ಶಿವಮೊಗ್ಗ : ಅರಣ್ಯ ಇಲಾಖೆಯವರು ರೈತರಿಗೆ ಹೊಸ ನೋಟಿಸ್ ನೀಡಬಾರದು. ಜೊತೆಗೆ ಹೊಸ ಒತ್ತುವರಿಗೆ ಅವಕಾಶ ನೀಡಬಾರದೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಹೇಳಿದರು.

ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನ ಭಾಗದಲ್ಲಿ ಎದುರಾಗಿರುವ ಆತಂಕಗಳು ಹಾಗೂ ಪರಿಣಾಮಗಳ ಕುರಿತು ಸ್ಥಳೀಯ ರೈತರು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಶನಿವಾರ ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಂವಾದ ಮತ್ತು ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಮ್ಮ ಭೇಟಿ ಮಾಡಲು ಇದೊಂದು ಅವಕಾಶ. ರೈತರಿಗೆ ಒದಗಿರುವ ಅಪಾಯ ಎದುರಿಸಿವ ಬಗೆ ಕುರಿತು ಅಭಿಪ್ರಾಯ ಸಂಗ್ರಹಿಸಲು ಇಲ್ಲಿ ಸೇರಿದ್ದೇವೆ. ಏನೇ ಆದರೂ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳಬೇಕು. ನಮಗೂ, ಭೂಮಿ ಮತ್ತು ಪರಿಸರಕ್ಕೆ ನಂಟಿದೆ. ನಿಮ್ಮಮನೆ ಬಾಗಿಲಿಗೆ ಬಂದು ಚರ್ಚಿಸಿ ನಂತರ ವಿಶೇಷ ಅಧಿವೇಶನ ನಡೆಸಿ ಸ್ಥಳೀಯ ಶಾಸಕರ, ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಅದಕ್ಕಾಗಿ ನಿಮ್ಮನ್ನು ಹುಡುಕಿಕೊಂಡು ನಾವೇ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ. ಇಲ್ಲಿ ಇಂದು ಮಳೆ, ಬಿಸಿಲು ಬಂದರೂ ಜನರು, ರೈತರು ಚರ್ಚೆ ವೇಳೆ ಎದ್ದು ಹೋಗಲಿಲ್ಲ. ಬದುಕು ಮುಖ್ಯ. ಸಮಸ್ಯೆಗಳಿಗೆ ಪರಿಹಾರ ಬೇಕು. ಜನರ ಭಾವನೆಗಳ ಮೇಲೆ ಸರ್ಕಾರ ಆಡಳಿತ ಮಾಡಬೇಕು. ಇದೇ ಉದ್ದೇಶದಿಂದ ಜನರೊಂದಿಗೆ ಸಂಪರ್ಕ ಸಾಧಿಸಲು ತಿಂಗಳಿಗೆ ಎರಡು ಬಾರಿ ಉಸ್ತುವಾರಿ ಸಚಿವರು, ಅಧಿಕಾರಿಗಳು ತಾಲ್ಲೂಕು, ಹೋಬಳಿ, ಪಂಚಾಯ್ತಿ ಮಟ್ಟಕ್ಕೆ ಹೋಗಿ ಜನರ ಅಹವಾಲು ಸ್ವೀಕರಿಸಿ, ಪರಿಹಾರ ಒದಗಿಸಲು ಪ್ರಜಾಸೇವಾ ಇಲಾಖೆಯನ್ನು ಆರಂಭಿಸಲಾಗಿದೆ.

ಜನರ ಭಾವನೆ ಅರ್ಥ ಮಾಡಿಕೊಳ್ಳದಿದ್ದರೆ ಜನರ ಸಮಸ್ಯೆ ಅರ್ಥ ಮಾಡಿಕೊಳ್ಳುವುದು ಕಷ್ಟ.ಅದಕ್ಕಾಗಿಯೇ ನಿಮ್ಮಮನೆ ಬಾಗಿಲಿಗೆ ಸರ್ಕಾರ ಬರಲಿದೆ.
ರೈತರು ಪರಿಸರವನ್ನು ಕಾಪಾಡಿಕೊಂಡು ಬಂದಿದ್ದೀರಿ. ನೀವು ವಲಸೆ ಹೋಗಬಾರದು. ಆದ್ದರಿಂದ ಕರಾವಳಿ ಪ್ರದೇಶ 364 ಕಿ.ಮೀ ನೊಂದಿಗೆ ಮಲೆನಾಡ ನ್ನೂ ಸೇರಿಸಿ ಹೊಸ ಇಕೋ ಟೂರಿಸಂ ಕುರಿತು ಪ್ರವಾಸೋದ್ಯಮ ನೀತಿ ತರಲು ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ನಾನು ನಿಮ್ಮ ಜೊತೆ ಇದ್ದೇನೆ. ರೈತರ ಪರವಾಗಿ ಇದ್ದೇನೆ. ಅರಣ್ಯ ಭಾಗದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬಂದವರಿಗೆ ತೊಂದರೆ ಕೊಡಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ.
ಬಗರ್ ಹುಕುಂ, ಉಳುವವನಿಗೆ ಭೂಮಿ ಹಕ್ಕು ತಂದಿದ್ದು ನಮ್ಮ ಪಕ್ಷದ ಸರ್ಕಾರ. ರೈತರನ್ನು ಕಾಪಾಡುವ ಉದ್ದೇಶದಿಂದ ಇಲ್ಲಿ ಬಂದಿದ್ದೇನೆ. ಅಡಿಕೆ ತೆರಿಗೆ ಕಡಿತದ ಬಗ್ಗೆ ಕೇಂದ್ರದೊಂದಿಗೆ ಮಾತನಾಡುವೆ. 94 ಸಿ ವಿಷಯ ಚರ್ಚೆಗೆ ಪ್ರತ್ಯೇಕ ಸಭೆ ಕರೆಯುತ್ತೇನೆ.ಹೊಸದಾಗಿ ಭೌತಿಕ ಸರ್ವೇ, ಇತರೆ ವಿಷಯ ಕುರಿತು ಶಾಸಕರೊಂದಿಗೆ ಚರ್ಚಿಸುತ್ತೇನೆ.ಪರಿಸರ ಸೂಕ್ಷ್ಮ ಪ್ರದೇಶವನ್ನು ರದ್ದುಪಡಿಸುವ ಬಗ್ಗೆ ಕಾನೂನಿನ ವ್ಯಾಪ್ತಿಯನ್ನು ಪರಿಶೀಲಿಸಲಾಗುವುದು ಎಂದ ಅವರು
ಅಕ್ರಮ ಸಕ್ರಮ ಕುರಿತು ಪ್ರತಿ ತಿಂಗಳು ಸಭೆ ನಡೆಸಿ ಬಡವರಿಗೆ ಅನುಕೂಲ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ.ಝೋನಲ್ ಮ್ಯಾನೇಜ್ಮೆಂಟ್ ಪ್ಲಾಂಟೇಷನ್ ಮಾಡಲು, ಸಂಜೀವ್ ಕುಮಾರ್ ವರದಿ ಬಗ್ಗೆ,371 ವಿಶೇಷ ಸ್ಥಾನ ನೀಡುವ ಬಗ್ಗೆ ಸಲಹೆಗಳು ಬಂದಿದ್ದು ಚರ್ಚಿಸುತ್ತೇನೆ. ಹೊಸ ನೋಟಿಸ್ ಯಾವ ರೈತನಿಗೆ ಕೊಡಬಾರದು ಮತ್ತು ಹೊಸ ಒತ್ತುವರಿಗೂ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.






