ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ‘ಕಾಕ್ರೋಚ್ ಜನತಾ ಪಕ್ಷ’ (ಸಿಜೆಪಿ) ಪೇಜ್‌ಗೆ ಸಂಬಂಧಿಸಿದಂತೆ ಅದರ ಅಡ್ಮಿನ್ ಅಭಿಜಿತ್ ದಿಪ್ಕೆ ಮಹತ್ವದ ಹೇಳಿಕೆ ನೀಡಿದ್ದಾರೆ. “ಸಿಜೆಪಿ ಹೆಸರಿನಲ್ಲಿ ಇನ್ನು ಮುಂದೆ ಪ್ರಕಟವಾಗುವ ಯಾವುದೇ ಪೋಸ್ಟ್ ಅನ್ನು ಅಧಿಕೃತ ಎಂದು ಪರಿಗಣಿಸಬೇಡಿ” ಎಂದು ಅವರು ಮನವಿ ಮಾಡಿದ್ದಾರೆ.
ಅಭಿಜಿತ್ ದಿಪ್ಕೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ತಮ್ಮ ಡಿಜಿಟಲ್ ವೇದಿಕೆಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.

“ದಯವಿಟ್ಟು ಗಮನಿಸಿ, ಸದ್ಯ ನಮ್ಮಿಗೆ ಎಲ್ಲಾ ವೇದಿಕೆಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಪ್ರಕಟವಾಗುವ ಯಾವುದೇ ಪೋಸ್ಟ್ ಅನ್ನು ಕಾಕ್ರೋಚ್ ಜನತಾ ಪಕ್ಷದ ಅಧಿಕೃತ ಹೇಳಿಕೆ ಎಂದು ಪರಿಗಣಿಸಬೇಡಿ” ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ, ಸಿಜೆಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿರುವ ಅವರು, “ಇನ್‌ಸ್ಟಾಗ್ರಾಮ್ ಪೇಜ್ ಹ್ಯಾಕ್ ಆಗಿದೆ. ನನ್ನ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಯೂ ಹ್ಯಾಕ್ ಆಗಿದೆ. ಟ್ವಿಟರ್ ಖಾತೆ ನಿರ್ಬಂಧಿಸಲಾಗಿದೆ. ಹೆಚ್ಚುವರಿಯಾಗಿ ಬಳಸುತ್ತಿದ್ದ ಖಾತೆಯನ್ನೂ ಸ್ಥಗಿತಗೊಳಿಸಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವನ್ನು ಉಲ್ಲೇಖಿಸಿರುವ ಅಭಿಜಿತ್ ದಿಪ್ಕೆ, “ಶಿಕ್ಷಣ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಸರ್ಕಾರದ ವೈಫಲ್ಯದಿಂದ ವಿದ್ಯಾರ್ಥಿಯೊಬ್ಬ ಜೀವ ಕಳೆದುಕೊಂಡಿದ್ದಾನೆ. ಆದರೆ ಹೊಣೆಗಾರಿಕೆ ಕೇಳಿದ್ದಕ್ಕಾಗಿ ಸಿಜೆಪಿ ವಿರುದ್ಧವೇ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ವಿಡಂಬನಾತ್ಮಕ ಅಭಿಯಾನವೆಂದು ಗುರುತಿಸಿಕೊಂಡಿದ್ದ ಸಿಜೆಪಿ, ಇನ್‌ಸ್ಟಾಗ್ರಾಮ್‌ನಲ್ಲಿ ಪೇಜ್ ಆರಂಭಿಸಿದ ಕೇವಲ ಐದು ದಿನಗಳಲ್ಲೇ 1.5 ಕೋಟಿಗೂ ಹೆಚ್ಚು ಫಾಲೋವರ್ಸ್ ಗಳಿಸಿ ಭಾರೀ ಚರ್ಚೆಗೆ ಕಾರಣವಾಗಿತ್ತು.





