ಭಾರತ – ಪಾಕ್ ನಡುವಿನ ಸಂಘರ್ಷದ ಬಗ್ಗೆ ಚಿಂತೆ ಬೇಡ ಬಿಡಿ. ನಾವು ಬಹಳ ದೂರ ಇದ್ದೀವಿ, ಸೇಫ್ ಇದ್ದೀವಿ ಎಂದಿದ್ದಾರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್. ಕರಾವಳಿ ಭದ್ರತೆ ಕುರಿತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿದ್ದು, ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಕರಾವಳಿಯ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಎಲ್ಲಾ ಸೂಚನೆಗಳನ್ನು ಪಾಲಿಸುತ್ತೇವೆ. ರಾಜ್ಯ ಸರಕಾರ ಜಿಲ್ಲಾಡಳಿತಕ್ಕೆ ಸೂಕ್ತ ಸಲಹೆ ಸೂಚನೆ ನೀಡಿದೆ. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ.

ಗಡಿಯಲ್ಲಿ ಯುದ್ಧ ಸನ್ನಿವೇಶ ಸೃಷ್ಟಿಯಾಗಿರುವ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷ ಕೇಂದ್ರದಿಂದ ರಾಜ್ಯದವರೆಗೆ ಏಕಾಭಿಪ್ರಾಯ ಹೊಂದಿದೆ. ಪಕ್ಷದ ಹಿರಿಯ ಮುಖಂಡರು, ಲೋಕಸಭೆ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರು ತಮ್ಮ ನಿಲುವು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲರದ್ದು ಒಂದೇ ಸ್ಟ್ಯಾಂಡ್ ಆಗಿದೆ. ದೇಶ ಅಂತ ಬಂದಾಗ ನಾವೆಲ್ಲರೂ ಒಂದೇ, ಕೇಂದ್ರ ಸರ್ಕಾರ ಯುದ್ಧ ಮಾಡ್ತೇವೆ ಎಂದಾಗ ನಾವೆಲ್ಲ ಒಗ್ಗಟ್ಟಾಗಿ ಬೆಂಬಲಿಸಿದ್ದೇವೆ.

ಕೇಂದ್ರ ಸರ್ಕಾರದ ನಿರ್ಧಾರ ಜೊತೆ ನಾವು ನಿಲ್ಲುತ್ತೇವೆ. ಯಾವ ನಿರ್ಧಾರ ತೆಗೆದುಕೊಂಡರು ಕೇಂದ್ರ ಸರ್ಕಾರದ ಜೊತೆ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ. ಆಪರೇಷನ್ ಸಿಂದೂರ್ ಮುಂದುವರೆದಿದೆ ಅನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ಬಗ್ಗೆ ತಿಳಿದುಕೊಂಡು ಮಾಹಿತಿ ನೀಡುತ್ತೇನೆ ಎಂದಿದ್ದಾರೆ. ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಮಾತನಾಡಿ ನಾವು ಪಾಕಿಸ್ತಾನದಲ್ಲಿ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದ್ವಿ. ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ನಮ್ಮ ಸೈನಿಕರು ಸರ್ವನಾಶ ಮಾಡಿದ್ದಾರೆ. ನಮ್ಮ ಪ್ರತೀಕಾರವನ್ನು ನಾವು ಗಡಿಯಲ್ಲಿ ತೋರಿಸುತ್ತಲೇ ಬಂದಿದ್ದೇವೆ ಎಂದಿದ್ದಾರೆ.

ಇನ್ನು ನಮ್ಮ ದಾಳಿಗೆ ಹೆದರಿ ಪಾಕಿಸ್ತಾನ ಅಮೆರಿಕ ಮತ್ತು ಬೇರೆ ಬೇರೆ ದೇಶಗಳ ಕಾಲು ಹಿಡಿದುಕೊಳ್ತು, ಈ ಯುದ್ಧ ನಿಲ್ಲಿಸಬೇಕು, ಯುದ್ಧ ಮುಂದುವರಿಸುವ ಶಕ್ತಿ ನಮಗಿಲ್ಲ ಅಂತ ಪಾಕಿಸ್ತಾನ ಕೇಳಿಕೊಳ್ತು. ಅಮೆರಿಕ ಮಧ್ಯಸ್ಥಿಕೆ ಮೂಲಕ ಕದನ ವಿರಾಮ ಘೋಷಣೆ ಆಯ್ತು. ಆ ನಂತರವೂ ಪಾಕಿಸ್ತಾನ ತನ್ನ ನರಿ ಬುದ್ಧಿ ತೋರಿಸಿದೆ. ನಾವು ದೇಶಕ್ಕಾಗಿ ನಡಿಗೆ ಮಾಡಿದ್ದೇವೆ, ನಮ್ಮ ಸೈನಿಕರ ಪರ ಇಡೀ ದೇಶ ನಿಂತಿದೆ. ತಿನ್ನೋಕ್ಕೆ ಅನ್ನ ಇಲ್ಲ, ಕುಡಿಯೋಕೆ ನೀರು ಇಲ್ಲದ ದೇಶ ಪಾಕ್ ನಿರಂತರ ತೊಂದರೆ ಕೊಡ್ತಿದೆ, ಇದು ನಿಲ್ಲಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ ಮಾಡಿದ್ದಾರೆ.