ಬೆಂಗಳೂರು: ರಾಜಧಾನಿಯಲ್ಲಿ ಸ್ವಂತ ಮನೆ ನಿರ್ಮಿಸಿಕೊಳ್ಳಲು ಬಯಸುವವರಿಗೆ ರಾಜ್ಯ ಸರ್ಕಾರ ಹೊಸ ಸೌಲಭ್ಯ ಕಲ್ಪಿಸಿದೆ. ಬಿಲ್ಡಿಂಗ್ ಪ್ಲಾನ್ ಅನುಮೋದನೆಗಾಗಿ ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆಯುವ ಅಗತ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ‘ನಂಬಿಕೆ ನಕ್ಷೆ 2.0’ ತಂತ್ರಾಂಶಕ್ಕೆ ಚಾಲನೆ ನೀಡಲಾಗಿದೆ.ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ವಿಕಾಸಸೌಧದಲ್ಲಿ ಸುಧಾರಿತ ‘ನಂಬಿಕೆ ನಕ್ಷೆ 2.0’ ತಂತ್ರಾಂಶಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಕಟ್ಟಡ ನಕ್ಷೆ ಅನುಮೋದನೆ ಪಡೆಯಲು ಒಂದರಿಂದ ಎರಡು ತಿಂಗಳವರೆಗೆ ಕಾಯಬೇಕಾಗುತ್ತಿತ್ತು.

ದಾಖಲೆ ಪರಿಶೀಲನೆ, ಅಧಿಕಾರಿಗಳ ಅನುಮೋದನೆ ಸೇರಿದಂತೆ ಹಲವು ಹಂತಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಹೊಸ ವ್ಯವಸ್ಥೆಯಿಂದ ಈ ಪ್ರಕ್ರಿಯೆಯನ್ನು 15ರಿಂದ 30 ನಿಮಿಷಗಳಿಗೆ ಇಳಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.ಹೊಸ ವ್ಯವಸ್ಥೆಯಲ್ಲಿ ಕಟ್ಟಡದ ನಕ್ಷೆಯನ್ನು CAD ಫಾರ್ಮೆಟ್‌ನಲ್ಲಿ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಬಹುದು. ತಂತ್ರಾಂಶವು ನಕ್ಷೆಯನ್ನು ಪರಿಶೀಲಿಸಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ನಿಯಮಗಳು ಹಾಗೂ ಮಾನದಂಡಗಳನ್ನು ಪೂರೈಸಲಾಗಿದೆಯೇ ಎಂಬುದನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲಿದೆ.ಆಸ್ತಿ ದಾಖಲೆಗಳ ಪರಿಶೀಲನೆಯೂ ಡಿಜಿಟಲ್ ವ್ಯವಸ್ಥೆಯ ಮೂಲಕ ನಡೆಯಲಿದೆ. ಸಲ್ಲಿಸಿರುವ ನಕ್ಷೆ ಮತ್ತು ದಾಖಲೆಗಳು ನಿಯಮಾನುಸಾರವಾಗಿದ್ದರೆ ತ್ವರಿತವಾಗಿ ಅನುಮೋದನೆ ನೀಡುವ ವ್ಯವಸ್ಥೆ ಮಾಡಲಾಗಿದೆ.
ಸದ್ಯ 50×80 ಅಡಿ ನಿವೇಶನಗಳಲ್ಲಿ ಗರಿಷ್ಠ ನಾಲ್ಕು ಘಟಕಗಳವರೆಗೆ ನಿರ್ಮಿಸುವ ಮನೆಗಳು ಹಾಗೂ 4,000 ಚದರ ಅಡಿವರೆಗಿನ ವಸತಿ ಕಟ್ಟಡಗಳಿಗೆ ಈ ವ್ಯವಸ್ಥೆ ಅನ್ವಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಾಯೋಗಿಕವಾಗಿ ಆಯ್ದ ಪ್ರದೇಶಗಳಲ್ಲಿ ವ್ಯವಸ್ಥೆ ಜಾರಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಕಟ್ಟಡಗಳಿಗೆ ವಿಸ್ತರಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಜನರ ಮೇಲೆ ನಂಬಿಕೆ ಇಟ್ಟು ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ನಿಯಮಾನುಸಾರ ಮನೆ ನಿರ್ಮಿಸುವವರಿಗೆ ಯಾವುದೇ ಅನಗತ್ಯ ತೊಂದರೆ ಆಗಬಾರದು ಎಂಬುದು ಸರ್ಕಾರದ ಉದ್ದೇಶ ಎಂದು ಕೃಷ್ಣ ಬೈರೇಗೌಡ ಹೇಳಿದರು.ಅದೇ ವೇಳೆ ಹೊಸ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ನಿಯಮ ಉಲ್ಲಂಘಿಸಿದರೆ ಕಾನೂನು ಪ್ರಕಾರ ದಂಡ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ ಪರಿಶೀಲನೆ ವೇಳೆ ಬೀದಿ ದೀಪ ಹಾಗೂ ಫುಟ್‌ಪಾತ್‌ಗಳ ಸಮಸ್ಯೆಗಳನ್ನೂ ಸಚಿವರು ಗಮನಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಸೂಚಿಸಿದ್ದರು. ಬೆಂಗಳೂರಿನ ನಾಗರಿಕ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ನಿರಂತರ ಪರಿಶೀಲನೆ ನಡೆಸಲಾಗುತ್ತಿದೆ.






