ಮಧ್ಯಮ ವೇಗಿ ಮುಖೇಶ್ ಚೌಧರಿ ಮಾರಕ ದಾಳಿ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 18 ರನ್ ಗಳಿಂದ ಸನ್ ರೈಸರ್ಸ್ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದೆ. ಈ ಮೂಲಕ ಧೋನಿ ನಾಯಕತ್ವಕ್ಕೆ ಮರಳುತ್ತಿದ್ದಂತೆ ಚೆನ್ನೈ ಕೂಡ ಗೆಲುವಿನ ಹಾದಿಗೆ ಮರಳಿದೆ.
ಪುಣೆಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 202 ರನ್ ಪೇರಿಸಿತು.
ಕಠಿಣ ಗುರಿ ಬೆಂಬತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಕೊಲಸ್ ಪೂರನ್ ಸಿಡಿಲಬ್ಬರದ ಅರ್ಧಶತಕದ ಹೊರತಾಗಿಯೂ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 180 ರನ್ ಗಳಿಸಲಷ್ಟೇ ಶಕ್ತವಾಯಿತು.

ನಿಕೊಲಸ್ ಪೂರನ್ ಕೊನೆಯ ಓವರ್ ನಲ್ಲಿ 3 ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿದಂತೆ 23 ರನ್ ಸಿಡಿಸಿದರು. ಇದಲ್ಲದೇ ಪೂರನ್ 33 ಎಸೆತಗಳಲ್ಲಿ 3 ಬೌಂಡರಿ ಮತ್ತು 6 ಸಿಕ್ಸರ್ ಸೇರಿದಂತೆ 64 ರನ್ ಗಳಿಸಿದರು.
ಪೂರನ್ ಅಲ್ಲದೇ ನಾಯಕ ಕೇನ್ ವಿಲಿಯಮ್ಸನ್ (47) ಮತ್ತು ಅಭಿಷೇಕ್ ಶರ್ಮ (39) ಮೊದಲ ವಿಕೆಟ್ ಗೆ 58 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ಆದರೆ ಚೆನ್ನೈ ಮುಖೇಶ್ ಚೌಧರಿ ಮಾರಕ ದಾಳಿ ನಡೆಸಿ 4 ವಿಕೆಟ್ ಪಡೆದು ಹೈದರಾಬಾದ್ ಗೆ ಕಡಿವಾಣ ಹಾಕಿದರು.
ಋತುರಾಜ್-ಡೆವೊನ್ ಭರ್ಜರಿ ಜೊತೆಯಾಟ
ಆರಂಭಿಕರಾದ ಋತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೆ ಭರ್ಜರಿ ಜೊತೆಯಾಟದಿಂದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 202 ರನ್ ಪೇರಿಸಿತು.
ಋತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೆ ಮೊದಲ ವಿಕೆಟ್ ಗೆ 182 ರನ್ ಜೊತೆಯಾಟ ನಿಭಾಯಿಸಿ ದಾಖಲೆಯ ಆರಂಭ ನೀಡಿದರು.
ಋತುರಾಜ್ ಗಾಯಕ್ವಾಡ್ 57 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ ಸೇರಿದಂತೆ 99 ರನ್ ಬಾರಿಸಿದ್ದಾಗ ನಟರಾಜನ್ ಎಸೆತದಲ್ಲಿ ಔಟಾಗಿ 1 ರನ್ ನಿಂದ ಶತಕ ವಂಚಿತರಾದರು. ಡೆವೊನ್ ಕಾನ್ವೆ 55 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 85 ರನ್ ಬಾರಿಸಿ ಔಟಾಗದೇ ಉಳಿದರು.