ಒಂದೆಡೆ ಭಾರತ್ ಬಯೋಟೆಕ್ ಹದಿನೆಂಟು ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ಎರಡನೇ ಮತ್ತು ಮೂರನೇ ಹಂತದ ಪ್ರಯೋಗ ಪೂರ್ಣಗೊಳಿಸಿದ್ದು ವಿಷಯ ತಜ್ಞರ ಸಮಿತಿ (subeject expert committee)ಯು 2-18 ವರ್ಷ ವಯಸ್ಸಿನ ಮಕ್ಕಳಿಗೆ ತುರ್ತು ಬಳಕೆಯ ಅನುಮೋದನೆಯನ್ನೂ ನೀಡಿದೆ. ಇನ್ನೊಂದೆಡೆ ವಿಶ್ವ ಆರೋಗ್ಯ ಸಂಸ್ಥೆ (WHO)ಯು ಈ ವಾರ ಭಾರತ್ ಬಯೋಟೆಕ್ನ ಕೋವಾಕ್ಸಿನ್ಗೆ ತುರ್ತು ಬಳಕೆಯ ಪರವಾನಗಿಯನ್ನು ನೀಡಬೇಕೆ ಎಂದು ನಿರ್ಧರಿಸುವುದನ್ನು ಮತ್ತೊಮ್ಮೆ ತಡೆಹಿಡಿದಿದೆ. ವಿಶ್ವಸಂಸ್ಥೆಯು ಭಾರತ್ ಬಯೋಟೆಕ್ನಿಂದ ಹೆಚ್ಚಿನ ಸ್ಪಷ್ಟೀಕರಣಗಳನ್ನು ಕೋರಿದೆ ಮತ್ತು ಅದರ ತಜ್ಞರು ನವೆಂಬರ್ 3 ರಂದು ಈ ಬಗ್ಗೆ ಮತ್ತೆ ಚರ್ಚಿಸಲು ಸಭೆ ಸೇರಲಿದ್ದಾರೆ.
ದೇಶದಲ್ಲಿ ಒಂಭತ್ತು ಕೋಟಿಗೂ ಅಧಿಕ ಜನ ಕೋವ್ಯಾಕ್ಸಿನ್ ಸ್ವೀಕರಿಸಿದ್ದು WHO ನಿರ್ಧಾರದಿಂದಾಗಿ ಇವರೆಲ್ಲರೂ ವ್ಯಾಕ್ಸಿನ್ ಕಡ್ಡಾಯಗೊಳಿಸಿರುವ ದೇಶಕ್ಕೆ ಪ್ರಯಾಣ ಮಾಡಲು ಸಾಧ್ಯವಿಲ್ಲ. WHO ಅನುಮೋದನೆ ಪ್ರಕ್ರಿಯೆಯು ಮೂರು ತಿಂಗಳ ಹಿಂದೆಯೇ ಪ್ರಾರಂಭವಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ನಿರ್ಧಾರವನ್ನು ಶೀಘ್ರದಲ್ಲೇ ನಿರೀಕ್ಷಿಸುವುದಾಗಿ ಭಾರತ್ ಬಯೋಟೆಕ್ ಕಂಪನಿಯು ಸೆಪ್ಟೆಂಬರ್ ಅಂತ್ಯದಲ್ಲಿ ಹೇಳಿತ್ತು. ಆದರೆ WHO ತನ್ಮ ನಿರ್ಧಾರವನ್ನು ನವೆಂಬರ್ ತಿಂಗಳಿಗೆ ಮತ್ತೆ ಮುಂದೂಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಕೋವ್ಯಾಕ್ಸಿನ್ಗೆ ಅನುಮೋದನೆ ನೀಡುವ ಮೊದಲು ಕಂಪನಿಯಿಂದ ಇನ್ನೂ ಹೆಚ್ಚಿನ ಮಾಹಿತಿಯ ಅಗತ್ಯವಿದೆ ಎಂದು ತೀರ್ಮಾನಿಸಿದ್ದಾರೆ. WHO ಅನುಮೋದನೆ ಪಡೆದಿರುವ ಇತರ ಲಸಿಕೆಗಳಿಂತ ಹೆಚ್ಚಿನ ಬಾರಿ ಕೋವ್ಯಾಕ್ಸಿನ್ ಪರಿಶೀಲನೆಗೆ ಒಳಗಾಗಿದೆ. ಆದರೂ ಕೋವ್ಯಾಕ್ಸಿನ್ ಅನುಮೋದನೆ ಪಡೆಯಲು ವಿಫಲವಾಗಿದೆ.
ಭಾರತದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್-ವಿ ಗೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಆದರೆ ಕೋವಿಶೀಲ್ಡ್ ಹೊರತುಪಡಿಸಿ ಉಳಿದೆರಡು ವ್ಯಾಕ್ಸಿನ್ಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮತಿ ದೊರೆತಿಲ್ಲ. ಹೀಗಾಗಿ ವಿದೇಶಿ ಪ್ರಯಾಣದ ಅಗತ್ಯವಿರುವ ಅದರಲ್ಲೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ.

ಪ್ರತಿವರ್ಷ ಸರಿಸುಮಾರು 2,00,000 ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ವಿದ್ಯಾಲಯಗಳಲ್ಲಿ ದಾಖಲಾಗುತ್ತಾರೆ. ಇವರೆಲ್ಲರಿಗೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆಗೊಂಡ ವ್ಯಾಕ್ಸಿನ್ ಪಡೆದುಕೊಂಡ ಸರ್ಟಿಫಿಕೇಟ್ ಸಲ್ಲಿಸಲು ಸೂಚಿಸಲಾಗಿದೆ. ಮತ್ತು ಕೆಲವು ವಿಶ್ವವಿದ್ಯಾಲಯಗಳು ಕೋವ್ಯಾಕ್ಸಿನ್ ಅಥವಾ ಸ್ಪಟ್ನಿಕ್-ವಿ ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಸೂಚಿಸಿದೆ.
ಕೊವ್ಯಾಕ್ಸಿನ್ಗೆ ಭಾರತದಲ್ಲಿ ಅನುಮೋದನೆ ಸಿಕ್ಕಾಗಲೇ ಟೀಕೆ ವ್ಯಕ್ತವಾಗಿತ್ತು. ಸೂಕ್ತ ಟ್ರಯಲ್ ಇಲ್ಲದೆ ಕೇವಲ ಪ್ರತಿಷ್ಠೆಗಾಗಿ ಅನುಮತಿ ನೀಡಲಾಗಿದೆ ಎಂದು ಹೇಳಲಾಗಿತ್ತು. ಭಾರತದಲ್ಲಿ ಲಸಿಕೆ ಪಡೆದುಕೊಳ್ಳುವಲ್ಲಿ ದೊಡ್ಡ ಮಟ್ಟದ ಹಿಂಜರಿಕೆ ಮೂಡಲು ಇದೂ ಒಂದು ಕಾರಣವಾಗಿತ್ತು. ಈಗ ಈ ಸಮಸ್ಯೆ ಮತ್ತು ಗೊಂದಲವನ್ನು ಪರಿಹರಿಸಲು ಭಾರತ್ ಬಯೋಟೆಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಎರಡೂ ಹೆಚ್ಚು ಪಾರದರ್ಶಕವಾಗಿರಬೇಕಾಗಿದೆ. ಅನುಮೋದನೆ ಪ್ರಕ್ರಿಯೆಗಳು ಏಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ? ಮತ್ತು ಸಮಸ್ಯೆಗಳಿದ್ದರೆ, ಅವುಗಳನ್ನು ಹೇಗೆ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ? ಎಂದೂ ಎರಡೂ ಕಡೆಯವರು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಭಾರತ್ ಬಯೋಟೆಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಹಗ್ಗ ಜಗ್ಗಾಟದಲ್ಲಿ ಸಿಲುಕಿರುವ ಭಾರತೀಯರ ಸಂಕಷ್ಟ ಮುಂದುವರಿಯಲಿದೆ.