ಮುಸ್ಲಿಮ್ ಅರಸರ ಮೇಲೆ ಅದರಲ್ಲೂ ವಿಶೇಷವಾಗಿ ಮೊಘಲರ ಬಗ್ಗೆ ಅಪಪ್ರಚಾರಗಳನ್ನು, ಮತೀಯ ದ್ವೇಷವನ್ನೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಣೀತ ಬಲಪಂಥೀಯ ರಾಜಕಾರಣ ಹರಡುತ್ತಲೇ ಬಂದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮೊಘಲ್ ಚಕ್ರವರ್ತಿ ಅಕ್ಬರ್ ನನ್ನು ಹೊಗಳಿ ಅಚ್ಚರಿ ಹುಟ್ಟಿಸಿದೆ.
ಇತ್ತೀಚೆಗೆ ನಡೆದ ಜಿ20 ಶೃಂಗಸಭೆ ಅಂಗವಾಗಿ ಬಿಡುಗಡೆಗೊಳಿಸಿರುವ ಮ್ಯಾಗಝೀನ್‌ನಲ್ಲಿ ಮೊಘಲ್ ದೊರೆ ಅಕ್ಬರ್ ಓರ್ವ ಪ್ರಜಾಪ್ರಭುತ್ವ ಚಿಂತನೆಯಿದ್ದ ದೊರೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಸೆಪ್ಟೆಂಬರ್ 09 ಮತ್ತು 10 ರಂದು ದೆಹಲಿಯಲ್ಲಿ ನಡೆದ G20 ಶೃಂಗಸಭೆ 2023 ರ ಸಂದರ್ಭದಲ್ಲಿ ಜಾಗತಿಕ ನಾಯಕರ ಎದುರು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಮ್ಯಾಗಝೀನ್‌ನಲ್ಲಿ ಮೊಘಲ್ ಚಕ್ರವರ್ತಿ ಅಕ್ಬರ್ ನ ಒಳ್ಳೆಯ ಗುಣಗಳನ್ನು ಜಗತ್ತಿಗೆ ಪರಿಚಯಿಸಿದೆ .
ಮೊಘಲ್ ಚಕ್ರವರ್ತಿ ಅಕ್ಬರ್ ಶಾಂತಿ ಮತ್ತು ಪ್ರಜಾಪ್ರಭುತ್ವದ ಪ್ರತಿಪಾದಕ ಎಂದು ಮೋದಿ ಸರ್ಕಾರವು ಕರೆದಿದೆ. ಅಕ್ಬರ್‌ನ ಪ್ರಜಾಪ್ರಭುತ್ವದ ಚಿಂತನೆಯು ಅಸಾಮಾನ್ಯವಾಗಿತ್ತು ಮತ್ತು ಆತನ ಕಾಲಮಾನಕ್ಕಿಂತ ಸಾಕಷ್ಟು ಮುಂದೆ ಇತ್ತು ಎಂದು ಹೇಳಿದೆ.

ಯಾವುದೇ ಧಾರ್ಮಿಕ ಪಕ್ಷಪಾತವಿಲ್ಲದೆ ಪ್ರತಿಯೊಬ್ಬರ ಹಿತಾಸಕ್ತಿಯು ನಿರತವಾಗಿರುವುದು ಉತ್ತಮ ಆಡಳಿತವಾಗಿದೆ. ಮೂರನೇ ಮೊಘಲ್ ಬಾದ್ ಷಾ ಅಕ್ಬರ್ ಕೂಡ ಇದೇ ರೀತಿಯ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ್ದರು. ಧರ್ಮದ ಆಧಾರದ ಮೇಲೆ ತಾರತಮ್ಯದ ವಿರುದ್ಧ ಕ್ರಮಗಳನ್ನು ಕೈಗೊಂಡ ಅವರು ಸುಲ್-ಎ-ಕುಲ್ ಅಂದರೆ ವಿಶ್ವ ಶಾಂತಿಯ ತತ್ವವನ್ನು ಪರಿಚಯಿಸಿದರು ಎಂದು ಕೇಂದ್ರ ಸರ್ಕಾರ ಅಕ್ಬರ್ ಬಗ್ಗೆ ವಿವರಣೆಯನ್ನು ನೀಡಿದೆ.
ಸಾಮರಸ್ಯ ಮತ್ತು ಸಹಿಷ್ಣು ಸಮಾಜವನ್ನು ರಚಿಸಲು ಅವರು ದೀನ್-ಇ-ಇಲಾಹಿ ಧರ್ಮವನ್ನು ಪ್ರತಿಪಾದಿಸಿ ಆಚರಿಸಿದರು. ಅಕ್ಬರ್ ಸ್ಥಾಪಿಸಿದ ಪ್ರಾರ್ಥನಾ ಮಂದಿರದಲ್ಲಿ ವಿವಿಧ ಪಂಗಡಗಳ ಬುದ್ಧಿಜೀವಿಗಳು ಮತ್ತು ಧಾರ್ಮಿಕ ಮುಖಂಡರು ಅಕ್ಬರ್ ನೇತೃತ್ವದಲ್ಲಿ ಸಭೆ ಸೇರಿ ಚರ್ಚೆ ನಡೆಸುತ್ತಿದ್ದರು ಎಂದು ಅಕ್ಬರ್ ಗುಣಗಾನ ಮಾಡಲಾಗಿದೆ.
ಅಕ್ಬರ್ ಆಡಳಿತದ ಬಗ್ಗೆಯೂ ಬೆಳಕು ಚೆಲ್ಲಿರುವ ಮೋದಿ ಸರ್ಕಾರ ನವರತ್ನ ಎಂಬ ತನ್ನ ಪರಿಷತ್ತಿನ ಒಂಬತ್ತು ವಿದ್ವಾಂಸರೊಂದಿಗೆ ಸಮಾಲೋಚಿಸಿ ತನ್ನ ಸಾರ್ವಜನಿಕ ಕಲ್ಯಾಣ ನೀತಿಗಳನ್ನು ಅಕ್ಬರ್ ಜಾರಿಗೆ ತರುತ್ತಿದ್ದರು. ಅಕ್ಬರನ ಪ್ರಜಾಸತ್ತಾತ್ಮಕ ಮೌಲ್ಯವು ಅಸಾಮಾನ್ಯವಾಗಿತ್ತು ಮತ್ತು ಆತನ ಕಾಲಮಾನಕ್ಕಿಂತ ಬಹಳ ಮುಂದಿತ್ತು ಎಂದು ಹೇಳಿದೆ.
ಭಾರತವು ಇಂದು ಹೊಂದಿರುವ ಎಲ್ಲಾ ತಪ್ಪುಗಳಿಗಾಗಿ ಮೊಘಲ್ ಆಡಳಿತಗಾರರನ್ನು ಆಗಾಗ ನಿಂದಿಸುವುದು ಮತ್ತು ಅವರನ್ನು ವಿದೇಶಿ ದಾಳಿಕೋರರು ಎಂದು ಆರ್ಎಸ್ಎಸ್, ಬಿಜೆಪಿ ಮತ್ತು ಇತರ ಬಲಪಂಥೀಯ ಹಿಂದೂ ನಾಯಕರು ಕರೆಯುತ್ತಿರುವುದು ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಸಾಮಾನ್ಯವಾಗಿದೆ. 2014 ರ ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ಮೋದಿಯವರು ಮೊಘಲರ ಅಥವಾ ಇಸ್ಲಾಂ ರಾಜರ ಆಡಳಿತವನ್ನು ಉಲ್ಲೇಖಿಸಿ “1,200 ವರ್ಷಗಳ ಗುಲಾಮ ಮನಸ್ಥಿತಿ” ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.
ಅದಾಗ್ಯೂ, ಅವರ ಸರ್ಕಾರವು ಚಕ್ರವರ್ತಿ ಅಕ್ಬರನ ಮೊಘಲ್ ಯುಗವನ್ನು “ಧರ್ಮವನ್ನು ಲೆಕ್ಕಿಸದೆ ಪ್ರತಿಯೊಬ್ಬರ ಕಲ್ಯಾಣಕ್ಕಾಗಿ ಕೆಲಸ ಮಾಡಿದ ಉತ್ತಮ ಆಡಳಿತ” ದ ಉದಾಹರಣೆಯನ್ನು ವಿವರಿಸಿದೆ.

ಮೋದಿ ಸರಕಾರದ ಬೂಟಾಟಿಕೆ
ಜಿ 20 ಮ್ಯಾಗಜೀನ್‌ನ ವಿವರಗಳು ಸಾರ್ವಜನಿಕವಾಗಿ ಬಹಿರಂಗವಾದಾಗಿನಿಂದ ಸಾಮಾಜಿಕ ಮಾಧ್ಯಮ ಬಳಕೆದಾರರು ಬಿಜೆಪಿ ಮತ್ತು ಮೋದಿ ಸರ್ಕಾರದ ಬೂಟಾಟಿಕೆ ಮತ್ತು ದ್ವಂದ್ವ ನೀತಿಯನ್ನು ಎತ್ತಿ ತೋರಿಸಲು ಆರಂಭಿಸಿದ್ದಾರೆ.
ಭಾರತದ ಇತಿಹಾಸದಿಂದ ಮುಸ್ಲಿಂ ದೊರೆಗಳನ್ನು ಅಳಿಸುವುದು, ಅವರ ಇತಿಹಾಸವನ್ನು ತಿರುಚುವುದು ಮಾಡುತ್ತಲೇ ಬಂದಿರುವ ಬಿಜೆಪಿ ಮತ್ತು ಅದರ ರಾಜಕಾರಣವು, ವರ್ತಮಾನದಲ್ಲಿ ಮುಸ್ಲಿಂ ದೊರೆಗಳ ಹೆಸರಿನಲ್ಲಿರುವ ಸ್ಮಾರಕ, ರಸ್ತೆ, ನಗರಗಳನ್ನೂ ಬಿಟ್ಟಿಲ್ಲ. ಮುಸ್ಲಿಂ ದೊರೆಗಳ ಹೆಸರುಗಳನ್ನು, ಸಾಂಸ್ಕೃತಿಕ ಪರಂಪರೆಯನ್ನು ಬದಲಾಯಿಸುವುದರ ಮೂಲಕ ಸಾರ್ವಜನಿಕ ಮುಸ್ಲಿಂ ಗುರುತನ್ನು ಹಂತ ಹಂತವಾಗಿ ಅಳಿಸುತ್ತಲೇ ಬಂದಿರುವ ಬಿಜೆಪಿ ಇದೀಗ ಮೊಘಲ್ ದೊರೆಯನ್ನು ಹೊಗಳಿ ಜಾಗತಿಕ ನಾಯಕರೆದುರು ತನ್ನನ್ನು ಸಾಬೀತುಪಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಜಿ20 ಶೃಂಗಸಭೆಯಲ್ಲಿ ನರೇಂದ್ರ ಮೋದಿ ಅವರ ಸರ್ಕಾರದ ಮತ್ತೊಂದು ಬೂಟಾಟಿಕೆಯೂ ಇದೇ ರೀತಿ ಚರ್ಚೆಗೆ ಒಳಗಾಗಿತ್ತು. ಪ್ರಧಾನಿ ಮೋದಿಯವರು ಸೆಪ್ಟೆಂಬರ್ 10, 2023 ರಂದು ಜಿ20 ಶೃಂಗಸಭೆಗಾಗಿ ನವದೆಹಲಿಯಲ್ಲಿದ್ದ ವಿಶ್ವ ನಾಯಕರನ್ನು ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಗೌರವ ಸಲ್ಲಿಸಲು ರಾಜ್‌ಘಾಟ್‌ಗೆ ಕರೆದೊಯ್ದ ನಂತರ ಬಿಜೆಪಿ ಸರ್ಕಾರವನ್ನು ಇದೇ ರೀತಿ ಟೀಕಿಸಲಾಯಿತು.
ಜಗತ್ತಿನ ಮುಂದೆ ಗಾಂಧಿಯನ್ನು ಹೊಗಳಿ, ಮತ್ತು ದೇಶೀಯ ಮಟ್ಟದಲ್ಲಿ ಗೋಡ್ಸೆಯನ್ನು ಹೀರೋ ಮಾಡುವ ಬಿಜೆಪಿಯ ಭಂಡತನದ ರಾಜಕಾರಣದ ಬಗ್ಗೆಯೂ ನೆಟ್ಟಿಗರು ಟೀಕಿಸಿದ್ದರು.