ನಾಯಕ ರೋಹಿತ್ ಶರ್ಮ ಅವರ ಸಿಡಿಲಬ್ಬರದ ಅರ್ಧಶತಕ ಹಾಗೂ ಸ್ಪಿನ್ನರ್ ಅಕ್ಸರ್ ಪಟೇಲ್ ಮಾರಕ ದಾಳಿ ನೆರವಿನಿಂದ ಭಾರತ 6 ವಿಕೆಟ್ ಗಳಿಂದ ಆಸ್ಟ್ರೇಲಿಯಾ ವಿರುದ್ಧ ರೋಚಕ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿ 1-1ರಿಂದ ಸಮಬಲಗೊಂಡಿದೆ.
ನಾಗ್ಪುರದಲ್ಲಿ ಶುಕ್ರವಾರ ನಡೆದ ಪಂದ್ಯ ಮಳೆಯಿಂದಾಗಿ 8 ಓವರ್ ಗಳಿಗೆ ಸೀಮಿತಗೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿತು. ಪೈಪೋಟಿಯ ಮೊತ್ತ ಬೆಂಬತ್ತಿದ ಭಾರತ 4 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಭಾರತಕ್ಕೆ ನಾಯಕ ರೋಹಿತ್ ಶರ್ಮ ಮತ್ತು ಉಪ ನಾಯಕ ಕೆಎಲ್ ಮೊದಲ ವಿಕೆಟ್ ಗೆ ಸ್ಫೋಟಕ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್ ಗೆ 39 ರನ್ ಜೊತೆಯಾಟ ನಿಭಾಯಿಸಿದರು. ರಾಹುಲ್ 6 ಎಸೆತಗಳಲ್ಲಿ 10 ರನ್ ಬಾರಿಸಿ ಬೌಲ್ಡ್ ಆದರು.
ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (11), ಸೂರ್ಯಕುಮಾರ್ (0) ಮತ್ತು ಹಾರ್ದಿಕ್ ಪಾಂಡ್ಯ ಬೇಗನೇ ನಿರ್ಗಮಿಸಿದರು. ಆದರೆ ಒಂದೆಡೆ ಬಂಡೆಯಂತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಾಯದಿಂದ 46 ರನ್ ಬಾರಿಸಿ ಅಜೇಯರಾಗಿ ಉಳಿದರೆ, ದಿನೇಶ್ ಕಾರ್ತಿಕ್ 2 ಎಸೆತಗಳಲ್ಲಿ 1 ಸಿಕ್ಸರ್ ಮತ್ತು ಬೌಂಡರಿ ಸೇರಿದ 10 ರನ್ ಬಾರಿಸಿ ರೋಚಕ ಗೆಲುವು ತಂದುಕೊಟ್ಟರು.
ವೇಡ್, ಫಿಂಚ್ ಆಸರೆ
ಇದಕ್ಕೆ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಾಯಕ ಏರಾನ್ ಫಿಂಚ್ ಮತ್ತು ಮ್ಯಾಥ್ಯೂ ವೇಡ್ ಅವರ ಸಿಡಿಲಬ್ಬರದ ಪ್ರದರ್ಶನದಿಂದ ಉತ್ತಮ ಮೊತ್ತ ದಾಖಲಿಸಿತು.
ನಾಯಕ ಏರಾನ್ ಫಿಂಚ್ 15 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 31 ರನ್ ಬಾರಿಸಿದರೆ, ಮ್ಯಥ್ಯೂಾ ವೇಡ್ 20 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 43 ರನ್ ಸಿಡಿಸಿ ಔಟಾಗದೇ ಉಳಿದರು.
ಭಾರತದ ಪರ ಸ್ಪಿನ್ನರ್ ಅಕ್ಸರ್ ಪಟೇಲ್ 3 ವಿಕೆಟ್ ಪಡೆದರೆ, ಜಸ್ ಪ್ರೀತ್ ಬುಮ್ರಾ 1 ವಿಕೆಟ್ ಗಳಿಸಿದರು. ಹರ್ಷಲ್ ಪಟೇಲ್ ಮತ್ತು ವಿರಾಟ್ ಕೊಹ್ಲಿ ತಲಾ 1 ರನೌಟ್ ಮಾಡಿದರು.