ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ನಿರ್ಣಾಯಕ ಮೂರನೇ ಟಿ-20 ಪಂದ್ಯ ಇಂದು ಹೈದರಾಬಾದ್ ನಲ್ಲಿ ನಡೆಯಲಿದ್ದು, ಫಾರ್ಮ್ ಸೂಚನೆ ನೀಡಿದ್ದ ವಿರಾಟ್ ಕೊಹ್ಲಿ ಮತ್ತು ಭರ್ಜರಿ ಫಾರ್ಮ್ ನಲ್ಲಿರುವ ಮ್ಯಾಥ್ಯೂ ವೇಡ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಮೊದಲ ಪಂದ್ಯದಲ್ಲಿ ಭಾರತ ಒಡ್ಡಿದ ಬೃಹತ್ ಮೊತ್ತ ಬೆಂಬತ್ತಿದ ಗೆದ್ದ ಆಸ್ಟ್ರೇಲಿಯಾ ಹಾಗೂ 8 ಓವರ್ ಗಳ ಪಂದ್ಯದಲ್ಲಿ ರೋಚಕ ಗೆಲುವು ಕಂಡ ಭಾರತ ಈಗ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ.
ಭಾರತ ತಂಡ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ವಿರಾಟ್ ಕೊಹ್ಲಿ ಅವರ ವೈಫಲ್ಯ ತಂಡವನ್ನು ಚಿಂತೆಗೀಡು ಮಾಡಿದೆ. ಏಷ್ಯಾಕಪ್ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ ನಂತರ ಕೊಹ್ಲಿ ಅವರಿಂದ ಅಂತಹ ಆಟ ಮತ್ತೆ ಬಂದಿಲ್ಲ.
ಮತ್ತೊಂದೆಡೆ ಕೆಎಲ್ ರಾಹುಲ್ ಮತ್ತು ಸೂರ್ಯ ಕುಮಾರ್ ಯಾದವ್ ಅವರ ಅಸ್ಥಿರ ಪ್ರದರ್ಶನ ತಂಡದ ಚಿಂತೆ ಹೆಚ್ಚಿಸಿದೆ.ರೋಹಿತ್ ಶರ್ಮ ಲಯ ಕಂಡು ಕೊಂಡರೆ, ದಿನೇಶ್ ಕಾರ್ತಿಕ್ ತಮ್ಮ ಉಪಸ್ಥಿತಿಯ ಮಹತ್ವ ಮತ್ತೊಮ್ಮೆ ತಿಳಿಸಿಕೊಟ್ಟಿದ್ದಾರೆ.
ತಂಡದ ಚಿಂತೆ ಹೆಚ್ಚಿರುವುದು ಸ್ಲಾಗ್ ಓವರ್ ಗಳದ್ದು, ಹರ್ಷಲ್ ಪಟೇಲ್ ಇನ್ನಷ್ಟೇ ಲಯ ಕಂಡುಕೊಳ್ಳಬೇಕಿದೆ. ಅಕ್ಸರ್ ಪಟೇಲ್ ಎರಡನೇ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಾನ ಉಳಿಸಿದರು. ಜಸ್ ಪ್ರಿತ್ ಬುಮ್ರಾ ಗಮನ ಸೆಳೆದಿದ್ದಾರೆ. ಯಜುರ್ವೆಂದ್ರ ಚಾಹಲ್ ವಿಕೆಟ್ ಕಡೆ ಗಮನ ಹರಿಸಬೇಕಾಗಿದೆ.
ಮತ್ತೊಂದೆಡೆ ಆಸ್ಟ್ರೇಲಿಯಾ ಭಾರತಕ್ಕೆ ಅಡ್ಡಿಯಾಗಿರುವುದು ಕೆಮರೂನ್ ಗ್ರೀನ್, ಮ್ಯಾಥ್ಯೂವೇಡ್ ಮತ್ತು ಆಡಂ ಜಂಪಾ. ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ವೇಡ್ ತಂಡಕ್ಕೆ ಆಸರೆಯಾಗಿದ್ದು, ಅವರನ್ನು ಕಟ್ಟಿಹಾಕಿದರೆ ಭಾರತದ ಗೆಲುವಿನ ಹಾದಿ ಸುಗಮ ಆಗಬಹುದು ಎಂಬುದು ಭಾರತ ತಂಡದ ಲೆಕ್ಕಾಚಾರವಾಗಿದೆ.