ವಿಶ್ವ ಹಸಿವಿನ ಸೂಚ್ಯಂಕ ಪಟ್ಟಿಯಲ್ಲಿ ಭಾರತ 101ನೇ ಸ್ಥಾನದಿಂದ 107ನೇ ಸ್ಥಾನಕ್ಕೆ ಜಾರಿದ್ದು, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತ ಕೆಳಗಿನ ಸ್ಥಾನ ಪಡೆದಿದೆ.
2021ನೇ ಸಾಲಿನಲ್ಲಿ ಭಾರತ 101ನೇ ಸ್ಥಾನ ಪಡೆದಿತ್ತು. ಆದರೆ ಈ ವರ್ಷ 6 ಸ್ಥಾನ ಕುಸಿದು 107ನೇ ಸ್ಥಾನ ಪಡೆದಿದೆ. 121 ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ, ಟರ್ಕಿ, ಕುವೈತ್, ಅಗ್ರ ೫ರಲ್ಲಿ ಸ್ಥಾನ ಪಡೆದಿವೆ.
ಅತ್ಯಂತ ದುರ್ಬಲ ಹಾಗೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ನೆರೆಯ ಸಣ್ಣ ರಾಷ್ಟ್ರಗಳಿಗಿಂತ ಭಾರತ ಕೆಳಗಿನ ಸ್ಥಾನ ಪಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಹಸಿವಿನ ಸೂಚ್ಯಂಕ ಪಟ್ಟಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 2014ರಿಂದ ದೇಶದಲ್ಲಿ ಬಡತನ ಹಾಗೂ ಹಸಿವಿನ ಪ್ರಮಾಣ ಹೆಚ್ಚಾಗಿದೆ. ದೇಶದಲ್ಲಿ 22.4 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಉತ್ಪಾದನೆ, ಹಸಿವು ಮುಂತಾದ ದೇಶದ ನಿಜವಾದ ಸಮಸ್ಯೆಗಳ ಬಗ್ಗೆ ಯಾವಾಗ ಮಾತನಾಡುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದೇವೆ ಎಂದು ಚಿದಂಬರಂ ಹೇಳಿದ್ದಾರೆ.