ಬಡವರಿಗೆ ಬದುಕು ಕಟ್ಟಿಕೊಟ್ಟ ಪಕ್ಷ ಕಾಂಗ್ರೆಸ್. ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬಿದ ಪಕ್ಷ ಕಾಂಗ್ರೆಸ್. ಗ್ಯಾರಂಟಿ ಯೋಜನೆಗಳಿಗೆ ರಾಜ್ಯದೆಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಗ್ಯಾರಂಟಿ ಸರ್ಕಾರ ಅಸ್ತಿತ್ವಕ್ಕೆ ಬಂದಂತೆ ಕೇಂದ್ರಲ್ಲೂ ಗ್ಯಾರಂಟಿ ಸರ್ಕಾರ ರಚನೆಯಾಗಲಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತಿಗಳಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರೊಂದಿಗೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ದೇಶದಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಮತದಾರರು ಕಾಂಗ್ರೆಸ್ ಗೆ ಬೆಂಬಲ ನೀಡಬೇಕು. ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಾಂಗ್ರೆಸ್ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಈಗಾಗಲೇ ರಾಜ್ಯದ ಜನತೆಯ ಮನೆಬಾಗಿಲಿಗೆ ಗೃಹಲಕ್ಷ್ಮಿ ಕಾಲಿಟ್ಟಿದ್ದು ಮುಂದೆ ಮಹಾಲಕ್ಷ್ಮಿ ಕೂಡ ಬರಲಿದ್ದಾಳೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಅಲೆ ಜೋರಾಗಿದೆ. ಗ್ಯಾರಂಟಿ ಅಲೆ ಮುಂದೆ ಯಾವ ಅಲೆಯೂ ಇಲ್ಲ. ಕಾಂಗ್ರೆಸ್ ನ ಪಂಚ ಗ್ಯಾರಂಟಿಗಳು ಜನರ ವಿಶ್ವಾಸ, ನಂಬಿಕೆಯನ್ನು ಹೆಚ್ಚಿಸಿದೆ. ಈ ಚುನಾವಣೆಯಲ್ಲಿ ಅವುಗಳೆಲ್ಲಾ ನನಗೆ ವರದಾನವಾಗಲಿದೆ ಎಂದು ಹೇಳಿದರು.

ಕೃಷಿಕರ ನಂತರ ಕಾರ್ಮಿಕ ವರ್ಗ ದೇಶದ ಅರ್ಥವ್ಯವಸ್ಥೆಗೆ ಅಡಿಪಾಯ. ಶ್ರಮಿಕ ವರ್ಗದ ಹಕ್ಕುಗಳನ್ನು ಮರಳಿಸಿ ಅವರ ಭವಿಷ್ಯ ರೂಪಿಸಬೇಕಿದೆ. ಸಂವಿಧಾನ ರಕ್ಷಣೆಗಾಗಿ, ಪ್ರಜಾಪ್ರಭುತ್ವದ ಉಳುವಿಗಾಗಿ ಈ ಜಿಲ್ಲೆಯ ಸ್ವಾಭಿಮಾನದ ಅಸ್ತಿತ್ವಕ್ಕಾಗಿ ಮತದಾರರು ಕಾಂಗ್ರೆಸ್ ಬೆಂಬಲಿಸುವ ಮೂಲಕ ಜನಶಕ್ತಿ ನೀಡಬೇಕೆಂದು ಮನವಿ ಮಾಡಿದರು.
ಹೋದಕಡೆಯಲೆಲ್ಲ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಬಿಸಿಲಿನಲ್ಲೂ ಜನರು ನನ್ನನ್ನು ನೋಡಲು ಸೇರುತ್ತಿದ್ದಾರೆ. ಮಹಿಳೆಯರು, ವೃದ್ಧರು, ಯುವಕರು ಕಾಂಗ್ರೆಸ್ ನತ್ತ ಒಲವು ವ್ಯಕ್ತಪಡಿಸುತ್ತಿದ್ದಾರೆ. ನೂರಕ್ಕೆ ನೂರು ಗೆಲುವು ನಿಮ್ಮದೆ ಎಂದು ಹೇಳುತ್ತಿರುವುದನ್ನು ಕೇಳಿದರೆ ನನ್ನ ಗೆಲುವಿನ ಆತ್ಮವಿಶ್ವಾಸ ಡಬಲ್ ಆಗಿದೆ ಎಂದರು.