ಜಗತ್ತಿನ ಅನೇಕ ದೇಶಗಳ ಹಾಗೆ ಭಾರತದಲ್ಲೂ ಕೋವಿಡ್ 19 ಅಬ್ಬರಿಸಿ ಬೊಬ್ಬಿರಿದಿದೆ. ಇನ್ನೇನು ಗೆದ್ದೇ ಬಿಟ್ಟೆವು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿ ಸಂಭ್ರಮಿಸುವಷ್ಟರಲ್ಲಿ, ಎರಡನೇ ಅಲೆ ಅಪ್ಪಳಿಸಿ ದೇಶದ ನಾಗರಿಕರನ್ನು ಪೀಡಿಸಿ ಕಂಗೆಡಿಸಿತು.
ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎಂಬಂತೆ ರೂಪಾಂತರಗೊಂಡು ದಾಳಿಯಿಟ್ಟ ಕೋವಿಡ್ ವೈರಸ್ ಭಾರಿ ಅನಾಹುತ ಸೃಷ್ಟಿಸಿತು. ಎಲ್ಲಿ ಏನಾಯಿತು ತಬ್ಬಿಬ್ಬಾಗುವಷ್ಟರಲ್ಲಿ ಲಕ್ಷಗಟ್ಟಲೆ ಜನ ಪ್ರಾಣ ಕಳೆದುಕೊಂಡಿದ್ದರು.

ಇದೀಗ ಕೇಂದ್ರ, ರಾಜ್ಯ ಸರಕಾರಗಳ ಪರಿಶ್ರಮದಿಂದ ಕೋವಿಡ್ ಅಟ್ಟಹಾಸ ಕಡಿಮೆಯಾಗಿದೆ. ಹೊಸತಾಗಿ ಸೋಂಕಿತರಾಗುವವರ ಸಂಖ್ಯೆಯಲ್ಲೂ ಸಾವನ್ನಪ್ಪಿದವರ ಸಂಖ್ಯೆಯಲ್ಲೂ ಇಳಿಕೆ ಕಂಡುಬರಲಾರಂಭಿಸಿದೆ. ಆದರೆ ಕೊರೋನಾ ಎರಡನೆ ಅಲೆ ಮುಗಿಯುವುದು ಯಾವಾಗ ಎಂಬ ಪ್ರಶ್ನೆ ಈಗ ಭಾರಿ ಕುತೂಹಲಕ್ಕೆ ಎಡೆಮಾಡಿದೆ. ತಜ್ಞರು ಎರಡನೇ ಅಲೆಯು ಯಾವಾಗ ಮುಗಿಯಲಿದೆ, ಮೂರನೇ ಅಲೆಯು ಯಾವಾಗ ಶುರುವಾಗಲಿದೆ ಎಂಬಿತ್ಯಾದಿ ಮಾಹಿತಿಗಳನ್ನು ತಮ್ಮದೇ ವಿಧಾನದ ಲೆಕ್ಕಾಚಾರ ಮಾಡಿ ಹೇಳುತ್ತಿದ್ದಾರೆ. ಅದು ನಿಜವಾಗುವುದು ಸುಳ್ಳಾಗುವುದೋ ಎನ್ನುವುದನ್ನು ಕಾಲವೇ ಹೇಳಬೇಕು.
‘ಸೂತ್ರ ಮಾಡೆಲ್’ನ ವಿನೂತನ ಮಾದರಿಯ ಲೆಕ್ಕಾಚಾರ:
“ಸೂತ್ರ ಮಾಡೆಲ್’ನ ಪ್ರಕಾರ, ಭಾರತದಲ್ಲಿ ಈಗ ಕೋವಿಡ್ 19 ಇಳಿಮುಖವಾಗುತ್ತಿದೆ. 2021ರ ಜುಲೈ ಅಂತ್ಯದ ವೇಳೆಗೆ ಸೋಂಕಿನ ಪ್ರಮಾಣ ಅತ್ಯಂತ ಕಡಿಮೆಯಾಗುವುದರೊಂದಿಗೆ ಎರಡನೇ ಅಲೆ ಕ್ಷೀಣಿಸಲಿದೆ. ಮೇ ಅಂತ್ಯಕ್ಕೆ ನಿತ್ಯ 1.50 ಲಕ್ಷ ಹೊಸತಾಗಿ ಸೋಂಕಿತರಾಗುತ್ತಿದ್ದರೆ. ಜೂನ್ ಅಂತ್ಯಕ್ಕೆ ಅದು ದಿನಂಪ್ರತಿ 20 ಸಾವಿರದ ಸರಾಸರಿಗೆ ಇಳಿಯಲಿದೆ.”

ಈ ಹಿಂದೆ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ರಚನೆಯಾಗಿದ್ದ ತಜ್ಞರ ಸಮಿತಿಯಲ್ಲಿ ಈ ಮೊದಲು ಭಾಗವಹಿಸಿದ್ದ ವಿಜ್ಞಾನಿಗಳು ಈ ‘ಸೂತ್ರ ಮಾಡೆಲ್’ನ ಹಿಂದಿದ್ದಾರೆ. ಆಗ ಸರಕಾರದ ತಜ್ಞರ ಸಮಿತಿಯಲ್ಲಿದ್ದ ಮೂವರು ವಿಜ್ಞಾನಿಗಳು ಕಳೆದ ವರ್ಷ ‘ಸೂತ್ರ ಮಾಡೆಲ್’ ರೂಪಿಸಿದ್ದರು. ಅಂದಿನಿಂದಲೂ ಕೋವಿಡ್ ಕೇಸ್ ಗಳ ಬೆಳವಣಿಗೆ ಹಿನ್ನೆಲೆಯಲ್ಲಿ ಅವರು ಕೋವಿಡ್ ಪ್ರಕರಣಗಳ ಪಥ ರೂಪಿಸಿ ಅದಕ್ಕೆ ಗಣಿತದ ಪಕ್ಷೇಪಗಳನ್ನು ರೂಪಿಸಿದ್ದರು. ಸಾಂಕ್ರಾಮಿಕ ರೋಗದ ಪಥವನ್ನು ಅಧ್ಯಯನ ಮಾಡುವ ಸಲುವಾಗಿ ಸಂವೇದನಾಶೀಲ (ಸಸೆಪ್ಟಿಬಲ್), ಪತ್ತೆಯಾಗದ (ಅನ್ ಡಿಟೆಕ್ಟೆಡ್), ಪರೀಕ್ಷಿಸಲಾದ (ಟೆಸ್ಟೆಡ್ -ಪಾಸಿಟಿವ್) ಮತ್ತು ಬೇರ್ಪಡಿಸಬಹುದಾದ ವಿಧಾನ (ರಿಮೂವ್ಡ್ ಅಪ್ರೋಚ್) ಇವಿಷ್ಟನ್ನು ಒಳಗೊಂಡ ಅಂದರೆ ಸೂತ್ರ (Sutra) ಮಾದರಿಯನ್ನು ಅನುಷ್ಠಾನಕ್ಕೆ ತಂದಿದ್ದರು.

ಕೆಲವು ರಾಜ್ಯಗಳಲ್ಲಿ ಈಗಾಗಲೇ ಪರಾಕಾಷ್ಠೆ ತಲುಪಿದ್ದಾಗಿದೆ:
“‘ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್, ರಾಜಸ್ಥಾನ, ಕೇರಳ, ಸಿಕ್ಕಿಂ, ಉತ್ತರಾಖಂಡ, ಗುಜರಾತ್, ಹರ್ಯಾಣ, ದಿಲ್ಲಿ ಹಾಗೂ ಗೋವಾಗಳು ಕೋವಿಡ್ ಎರಡನೇ ಅಲೆಯ ಪರಾಕಾಷ್ಠೆ ತಲುಪಿ ಆಗಿದೆ” ಎಂದು ತಜ್ಞರ ಸಮಿತಿಯಲ್ಲಿ ಭಾಗವಹಿಸಿದ್ದ ಮೂವರಲ್ಲಿ ಒಬ್ಬರಾಗಿರುವ ಐಐಟಿ ಕಾನ್ಪುರದ ಪ್ರೊಫೆಸರ್ ಮನೀಂದ್ರ ಅಗರ್ವಾಲ್ ಹೇಳುತ್ತಾರೆ.
ಮೂರನೇ ಅಲೆಯ ಕಾಟ ಇರಲಿದೆಯೇ?
‘ಸೂತ್ರ ಮಾಡೆಲ್’ ಪ್ರಕಾರ 6-8 ತಿಂಗಳುಗಳಲ್ಲಿ ಮೂರನೇ ಅಲೆಯ ಕಿರಿಕಿರಿ ಶುರುವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಈ ಮೂರನೇ ಅಲೆಯು ಮೊದಲನೆಯ ಹಾಗೂ ಎರಡನೆಯ ಅಲೆಗಳ ಹಾಗೆ ದೊಡ್ಡ ಮಟ್ಟದಲ್ಲಿ ಹಂಗಾಮ ಮಾಡುವ ಸಾಧ್ಯತೆಗಳನ್ನು ಈ ವಿಜ್ಞಾನಿಗಳು ಅಲ್ಲಗಳೆದಿದ್ದಾರೆ. ಆ ವೇಳೆಗೆ ಜನರು ಕೋವಿಡ್ ಲಸಿಕೆಗಳನ್ನು ಪಡೆದುಕೊಂಡು ಈ ರೋಗದ ವಿರುದ್ಧ ತಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡಿರುತ್ತಾರೆ’ ಎನ್ನುವುದು ಪ್ರೊ.ಅಗರ್ವಾಲ್ ಅವರ ಅಂಬೋಣ.

ಆದರೆ, “ಎರಡನೇ ಅಲೆಯಲ್ಲಿ ಪ್ರತಿದಿನ ಸರಾಸರಿ ಒಂದೂವರೆ ಲಕ್ಷ ಪ್ರಕರಣಗಳು ಹೊಸತಾಗಿ ಕಂಡುಬರಬಹುದು ಎಂದು ನಾವು ಲೆಕ್ಕ ಹಾಕಿ ಆಶಾವಾದಿಗಳಾಗಿದ್ದೆವು. ಆದರೆ ಅದು ಹುಸಿಯಾಯಿತು. ನಮ್ಮ ಲೆಕ್ಕ ತಪ್ಪಾಯಿತು” ಎಂದು ಈ ಸಮಿತಿಯ ಇನ್ನೊಬ್ಬ ಸದಸ್ಯ ಐಐಟಿ ಹೈದರಾಬಾದ್ ನ ಪ್ರೊಫೆಸರ್ ವಿದ್ಯಾಸಾಗರ್ ಹೇಳಿದ್ದಾರೆ.
ಕೋವಿಡ್ ಎರಡನೇ ಅಲೆ ಅಂತ್ಯದ ಭವಿಷ್ಯ ಇಷ್ಟು ಬೇಗ ನಿರ್ಣಯಿಸಲಾಗದು:
“ಭಾರತದಲ್ಲಿ ಕೋವಿಡ್ 19 ನ ಎರಡನೇ ಅಲೆ ಮುಗಿದೇ ಹೋಯಿತು ಎಂದು ಹೇಳುವುದು ಆತುರದ ನಿರ್ಧಾರವಾಗುತ್ತದೆ” ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ನ ಕೆ.ಶ್ರೀನಾಥ್ ರೆಡ್ಡಿ ಹೇಳುತ್ತಾರೆ.
“ಮೇಲ್ನೋಟಕ್ಕೆ ನಮಗೆ ಕಾಣಿಸುವ ಸೂಚನೆಗಳ ಪ್ರಕಾರ ಎರಡನೇ ಅಲೆ ಕಡಿಮೆಯಾಗುತ್ತಿದೆ. ಕೋವಿಡ್ 19 ನ ಹೊಸ ಪ್ರಕರಣಗಳಲ್ಲಿ ಕುಸಿತವೂ ಕಂಡಿದೆ. ಆದರೆ ನೈಜವಾದ ಪರೀಕ್ಷೆಗಳ ಹೊರತಾಗಿಯೂ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಸಾವುಗಳ ಸಂಖ್ಯೆಯಲ್ಲೂ ತುಂಬ ಇಳಿಮುಖವಾಗಿದೆ. ದೊಡ್ಡ ನಗರಗಳಲ್ಲಿ ಆಸ್ಪತ್ರೆಗಳಲ್ಲೂ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮೊದಲಿನ ಹಾಗೆ ಬೆಡ್ ಗಳಿಗೆ, ಆಕ್ಸಿಜನ್ ಗಳಿಗೆ, ಐಸಿಯು, ವೆಂಟಿಲೇಟರ್ ಗಳಿಗೆ ಜನ ಗದ್ದಲ ಮಾಡುತ್ತಿಲ್ಲ. ಸಣ್ಣ ಪಟ್ಟಣಗಳಲ್ಲೂ ಕೋವಿಡ್ ಅಬ್ಬರ ಕಡಿಮೆ ಆಗುತ್ತಿದೆ. ಮೂರು ವಾರಗಳ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲ.” ಎಂದು ರೆಡ್ಡಿ ಒಪ್ಪಿಕೊಳ್ಳುತ್ತಾರೆ.
“ಆದರೆ ಇದೆಲ್ಲವನ್ನೂ ಭಾರತ ಸಾಧಿಸಿರುವುದು ಲಾಕ್ ಡೌನ್ ಅವಧಿಯಲ್ಲಿ. ಹೀಗಾಗಿ ಲಾಕ್ ಡೌನ್ ಅನ್ನು ತೆಗೆದಾಗಲೂ ಕೂಡ ಇದೇ ರೀತಿ ಪರಿಸ್ಥಿತಿ ಮುಂದುವರಿಯುವುದು ಎಂದು ಹೇಳುವುದು ಕಷ್ಟ. ಏಕೆಂದರೆ ಮೊದಲ ಅಲೆಯಲ್ಲಿ 2020ರ ಜೂನ್ ನಲ್ಲಿ ಲಾಕ್ ಡೌನ್ ತೆರವು ಮಾಡಿದಾಗ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು, ಮಾತ್ರವಲ್ಲಿ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಪರಾಕಾಷ್ಠೆಗೆ ತಲುಪಿತ್ತು. ಕೋವಿಡ್ ನಿಂದ ಪ್ರತಿದಿನ ಪ್ರಾಣ ಕಳೆದುಕೊಳ್ಳುತ್ತಿದ್ದವರ ಸಂಖ್ಯೆಯೂ ಪರಾಕಾಷ್ಠೆಗೆ ಮುಟ್ಟಿತ್ತು.” ಎಂದು ಹೇಳುತ್ತಾರೆ ಕೆ.ಶ್ರೀನಾಥ್ ರೆಡ್ಡಿ.

“2020 ರ ಹಾಗೆ ಈ ಬಾರಿ ಕೂಡ ಲಾಕ್ ಡೌನ್ ತೆರವು ಮಾಡಿದ ಮೇಲೆ ಏನಾದೀತು ಎಂದು ಈಗಲೇ ಹೇಳುವುದು ಕಷ್ಟ. ಈ ಸಲ ಬಹಳಷ್ಟು ಮಂದಿ ಲಸಿಕೆಗಳನ್ನು ಪಡೆದುಕೊಂಡಿದ್ದಾರೆ. ಕೆಲವರು ಒಂದು ಲಸಿಕೆಯನ್ನು ಪಡೆದು ಭಾಗಶಃ ರೋಗ ನಿರೋಧಕತೆಯನ್ನು ಗಳಿಸಿಕೊಂಡಿದ್ದಾರೆ. ಮೊದಲ ಅಲೆಗೆ ನಮ್ಮ ದೇಶದ ಮಂದಿ ಒಡ್ಡಿಕೊಂಡಾಗ ಇದ್ದಾಗಿನ ಪರಿಸ್ಥಿತಿಯಂತೂ ಈಗಿಲ್ಲ. ಹಾಗಂತ ಪರಿಸ್ಥಿತಿ ಇಷ್ಟೇ ಸರಳವಾಗಿಲ್ಲ. ಕೋವಿಡ್ 19 ಕೂಡ ವಿವಿಧ ರೂಪಾಂತರಗಳೊಂದಿಗೆ ಸವಾಲು ಒಡ್ಡುತ್ತಲೇ ಇದೆ. ಕೋವಿಡ್ ನ ‘ಆಲ್ಫಾ ರೂಪಾಂತರಿ’ಯ ಮೊದಲ ಅಲೆಯಿಂದ ನಾವು ತಪ್ಪಿಸಿಕೊಂಡೆವು ಎಂದು ಸಂಭ್ರಮಿಸುತ್ತಿದ್ದಾಗಲೇ ಅಪ್ಪಳಿಸಿ ಎರಡನೇ ಅಲೆಯ ರೂಪದಲ್ಲಿ ‘ಡೆಲ್ಟಾ ರೂಪಾಂತರಿ’ ಮಹಾರಾಷ್ಟ್ರದಲ್ಲಿ ತಲೆಯೆತ್ತಿತ್ತು. ಮುಂದೆ ಈ ರೂಪಾಂತರಿ ಭಾರತದ ನಾನಾ ಭಾಗಗಳಿಗೆ ಹರಡಿ ದೇಶವನ್ನಷ್ಟೇ ಅಲ್ಲ ಜಗತ್ತಿನ ನಾನಾ ದೇಶಗಳನ್ನು ಹೈರಾಣಾಗಿಸಿತು.” ಎನ್ನುತ್ತಾರೆ ರೆಡ್ಡಿ.

ಆಲ್ಫಾಗಿಂತ ಡೆಲ್ಟಾ ರೂಪಾಂತರಿಯು ಇನ್ನಷ್ಟು ಅಟ್ಟಹಾಸ ಮಾಡಿತು. ಹೀಗಾಗಿ ಕೋವಿಡ್ ಕತೆ ಮುಗಿಯಿತು, ಇಲ್ಲವೇ ಎರಡನೇ ಅಲೆ ಮುಗಿಯಿತು ಎಂದು ಷರಾ ಬರೆಯಲಾಗದು. ನಾವು ಮುಂದೇನಾಗುವುದು ಎಂದು ಎಚ್ಚರಿಕೆಯಿಂದ ಕಾದುನೋಡಬೇಕು ಎನ್ನುವುದು ಕೆ.ಶ್ರೀನಾಥ್ ರೆಡ್ಡಿ ಅಭಿಮತ. ಈ ಸಂದರ್ಭದಲ್ಲಿ ರೆಡ್ಡಿ ಅವರ ವಿಚಾರಗಳು ಹೆಚ್ಚು ಪ್ರಸ್ತುತವೂ ಆಗಿದೆ.
ದೇಶದ ಆರ್ಥಿಕತೆಗೆ ಹೊಡೆತ ನೀಡಿದ ಕರೋನಾ:
ಕೋವಿಡ್ 19ರ ಮೂರನೇ ಅಲೆಯು ಬರುವುದೋ ಇಲ್ಲವೋ, ಅದು ಭಾರತೀಯರ ಮೇಲೆ ದೊಡ್ಡ ಮಟ್ಟದಲ್ಲಿ ಸಾವುನೋವಿನ ಮೇಲೆ ಪರಿಣಾಮ ಬೀರುವುದೋ ಇಲ್ಲವೋ, ಆದರೆ ಈ ಕೊರೋನಾ ದೇಶದ ಆರ್ಥಿಕತೆಯ ಮೇಲೆ ಕಳೆದ ಒಂದೂವರೆ ವರ್ಷಗಳಿಂದ ಕರಾಳ ಪ್ರಭಾವ ಬೀರುತ್ತಿರುವುದು ಸತ್ಯ. ಮಾತ್ರವಲ್ಲ ದೇಶದ ಕೋಟ್ಯಂತರ ಜನರ ಬದುಕಿನ ಮೇಲೂ ಈ ಆರ್ಥಿಕ ಬೆಳವಣಿಗೆಯ ಇಳಿಮುಖದ ಕರಾಳ ದರ್ಶನ ದುಷ್ಪರಿಣಾಮ ಬೀರಲಿದೆ.
ಕೋವಿಡ್ ಕಾರಣದಿಂದ ಭಾರತದ ಶೆ.97ರಷ್ಟು ಮಂದಿ ಇನ್ನಷ್ಟು ಬಡವರಾಗಿದ್ದಾರೆ ಎಂದು ಭಾರತದ ಆರ್ಥಿಕತೆಯ ಮೇಲೆ ನಿಗಾ ವಹಿಸಿರುವ ‘ದಿ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ’ ಇತ್ತೀಚೆಗೆ ಹೇಳಿದೆ.
ದೇಶದ ನಾನಾ ರಾಜ್ಯಗಳಲ್ಲಿ ಲಾಕ್ ಡೌನ್ ಇದ್ದುದರಿಂದ ಆರ್ಥಿಕ ಚಟುವಟಿಕೆಗಳ ಮೇಲೂ ಅದು ಪ್ರಭಾವ ಬೀರಿದೆ. ಈವರೆಗೆ ಭಾರತದ 22.3 ಕೋಟಿ ಜನರು ಲಸಿಕೆಗಳನ್ನು ವಿತರಿಸಲಾಗಿದೆ. ಅದರಲ್ಲಿ ಬಹುತೇಕರು (ಶೇ.80) ಕೋವಿಡ್ ಲಸಿಕೆಯ ಒಂದು ಡೋಸ್ ಅನ್ನು ಮಾತ್ರ ಪಡೆದಿದ್ದಾರೆ. ಹೀಗಾಗಿ ಕೋವಿಡ್ ಅನ್ನು ಎಷ್ಟು ಬೇಗ ಮಣಿಸಲು ಸಾಧ್ಯವಾಗುವುದೋ ಅಷ್ಟು ಬೇಗ ದೇಶದ ಆರ್ಥಿಕ ಸ್ಥಿತಿ ಹಳಿಗೆ ಬರಲಿದೆ.