• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಝೀ ವಾಹಿನಿಯಲ್ಲಿ ಅಂತರ್‌ ಕಲಹ; ಮತ್ತೊಂದು ಕೂಗುಮಾರಿ ವಾಹಿನಿಗೆ ಹಾದಿ

ನಾ ದಿವಾಕರ by ನಾ ದಿವಾಕರ
July 4, 2022
in ಅಭಿಮತ
0
ಝೀ ವಾಹಿನಿಯಲ್ಲಿ ಅಂತರ್‌ ಕಲಹ; ಮತ್ತೊಂದು ಕೂಗುಮಾರಿ ವಾಹಿನಿಗೆ ಹಾದಿ
Share on WhatsAppShare on FacebookShare on Telegram

ಕಳೆದ ಎರಡು ದಶಕಗಳಲ್ಲಿ ಕಾರ್ಪೋರೇಟ್‌ ಸ್ನೇಹಿ ಬಂಡವಾಳ ವ್ಯವಸ್ಥೆಯ ಒಂದು ಭಾಗವಾಗಿಯೇ ತನ್ನ ಅಸ್ತಿತ್ವವನ್ನು ಕಂಡುಕೊಂಡಿರುವ ಭಾರತದ ಮಾಧ್ಯಮ ಜಗತ್ತಿನಲ್ಲಿ ಯಾವುದೇ ವ್ಯತ್ಯಯ ಸಂಭವಿಸಿದರೂ ಅದರ ಹಿಂದೆ ಮಾರುಕಟ್ಟೆಯ ಕಾರಣಗಳಿರುವಂತೆಯೇ ರಾಜಕೀಯ ಕಾರಣಗಳೂ ಇರುತ್ತವೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾವಲುಕಾಯುವಂತಿರಬೇಕಾದ ಮಾಧ್ಯಮಗಳು ಆಳುವ ವರ್ಗಗಳ ವಂದಿಮಾಗಧರಾಗಿರುವುದೇ ಅಲ್ಲದೆ ವ್ಯವಸ್ಥೆಯ ಒಂದು ಭಾಗವೇ ಆಗಿಹೋಗಿರುವುದರಿಂದ, ಮಾಧ್ಯಮ ಲೋಕದಲ್ಲಿ ನಡೆಯುವ ಯಾವುದೇ ಬದಲಾವಣೆಗಳನ್ನು ಸೂಕ್ಷ್ಮವಾಗಿಯೇ ಗಮನಿಸಬೇಕಾಗುತ್ತದೆ. ಕಳೆದ ಎಂಟು ವರ್ಷಗಳಲ್ಲಿ ತಮ್ಮ ಸ್ವಾಯತ್ತತೆ, ಸ್ವಂತಿಕೆ ಮತ್ತು ಸ್ವಾತಂತ್ರ್ಯವನ್ನು ಸ್ವತಃ ತಾವೇ ಕಳೆದುಕೊಂಡು, ಮಾರುಕಟ್ಟೆಯ ಬಂಡವಾಳ ಮತ್ತು ಆಳುವ ವ್ಯವಸ್ಥೆಯ ಬೇಕುಬೇಡಗಳನ್ನು ಅವಲಂಬಿಸಿರುವ ಭಾರತದ ಮಾಧ್ಯಮ ಲೋಕ, ವಿಶೇಷವಾಗಿ ವಿದ್ಯುನ್ಮಾನ ಸುದ್ದಿಮನೆಗಳ ಲೋಕ ಈ ಜಟಿಲತೆಯ ನಡುವೆಯೇ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಬೇಕಿದೆ.

ADVERTISEMENT

ಕೇವಲ ಒಂದೆರಡು ದಶಕಗಳ ಹಿಂದೆ ಸಾರ್ವಜನಿಕರ ದೃಷ್ಟಿಯಲ್ಲಿ ವ್ಯವಸ್ಥೆಯ ಓರೆಕೋರೆಗಳನ್ನು ಎತ್ತಿತೋರುವ ಮತ್ತು ನೊಂದ ಜನತೆಯನ್ನು ಕೊಂಚಮಟ್ಟಿಗಾದರೂ ಪ್ರತಿನಿಧಿಸುವ ವಾಹಿನಿಗಳಾಗಿದ್ದ ಮಾಧ್ಯಮ ಇಂದು ಬಹುತೇಕವಾಗಿ, ವ್ಯವಸ್ಥೆಯ ಸಮರ್ಥನೆಯ ವೇದಿಕೆಗಳಾಗಿ ಬದಲಾಗಿವೆ. ಮುದ್ರಣ ಮಾಧ್ಯಮಗಳು ಕಾರ್ಪೋರೇಟ್‌ ಬಂಡವಾಳ ವ್ಯವಸ್ಥೆಯ ಜಾಹೀರಾತು ಆಮಿಷಗಳಿಗೆ ಬಲಿಯಾಗಿದ್ದರೆ, ವಿದ್ಯುನ್ಮಾನ ಮಾಧ್ಯಮಗಳು ಮಾರುಕಟ್ಟೆ ಆಧಾರಿತ ಟಿಆರ್‌ಪಿ ರೇಟಿಂಗ್‌ಗಳಿಗಾಗಿ ತಮ್ಮ ಸ್ವಂತಿಕೆಯನ್ನೂ ಕಳೆದುಕೊಂಡು ಬೆತ್ತಲಾಗುತ್ತಿವೆ. ವಿದ್ಯುನ್ಮಾನ ಸುದ್ದಿಮನೆಗಳು ಸೃಷ್ಟಿಸಿರುವ ಕೂಗುಮಾರಿ ಸಂಸ್ಕೃತಿ ಎಲ್ಲ ಭಾಷೆಗಳಿಗೂ ವ್ಯಾಪಿಸುತ್ತಿದ್ದು, ತಮ್ಮ ಮಾರುಕಟ್ಟೆ ರೇಟಿಂಗ್‌ ಹೆಚ್ಚಿಸಿಕೊಳ್ಳುವ ಪೈಪೋಟಿಯಲ್ಲಿ ಸುಳ್ಳು ಸುದ್ದಿಗಳನ್ನು ವೈಭವೀಕರಿಸುವ ಮತ್ತು ಸತ್ಯವನ್ನು ಮರೆಮಾಚುವ ಒಂದು ವ್ಯವಸ್ಥಿತ ದಂಧೆಗೆ ಮಾಧ್ಯಮ ಲೋಕ ಅವಕಾಶಗಳನ್ನು ಕಲ್ಪಿಸಿದೆ. ಕಾಂಗ್ರೆಸ್‌ ನಾಯಕರ ರಾಹುಲ್‌ ಗಾಂಧಿ ಕೇರಳದ ವಯನಾಡಿನಲ್ಲಿ ನೀಡಿದ ಹೇಳಿಕೆಯ ಬಗ್ಗೆ ಝೀ ಸುದ್ದಿವಾಹಿನಿ ಕ್ಷಮೆ ಯಾಚಿಸಿರುವುದು, ಟೈಂಸ್‌ನೌ ವಾಹಿನಿಯ ನಾವಿಕಾ ಕುಮಾರ್‌ ನೂಪುರ್‌ ಶರ್ಮ ವಿವಾದದ ಕೇಂದ್ರಬಿಂದುವಾಗಿರುವುದು, ಕನ್ನಡದ ಪಬ್ಲಿಕ್‌ ಟಿವಿಯಲ್ಲಿ ಪ್ರಚೋದನಕಾರಿ ಹೇಳಿಕೆಗಳಿಗೆ ಅವಕಾಶ ಮಾಡಿಕೊಟ್ಟು ನಂತರ ಕ್ಷಮೆ ಕೋರಿರುವುದು ಇವೆಲ್ಲವೂ ಮಾಧ್ಯಮ ಲೋಕದ ಅವನತಿಯ ಸಂಕೇತಗಳೇ ಆಗಿವೆ.

ಈ ಅವನತಿಯ ಹಾದಿಯಲ್ಲೇ ದೇಶದ ಪ್ರತಿಷ್ಠಿತ ಸುದ್ದಿಮನೆಯ ನಿರೂಪಕರೊಬ್ಬರ ನಿರ್ಗಮನ ಸುದ್ದಿಯಲ್ಲಿದೆ. ಇಂದು ಯಾವುದೇ ವಿದ್ಯುನ್ಮಾನ ಸುದ್ದಿಮನೆಯನ್ನು ಗಮನಿಸಿದರೂ, ಅದು ಒಬ್ಬ ನಿರೂಪಕನ ಮೂಲಕವೇ ಗುರುತಿಸಿಕೊಂಡಿರುತ್ತದೆ. ಈ ನಿರೂಪಕರು ಬಹುಪಾಲು ಸಂದರ್ಭಗಳಲ್ಲಿ ಕೂಗುಮಾರಿ ಸಂಸ್ಕೃತಿಯ ಪರಿಚಾರಕರಾಗಿಯೇ ಇರುತ್ತಾರೆ. ಒಂದೆರಡು ವಾಹಿನಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಇಂತಹ ಕೂಗುಮಾರಿ ನಿರೂಪಕರಿಂದಲೇ ತಮ್ಮ ಟಿಆರ್‌ಪಿ ರೇಟಿಂಗ್‌ ಹೆಚ್ಚಿಕೊಳ್ಳುತ್ತವೆ. ಕನ್ನಡದ ಮಾಧ್ಯಮ ಲೋಕದಲ್ಲಿ ಎಲ್ಲವೂ ಇದೇ ಮಾದರಿಯನ್ನು ಅನುಸರಿಸುತ್ತಿವೆ. ಹಿಂದಿ ವಾಹಿನಿಗಳ ಪೈಕಿ ಕೆಲವು ಈ ಸಂಸ್ಕೃತಿಗೆ ಹೊರತಾಗಿವೆ. ಇಂತಹ ಕೂಗುಮಾರಿ ಸಂಸ್ಕೃತಿಯ ಪರಿಚಾರಕರಲ್ಲೊಬ್ಬರಾದ ಸುಧೀರ್‌ ಚೌಧರಿ ಝೀ ನ್ಯೂಸ್‌ ವಾಹಿನಿಯಿಂದ ನಿರ್ಗಮಿಸಿದ್ದಾರೆ. ಮಾರುಕಟ್ಟೆಯಲ್ಲೂ ಅತ್ಯಂತ ಜನಪ್ರಿಯ ನಿರೂಪಕರಲ್ಲಿ ಒಬ್ಬರಾಗಿ ಖ್ಯಾತಿ ಗಳಿಸಿರುವ ಸುಧೀರ್‌ ಚೌಧರಿಯ ನಿರ್ಗಮನಕ್ಕೆ ತಾತ್ವಿಕ ಅಥವಾ ಸೈದ್ಧಾಂತಿಕ ಕಾರಣಗಳಿಗಿಂತಲೂ ವ್ಯಕ್ತಿಗತ, ವಾಣಿಜ್ಯಾಸಕ್ತಿಗಳೇ ಪ್ರಧಾನವಾಗಿರುವುದು ಸ್ಪಷ್ಟವಾಗಿದೆ.

ಝೀ ನ್ಯೂಸ್‌ ಇಂದಿಗೂ ಭಾರತದಲ್ಲಿ ಪ್ರಥಮ ಶ್ರೇಣಿಯಲ್ಲಿರುವ ಒಂದು ಸುದ್ದಿಮನೆ. ಭಾರತವು ಮಾರುಕಟ್ಟೆ ಅರ್ಥವ್ಯವಸ್ಥೆಗೆ ತೆರೆದುಕೊಂಡು, ಮಾಧ್ಯಮ ಲೋಕವೂ ಸಹ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ತನ್ನದೇ ಆದ ಮಾರುಕಟ್ಟೆ ತಂತ್ರಗಳನ್ನು ಅನುಸರಿಸಲಾರಂಭಿಸಿದಾಗ, 1990ರಲ್ಲೇ ಈ ನಿಟ್ಟಿನಲ್ಲಿ ಪ್ರಥಮ ಹೆಜ್ಜೆ ಇಟ್ಟವರು ಝೀ ನ್ಯೂಸ್‌ನ ಮಾಲೀಕರಾದ ಸುಭಾಷ್‌ ಚಂದ್ರ. ಮಾಜಿ ರಾಜ್ಯಸಭಾ ಸದಸ್ಯರೂ ಆಗಿರುವ ಸುಭಾಷ್‌ ಚಂದ್ರ ಭಾರತದ ವಿದ್ಯುನ್ಮಾನ ಮಾಧ್ಯ ಲೋಕಕ್ಕೆ ಮಾರುಕಟ್ಟೆ ಸ್ಪರ್ಶ ನೀಡಿದ್ದೇ ಅಲ್ಲದೆ, ಪಶ್ದಿಮ ರಾಷ್ಟ್ರಗಳ ಮಾಧ್ಯಮ ವಲಯಕ್ಕೆ ಸರಿಸಮಾನವಾದ ಒಂದು ಆಧುನಿಕ ಸ್ವರೂಪವನ್ನು ನೀಡುವುದರಲ್ಲೂ ಯಶಸ್ವಿಯಾಗಿದ್ದಾರೆ. ಇಂದು ಭಾರತದಲ್ಲಿ ನೂರಾರು ಟಿವಿ ವಾಹಿನಿಗಳಿದ್ದರೂ, ಇವೆಲ್ಲದರ ಜನಕ ಎಂದರೆ ಝೀ ಟೀವಿ ವಾಹಿನಿ ಎಂದು ನಿಸ್ಸಂಶಯವಾಗಿ ಹೇಳಬಹುದು. ಈ ವಾಹಿನಿಯಿಂದಲೇ ಕವಲೊಡೆದ ಹಲವಾರು ವಾಹಿನಿಗಳು ಇಂದು ನಮ್ಮ ನಡುವೆ ಇದೆ, ಹಾಗೆಯೇ ಝೀ ವಾಹಿನಿಯಿಂದಲೇ ತಮ್ಮ ವೃತ್ತಿ ಬದುಕು ಆರಂಭಿಸಿದ ಅನೇಕ ಪತ್ರಕರ್ತರು, ನಿರೂಪಕರು ಇಂದು ವಿವಿಧ ವಾಹಿನಿಗಳಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದಾರೆ.

ವಿದ್ಯುನ್ಮಾನ ಮಾಧ್ಯಮದ ಪತ್ರಿಕೋದ್ಯೋಗಿಗಳ ಪೈಕಿ ಮೊದಲ ಪೀಳಿಗೆಯವರೆಂದೇ ಗುರುತಿಸಲ್ಪಟ್ಟಿರುವ ಸುಧೀರ್‌ ಚೌಧರಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದೇ ಝೀ ನ್ಯೂಸ್‌ ವಾಹಿನಿಯ ಮೂಲಕ. ೨೪ ಗಂಟೆಗಳ ಸುದ್ದಿ ಪ್ರಸರಣ ಜನಪ್ರಿಯವಾಗುವುದರ ಹಿಂದೆ ಸುಧೀಂದ್ರ ಚೌಧರಿ ಅವರ ಕೊಡುಗೆಯೂ ಇದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. 2001ರಲ್ಲಿ ಭಾರತೀಯ ಸಂಸತ್‌ ಭವನದ ಮೇಲೆ ಭಯೋತ್ಪಾದಕ ದಾಳಿ ನಡೆದ ನಂತರ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರಫ್‌ ನಡುವೆ ನಡೆದ ಮಾತುಕತೆಗಳ ಸಂದರ್ಭದಲ್ಲಿ ಈ ಸಭೆಯ ಕಲಾಪಗಳನ್ನು ವರದಿಮಾಡಲು ನಿಯೋಜಿಸಲಾಗಿದ್ದ ತಂಡದಲ್ಲಿ ಸುಧೀರ್‌ ಚೌಧರಿ ಪ್ರಮುಖರಾಗಿದ್ದರು. 2003ರಲ್ಲಿ ಝೀ ನ್ಯೂಸ್‌ ವಾಹಿನಿಯನ್ನು ತೊರೆದು ಸಹಾರ ಸಮಯ್‌ ವಾಹಿನಿಯನ್ನು ಆರಂಭಿಸುವುದಕ್ಕೆ ಒತ್ತಾಸೆಯಾಗಿ ನಿಂತಿದ್ದರು. ಸಹಾರ ಉದ್ಯಮ ಸಮೂಹದ ಈ ಹಿಂದಿ ವಾಹಿನಿ ಹೆಚ್ಚು ಕಾಲ ಊರ್ಜಿತವಾಗಲಿಲ್ಲ. ನಂತರ ಸುಧೀರ್‌ ಇಂಡಿಯಾ ಟಿವಿ ವಾಹಿನಿಯಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದರು. 2012ರಲ್ಲಿ ಪುನಃ ತಮ್ಮ ತವರಿಗೆ, ಝೀ ನ್ಯೂಸ್‌ ವಾಹಿನಿಗೆ ಬಂದು ಸೇರಿಕೊಂಡಿದ್ದು, ನಿತ್ಯ ಸುದ್ದಿ ಮತ್ತು ವಿಶ್ಲೇಷಣೆಯ ವಿಭಾಗದಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ತಮ್ಮದೇ ಆದ ಸ್ವಂತ ವಾಹಿನಿಯನ್ನು ಆರಂಭಿಸುವ ಇಚ್ಚೆಯೊಂದಿಗೆ ನಿರ್ಗಮಿಸಿದ್ದಾರೆ.

ಸುಧೀರ್‌ ಚೌಧರಿ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಏಳುಬೀಳುಗಳನ್ನೂ ಎದುರಿಸಿದ್ದಾರೆ. ವಾಣಿಜ್ಯೋದ್ಯಮಿ ನವೀನ್‌ ಜಿಂದಾಲ್ ಅವರಿಂದ ಹಣವಸೂಲಿ ಮಾಡುವ ಆರೋಪಕ್ಕೆ ಸಿಲುಕಿದ್ದ ಚೌಧರಿ 2012ರಲ್ಲಿ ಬಂಧನಕ್ಕೊಳಗಾಗಿದ್ದರು. ಈ ಸಂಬಂಧ ಸುದ್ದಿ ಪ್ರಸರಣ ಸಂಪಾದಕರ ಸಂಘದ ಖಜಾಂಚಿಯೂ ಆಗಿದ್ದ ಸುಧೀರ್‌ ಅವರನ್ನು ಸಂಘದಿಂದ ಉಚ್ಚಾಟಿಸಲಾಗಿತ್ತು. 2018ರಲ್ಲಿ ಪರಸ್ಪರ ರಾಜಿ ಸೂತ್ರದ ಮೂಲಕ ಈ ವಿವಾದ ಬಗೆಹರಿದಿತ್ತು. ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೋಯಿತ್ರಾ ಅವರು ತಮ್ಮ ಭಾಷಣವೊಂದರಲ್ಲಿ ಟ್ರೂಮನ್‌ ಲಾಂಗ್‌ಮನ್‌ ಅವರಿಂದ ಕೃತಿಚೌರ್ಯ ಮಾಡಿದ್ದಾರೆ ಎಂದು ಆರೋಪಿಸಿ ಸುಧೀರ್‌ ಚೌಧರಿ ಮೊಯಿತ್ರಾ ಅವರಿಂದ ಮಾನನಷ್ಟ ಮೊಕದ್ದಮೆ ಎದುರಿಸಬೇಕಾಯಿತು. ನಂತರ ಸ್ವತಃ ಲಾಂಗ್‌ಮನ್‌ ಅವರೇ ಈ ಆರೋಪವನ್ನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಝೀ ನ್ಯೂಸ್‌ ಕ್ಷಮಾಪಣೆ ಕೇಳಬೇಕಾಯಿತು. ಕೋವಿದ್‌ 19 ಸಂದರ್ಭದಲ್ಲಿ ಕೋಮು ಪ್ರಚೋದಕ ಸುದ್ದಿಗಾಗಿಯೇ ಸುಧೀರ್‌ ಇಸ್ಲಾಂ ಭೀತಿ ಸೃಷ್ಟಿಸುವ ಆರೋಪಕ್ಕೆ ಗುರಿಯಾಗಿದ್ದರು. ಈ ಆರೋಪಗಳ ಹೊರತಾಗಿಯೂ ಸುಧೀರ್‌ ಒಬ್ಬ ನಿರೂಪಕರಾಗಿ ಝೀ ಸುದ್ದಿವಾಹಿನಿಯನ್ನು ಮಾರುಕಟ್ಟೆಯಲ್ಲಿ ಒಂದು ಪ್ರಬಲ ದನಿಯಾಗಿ ಕಾಪಾಡಿಕೊಂಡು ಬಂದಿದ್ದು ವಾಸ್ತವ.

ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ಬಲಪಂಥೀಯ ರಾಜಕಾರಣ ಬಲವಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆಯ ಪರವಾಗಿಯೇ ತಮ್ಮ ಸುದ್ದಿ ನಿರೂಪಣೆಯನ್ನು ನಿರ್ವಹಿಸುವ ಮೂಲಕ ಸುಧೀರ್‌ ಚೌಧರಿ ಜನಪ್ರಿಯತೆಯನ್ನೂ ಗಳಿಸಿದ್ದಾರೆ. ಕೇಂದ್ರ ಸರ್ಕಾರದ ನೀತಿಗಳನ್ನು ಬಲವಾಗಿ ಸಮರ್ಥನೆ ಮಾಡಿಕೊಳ್ಳುವುದೇ ಅಲ್ಲದೆ, ತಮ್ಮ ಸುದ್ದಿ ನಿರೂಪಣೆಯ ಮೂಲಕ ಮತ್ತು ಝೀ ವಾಹಿನಿಯಲ್ಲಿ ಏರ್ಪಡಿಸುವ ಚರ್ಚೆಗಳ ಮೂಲಕ ಸರ್ಕಾರದ ನೀತಿಗಳನ್ನು ಸಾರ್ವಜನಿಕ ವಲಯದಲ್ಲಿ ಜನಪ್ರಿಯಗೊಳಿಸುವ ಮೂಲಕ ಸುಧೀರ್‌ ಚೌಧರಿ  ವ್ಯವಸ್ಥೆಯ ಪರವಾದ ಒಂದು ದನಿಯಾಗಿ ಕಂಡುಬಂದಿದ್ದಾರೆ. ಬಹುಶಃ  ಈ ಹಿನ್ನೆಲೆಯಲ್ಲೇ ತಮ್ಮದೇ ಆದ ಸ್ವಂತ ವಾಹಿನಿಯನ್ನು ಆರಂಭಿಸುವ ಇಚ್ಚೆಯೊಂದಿಗೆ ಸುಧೀರ್‌ ಚೌಧರಿ ಝೀ ವಾಹಿನಿಯಿಂದ ನಿರ್ಗಮಿಸಿದ್ದಾರೆ. ಆಂತರಿಕವಾಗಿ ಝೀ ಸಮೂಹದ ಮಾಲೀಕ ಸುಭಾಷ್‌ ಚಂದ್ರ ಅವರು ಇತ್ತೀಚಿನ ದಿನಗಳಲ್ಲಿ ಸುಧೀರ್‌ ಚೌಧರಿಯನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದ್ದರು ಎಂಬ ಆರೋಪವೂ ಕೇಳಿಬರುತ್ತಿದೆ. 2021ರಲ್ಲಿ ಎಬಿಪಿ ನ್ಯೂಸ್‌ ವಾಹಿನಿಯಿಂದ ಬಂದು, ಝೀ ನ್ಯೂಸ್‌ನ ಕಂಟೆಂಟ್‌ ಅಧಿಕಾರಿ ಮತ್ತು ಸಂಪಾದಕರಾಗಿ ನಿಯೋಜಿತರಾದ ರಜನೀಶ್‌ ಅಹುಜಾ ಮತ್ತು ಸುಧೀರ್‌ ಚೌಧರಿ ನಡುವೆ ಇದ್ದ ಅಧಿಕಾರ ಸಂಘರ್ಷವೂ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.

ಇತ್ತೀಚಿನ ರಾಜ್ಯಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸುಭಾಷ್‌ ಚಂದ್ರ ಸೋಲು ಅನುಭವಿಸಿದ ನಂತರ, ಝೀ ನ್ಯೂಸ್‌ ಕೆಲವು ಸಂದರ್ಭಗಳಲ್ಲಿ ತಟಸ್ಥ ನೀತಿಯನ್ನೂ ಅನುಸರಿಸಲಾರಂಭಿಸಿತ್ತು. ಅಸ್ಸಾಂ ಕುರಿತು ಪ್ರಸಾರವಾದ ಒಂದು ಷೋನಲ್ಲಿ ಇದು ಸ್ಪಷ್ಟವಾಗಿದ್ದು, ಈ ಬೆಳವಣಿಗೆಗಳಿಗೆ ಸುಧೀರ್‌ ಚೌಧರಿ ಸಮ್ಮತಿ ಇರಲಿಲ್ಲ ಎಂದೂ ಹೇಳಲಾಗುತ್ತಿದೆ. ಮಾಧ್ಯಮ ಮಾರುಕಟ್ಟೆಯಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿರುವ ಸುಧೀರ್‌ ಚೌಧರಿ ಝೀ ವಾಹಿನಿಯ ಇತ್ತೀಚಿನ ತಟಸ್ಥ ನೀತಿಯಿಂದ ಅಸಮಾಧಾನಗೊಂಡಿದ್ದರೆಂದೂ ಹೇಳಲಾಗುತ್ತಿದೆ. ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಸ್ಪರ್ಧಿಸಿ, ಸೋಲು ಅನುಭವಿಸಿದ ನಂತರ ಝೀ ನ್ಯೂಸ್‌ ಮಾಲೀಕ ಸುಭಾಷ್‌ ಚಂದ್ರ ತಮ್ಮ ಸಂಸ್ಥೆಯ ಕೆಲವು ಸಿಬ್ಬಂದಿಯ ವಿರುದ್ಧ ಅಸಮಾಧಾನಗೊಂಡಿದ್ದು, ಇದರ ಪರಿಣಾಮವೇ ಸುಧೀರ್‌ ಚೌಧರಿ ಸಹ ನಿರ್ಗಮಿಸಿದ್ದಾರೆ ಎಂದು ನ್ಯೂಸ್‌ ಲಾಂಡ್ರಿ ಸುದ್ದಿವಾಹಿನಿ ಹೇಳಿದೆ.  ಇದೇ ಸಂದರ್ಭದಲ್ಲಿ ಸುಧೀರ್‌ ಚೌಧರಿ ಬಹುಮಟ್ಟಿಗೆ ಝೀ ನ್ಯೂಸ್‌ ವಾಹಿನಿಯ ಮುಖವಾಣಿಯಂತಾಗಿದ್ದುದು ಸುಭಾಷ್‌ ಚಂದ್ರ ಅವರ ಅಸಹನೆಗೆ ಕಾರಣವಾಗಿರಬಹುದು.

ಈ ಆಂತರಿಕ ಬಿಕ್ಕಟ್ಟುಗಳ ಹೊರತಾಗಿಯೂ, ಭಾರತದ ಪ್ರಸ್ತುತ ಸಂದರ್ಭದಲ್ಲಿ ಆಡಳಿತಾರೂಢ ಪಕ್ಷಗಳಿಗೆ ಮತ್ತು ಕಾರ್ಪೋರೇಟ್‌ ಮಾರುಕಟ್ಟೆಗೆ ತನ್ನದೇ ಆದ ಮಾಧ್ಯಮ ಮುಖವಾಣಿಗಳ ಅವಶ್ಯಕತೆ ಹೆಚ್ಚಾಗಿದೆ. ಸರ್ಕಾರದ ಪರ ವಕಾಲತ್ತು ವಹಿಸುವ ಮತ್ತು ಸರ್ಕಾರದ ನೀತಿಗಳನ್ನು ಸಮರ್ಥಿಸುತ್ತಲೇ ಸಾರ್ವಜನಿಕರ ನಡುವೆ ಒಂದು ಸಕಾರಾತ್ಮಕ ಅಭಿಪ್ರಾಯವನ್ನು ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು, ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿರುವುದು ಗುಟ್ಟಿನ ಮಾತೇನಲ್ಲ. ಪ್ರಜಾತಂತ್ರ ವ್ಯವಸ್ಥೆಯ ಒಂದು ಪ್ರಮುಖ ಅಂಗವಾಗಿ ಸಾರ್ವಜನಿಕರ ನಡುವೆ ಸದಾ ಜಾಗೃತಾವಸ್ಥೆಯಲ್ಲಿರುವ ಒಂದು ಸಂಸ್ಥೆಯಾಗಿ ಮಾಧ್ಯಮವೂ ಮುಖ್ಯವಾಗುತ್ತದೆ. ಆಡಳಿತಾರೂಢ ಪಕ್ಷಗಳು ಈ ಮಾಧ್ಯಮಗಳ ಮೂಲಕ, ವಾಹಿನಿಗಳ ಮೂಲಕ ತಮ್ಮದೇ ಆದ ಪ್ರಭಾವಿ ವಲಯವನ್ನು ಸೃಷ್ಟಿಸಿಕೊಳ್ಳಲು ಸದಾ ಹಾತೊರೆಯುತ್ತಿರುತ್ತವೆ. ಮುದ್ರಣ ಮಾಧ್ಯಮಗಳೇ ಪ್ರಧಾನವಾಗಿದ್ದ ಸಂದರ್ಭದಲ್ಲೂ ಇದನ್ನು ಕಾಣಬಹುದಿತ್ತು. ವಿದ್ಯುನ್ಮಾನ ಮಾಧ್ಯಮಗಳು ದೇಶದ ಮೂಲೆ ಮೂಲೆಗೂ, ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪುವ ಸಾಮರ್ಥ್ಯ ಹೊಂದಿರುವುದರಿಂದ ಆಡಳಿತಾರೂಢ ಪಕ್ಷಗಳು, ಮಾಧ್ಯಮಗಳನ್ನು ತಮ್ಮ ಆಡಳಿತ ನೀತಿಗಳ ವಾಹಕಗಳಾಗಿ ಬಳಸಿಕೊಳ್ಳುತ್ತವೆ. ಹಿಂದಿನ ಕಾಂಗ್ರೆಸ್‌ ಸರ್ಕಾರಗಳೂ ಇದನ್ನು ಮಾಡುತ್ತಲೇ ಬಂದಿವೆ. ಬಿಜೆಪಿ ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದೆ.

ಇದರೊಟ್ಟಿಗೇ ನವ ಉದಾರವಾದ ಮತ್ತು ಜಾಗತೀಕರಣದ ಆರ್ಥಿಕ ನೀತಿಗಳು ದೇಶದಲ್ಲಿ ಸೃಷ್ಟಿಸುತ್ತಿರುವ ಜನಾಕ್ರೋಶ ಮತ್ತು ಜನಸಾಮಾನ್ಯರ ನಡುವೆ ಸೃಷ್ಟಿಯಾಗುತ್ತಿರುವ ಹತಾಶೆಯನ್ನು ನಿವಾರಿಸುವ ನಿಟ್ಟಿನಲ್ಲಿ, ಆಡಳಿತ ನೀತಿಗಳ ಪರವಾದ ಸಾರ್ವಜನಿಕ ಅಭಿಪ್ರಾಯವನ್ನು ಉತ್ಪಾದಿಸುವಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಪ್ರಧಾನ ಪಾತ್ರ ವಹಿಸುತ್ತವೆ. ಟಿವಿ ವಾಹಿನಿಗಳಲ್ಲಿ ನಡೆಯುವ ಏಕಮುಖಿ ಚರ್ಚೆಗಳು ಈ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಂಡುಬರುತ್ತವೆ. ಹಾಗಾಗಿ ಮಾರುಕಟ್ಟೆ ವ್ಯವಸ್ಥೆ ಮತ್ತು ಕಾರ್ಪೋರೇಟ್‌ ಔದ್ಯಮಿಕ ಹಿತಾಸಕ್ತಿಗಳಿಗೆ ವಿದ್ಯುನ್ಮಾನ ಮಾಧ್ಯಮಗಳು ಒಂದು ಪ್ರಬಲ ವೇದಿಕೆಗಳೂ ಆಗುತ್ತವೆ. ಡಿಜಿಟಲ್‌ ಯುಗದಲ್ಲಿ ದೇಶದ ಅರ್ಥವ್ಯವಸ್ಥೆ ಹೆಚ್ಚು ಹೆಚ್ಚು ಕಾರ್ಪೋರೇಟ್‌ ಮಾರುಕಟ್ಟೆ ಕೇಂದ್ರಿತವಾಗುತ್ತಿರುವುದರಿಂದ ಆಳುವ ವರ್ಗಗಳಿಗೂ ಈ ವೇದಿಕೆಗಳು ಅಪ್ಯಾಯಮಾನವಾಗಿ ಕಾಣುತ್ತವೆ.

ಸುಧೀರ್‌ ಚೌಧರಿ ಬಹುಶಃ ಇಂತಹುದೇ ಒಂದು ಹೊಸ ವೇದಿಕೆಯನ್ನು ದೇಶದ ಜನತೆಗೆ ಸಮರ್ಪಿಸಲಿದ್ದಾರೆ. ವಸ್ತುನಿಷ್ಠ ವರದಿಗಾರಿಕೆ , ಜನಪರ ದನಿಯನ್ನು ಬಿಂಬಿಸುವ ಧೋರಣೆ ಮತ್ತು ಜನಸಮುದಾಯಗಳ ನಿತ್ಯ ಬದುಕಿನ ಬವಣೆಗಳನ್ನು ಬಿಂಬಿಸುವ ಜನೋಪಯೋಗಿ ವಿಧಾನಗಳಿಗಿಂತಲೂ ಮಿಗಿಲಾಗಿ, ಆಳುವ ವರ್ಗಗಳ ಆಡಳಿತ ನೀತಿಗಳನ್ನು ಜನರ ನಡುವೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ವಾಹಿನಿಗಳು ಕಾರ್ಯನಿರ್ವಹಿಸುತ್ತವೆ. ತಮ್ಮ ಕೂಗುಮಾರಿ ಧೋರಣೆಗೆ ಖ್ಯಾತಿ ಪಡೆದಿರುವ ಸುಧೀರ್‌ ಚೌಧರಿ ಬಹುಶಃ ತಮ್ಮ ಭವಿಷ್ಯದ ಯೋಜನೆಯಲ್ಲಿ ಯಶಸ್ಸುಗಳಿಸಲೂ ಇದೇ ಧೋರಣೆ ನೆರವಾಗುತ್ತದೆ. ಕಾರ್ಪೋರೇಟ್‌ ಬಂಡವಾಳ ಸ್ನೇಹಿ ಸರ್ಕಾರ ಮತ್ತು ಮಾರುಕಟ್ಟೆ ಸ್ನೇಹಿ ಮಾಧ್ಯಮ ಜಂಟಿಯಾಗಿ ನವ ಉದಾರವಾದವನ್ನು ತಳಮಟ್ಟದವರೆಗೂ ಪರಿಣಾಮಕಾರಿಯಾಗಿ ವಿಸ್ತರಿಸಲು ನೆರವಾಗುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಾಗುತ್ತದೆ. ಬಹುಶಃ ಸುಧೀರ್‌ ಚೌಧರಿ ಆರಂಭಿಸಲಿರುವ ಹೊಸ ವಾಹಿನಿ ಈ ಸಾಲಿಗೆ ಸೇರ್ಪಡೆಯಾಗಲಿರುವ ಮತ್ತೊಂದು ವೇದಿಕೆಯಾಗಲಿದೆ. ಸುಧೀರ್‌ ಚೌಧರಿ ಸ್ವತಃ ಕಾರ್ಪೋರೇಟ್‌ ರೂಪದಲ್ಲಿ ಹೊರಹೊಮ್ಮಲಿದ್ದಾರೋ ಅಥವಾ ಮತ್ತೊಂದು ಉದ್ದಿಮೆಯ ಭಾಗವಾಗಿ ತಮ್ಮ ವಾಹಿನಿಯ ಸಾರಥ್ಯ ವಹಿಸುವರೋ ಕಾದುನೋಡಬೇಕಿದೆ.

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ರಾಜಕಾಲುವೆ ಮೇಲೆ ಕಟ್ಟಿದ ಅರಮನೆ, ಮಾಲ್‌ʼಗಳ ಮೇಲೆ ಬುಲ್ಡೋಜರ್‌ ಹೋಗಲ್ಲ; ಬಡವರ ಮನೆಗಳ ಮೇಲೆ ಹರಿಯುತ್ತದೆ

Next Post

ಕನ್ನಡಕ್ಕೆ ಬೇಕಿದೆಯೇ ಅಕ್ಷರಗಳ ಪುನರ್‌ ಸಂರಚನೆ?

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಕನ್ನಡಕ್ಕೆ ಬೇಕಿದೆಯೇ ಅಕ್ಷರಗಳ ಪುನರ್‌ ಸಂರಚನೆ?

ಕನ್ನಡಕ್ಕೆ ಬೇಕಿದೆಯೇ ಅಕ್ಷರಗಳ ಪುನರ್‌ ಸಂರಚನೆ?

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada