ಪರಿಸರ, ಸುಸ್ಥಿರತೆ ಮತ್ತು ತಂತ್ರಜ್ಞಾನಕ್ಕಾಗಿನ ಅಂತರರಾಷ್ಟ್ರೀಯ ವೇದಿಕೆ (ಐಫಾರೆಸ್ಟ್)ಯು ವಿಶ್ವಬ್ಯಾಂಕಿನ ನೆರವಿನೊಂದಿಗೆ ಸಿದ್ಧಪಡಿಸಿರುವ ವರದಿಯಲ್ಲಿ, ‘ವಾಯು ಗುಣಮಟ್ಟ ನಿರ್ವಹಣೆ’ಗಾಗಿ ಭಾರತವು ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 10 ಲಕ್ಷ ಜನರಿಗೆ ತರಬೇತಿ ನೀಡಬೇಕಾಗಿದೆ ಎಂದಿದೆ. ವರದಿಯ ಪ್ರಕಾರ ಮುಂದಿನ ದಿನಗಳಲ್ಲಿ ಈ ವಲಯದಲ್ಲಿ ಸುಮಾರು 50,000 ಉದ್ಯೋಗಗಳನ್ನು ಸೃಷ್ಟಿಸಬಹುದು.
ವಾಯುಮಾಲಿನ್ಯದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಎಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳು, ಪಾಲುದಾರ ನಗರಗಳು, ಖಾಸಗಿ ವಲಯ, ಎನ್‌ಜಿಒಗಳು ಮತ್ತು ಮಾಧ್ಯಮಗಳ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವೊಂದನ್ನು ರೂಪಿಸುವ ಅಗತ್ಯವನ್ನು ಈ ವರದಿ ಎತ್ತಿ ತೋರಿಸುತ್ತದೆ.
“ನಮ್ಮ ವರದಿಯು ಗಾಳಿಯ ಗುಣಮಟ್ಟ ನಿರ್ವಹಣೆಗಾಗಿ ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 1 ಮಿಲಿಯನ್ (10 ಲಕ್ಷ) ಜನರಿಗೆ ತರಬೇತಿ ನೀಡಬೇಕಾಗಿದೆ ಎಂದು ತೋರಿಸುತ್ತದೆ. ಇದು ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ವಾಯು ಗುಣಮಟ್ಟ ನಿರ್ವಹಿಸುವ ಯೋಜನೆ, ಮೇಲ್ವಿಚಾರಣೆ, ವಾಯುಮಾಲಿನ್ಯವನ್ನು ತಗ್ಗಿಸುವ ನೀತಿನಿಯಮಗಳ ವಲಯದಲ್ಲಿ ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ” ಎಂದು iFOREST ನ CEO ಮತ್ತು ವರದಿಯ ಪ್ರಮುಖ ಲೇಖಕರಾದ ಚಂದ್ರ ಭೂಷಣ್ ಹೇಳಿದ್ದಾರೆ. ಈ ವರದಿಯು ದೇಶದ ಪರಿಸರ ವಲಯಕ್ಕೆ ಅಭಿವೃದ್ಧಿಯ ನೀಲನಕ್ಷೆ ತಯಾರಿಸುವ ಮೊದಲ ಪ್ರಯತ್ನವಾಗಿದೆ ಎಂದೂ ಅವರು ಹೇಳಿದ್ದಾರೆ.
ವಾಯು ಗುಣಮಟ್ಟ ನಿರ್ವಹಣಾ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಏಜೆನ್ಸಿಗಳು ಹಾಗೂ ಸಂಸ್ಥೆಗಳು ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು, ನಗರ ಸ್ಥಳೀಯ ಸಂಸ್ಥೆಗಳು, ವಾಯು ಮಾಲಿನ್ಯಕಾರಕ ಕೈಗಾರಿಕೆಗಳು ಮತ್ತು ವಾಯು ಮಾಲಿನ್ಯ ನಿಯಂತ್ರಣ ಕೈಗಾರಿಕೆಗಳನ್ನು ಒಳಗೊಂಡಿವೆ ಹಾಗೂ ದೇಶದಾದ್ಯಂತ ಕನಿಷ್ಠ 2.8 ಲಕ್ಷ ಸಂಸ್ಥೆಗಳಿಗೆ ಮತ್ತು ಕೈಗಾರಿಕೆಗಳಿಗೆ ವಾಯು ಗುಣಮಟ್ಟ ನಿರ್ವಹಣೆಗೆ ಸಿಬ್ಬಂದಿಗಳ ಅಗತ್ಯವಿದೆ ಎಂದು ವರದಿಯು ಹೇಳಿದೆ.
ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಪುರಸಭೆಯ ಕೆಲಸಗಾರರಿಂದ ಹಿಡಿದು ಸಾರಿಗೆ ಯೋಜನೆ, ವಾಯು ಗುಣಮಟ್ಟದ ಮಾದರಿ ಮತ್ತು ಮುನ್ಸೂಚನೆಯ ತಜ್ಞರವರೆಗೆ ಈ ದೇಶದಲ್ಲಿ ವಾಯುಮಾಲಿನ್ಯವನ್ನು ನಿಯಂತ್ರಿಸಲು 42 ನಿರ್ದಿಷ್ಟ ಉದ್ಯೋಗಗಳನ್ನು ಗುರುತಿಸಿದೆ. ಮತ್ತು ದೇಶದಲ್ಲಿ ವಾಯು ಮಾಲಿನ್ಯವನ್ನು ನಿರ್ವಹಿಸಲು ಒಟ್ಟು 2.2 ಮಿಲಿಯನ್ ಉದ್ಯೋಗಗಳ ಅಗತ್ಯವಿದೆ ಎಂದು ವರದಿ ಹೇಳುತ್ತದೆ.
ಆದರೆ, ಈಗಾಗಲೇ ಈ ವಲಯದಲ್ಲಿ ಕೆಲಸ ಮಾಡುತ್ತಿರುವ ಅನೇಕರಿಗೆ ಗಾಳಿಯ ಗುಣಮಟ್ಟವನ್ನು ನಿರ್ವಹಿಸಲು ಎಂದಿಗೂ ತರಬೇತಿ ನೀಡಲಾಗಿಲ್ಲ. ಉದಾಹರಣೆಗೆ ಈ ಕೆಲಸದಲ್ಲಿ ಮುಂಚೂಣಿಯಲ್ಲಿರುವ ಪುರಸಭೆಯ ಕೆಲಸಗಾರರು ಮತ್ತು ಪಿಯುಸಿ (pollution under check) ನಿರ್ವಾಹಕರಿಗೆ ತರಬೇತಿ ನೀಡುವ ಅಗತ್ಯ ಇದೆ.
ಬೆಳೆಯುತ್ತಿರುವ ಕೈಗಾರಿಕೆಗಳು, ಯುಎಲ್‌ಬಿ(Urban Local Bodies)ಗಳು, ಸಲಹಾ ಸಂಸ್ಥೆಗಳು ಮತ್ತು ಸರ್ಕಾರದ ಅಗತ್ಯತೆಗಳನ್ನು ಪೂರೈಸಲು ಸಾವಿರಾರು ಜನರಿಗೆ ಉದ್ಯೋಗ ನೀಡುವ ಅವಶ್ಯಕತೆಯಿದೆ ಎಂದು ವರದಿ ಹೇಳಿದೆ.
ಭಾರತದಲ್ಲಿ ವಾಯು ಗುಣಮಟ್ಟ ನಿರ್ವಹಣಾ ವಲಯದಲ್ಲಿ ಯಾವುದೇ ರಚನಾತ್ಮಕ ಕಾರ್ಯಕ್ರಮವನ್ನು ಇದುವರೆಗೆ ಘೋಷಿಸಲಾಗಿಲ್ಲ ಎಂದು ವರದಿಯು ಕಂಡುಹಿಡಿದಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಸುಮಾರು ಒಂದು ಮಿಲಿಯನ್ ಕಾರ್ಮಿಕರು, ನಿರ್ವಾಹಕರು ಮತ್ತು ವೃತ್ತಿಪರರಿಗೆ ತರಬೇತಿ ನೀಡವಂತೆ ರಾಷ್ಟ್ರೀಯ ಕಾರ್ಯಕ್ರಮವೊಂದನ್ನು ರೂಪಿಸುವಂತೆ ಅದು ಸರ್ಕಾರಕ್ಕೆ ಶಿಫಾರಸು ಮಾಡಿದೆ.
“ಭಾರತದ ವಾಯು ಗುಣಮಟ್ಟ ನಿರ್ವಹಣಾ ಕ್ಷೇತ್ರದಲ್ಲಿನ ಪ್ರಮುಖ ಸವಾಲು ಎಂದರೆ ಪ್ರಸ್ತುತ ವಲಯದಲ್ಲಿ ಕೆಲಸ ಮಾಡುತ್ತಿರುವ ಜನರು ತರಬೇತಿ ಪಡೆದಿಲ್ಲ ಮತ್ತು ಅಗತ್ಯವಿರುವ ಹೆಚ್ಚಿನ ಸಂಖ್ಯೆಯ ಉದ್ಯೋಗಗಳು ಅಸ್ತಿತ್ವದಲ್ಲಿಲ್ಲ” ಎಂದು ಚಂದ್ರಭೂಷಣ್ ಹೇಳಿದ್ದಾರೆ. “ವಾಯು ಮಾಲಿನ್ಯವು ಪರಿಸರ ಸಮಸ್ಯೆಯಾಗಿದೆ, ಆದರೆ ನಾವು ಅದರ ನಿರ್ವಹಣೆಯನ್ನು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಹಸಿರು ಆರ್ಥಿಕತೆಯನ್ನು ನಿರ್ಮಿಸುವ ಅವಕಾಶವಾಗಿ ನೋಡಬೇಕು. ಈಗ ಅಸ್ತಿತ್ವದಲ್ಲಿರುವ ಬಹಳಷ್ಟು ಉದ್ಯೋಗಗಳು ಪರಿಸರದ ನಾಶಕ್ಕೆ ಕಾರಣವಾಗಿದೆ, ಆದ್ದರಿಂದ ನಾವು ಈಗ ಪರಿಸರ ರಕ್ಷಿಸಬಲ್ಲ ಉದ್ಯೋಗಗಳನ್ನು ಸೃಷ್ಟಿಸಸಬೇಕಾಗಿದೆ. ನಮ್ಮ ವರದಿಯು ಪರಿಸರ ವಲಯವನ್ನು ವಿಶಾಲ ಆರ್ಥಿಕ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಇರುವ ವಿಶಾಲ ಅವಕಾಶವನ್ನು ತೋರಿಸುತ್ತದೆ”ಎಂದು ಹೇಳುತ್ತಾರೆ.