ ಎನ್ನಲಾಗಿದೆ. ಆದರೆ ಹಿಮಾಲಯ ಪ್ರದೇಶದ ರಾಜ್ಯಗಳು ಈ ಆರ್ಥಿಕ ಮೌಲ್ಯದ ಕೇವಲ ಶೇ.5ರಷ್ಟು ಮಾತ್ರ ಉಳಿಸಿಕೊಳ್ಳುತ್ತಿವೆ.

ವಿಜ್ಞಾನಿಗಳ ಎಚ್ಚರಿಕೆಯ ಪ್ರಕಾರ, ಈ ಶತಮಾನದ ಮಧ್ಯಭಾಗದ ವೇಳೆಗೆ ಹಿಮಾಲಯದ ನದಿಗಳ ನೀರಿನ ಹರಿವು ಗರಿಷ್ಠ ಮಟ್ಟಕ್ಕೆ ತಲುಪುವ ‘ಪೀಕ್ ವಾಟರ್’ ಹಂತ ಎದುರಾಗಬಹುದು. ಬಳಿಕ ನೀರಿನ ಹರಿವು ದೀರ್ಘಾವಧಿಯಲ್ಲಿ ಕುಸಿಯುವ ಸಾಧ್ಯತೆಯಿದ್ದು, ಇದು ದಕ್ಷಿಣ ಏಷ್ಯಾದ ಕೋಟ್ಯಂತರ ಜನರ ನೀರಿನ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ದೊಡ್ಡ ಸವಾಲಾಗಬಹುದು.






