ನವದೆಹಲಿ : ಭಾರತದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಸದಾ ದೊಡ್ಡ ಸವಾಲಾಗಿರುವ ಡೆಂಗ್ಯೂ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯೊಂದು ಇಡಲಾಗಿದ್ದು, ದೇಶದ ಮೊದಲ ಡೆಂಗ್ಯೂ ಲಸಿಕೆಯು 2027ರ ಮೊದಲಾರ್ಧದಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಹೌದು, ಜಪಾನ್ ಮೂಲದ ಪ್ರಸಿದ್ಧ ಔಷಧ ತಯಾರಿಕಾ ಸಂಸ್ಥೆ ಟಕೆಡಾ ಅಭಿವೃದ್ಧಿಪಡಿಸಿರುವ ‘ಕ್ಯೂಡೆಂಗಾ’ (QDENGA) ಲಸಿಕೆಗೆ ಭಾರತದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (CDSCO) ಅಧಿಕೃತ ಮಾರುಕಟ್ಟೆ ಅನುಮೋದನೆ ನೀಡಿದೆ. ಈ ಲಸಿಕೆಯನ್ನು ಭಾರತದ ಖಾಸಗಿ ಆರೋಗ್ಯ ಮಾರುಕಟ್ಟೆಯಲ್ಲಿ ವಿತರಿಸಲು ಮತ್ತು ಪ್ರಚಾರ ಮಾಡಲು ಟಕೆಡಾ ಸಂಸ್ಥೆಯು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಜೊತೆ ವಿಶೇಷ ಒಪ್ಪಂದ ಮಾಡಿಕೊಂಡಿದೆ.

ಭಾರತದಲ್ಲಿ ಸಿಡಿಎಸ್‌ಸಿಒ ಅನುಮೋದನೆ ಪಡೆದ ಪ್ರಪ್ರಥಮ ಡೆಂಗ್ಯೂ ಲಸಿಕೆ ಇದಾಗಿದ್ದು, 4ರಿಂದ 60 ವರ್ಷ ವಯಸ್ಸಿನ ಮಕ್ಕಳು ಹಾಗೂ ವಯಸ್ಕರಿಗೆ ನೀಡಲು ಅನುಮತಿ ಸಿಕ್ಕಿದೆ. ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಸುಮಾರು 11 ಪಟ್ಟು ಹೆಚ್ಚಾಗಿದ್ದು, ಜಾಗತಿಕ ಡೆಂಗ್ಯೂ ಹೊರೆಯಲ್ಲಿ ಭಾರತವೇ ಶೇಕಡಾ ಮೂರನೇ ಒಂದು ಭಾಗವನ್ನು ಹೊತ್ತುಕೊಂಡಿದೆ. ಈಡಿಸ್ ಸೊಳ್ಳೆಗಳ ಕಡಿತದಿಂದ ಹರಡುವ ಈ ವೈರಲ್ ಸೋಂಕು ತೀವ್ರ ಜ್ವರ, ತಲೆನೋವು, ಕೀಲು ನೋವು ಹಾಗೂ ಕೆಲವೊಮ್ಮೆ ಪ್ರಾಣಾಪಾಯ ತಂದೊಡ್ಡುವ ಸ್ಥಿತಿಗೆ ಕಾರಣವಾಗುವುದರಿಂದ, ಈ ಲಸಿಕೆಯ ಆಗಮನವು ದೇಶದ ಆರೋಗ್ಯ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ.
‘ಟಿಎಕೆ-003’ ಎಂದೂ ಕರೆಯಲ್ಪಡುವ ಕ್ಯೂಡೆಂಗಾ ಲಸಿಕೆಯು ಡೆಂಗ್ಯೂ ವೈರಸ್‌ನ ನಾಲ್ಕೂ ರೂಪಾಂತರಗಳ (DENV-1, DENV-2, DENV-3, DENV-4) ವಿರುದ್ಧ ರಕ್ಷಣೆ ಒದಗಿಸುವ ಸಾಮರ್ಥ್ಯ ಹೊಂದಿದೆ. ಮೂರು ತಿಂಗಳ ಅಂತರದಲ್ಲಿ ಈ ಲಸಿಕೆಯ ಒಟ್ಟು ಎರಡು ಡೋಸ್‌ಗಳನ್ನು ನೀಡಲಾಗುತ್ತದೆ. ಈ ಲಸಿಕೆಯ ಪ್ರಮುಖ ವೈಶಿಷ್ಟ್ಯವೆಂದರೆ, ವ್ಯಕ್ತಿಗೆ ಹಿಂದೆ ಡೆಂಗ್ಯೂ ಸೋಂಕು ತಗುಲಿದ್ದರೂ ಅಥವಾ ಇಲ್ಲದಿದ್ದರೂ ಇದನ್ನು ಯಾವುದೇ ಮುಂಚಿತ ಪರೀಕ್ಷೆಗಳಿಲ್ಲದೆ ಸುರಕ್ಷಿತವಾಗಿ ನೀಡಬಹುದಾಗಿದೆ. ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಬಳಕೆಗೆ ಅನುಮೋದನೆ ಪಡೆದಿರುವ ಈ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯೂ (WHO) ಮಾನ್ಯತೆ ನೀಡಿದೆ.

ಈ ಲಸಿಕೆಯು ಲಭ್ಯವಾಗುವುದರಿಂದ ಭಾರತದಲ್ಲಿ ಡೆಂಗ್ಯೂ ತಡೆಗಟ್ಟುವಿಕೆಗೆ ಬಲವಾದ ರಕ್ಷಾಕವಚ ಸಿಕ್ಕಂತಾಗಲಿದೆ. ಆದಾಗ್ಯೂ, ಲಸಿಕೆಯು ಕೇವಲ ಒಂದು ಹೆಚ್ಚುವರಿ ಮುನ್ನೆಚ್ಚರಿಕಾ ಕ್ರಮವಾಗಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳ ನಾಶ, ಸ್ವಚ್ಛತೆ, ಸಕಾಲಿಕ ತಪಾಸಣೆ ಮತ್ತು ಚಿಕಿತ್ಸೆಯಂತಹ ಸಾಂಪ್ರದಾಯಿಕ ಆರೋಗ್ಯ ಕ್ರಮಗಳನ್ನು ಮುಂದುವರಿಸುವುದು ಅಷ್ಟೇ ಅನಿವಾರ್ಯವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಈ ಲಸಿಕೆಯು ಖಾಸಗಿ ಆಸ್ಪತ್ರೆಗಳು ಹಾಗೂ ಚಿಕಿತ್ಸಾಲಯಗಳಲ್ಲಿ ಲಭ್ಯವಾಗಲಿದೆ.






