ಕೊಡಗಿನ ದಲಿತ ಸಾಹಿತಿ, ಕವಿ ಹಾಗೂ ಬರಹಗಾರರಾದ ಅರ್ಜುನ್ ಮೌರ್ಯ ಅವರಿಗೆ ಅವಮಾನವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೆ ಸ್ಟೋರಿ ಮಿರರ್ ಸಂಸ್ಥೆಯ ʼಆಥರ್ ಆಫ್ ದ ಇಯರ್ 2022ʼ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಅರ್ಜುನ್ ಮೌರ್ಯರವರು ತಮ್ಮ ಮುಂದಿನ ಕವನ ಸಂಕಲನ ಕೃತಿ ʼದುಡಿʼಯ ಬಿಡುಗಡೆಗಾಗಿ ಕೊಡಗು ವಿಶ್ವವಿದ್ಯಾಲಯ ʼಜ್ಞಾನ ಕಾವೇರಿʼ ಆವರಣದಲ್ಲಿನ ಕಾವೇರಿ ಸಭಾಂಗಣದಲ್ಲಿ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಆದರೆ ವಿಶ್ವವಿದ್ಯಾಲಯ ಮಳೆಯ ಕಾರಣ ನೀಡಿ ಅರ್ಜುನ್ ಮೌರ್ಯ ಅವರ ಕೃತಿ ಬಿಡುಗಡೆ ಸಮಾರಂಭನ್ನು ರದ್ದು ಮಾಡಿದೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ನಿಗದಿಯಾಗಿತ್ತು. ಪರಿಷತ್‌ನ ಅಧ್ಯಕ್ಷ ಕೇಶವ್ ಕಾಮತ್ ಅವರನ್ನು ಉದ್ಘಾಟನೆಗೆ, ದುಡಿ ಕೃತಿಯ ವಿಮರ್ಶೆಗೆ ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕರಾದ ಡಾ. ಶಿವಕುಮಾರ್ ಅವರು ಸೇರಿದಂತೆ ಹಲವು ದಲಿತ ಚಿಂತಕರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮ ಸೋಮವಾರ (ಜುಲೈ 10) ನಿಗದಿಯಾಗಿತ್ತು.
ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅರ್ಜುನ್ ಮೌರ್ಯ ಅವರು ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ, ಸಮಾರಂಭಕ್ಕೆ ಬೇಕಾದ ಸ್ಮರಣಿಕೆಗಳನ್ನು ಕೊಡಗು ವಿಶ್ವವಿದ್ಯಾಲಯದ ಹೆಸರಿನಲ್ಲೇ ಸಿದ್ಧಪಡಿಸಿ, ಬ್ಯಾನರ್ ಹಾಗೂ ಇನ್ನಿತರ ಲಘುಉಪಾಹಾರಕ್ಕೂ ತಯಾರು ಮಾಡಿದ್ದರು.
ಆದರೆ ಭಾನುವಾರ ಅಂದರೆ ಜುಲೈ 9 ರಂದು ಮಳೆ ಹಾಗೂ ಕುಲಪತಿಗಳು ಇರುವುದಿಲ್ಲವೆಂಬ ಕಾರಣ ನೀಡಿ ಕಾರ್ಯಕ್ರಮ ರದ್ದು ಮಾಡಿರುತ್ತಾರೆ. ಈ ಬಗ್ಗೆ ಕುಲಸಚಿವರಾದ ಡಾ. ಸೀನಪ್ಪರವರನ್ನು ವಿಚಾರಿಸಿದಾಗ, “ಕೊಡಗು ವಿಶ್ವವಿದ್ಯಾಲಯದಲ್ಲಿ ಬೇಡ, ನೀವೇ ಎಲ್ಲಾದರೂ ಏರ್ಪಾಡು ಮಾಡಿಕೊಳ್ಳಿ” ಎಂದು ಹೇಳಿರುತ್ತಾರೆ. ಅರ್ಜುನ್ ಮೌರ್ಯ ಅವರು ಇದಕ್ಕೆ ಸಕಾರಣ ಕೋರಿದ್ದಾರೆ. ಆದರೆ ಇದಕ್ಕೆ ವಿಶ್ವವಿದ್ಯಾಲಯದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಹಾಗಾಗಿ ಮತ್ತೆ ಕೃತಿಕಾರರು ಮುಂದಿನ ದಿನಾಂಕವನ್ನು ಒಂದು ವಾರದ ಮುಂದೆ ತಿಳಿಸಿರಿ ಎಂದು ನೋಂದಾಯಿತ ಪತ್ರದಲ್ಲಿ ವಿನಂತಿಸಿದ್ದಾರೆ. ಆದರೆ ಇದಕ್ಕೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಈ ಬಗ್ಗೆ ಪ್ರತಿಧ್ವನಿ ಅರ್ಜುನ್ ಮೌರ್ಯ ಅವರಲ್ಲಿ ಪ್ರಶ್ನಿಸಿದಾಗ, “ನಾನೊಬ್ಬ ಬರಹಗಾರ ಹಾಗೂ ಕೊಡಗು ವಿಶ್ವವಿದ್ಯಾಲಯದ ಅಡಿಯಲ್ಲೇ ಬರುವ ಪ್ರತಿಷ್ಠಿತ ಕಾಲೇಜೊಂದರ ಕನ್ನಡ ವಿಭಾಗದ ಮುಖ್ಯಸ್ಥ ಎಂಬುದನ್ನೂ ಪರಿಗಣಿಸದೆ ಇರುವುದು ತುಂಬಾ ನೋವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇಂದು ಮಧ್ಯರಾತ್ರಿ ಸ್ಪಂದನಾ ವಿಜಯ್ ರಾಘವೇಂದ್ರ ಮೃತದೇಹ ಬೆಂಗಳೂರಿಗೆ | ನಾಳೆ ಅಂತ್ಯಕ್ರಿಯೆ
ಕೊಡಗು ವಿಶ್ವವಿದ್ಯಾಲಯದ ಉನ್ನತಾಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಹಾಗೂ ಜಾತಿ ತಾರತಮ್ಯ ವಿಶ್ವವಿದ್ಯಾಲಯವನ್ನೂ ಬಿಡುತ್ತಿಲ್ಲ ಎಂಬುದು ಮೇಲ್ನೋಟಕೆ ಕಂಡು ಬರುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೊಡಗಿನ ದಲಿತ ಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದು, ಕುಲಪತಿಗಳು ಈ ಕೂಡಲೇ ಘಟನೆ ಬಗ್ಗೆ ಸೂಕ್ತ ಕಾರಣ ನೀಡಬೇಕು. ʼದುಡಿʼ ಕೃತಿಯ ಬಿಡುಗಡೆ ಸಮಾರಂಭವನ್ನು ಕೊಡಗು ವಿಶ್ವವಿದ್ಯಾಲಯದಲ್ಲೇ ಆಯೋಜಿಸಲು ಅನುವು ಮಾಡಿಕೊಡಬೇಕು. ತಪ್ಪಿದಲ್ಲಿ ದಲಿತಪರ ಚಿಂತಕರೂ ಹಾಗೂ ದಲಿತ ಕವಿಗೆ ಮಾಡಿರುವ ದೊಡ್ಡ ಅವಮಾನವೆಂದು ಪರಿಗಣಿಸಿ ಉಗ್ರಹೋರಾಟವನ್ನು ಕೊಡಗು ವಿಶ್ವವಿದ್ಯಾಲಯದ ಆವರಣದಲ್ಲೇ ಮಾಡಿ ಅಲ್ಲೇ ಕೃತಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿವೆ.
ಅರ್ಜುನ್ ಮೌರ್ಯ ಅವರ ಕೃತಿ ಬಿಡುಗಡೆಗೆ ಕುಲಪತಿಗಳಾದ ಪ್ರೊ. ಅಶೋಕ್ ಸಂ. ಆಲೂರ, ಕುಲಸಚಿವರಾದ ಡಾ. ಸೀನಪ್ಪ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ನಿರ್ದೇಶಕರಾದ ಪ್ರೊ. ಧರ್ಮಪ್ಪ ಅವರು ಈ ಮೊದಲು ಒಪ್ಪಿಕೊಂಡಿದ್ದರು ಎಂದು ತಿಳಿದು ಬಂದಿದೆ.