ಜಿದ್ದಾಜಿದ್ದಿನ ಹೋರಾಟದಲ್ಲಿ ಭಾರತ ತಂಡ 3 ರನ್ ಗಳ ರೋಚಕ ಜಯ ಸಾಧಿಸಿದರೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಸಿದರೆ, ಗೆಲುವಿನ ಹೊಸ್ತಿಲಲ್ಲಿ ಎಡವಿದರೂ ವೆಸ್ಟ್ ಇಂಡೀಸ್ ಗೆದ್ದಷ್ಟೇ ಸಂಭ್ರಮಿಸಿತು.
ಪೋರ್ಟ್ ಆಫ್ ಸ್ಪೇನ್ ನಲ್ಲಿ ಶುಕ್ರವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಭಾರತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 308 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 305 ರನ್ ಗಳಿಸಲಷ್ಟೇ ಶಕ್ತವಾಯಿತು.
ವೆಸ್ಟ್ ಇಂಡೀಸ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿದರೂ ಕೈಲ್ ಮೇರಿಸ್ 68 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 75 ರನ್ ಬಾರಿಸಿದರು. ಬ್ರೆಂಡನ್ ಕಿಂಗ್ 66 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 54 ರನ್ ಗಳಿಸಿದರು.

ಕೊನೆಯ ಹಂತದಲ್ಲಿ 252 ರನ್ ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಅಕೀಲ್ ಹುಸೇನ್ (ಅಜೇಯ 32) ಮತ್ತು ರೊಮರಿಯೋ ಶೆಪಾರ್ಡ್ (ಅಜೇಯ 39) ಮುರಿಯದ 7ನೇ ವಿಕೆಟ್ ಗೆ 53 ರನ್ ಜೊತೆಯಾಟ ನಿಭಾಯಿಸಿದರು. ಆದರೆ ಈ ಜೋಡಿ ಕೊನೆಯ ಹಂತದಲ್ಲಿ ಎಡವಿತು.
ಪಂದ್ಯದ ಕೊನೆಯ ಓವರ್ ನಲ್ಲಿ 15 ರನ್ ಗಳಿಸಬೇಕಾಗಿತ್ತು. ಆದರೆ ಮೊಹಮದ್ ಸಿರಾಜ್ ಕೇವಲ 10 ರನ್ ನೀಡಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಶತಕ ವಂಚಿತ ಶಿಖರ್ ಧವನ್ (97), ಶುಭಮನ್ ಗಿಲ್ (64) ಮತ್ತು ಶ್ರೇಯಸ್ ಅಯ್ಯರ್ (54) ಅರ್ಧಶತಕ ಬಾರಿಸಿ ತಂಡ ಬೃಹತ್ ಮೊತ್ತ ದಾಖಲಿಸಲು ನೆರವಾದರು.