ಕಳೆದು ೭-೮ ವರ್ಷಗಳ ಮೋದಿ ಆಡಳಿತ ಭಾರತದಲ್ಲಿ ಜನತಂತ್ರ ಮತ್ತು ಸಂವಿಧಾನದ ಆಶಯಗಳನ್ನು ನಾಶಮಾಡುವ ಕಾರ್ಯ ತೀವ್ರಗೊಳಿಸಿದ್ದು ನಾವೆಲ್ಲ ಬಲ್ಲೆವು. ಈ ದೇಶದ ಪ್ರತಿ ಪ್ರಜೆಯ ವೈಯಕ್ತಿಕ ಸ್ವಾತಂತ್ರವನ್ನು ಮೊಟಕುಗೊಳಿಸುವ ಪ್ರಕ್ರೀಯೆ ಕೂಡ ವೇಗ ಪಡೆದಿದೆ. ಅಭಿವ್ಯಕ್ತಿ ಸ್ವಾತಂತ್ರವನ್ನು ದೇಶದ್ರೋಹದ ಪರಿಧಿಯೊಳಗೆ ತರುವ ಧೂರ್ತತನ ಕೂಡ ಮೋದಿ ಸರಕಾರ ತೋರಿದ ಉದಾಹರಣೆಗಳಿವೆ. ಅಧಿಕಾರದಲ್ಲಿರುವ ರಾಜಕಾರಣಿಗಳ ನಿಮ್ಮನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸಲು ಬಯಸಿದರೆ, ಅವರು ಖಂಡಿತ ಸಿಕ್ಕಿಸುತ್ತಾರೆ. ನಮ್ಮ
ರಾಜಕಾರಣಿಗಳಿಗೆ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಗೌರವವಿಲ್ಲದಿರುವಾಗ ಮತ್ತು ಪ್ರಜೆಗಳನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಲು ಆದೇಶಿಸಿದಾಗ, ಪೊಲೀಸರು ಮತ್ತು ಅಧಿಕಾರಿಗಳು ಅವರ ಆದೇಶವನ್ನು ದಿಕ್ಕರಿಸುವುದಿಲ್ಲ ಎಂದು ನಿರೀಕ್ಷಿಸುವುದು ನಮ್ಮ ಮೂರ್ಖತನವಾಗುತ್ತದೆ. ಎನ್ನುತ್ತಾರೆ ವೀರ ಸಾಂಘ್ವಿ.
ವೀರ ಸಾಂಘ್ವಿ ಅವರು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಖ್ಯಾತ ಪತ್ರಕರ್ತರು ಹಾಗು ಟಿವಿ ಚರ್ಚೆಗಳ ನಿರೂಪಕರು. ಸಾಂಘ್ವಿಯವರು ೨೮ ಜುಲೈ, ೨೦೨೨ ರ ದಿ ಪ್ರಿಂಟ್ ವೆಬ್ ಜರ್ನಲ್ಲಿನಲ್ಲಿ ಮೋದಿ ಆಡಳಿತದ ಭಾರತದಲ್ಲಿ ಪ್ರಜೆಗಳ ವೈಯಕ್ತಿಕ ಸ್ವಾತಂತ್ರಕ್ಕೆ ದಕ್ಕೆ ಬಂದಿರುವ ಕುರಿತು ಒಂದು ಅಂಕಣವನ್ನು ಬರೆದಿದ್ದಾರೆ. ಆ ಲೇಖನದ ವಿಷಯವನ್ನು ನಾನು ಇಲ್ಲಿ ವಿಮರ್ಶಿಸಿದ್ದೇನೆ. ಸರ್ವಾಧಿಕಾರಿ ಆಡಳಿತ ಮತ್ತು ಜನತಾಂತ್ರಿಕ ಆಡಳಿತಗಳ ನಡುವಿನ ಒಂದು ಪ್ರಮುಖ ವ್ಯತ್ಯಾಸವೆಂದರೆ ಒಬ್ಬ ವ್ಯಕ್ತಿಯು ಅನುಭವಿಸುವ ಸ್ವಾತಂತ್ರ್ಯ. ಇಂದಿನ ಭಾರತದಲ್ಲಿ ಆ ಸ್ವಾತಂತ್ರ್ಯ ಅಪಾಯದಲ್ಲಿದೆ. ಇದು ಕೇವಲ ವಾಕ್ ಸ್ವಾತಂತ್ರ್ಯ ಮಾತ್ರವಲ್ಲ. ಅದೊಂದು ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಅಸಹಜವಾಗಿ ಬಂದೊದಗಿದ ಅಪಾಯ ಹಾಗು ಅದು ದೇಶದ ಜ್ವಲಂತ ಸಮಸ್ಯೆಯಾಗಿದ್ದು ಪ್ರಜೆಗಳ ಸಂವಿಧಾನಬದ್ಧ ಸ್ವಾತಂತ್ರ್ಯದ ಅಂತ್ಯದ ಸಂಕೇತ ಎನ್ನುತ್ತಾರೆ ಸಾಂಘ್ವಿಯವರು.
ನಮ್ಮ ದೇಶದಲ್ಲಿ ಸರಕಾರದ ವಿರುದ್ಧ ಮಾತನಾಡುವ ಯಾರನ್ನಾದರೂ ಬಂಧಿಸಿ ಜೈಲಿಗೆ ಕಳುಹಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ಯಾವುದೇ ಗಂಭೀರ ಕಾರಣಗಳಿಲ್ಲದಿದ್ದರೂ, ಸಂಬಂಧಪಟ್ಟ ವ್ಯಕ್ತಿ ಕನಿಷ್ಠ ಒಂದು ತಿಂಗಳ ಕಾಲ ಜೈಲಿನಲ್ಲಿ ಕಳೆಯುವಂತಾಗಿದೆ. ಇದು ಉದಾರವಾದಿ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಪರಿಗಣಿಸುವ ಭಾರತದಲ್ಲಿ ಏಕೆ ಸಂಭವಿಸುತ್ತಿದೆ ಎನ್ನುವ ಪ್ರಶ್ನೆ ಮೂಡಿಸುತ್ತಿದೆ. ಇದಕ್ಕೆ ಎರಡು ಕಾರಣಗಳನ್ನು ಗುರುತಿಸಬಹುದು ಎನ್ನುತ್ತಾರೆ ಸಾಂಘ್ವಿಯವರು: ಒಂದು- ಬಹುತೇಕ ಆಧುನಿಕ ಪ್ರಜಾಪ್ರಭುತ್ವ ದೇಶಗಳಲ್ಲಿ, ಅಧಿಕಾರದಲ್ಲಿರುವವರು ಕಾನೂನಿನ ಮನೋಭಾವವನ್ನು ಅನುಸರಿಸಲು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವುದು ಅತ್ಯಗತ್ಯವಾಗಿದೆ. ಇದರ ದುರುಪಯೋಗ ಇಲ್ಲವೆಂದೇನಲ್ಲ. ಆದರೆ ಬಲವಾದ ತಪಾಸಣೆ ಮತ್ತು ಸಮತೋಲನಗಳಿವೆ. ಗಂಭೀರ ಕಾರಣವಿಲ್ಲದೆ ಬಂಧನಕ್ಕೆ ಆದೇಶ ನೀಡುವ ಅಧಿಕಾರಿಗಳು ಸಾಮಾನ್ಯವಾಗಿ ಮೇಲಿನವರ ಒತ್ತಡದಿಂದ ಹಾಗೆ ಮಾಡಿರುತ್ತಾರೆˌ ಮತ್ತು ಅನೇಕ ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳಲ್ಲಿ, ಇಂತಹ ತಪ್ಪು ಬಂಧನಕ್ಕಾಗಿ ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡಬಹುದಾಗಿದೆ.
ಎರಡು- ನ್ಯಾಯವನ್ನು ಗೌರವಿಸುವ ಅಧಿಕಾರದಲ್ಲಿ ಯಾರಾದರೂ ಇದ್ದರೆ ಮಾತ್ರ ಎಲ್ಲಾ ಕಾನೂನುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆ. ಆ ಕೆಲಸ ನ್ಯಾಯಾಂಗದ ಮೇಲೆ ನಿಂತಿದೆ. ಪೊಲೀಸರು ಸಕಾರಣವಿಲ್ಲದೆ ಯಾರನ್ನಾದರೂ ಬಂಧಿಸಿದಾಗ ಅಥವಾ ಅವರು ಜೈಲು ಕಸ್ಟಡಿಗೆ ಒತ್ತಾಯಿಸಿದಾಗ, ಬಂಧನವು ಸಮರ್ಥನೆಯಾಗಿದೆಯೇ ಮತ್ತು ಒಬ್ಬ ವ್ಯಕ್ತಿಯನ್ನು ಶಿಕ್ಷೆಗೆ ಗುರಿಪಡಿಸುವ ಮೊದಲು ಜೈಲಿನಲ್ಲಿ ಇಡುವುದರಲ್ಲಿ ಅರ್ಥವಿದೆಯೇ ಎಂದು ನ್ಯಾಯಾಧೀಶರು ನಿರ್ಧರಿಸಬೇಕು. ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ವೈಯಕ್ತಿಕ ಸ್ಕೋರ್
ಭಾರತದಲ್ಲಿ ಆ ಎರಡೂ ರಕ್ಷಣಾ ಕ್ರಮಗಳು ವಿಫಲವಾಗುತ್ತಿವೆ. ಅಧಿಕಾರದ ಸ್ಥಾನದಲ್ಲಿರುವ ಜನರು ತಮಗೆ ಬೇಕಾದವರನ್ನು ಬಂಧಿಸಬಹುದು ಎನ್ನುವಂತಾಗಿದೆ. ನ್ಯಾಯಾಲಯದಲ್ಲಿ ನಿಲ್ಲುವಂತಹ ಪ್ರಕರಣದ ಬಗ್ಗೆ ಇಂದಿನ ವ್ಯವಸ್ಥೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅದು ನ್ಯಾಯಾಧೀಶರಿಗೆ ಬಿಟ್ಟ ಸಂಗತಿ ಎಂದುಕೊಳ್ಳುತ್ತಿದೆ. ಒಟ್ಟಾಗಿ, ಈ ಎರಡು ಅಂಶಗಳು ಭಾರತದಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಅಂತ್ಯವನ್ನು ಹೇಳುತ್ತವೆ ಎನ್ನುತ್ತಾರೆ ಸಾಂಘ್ವಿಯವರು.
ಮೇಲಿನ ಮಾತುಗಳನ್ನು ಸಮರ್ಥಿಸಲು ಸಾಂಘ್ವಿಯವರು ಉದಾಹರಣೆ ಸಮೇತ ವಿವರಣೆಯನ್ನ ನೀಡುತ್ತಾರೆ. ಸತ್ಯ-ಪರೀಕ್ಷಕ ಮತ್ತು ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಪ್ರಕರಣದಲ್ಲಿ ಕೆಳ ಹಂತದ ನ್ಯಾಯಾಲಯಗಳಿಂದ ಮೂರು ಬಾರಿ ಜಾಮೀನು ನಿರಾಕರಿಸಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಸಾಂಘ್ವಿ ಪ್ರಸ್ತಾಪಿಸುತ್ತಾರೆ. “ಕೇವಲ ಆರೋಪಗಳ ಆಧಾರದ ಮೇಲೆ ಮತ್ತು ನ್ಯಾಯಯುತ ವಿಚಾರಣೆಯಿಲ್ಲದೆ ವ್ಯಕ್ತಿಗಳನ್ನು ಶಿಕ್ಷಿಸಬಾರದು. ಬಂಧಿಸುವ ಅಧಿಕಾರವನ್ನು ಸಮಗ್ರವಾಗಿ ಚಿಂತಿಸದೆ ಮತ್ತು ಕಾನೂನನ್ನು ಪರಿಗಣಿಸದೆ ಚಲಾಯಿಸಿದರೆ, ಅದು ಅಧಿಕಾರದ ದುರುಪಯೋಗವಾಗುತ್ತದೆ,” ಎಂದು ನ್ಯಾಯಾಲಯ ಹೇಳಿದೆ. ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರಿಂದ ಸ್ಪಷ್ಟವಾಗಿ ಹಾಗು ಉದ್ದೇಶಪೂರ್ವಕವಾಗಿ ಬಂಧನಕ್ಕೊಳಗಾಗಿದ್ದ ಜುಬೇರ್ಗೆ ಜಾಮೀನು ನೀಡಿದ್ದಲ್ಲದೆ ಆತನ ತನಿಖೆಗಾಗಿ ಯುಪಿ ಸರ್ಕಾರ ರಚಿಸಿದ್ದ ಎಸ್ಐಟಿಯನ್ನು ವಿಸರ್ಜಿಸಿತು. ಅದರ ಜೊತೆಗೆ ಯುಪಿ ಸರಕಾರದ ನಡೆಯನ್ನು ವಿವರಿಸಲು ನ್ಯಾಯಾಲಯವು ‘ಪೊಲೀಸ್ ರಾಜ್ಯ’ ಎಂಬ ಪದವನ್ನು ಬಳಸಿತ್ತು ಎಂದು ಸಾಂಘ್ವಿಯವರು ಜ್ಞಾಪಿಸಿದ್ದಾರೆ.
ವೈಯಕ್ತಿಕ ಸ್ವಾತಂತ್ರ್ಯಕ್ಕೆ ಎದುರಾಗಿರುವ ಎರಡು ದೊಡ್ಡ ಬೆದರಿಕೆಗಳನ್ನು ಸಾಂಘ್ವಿಯವರು ನಮ್ಮ ರಾಜಕಾರಣಿಗಳ ಅಧಿಕಾರದ ದುರುಪಯೋಗದ ಪರಮಾವದಿ ಎಂದು ವಿಶ್ಲೇಷಿಸುತ್ತ ಈಗ ಇದರ ವಿರುದ್ಧ ಹೋರಾಡಲು ಅಸಾಧ್ಯದ ಹಂತಕ್ಕೆ ಭಾರತದ ಜನತಂತ್ರ ವ್ಯವಸ್ಥೆ ಬಂದು ನಿಂತಿದೆ ಅಂತಾರೆ. ಮಾದಕ ವಸ್ತುಗಳ ನಿಯಂತ್ರಣ ದಳ (ಎನ್ಸಿಬಿ) ಯಾವುದೇ ಗಂಭೀರ ಪ್ರಕರಣವಿಲ್ಲ ಎಂದು ಒಪ್ಪಿಕೊಂಡಿರುವ ಆರ್ಯನ್ ಖಾನ್ ವಿಷಯದಲ್ಲಿ ಇದೇ ರೀತಿ ನಡೆದುಕೊಂಡಿದೆ. ಶಾರುಖ್ ಖಾನ್ನ ಎಲ್ಲಾ ಸಂಪನ್ಮೂಲಗಳ ಹೊರತಾಗಿಯೂ ಕೇವಲ ಪ್ರಚಾರದ ತೆವಲಿನ ಅಧಿಕಾರಿಯಿಂದಾಗಿ ಸುಮಾರು ಒಂದು ತಿಂಗಳು ಆರ್ಯನ್ ಖಾನ್ ಜೈಲಿನಲ್ಲಿ ಕಳೆಯಬೇಕಾಯಿತು ಎನ್ನುತ್ತಾರೆ ಸಾಂಘ್ವಿಯವರು. ಆದರೆ ಆ ಅಧಿಕಾರಿಯು ಈ ಹಿಂದಿನ ಅನೇಕ ಪ್ರಕರಣಗಳಲ್ಲಿ ತನ್ನ ಹುದ್ದೆಯ ದುರುಪಯೋಗಕ್ಕೆ ಧೈರ್ಯಮಾಡಲು ಕಾರಣ ಆತನಿಗಿರುವ ರಾಜಕಾರಣಿಗಳ ಬೆಂಬಲ ಅನ್ನೋದು ಸಾಂಘ್ವಿಯವರ ಅಭಿಮತ. ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿನ ರಾಜಕಾರಣಿಗಳು ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳ ಈಡೇರಿಕೆಗಾಗಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಸಾಂಘ್ವಿಯವರು.
ಬಿಜೆಪಿ ಆಡಳಿತದ ವಿರುದ್ಧ ಮಾತನಾಡುವವರು ಹಾಗು ಅವರ ತಪ್ಪುಗಳನ್ನು ಟೀಕಿಸುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ತನಿಖಾ ಸಂಸ್ಥೆಗಳನ್ನು ˌ ಪೊಲೀಸ್ ಪಡೆಗಳನ್ನು ಮತ್ತು ಕಂದಾಯ ಅಧಿಕಾರಿಗಳನ್ನು ವಾಡಿಕೆಯಂತೆ ಬಳಸಿಕೊಳ್ಳುಲಾಗುತ್ತಿದೆ. ಕಳೆದ ಕೆಲವು ವರ್ಷಗಳ ಬಿಜೆಪಿ ಆಡಳಿತದಲ್ಲಿ, ಸರಕಾರಿ ಯಂತ್ರ ಹಾಗು ತನಿಖಾ ಸಂಸ್ಥೆಗಳ ದುರುಪಯೋಗ ಮಿತಿ ಮೀರಿದೆ ಎನ್ನುವುದು ಸಾಂಘ್ವಿಯವರ ಅಭಿಪ್ರಾಯ. ರಾಜಕಾರಣಿಗಳಿಗೆ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಗೌರವವಿಲ್ಲದಿರುವಾಗ ಮತ್ತು ತಮ್ಮ ಟೀಕಾಕಾರರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಲು ಆದೇಶಿಸಿದಾಗ, ಪೊಲೀಸರು ಮತ್ತು ಅಧಿಕಾರಿಗಳು ಇಲ್ಲಿ ಒತ್ತಡಕ್ಕೆ ಸಿಲುಕಿಕೊಳ್ಳುತ್ತಾರೆ. ಒಬ್ಬ ಪೋಲೀಸ್ ಅಧಿಕಾರಿ ತನ್ನ ಮೇಲಧಿಕಾರಿಗಳು ಅಮಾಯಕರನ್ನು ಬಲಿಪಶು ಮಾಡಲು ಆದೇಶಿಸಿದಾಗ ಆತ ಕಾನೂನಿನ ಸ್ಪಷ್ಟ ಉಲ್ಲಂಘನೆ ಮಾಡುವುದು ಅನಿವಾರ್ಯವಾಗುತ್ತದೆ. ಇಲ್ಲದಿದ್ದರೆ ಆತ ತನ್ನ ನೌಕರಿಯಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸುವ ಅಪಾಯಕ್ಕೆ ಸಿಲುಕುತ್ತಾನೆ ಎನ್ನುತ್ತಾರೆ ಸಾಂಘ್ವಿಯವರು.
ರಾಜಕಾರಣಿಗಳ ಅಧಿಕಾರ ದುರುಪಯೋಗದ ಕಾರಣದಿಂದ ಜನರ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಹೊಣೆಗಾರಿಕೆ ಈಗ ನ್ಯಾಯಾಂಗದ ಮೇಲಿದೆ. ‘ಜಾಮೀನು ನಿಯಮ ಮತ್ತು ಜೈಲು ಅಪವಾದ’ (bail is rule and jail is exception) ಎಂಬ ಹಳೇ ಮಾತನ್ನು ಇಂದಿನ ನ್ಯಾಯಾಧೀಶರು ಮರೆತಂತೆ ಕಾಣುತ್ತಿದೆ ಎಂದು ನಮ್ಮಲ್ಲಿ ಹಲವರು ಪದೇ ಪದೇ ಹೇಳುತ್ತಲೇ ಇದ್ದಾರೆ. ಆದರೆ ನಮ್ಮ ಆತಂಕದ ಕಡೆಗೆ ಯಾರೂ ಕಿಂಚಿತ್ತೂ ಗಮನ ನೀಡುತ್ತಿಲ್ಲ. ಆರ್ಯನ್ ಖಾನ್ ಬಂಧನಕ್ಕಾಗಿ ನೀವು ಸಮೀರ್ ವಾಂಖೆಡೆಯನ್ನು ದೂಷಿಸಬಹುದು. ಆದರೆ ಅನೇಕ ನ್ಯಾಯಾಧೀಶರು ವಾಂಖೆಡೆಯ ವಾದಗಳನ್ನು ಒಪ್ಪಿಕೊಂಡಿದ್ದಾರೆ ಎಂಬುದನ್ನು ಮರೆಯಬಾರದು. ಆರ್ಯನ್ ಖಾನ್ ಬಂಧನವನ್ನು ಸಮರ್ಥಿಸಲು ಅಧಿಕಾರಿಗಳು ನೀಡಿದ ಸಾಕ್ಷ್ಯಗಳು ಸಾಕಾಗುವುದಿಲ್ಲ ಎಂದು ಉಚ್ಚ ನ್ಯಾಯಾಲಯ ಹೇಳಿದೆ. ಆದರೆ ಅದೇ ಪುರಾವೆಗಳ ಆಧಾರದ ಮೇಲೆ, ಕೆಳ ನ್ಯಾಯಾಲಯಗಳು ಆತ ಜೈಲಿನಲ್ಲಿಯೇ ಇರಬೇಕೆಂದು ನಿರ್ಧರಿಸಿದ್ದು ವಿಪರ್ಯಾಸ ಎನ್ನುತ್ತಾರೆ ಸಾಂಘ್ವಿಯವರು. ಅಂತೆಯೇ ಮೊಹಮ್ಮದ್ ಜುಬೇರ್, ಮುನಾವರ್ ಫರುಕಿ ಮತ್ತು ಅಸಂಖ್ಯಾತ ಇತರರೊಂದಿಗೆ ಅಧಿಕಾರಿಗಳು ಇದೇ ರೀತಿ ನಡೆದುಕೊಂಡಿದ್ದಾರೆ. ಆದ್ದರಿಂದ, ನ್ಯಾಯಾಧೀಶರು ಜನರ ಹಾಗು ಹೋರಾಟಗಾರರ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸದಿದ್ದರೆ ಮತ್ತಾರು ರಕ್ಷಿಸಬೇಕು ಎಂದು ಸಾಂಘ್ವಿಯವರು ಆತಂಕ ವ್ಯಕ್ತ ಪಡಿಸಿದ್ದಾರೆ.
ಪ್ರತಿಯೊಬ್ಬ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗೆ ನ್ಯಾಯ ವ್ಯವಸ್ಥೆಯ ನಿರ್ವಹಣೆಯ ಬಗ್ಗೆ ಜ್ಞಾಪಿಸುವ ಬಾಧ್ಯತೆ ಸುಪ್ರೀಂ ಕೋರ್ಟ್ ಹೊಂದಿದೆ. ಪ್ರತಿ ಬಂಧನಕ್ಕೊಳಗಾದ ವ್ಯಕ್ತಿ ಜಾಮೀನು ಪಡೆಯುವ ಹಕ್ಕನ್ನು ಹೊಂದಿದ್ದಾನೆ. ಗಂಭೀರ ಸ್ವರೂಪದ ಆರೋಪ ಮತ್ತು ಪ್ರಭಾವಶಾಲಿ ಆರೋಪಿಗಳು ಸಾಕ್ಷ್ಯವನ್ನು ನಾಶಪಡಿಸುವ ಅಥವಾ ಸಂಭಾವ್ಯ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಅಥವಾ ಬೆದರಿಕೆ ಒಡ್ಡುವ ಪ್ರಸಂಗಗಳನ್ನು ಹೊರತು ಪಡಿಸಿ ನ್ಯಾಯಾಲಯದಲ್ಲಿ ಅವರ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಅವರನ್ನು ಜೈಲಿನಲ್ಲಿ ಇರಿಸುವ ಅಗತ್ಯವಿಲ್ಲ ಎನ್ನುತ್ತಾರೆ ಸಾಂಘ್ವಿಯವರು. ಜುಬೇರ್ ಪ್ರಕರಣದಲ್ಲಿನ ಆದೇಶವು ಜಾಮೀನಿನ ಹಕ್ಕನ್ನು ಮರುಪರಿಶೀಲಿಸುವ ಸುಪ್ರೀಂ ಕೋರ್ಟ್ನ ಮತ್ತೊಂದು ಆದೇಶದ ನೆರಳಿನಲ್ಲೇ ಬಂದಿತ್ತು. ಅಂದಿನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಸಾರ್ವಜನಿಕ ಸಮಾರಂಭದಲ್ಲಿ ಇದೇ ಧಾಟಿಯಲ್ಲಿ ಮಾತನಾಡಿದ್ದರು. ಪೊಲೀಸರು ಏನೇ ಹೇಳಿದರೂ ನಂಬುವ ಮತ್ತು ಜನರನ್ನು ಸ್ವಯಂಚಾಲಿತವಾಗಿ ಜೈಲಿಗೆ ಕಳುಹಿಸುವ ನ್ಯಾಯಾಧೀಶರ ಪ್ರವೃತ್ತಿಯಿಂದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಜನರು ಚಿಂತಿತರಾಗಿದ್ದಾರೆ ಎನ್ನುವುದು ಸಾಂಘ್ವಿ ಅಭಿಮತ.
ಒಂದು ಅಂದಾಜಿನ ಪ್ರಕಾರ, ಭಾರತದಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಸುಮಾರು ಎರಡು ಲಕ್ಷ ಜಾಮೀನು ಅರ್ಜಿಗಳು ಬಾಕಿ ಇವೆ. ಇವುಗಳಲ್ಲಿ ೧೮,೦೦೦ ಅಥವಾ ಅದಕ್ಕಿಂತ ಹೆಚ್ಚು ಅರ್ಜಿಗಳು ಐದು ವರ್ಷಗಳಿಂದ ಬಾಕಿ ಉಳಿದಿವುಗಳಾಗಿವೆ. ಈ ಬಾಕಿಯುಳಿದ ಅರ್ಜಿಗಳನ್ನು ತೆರವುಗೊಳಿಸುವುದು ನ್ಯಾಯಾಂಗಕ್ಕೆ ಏಕೆ ಸಮಸ್ಯೆಯಾಗಿದೆ ಎಂದು ನಾನು ಯೋಚಿಸುತ್ತಿದ್ದೇನೆˌ ಅದಕ್ಕೆ ಅಗತ್ಯ ಪ್ರಮಾಣದ ನ್ಯಾಯಾಧೀಶರ ಹಾಗು ಸಾಕಷ್ಟು ನ್ಯಾಯಾಲಯಗಳ ಕೊರತೆಯ ಕಾರಣಗಳು ಹೇಳಲಾಗುತ್ತಿದೆ. ಆದರೆ ಸರಕಾರದ ಆಡಳಿತಾತ್ಮಕ ವಿಫಲತೆಯ ಕಾರಣಗಳಿಂದ ಯಾವುದೇ ಅಪರಾಧ ಮಾಡದ ಜನರನ್ನು ಅನಗತ್ಯವಾಗಿ ಬಂಧಿಸಿ ಜೈಲುಗಳನ್ನು ಕಿಕ್ಕಿರಿದು ತುಂಬಿಸುವುದು ಸರಿಯೆ ಎಂದು ಸಾಂಘ್ವಿಯವರು ಪ್ರಶ್ನಿಸಿದ್ದಾರೆ. ಕಾರ್ಯಾಂಗದ ಅಸೂಕ್ತ ಕ್ರಮಗಳು ಮತ್ತು ನ್ಯಾಯಾಂಗದ ನಿಷ್ಕ್ರಿಯತೆಯಿಂದ ಜನರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬಂದಿರುವ ಬೆದರಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ಈಗ ಚಿಂತಿಸುತ್ತಿದೆ ಎಂದು ಭಾವಿಸಿದರೆ ಏನಾಗುತ್ತದೆ ಎನ್ನುವ ಸಾಂಘ್ವಿಯವರುˌ ಸರ್ವೋಚ್ಛ ನ್ಯಾಯಾಲಯವು ಈ ವಿಷಯದಲ್ಲಿ ಒಂದೇ ಧ್ವನಿಯಲ್ಲಿ ಮಾತನಾಡಬೇಕು ಎಂದು ಆಶಿಸುತ್ತಾರೆ.
ಇಂದು ನ್ಯಾಯಾಧೀಶರು ವ್ಯಕ್ತಿಗಳಿಗೆ ಜಾಮೀನು ನಿರಾಕರಿಸಲು ಕೊಡುವ ಒಂದು ಪ್ರಮುಖ ಕಾರಣವೆಂದರೆ, ಭಾರತದಲ್ಲಿ ನ್ಯಾಯಾಂಗ ಪ್ರಕ್ರಿಯೆಯು ತುಂಬಾ ನಿಧಾನವಾಗಿರುವುದರಿಂದ ತಪ್ಪಿತಸ್ಥರು ಜೈಲಿಗೆ ಹೋಗುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಕನಿಷ್ಠ ಈ ರೀತಿಯಲ್ಲಿಯಾದರೂ, ತಪ್ಪಿತಸ್ಥರು ಸ್ವಲ್ಪ ಶಿಕ್ಷೆಯನ್ನು ಅನುಭವಿಸುತ್ತಾರೆ ಎನ್ನುವುದು. ಇದು ಅಂತರ್ಬೋಧೆಯಿಂದ ಆಕರ್ಷಕವಾಗಿರಬಹುದಾದ ಮಾತೇ ಹೊರತು ನ್ಯಾಯಶಾಸ್ತ್ರದ ನೈಜ ಪರಿಪಾಲನೆಯಲ್ಲ. ಈ ವಾದವನ್ನು ಕ್ಷಣ ಕಾಲ ಒಪ್ಪಿಕೊಂಡರೂ ಸಹ, ಇದು ಮಹಾನ್ ವಂಚಕರು ಅಥವಾ ಅಪಾಯಕಾರಿ ಅಪರಾಧಿಗಳಿಗೆ ಅನ್ವಯಿಸಬಹುದು. ಆದರೆ ಇಂದು ಸರಕಾರವನ್ನು ಟೀಕಿಸಿ ಟ್ವೀಟ್ ಮಾಡುವ ಜನಸಾಮಾನ್ಯರುˌ ವಸ್ತುಸ್ಥಿತಿ ವರದಿ ಮಾಡುವ ಪತ್ರಕರ್ತರು ಹಾಗು ಜನಪರ ಚಳುವಳಿಗಾರರನ್ನು ಬಂಧಿಸಿ ಜೈಲಿನಲ್ಲಿಡುತ್ತಿದ್ದಾರೆ. ಯುಪಿಯಲ್ಲಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಅಲ್ಲಿನ ಸರಕಾರ ಸಮರ್ಪಕ ಆರೋಗ್ಯ ಸೇವೆ ನೀಡದಿದ್ದಾಗ ಜನರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಕ್ರೋಶವನ್ನು ಹೊರಹಾಕಿದ್ದರು. ಹಾಗೆ ಮಾಡುವವರನ್ನು ಅಪರಾಧಿಗಳೆಂದು ಬಂಧಿಸುವಂತೆ ಆದೇಶ ಹೊರಡಿಸಿದ್ದ ಯುಪಿ ಮುಖ್ಯಮಂತ್ರಿ ಆದಿತ್ಯನಾಥ ನಡೆಯನ್ನ ನಾವು ಜ್ಞಾಪಿಸಿಕೊಳ್ಳಬೇಕು. ಹೀಗೆ ಬಿಜೆಪಿ ಆಡಳಿತ ಕಾನೂನಿನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುತ್ತಾರೆ ಸಾಂಘ್ವಿಯವರು.
ಜಾಮೀನು ನೀಡುವ ಹಕ್ಕಿನ ಮೇಲೆ ಹೊಸ ಶಾಸನವನ್ನು ಜಾರಿಗೊಳಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯವೇ ಸೂಚಿಸಿದೆ. ಈ ಕುರಿತು ಕಾನೂನು ತಿದ್ದುಪಡೆಯ ಅಗತ್ಯವಿದೆ ಎಂದು ಬಹುತೇಕ ವಕೀಲರಿಗೂ ಖಚಿತವಾಗಿ ತಿಳಿದಿಲ್ಲ. ಮುಖ್ಯ ನ್ಯಾಯಾಧೀಶರು ಸ್ವಯಂಪ್ರೇರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ನ್ಯಾಯಾಲಯದ ಮಾರ್ಗಸೂಚಿಗಳನ್ನು ಅಂಗೀಕರಿಸಿದ್ದರ ಕುರಿತು ಖಚಿತಪಡಿಸಿಕೊಳ್ಳಲು ಅವರಿಗೆ ಸಾಕಷ್ಟು ಅಧಿಕಾರವಿದೆ. ಯಾವುದೇ ಸಂದರ್ಭದಲ್ಲಿ, ಕೊಲಿಜಿಯಂ ನೇಮಕಾತಿ ವ್ಯವಸ್ಥೆಯ ಸಂಪೂರ್ಣ ಉದ್ದೇಶವು ನ್ಯಾಯಾಲಯವನ್ನು ಸ್ವತಂತ್ರಗೊಳಿಸುವುದಾಗಿತ್ತು ಎನ್ನುತ್ತಾರೆ ಸಾಂಘ್ವಿಯವರು. ಆದರೆ ಸರ್ವೋಚ್ಛ ನ್ಯಾಯಾಲಯದಲ್ಲೂ ಸಹ ಈ ವಿಷಯದ ಬಗ್ಗೆ ಯಾವುದೇ ಒಮ್ಮತವಿಲ್ಲ ಎಂದು ನೀವು ವಾದಿಸಬಹುದು. ಕೆಲವು ದಿನಗಳ ಹಿಂದೆ ನ್ಯಾಯಾಲಯವು ೨೦೦೨ ರ ಮನಿ ಲಾಂಡರಿಂಗ್ ಆಕ್ಟ್ (PMLA) ನ ಅತ್ಯಂತ ಕಟ್ಟುನಿಟ್ಟಾದ ಮತ್ತು ವಿವಾದಾತ್ಮಕ ಭಾಗಗಳನ್ನು ಎತ್ತಿಹಿಡಿದಿದೆ, ಇದರಲ್ಲಿ ಆರೋಪಿಗಳಿಗೆ ಜಾಮೀನು ಪಡೆಯಲು ಕಷ್ಟವಾಗುತ್ತಿತ್ತು. ಇದು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಧ್ವನಿಮತದ ಅನುಮೋದನೆಯಂತೂ ಅಲ್ಲ. ಹಾಗಿರುವಾಗ ನ್ಯಾಯಾಲಯದೊಳಗೆ ಈ ಕುರಿತು ವಿಭಿನ್ನ ಅಭಿಪ್ರಾಯಗಳು ಇರಬಹುದೇ ಎಂದು ಸಾಂಘ್ವಿ ಪ್ರಶ್ನಿಸುತ್ತಾರೆ.
ಹೊರಗಿರುವ ನಮಗೆ ಈ ಕುರಿತು ಖಚಿತವಾಗಿ ಏನನ್ನೂ ಹೇಳುವುದು ಕಷ್ಟ. ಆದರೆ ಒಂದು ವಿಷಯ ಮಾತ್ರ ಸ್ಪಷ್ಟವಾಗಿದೆ: ಈಗ ಸುಪ್ರೀಂ ಕೋರ್ಟ್ನ ಹೆಚ್ಚಿನ ಭಾಗವು ಜನರ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಪುನಃ ಚಿಂತಿಸಲು ಪ್ರಾರಂಭಿಸಿದೆ, ಈಗ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಮತ್ತು ನ್ಯಾಯಾಲಯವು ಈ ವಿಷಯದ ಬಗ್ಗೆ ಒಂದೇ ಧ್ವನಿಯಲ್ಲಿ ಮಾತನಾಡುವ ಅಗತ್ಯವಿದೆ. ಒಟ್ಟಾರೆˌ ಫ್ಯಾಸಿಷ್ಟರ ನಿಯಂತ್ರಣಕ್ಕೊಳಪಟ್ಟಿರುವ ಮೋದಿ ಆಡಳಿತದಲ್ಲಿ ನಮ್ಮ ಪ್ರಜಾಪ್ರಭುತ್ವದ ಸ್ವರೂಪವೇ ಅಪಾಯದಲ್ಲಿದೆ ಎನ್ನುತ್ತಾರೆ ಸಾಂಘ್ವಿಯವರು. ಈ ಅಂಕಣದಲ್ಲಿ ವ್ಯಕ್ತಪಡಿಸಿರುವ ಸಂಗತಿಗಳು ಸಾಂಘ್ವಿಯವರ ತೀರ ವೈಯಕ್ತಿಕ ಅಭಿಪ್ರಾಯಗಳಾಗಿವೆ.