ಮಧ್ಯಮ ವೇಗಿ ಕಾಗಿಸೊ ರಬಡಾ ಮಾರಕ ದಾಳಿಗೆ ನಾಟಕೀಯ ಕುಸಿತ ಅನುಭವಿಸಿದ ಲಕ್ನೋ ಸೂಪರ್ ಗೈಂಟ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸಾಧಾರಣ ಮೊತ್ತಕ್ಕೆ ಕುಸಿದಿದೆ.
ಪುಣೆಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಗೈಂಟ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು.

ಲಕ್ನೋ ಪರ ಕ್ವಿಂಟನ್ ಡಿಕಾಕ್ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 46 ರನ್ ಗಳಿಸಿ ಔಟಾದರೆ, ದೀಪಕ್ ಹೂಡಾ 28 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 34 ರನ್ ಸಂಪಾದಿಸಿದರು.
ಇವರಿಬ್ಬರ ಜೊತೆಯಾಟದಿಂದ 98 ರನ್ ಗೆ 1 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಲಕ್ನೋ ತಂಡ 51 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತ ದಾಖಲಿಸುವ ಅವಕಾಶದಿಂದ ವಂಚಿತವಾಯಿತು.
ಪಂಜಾಬ್ ಕಿಂಗ್ಸ್ ಪರ ಕಾಗಿಸೊ ರಬಡಾ 4 ವಿಕೆಟ್ ಮತ್ತು ರಾಹುಲ್ ಚಾಹರ್ 2 ವಿಕೆಟ್ ಪಡೆದರು.