ಲಸಿಕೆ ನೀಡದಿರುವುದಕ್ಕೆ ಕಾಲುಬಾಯಿ ಜ್ವರದಿಂದ ಸಾವಿಗೀಡಾಗುತ್ತಿವೆ ಜಾನುವಾರುಗಳು

 

ಇಡೀ ದೇಶದಲ್ಲಿ ಕೋವಿಡ್‌ ಎಂಬ ಮಹಾಮಾರಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತೀವ್ರ ನಿರ್ಲಕ್ಷ್ಯದಿಂದಾಗಿ  ನೂರಾರು ಜನರು  ಸಾವನ್ನಪ್ಪಿದರು. ಎರಡನೇ ಅಲೆಯು ಬರಲಿದೆ ಎಂದು ಗೊತ್ತಿದ್ದರೂ ಸರ್ಕಾರಗಳು ಏನೂ ಮಾಡದೇ ಸುಮ್ಮನೇ ಕುಳಿತವು. ಜನತೆಗೆ ಸೋಂಕಿಗೆ ತುತ್ತಾಗುವವರಿಗೆ ಕನಿಷ್ಟ  ಬೆಡ್‌ ವ್ಯವಸ್ಥೆ ಆಕ್ಸಿಜನ್‌ ವ್ಯವಸ್ಥೆಯನ್ನಾದರೂ ಕಲ್ಪಿಸಬಹುದಿತ್ತು. ಆದರೆ ನಮ್ಮ ಸರ್ಕಾರಗಳು ಮಾಡಿದ್ದೇನು ?  ಸರ್ಕಾರ ನಡೆದುಕೊಂಡಿದ್ದು ಅಪ್ಪಟ ಹೊಣೆಗೇಡಿತನ.  ಶವಾಗಾರಗಳ ಮುಂದೆ  ಕ್ಯೂ ನಿಂತು ಜನರು ಶವ ಸಂಸ್ಕಾರ ಮಾಡಿದರು. ಇದೀಗ ಜಾನುವಾರುಗಳ ಸರದಿ ಆಗಿದೆ. ರಾಜ್ಯದ ಹಿಂದುಳಿದ ಜಿಲ್ಲೆ ಎಂದು ಹೆಸರಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಲ್ಲಿ ಸುಮಾರು 200 ಕ್ಕೂ ಹೆಚ್ಚು ಜಾನುವಾರುಗಳು ಕಾಲು ಬಾಯಿ ಜ್ವರದಿಂದ  ಮೃತಪಟ್ಟಿವೆ. 

 ಗುಂಡ್ಲುಪೇಟೆ ತಾಲ್ಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ಹಲವು ಜಾನುವಾರುಗಳು ಮೃತಪಟ್ಟಿವೆ. ಇದು ಹೈನುಗಾರಿಕೆ ಮಾಡುವ ರೈತರಲ್ಲಿ ಆತಂಕ ಸೃಷ್ಟಿಸಿದೆ.ಬೇಗೂರು ಭಾಗದ ಹೆಗ್ಗಡಹಳ್ಳಿ, ಕೋಟೆಕೆರೆ, ಭೋಗಯ್ಯನಹುಂಡಿ, ನೇನೆಕಟ್ಟೆ ಸೇರಿದಂತೆ ಹಂಗಳ ಭಾಗದ ಶಿವಪುರ, ಬಾಚಹಳ್ಳಿ, ಕಾಡಂಚಿನ ಗ್ರಾಮಗಳಾದ ಮಂಗಲ, ಯಲಚೆಟ್ಟಿ ಭಾಗದಲ್ಲಿ ಹೆಚ್ಚು ಜಾನುವಾರುಗಳು ಈ ಕಾಯಿಲೆಗೆ ತುತ್ತಾಗಿವೆ. ನವೆಂಬರ್, ಡಿಸೆಂಬರ್ನಲ್ಲಿ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕಲಾಗಿತ್ತು. ಆರು ತಿಂಗಳಿಗೊಮ್ಮೆ ಲಸಿಕೆ ಹಾಕಲಾಗುತ್ತಿದೆ. ಕೋವಿಡ್ 2ನೇ ಅಲೆಯ ಕಾರಣದಿಂದ ಲಸಿಕೆ ಅಭಿಯಾನ ನಡೆದಿಲ್ಲ. ‘ಆರು ತಿಂಗಳಿಗೊಮ್ಮೆ ಲಸಿಕೆ ಹಾಕಿಸದೆ ಇರುವುದರಿಂದ ಇಂತಹ ರೋಗಗಳು ಹರಡುತ್ತವೆ. ರೈತರು ಮುಂಜಾಗ್ರತಾ ಕ್ರಮವಾಗಿ ಮುಂಗಾರು ಆರಂಭವಾಗುತ್ತಿದ್ದಂತೆ ಜಾನುವಾರುಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು’ ಎಂಬುದು ಪಶು ವೈದ್ಯರ ಸಲಹೆ.ಕೆಲವು ರೈತರು ಲಸಿಕೆ ಹಾಕಿಸಿದರೆ ಜಾನುವಾರುಗಳಿಗೆ ತೊಂದರೆಯಾಗುತ್ತದೆ. ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಭಯದಲ್ಲಿ ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಾರೆ. ಇದರಿಂದಾಗಿ ರಾಸುಗಳು ಬೇಗ ಸೋಂಕಿಗೆ ತುತ್ತಾಗುತ್ತವೆ ಎಂದು ಹೇಳುತ್ತಾರೆ ಅವರು. ‘ಸಣ್ಣ ಕರುಗಳಿಗೆ ಈ ರೋಗ ತಗಲಿದರೆ ಬೇಗ ಮೃತಪಡುತ್ತವೆ. ದನದ ಕೊಟ್ಟಿಗೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಜಾನುವಾರುಗಳನ್ನು ಶುಚಿಯಾಗಿ ತೊಳೆಯಬೇಕು. ಜಾನುವಾರುಗಳು ಮೃತಪಟ್ಟಾಗ ಪಶು ಇಲಾಖೆಗೆ ತಿಳಿಸಿದರೆ ಶವಪರೀಕ್ಷೆ ನಡೆಸಿ ಕಾರಣ ಕಂಡುಹಿಡಿಯಬಹುದು’ ಎಂದು ಪಶು ವೈದ್ಯ ಮಾದೇಶ್ ಅವರು   ತಿಳಿಸಿದರು. ‘

ರೋಗ ಕಾಣಿಸಿಕೊಂಡ ಗ್ರಾಮಗಳಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಿಂಗಳ ಹಿಂದೆ ಸಹ ಕೆಲ ಭಾಗಗಳಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿ ಈಗ ನಿಯಂತ್ರಣಕ್ಕೆ ಬಂದಿದೆ’ ಎಂದು ಅವರು ಹೇಳಿದರು.  ‘ಕಾಲುಬಾಯಿ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ವೇಗವಾಗಿ ಹರಡುತ್ತದೆ. ರೋಗ ಕಾಣಿಸಿಕೊಂಡ ತಕ್ಷಣವೇ ಬಾಧಿತ ಹಸುವನ್ನು ಉಳಿದವುಗಳಿಂದ ಬೇರ್ಪಡಿಸಬೇಕು. ಸೋಡಿಯಂ ಕಾರ್ಬೊನೇಟ್ (ಅಡುಗೆ ಸೋಡಾ) ದ್ರಾವಣದಿಂದ ಕಾಲು ಮತ್ತು ಬಾಯಿಯನ್ನು ನಾಲ್ಕೈದು ಬಾರಿ  ಶುದ್ಧಗೊಳಿಸಬೇಕು. ವಿಟಮಿನ್ ಎ ಚುಚ್ಚುಮದ್ದು ಕೊಡಿಸಬೇಕು. ರೋಗದಿಂದ ಮೃತಪಟ್ಟ ಜಾನುವಾರುಗಳನ್ನು ಆಳವಾದ ಗುಂಡಿ ತೆಗೆದು ಸುಣ್ಣ ಹಾಕಿ ಮತ್ತೆ ಕಳೆಬರದ ಮೇಲೆ ಸುಣ್ಣ ಸುರಿದು ಮುಚ್ಚಬೇಕು’ ಎಂದು ವೈದ್ಯರು ಸಲಹೆ ನೀಡಿದರು.  ಲಸಿಕೆ ನೀಡಿ: ‘ತಾಲ್ಲೂಕಿನಲ್ಲಿ ಕಾಲು ಬಾಯಿ ಜ್ವರದಿಂದ ಜಾನುವಾರುಗಳು ಸಾಯುತ್ತಿವೆ. ಇದರಿಂದ ಹೈನುಗಾರಿಕೆ ನಂಬಿಕೊಂಡು ಜೀವನ ಮಾಡುವ ರೈತರಿಗೆ ತೊಂದರೆ ಆಗುತ್ತದೆ. ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಲಸಿಕೆ ನೀಡಿ ಜಾನುವಾರುಗಳನ್ನು ಉಳಿಸದಿದ್ದಲ್ಲಿ ತಾಲ್ಲೂಕಿನ ಕಚೇರಿ ಮುಂಬಾಗ ಜಾನುವಾರುಗಳ ಜೊತೆಗೆ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ರೈತ ಮುಖಂಡ ಮಹದೇವಪ್ಪ  ಹೇಳುತ್ತಾರೆ.  

 ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ಉಪನಿರ್ದೇಶಕ ಡಾ.ಸಿ.ವೀರಭದ್ರಯ್ಯ ಅವರು, ‘ಮೇ ತಿಂಗಳ ಕೊನೆಯವಾರದಲ್ಲಿ ಕಾಲು ಬಾಯಿ ಜ್ವರದ ಪ್ರಕರಣಗಳು ಹೆಚ್ಚು ಕಾಣಿಸಿಕೊಂಡಿದ್ದವು. ತಕ್ಷಣವೇ ಎಲ್ಲ ಕಡೆ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಹೇಳಿದರು.‘ಪ್ರತಿ ಆರು ತಿಂಗಳಿಗೊಮ್ಮೆ ಕಾಲುಬಾಯಿ ಜ್ವರದ ಲಸಿಕೆ ನೀಡಲಾಗುತ್ತದೆ. ಕಳೆದ ವರ್ಷ ನವೆಂಬರ್–ಡಿಸೆಂಬರ್ ಅವಧಿಯಲ್ಲಿ ನೀಡಿದ್ದೆವು. ಈಗ ಮತ್ತೆ ನೀಡಬೇಕಿತ್ತು. ಆದರೆ, ಕೋವಿಡ್ ಎರಡನೇ ಅಲೆಯಿಂದಾಗಿ ಅದು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರದಿಂದ ಯಾವ ಸೂಚನೆಯೂ ಬಂದಿಲ್ಲ. ಹಾಗಾಗಿ, ಸದ್ಯಕ್ಕೆ ರೋಗ ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು. 

ಹಿಂದುಳಿದ ಜಿಲ್ಲೆ ಚಾಮರಾಜನಗರದಲ್ಲಿ ಬಡ ಮತ್ತು ಅತೀ ಸಣ್ಣ ರೈತರು , ಭೂ ರಹಿತ ಕುಟುಂಬಗಳು ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿವೆ. ಇಂದು ಒಂದು ಹಾಲು ಕೊಡುವ  ಹಸುವಿಗೆ 30 ರಿಂದ 50 ಸಾವಿರ ರೂಪಾಯಿ ದರವಿದೆ.  ಇಂದು ಹಸು ಮೃತಪಟ್ಟರೆ ಅದು ನಿಜಕ್ಕೂ ಆ ಬಡ ಕುಟುಂಬಕ್ಕೆ  ದೊಡ್ಡ ನಷ್ಟವೇ. ಮನೆ ಮಗನನ್ನು ಕಳೆದುಕೊಡಂತೆ. ಆದರೆ ರಾಜ್ಯ ಸರ್ಕಾರಕ್ಕೆ ಇದೆಲ್ಲ ಅರ್ಥವಾಗುವುದಿಲ್ಲ. ಜನರು ಪ್ರತಿಭಟನೆಗಿಳಿದಾಗ ಮಾತ್ರ ಸರ್ಕಾರ ಎಚ್ಚತ್ತುಕೊಳ್ಳುತ್ತದೆ. ರಾಜ್ಯ ಸರ್ಕಾರ ಕೂಡಲೇ ಜಾನುವಾರುಗಳಿಗೆ ಕಾಲು ಬಾಯಿ ಜ್ವರ ತಗುಲದಂತೆ ಲಸಿಕೆ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...