ಕೋವಿಡ್–19 ಸಾಂಕ್ರಾಮಿಕದ ಪಿಡುಗು ತೀವ್ರಗೊಂಡಿರುವ ಬೆನ್ನಲ್ಲೇ ಮಹತ್ವದ ನಿರ್ಧಾರ ಕೈಗೊಂಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸುವುದಾಗಿ ಮಂಗಳವಾರ ಘೋಷಿಸಿದೆ.
ಹಲವಾರು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಕರೋನಾ ಸೋಂಕು ದೃಢಪಟ್ಟಿರುವ ಕಾರಣ ಬಿಸಿಸಿಐ ಐಪಿಎಲ್ 2021ಅನ್ನು ರದ್ದು ಮಾಡಿದೆ.

ಈ ಕುರಿತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.
ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಿಗೆ ಕೋವಿಡ್–19 ಸೋಂಕು ದೃಢಪಟ್ಟಿದ್ದರಿಂದ ಸೋಮವಾರ ನಡೆಯಬೇಕಿದ್ದ ಆರ್‌ಸಿಬಿ–ಕೆಕೆಆರ್ ನಡುವಣ ಪಂದ್ಯ ಮುಂದೂಡಿಕೆಯಾಗಿತ್ತು.
ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಎಲ್.ಬಾಲಾಜಿ ಅವರಿಗೆ ಕೋವಿಡ್ ಸೋಂಕು ಧೃಡಪಟ್ಟಿತ್ತು. ಎರಡೆರಡು ಬಾರಿ ನಡೆಸಿದ ಪರೀಕ್ಷೆಯಲ್ಲಿಯೂ ಅವರಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಬೇಕಿದ್ದ ಪಂದ್ಯವನ್ನೂ ಮುಂದೂಡಲಾಗಿದೆ ಎಂದು ಮಂಗಳವಾರ ಬೆಳಿಗ್ಗೆ ಬಿಸಿಸಿಐ ತಿಳಿಸಿದೆ.
ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಣ ಇಂದಿನ ಪಂದ್ಯ ನಡೆಯಲಿದೆ ಎಂದೇ ಬೆಳಿಗ್ಗೆ ಹೇಳಲಾಗಿತ್ತು. ಆದರೆ ಅಷ್ಟರಲ್ಲೇ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ವೃದ್ಧಿಮಾನ್ ಸಹಾ ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿತು.
ಈ ಮಧ್ಯೆ, ದೇಶದಾದ್ಯಂತ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವುದು, ಕೋಲ್ಕತ್ತ ಮತ್ತು ಬೆಂಗಳೂರಿನಲ್ಲಿ ಕೋವಿಡ್ ಪರಿಸ್ಥಿತಿ ಉಲ್ಪಣಗೊಂಡಿರುವುದನ್ನು ಗಮನದಲ್ಲಿಟ್ಟುಕೊಂಡು ಟೂರ್ನಿಯ ಮುಂದಿನ ಎಲ್ಲ ಪಂದ್ಯಗಳನ್ನೂ ಮುಂಬೈಗೆ ಸ್ಥಳಾಂತರಿಸಲು ಬಿಸಿಸಿಐ ಚಿಂತನೆ ನಡೆಸಿತ್ತು.
ಭಾರತದಲ್ಲಿ ಕೋವಿಡ್ ಎರಡನೇ ಅಲೆ ತನ್ನ ಕರಾಳ ಪ್ರಭಾವ ಬೀರುತ್ತಿರುವುದರ ನಡುವೆಯೂ ಐಷರಾಮಿ ಐಪಿಎಲ್ ಸರಣಿ ಯಾವುದೇ ಎಗ್ಗಿಲ್ಲದೇ ನಡೆಯುತ್ತಿರುವ ಕುರಿತು ಸಾಕಷ್ಟು ಟೀಕೆಯೂ ಎದುರಾಗಿತ್ತು. ಇದೀಗ ಸರಣಿಯನ್ನೇ ರದ್ದುಗೊಳಿಸಿ ಸಂಭಾವ್ಯ ಅಪಾಯದಿಂದ ಬಿಸಿಸಿಐ ತಪ್ಪಿಸಿಕೊಂಡಿದೆ.