ಮೋದಿ ಸರ್ಕಾರದ ಕಳ್ಳನಿದ್ದೆಗೆ ಬೆಚ್ಚಿಬೀಳುವ ಲಸಿಕೆ ನೀಡಿದ ನ್ಯಾ.ಚಂದ್ರಚೂಡ್!

ಕಳೆದ ಏಪ್ರಿಲ್ 24ರಂದು ದೇಶದ ಸುಪ್ರೀಂಕೋರ್ಟಿನ ಮುಖ್ಯನ್ಯಾಯಮೂರ್ತಿಯಾಗಿ ಜಸ್ಟೀಸ್ ಎನ್ ವಿ ರಮಣ ಅವರು ಅಧಿಕಾರ ಸ್ವೀಕರಿಸಿದ ಕ್ಷಣವನ್ನು, ಅಂದೇ ಹಲವು ಮಾಧ್ಯಮಗಳು ದೇಶದ ನ್ಯಾಯಾಂಗ ವ್ಯವಸ್ಥೆಯ ಒಂದು ಭರವಸೆಯ ಕ್ಷಣ ಎಂದೇ ಬಣ್ಣಿಸಿದ್ದವು.

ಹಾಗೆ, ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರು, ನ್ಯಾಯಾಂಗದ ಅತ್ಯುನ್ನತ ಸ್ಥಾನಕ್ಕೆ ಏರಿದ್ದನ್ನು ಬಣ್ಣಿಸಲು ಹಲವು ಕಾರಣಗಳಿದ್ದವು. ಇತ್ತೀಚಿನ ವರ್ಷಗಳಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯವೂ ಸೇರಿದಂತೆ ಒಟ್ಟಾರೆ ನ್ಯಾಯಾಂಗ ವ್ಯವಸ್ಥೆಯಲ್ಲಿ, ತನ್ನ ಮೇಲಿನ ಜನಸಾಮಾನ್ಯರ ವಿಶ್ವಾಸ ಮತ್ತು ನಂಬಿಕೆಯನ್ನು ಕದಲಿಸುವಂತಹ ಆತಂಕಕಾರಿ ಬೆಳವಣಿಗೆಗಳು ನಡೆದಿದ್ದವು.

ಅದು ಮೂರು ವರ್ಷಗಳ ಹಿಂದೆ ಸರ್ವೋಚ್ಛ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಅಂದಿನ ಮುಖ್ಯನ್ಯಾಯಮೂರ್ತಿಗಳ ವಿರುದ್ದವೇ ಪತ್ರಿಕಾಗೋಷ್ಠಿ ನಡೆಸಿ ಗಂಭೀರ ಆರೋಪಗಳನ್ನು ಮಾಡಿ, ದೇಶದ ಸಂವಿಧಾನ ಮತ್ತು ಸಂವಿಧಾನಿಕ ಸಂಸ್ಥೆಗಳಿಗೆ ದೊಡ್ಡ ಅಪಾಯ ಎದುರಾಗಿದೆ ಎಂದು ಸಾರ್ವಜನಿಕವಾಗಿ ಕಣ್ಣೀರಿಟ್ಟ ಘಟನೆ ಇರಬಹುದು, ದೇಶದ ಸಂವಿಧಾನ ಮತ್ತು ನ್ಯಾಯವನ್ನು ಎತ್ತಿಹಿಡಿಯಬೇಕಾದ ವ್ಯವಸ್ಥೆಯ ಚುಕ್ಕಾಣಿ ಹಿಡಿದ ಸಿಜೆಐಗಳೇ ಸಾಲುಸಾಲಾಗಿ ನಿವೃತ್ತಿಯಾಗುತ್ತಲೇ ಸರ್ಕಾರ ದಯಪಾಲಿಸಿದ ವಿವಿಧ ಹುದ್ದೆ, ಸ್ಥಾನಮಾನಗಳಲ್ಲಿ ವಿರಾಜಮಾನರಾಗಿ, ಇಡೀ ನ್ಯಾಯಾಂಗ ವ್ಯವಸ್ಥೆಗೇ ಮಸಿ ಬಳಿದದ್ದಿರಬಹುದು, ಸಿಜೆಐ ಆಗಿರದ್ದವರೊಬ್ಬರು ಆಡಳಿತ ಪಕ್ಷದ ಪರವಾಗಿ ವಕಾಲತು ವಹಿಸಿದ್ದಿರಬಹುದು,… ಹೀಗೆ ಹಲವು ವಿಧದಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರು ಇಟ್ಟಿದ್ದ ನಂಬಿಕೆ ಕರಗತೊಡಗಿದೆ ಎಂದು ಮಾತುಗಳು ಕೇಳಿಬಂದಿದ್ದವು.

ಅದರಲ್ಲೂ ಸಿಎಎ-ಎನ್ಆರ್ ಸಿ, ರೈತ ಹೋರಾಟದಂತಹ ವಿಷಯವಿರಬಹುದು, ಕೋವಿಡ್ ಮೊದಲ ಅಲೆಯ ವೇಳೆ ಲಾಕ್ ಡೌನ್, ವಲಸಿಗರ ಬಿಕ್ಕಟ್ಟುಗಳ ಕುರಿತ ಪ್ರಕರಣಗಳಿರಬಹುದು, ಇತ್ತೀಚಿನ ವರ್ಷಗಳಲ್ಲಿ ಹಲವು ತೀರ್ಪು ಮತ್ತು ಆದೇಶಗಳ ವಿಷಯದಲ್ಲಿ ಕೂಡ ನ್ಯಾಯಾಂಗ ಒಂದು ಪಕ್ಷ, ಒಂದು ಸಿದ್ಧಾಂತದ ಪರ ವಾಲುತ್ತಿದೆ ಎಂಬ ಗಂಭೀರ ಟೀಕೆಗಳೂ ಕೇಳಿಬಂದಿದ್ದವು. ಅಂತಹ ಬಹುತೇಕ ವಿವಾದಾಸ್ಪದ ಆದೇಶ-ತೀರ್ಪುಗಳ ಹಿಂದೆ ಇತ್ತೀಚಿನ ಕೆಲವು ಸಿಜೆಐಗಳ ನೇತೃತ್ವದ ಪೀಠಗಳೇ ಇದ್ದವು ಎಂಬುದು ಕೂಡ ಜನರಲ್ಲಿ ಕಾನೂನು ಮತ್ತು ಸಂವಿಧಾನ ಖಾತರಿಪಡಿಸಿದ ನ್ಯಾಯದ ಬಗ್ಗೆಯೇ ಭ್ರಮನಿರಸನ ಹುಟ್ಟಿಸಿದ್ದವು.

ಇಂತಹ ಆತಂಕದ ನಡುವೆ, ರೈತ ಕುಟುಂಬದ ಹಿನ್ನೆಲೆಯಿಂದ ಬಂದ, ಒಬ್ಬ ಪತ್ರಕರ್ತರಾಗಿ ಜನಪರ ಪತ್ರಿಕೋದ್ಯಮ ಮಾಡಿದ, ರೈತ ಮತ್ತು ಕಾರ್ಮಿಕ ಪರ ಹೋರಾಟಗಳ ಮೂಲಕ ಬೆಳೆದುಬಂದ ನ್ಯಾ. ಎನ್ ವಿ ರಮಣ ಅವರು ನ್ಯಾಯಾಂಗದ ಚುಕ್ಕಾಣಿ ಹಿಡಿದಾಗ ಸಹಜವಾಗೇ ಭರವಸೆಯ ಮಾತುಗಳು ಕೇಳಿಬಂದಿದ್ದವು.

ಇದೀಗ ನ್ಯಾ.ಎನ್ ವಿ ರಮಣ ಅವರು ಸಿಜೆಐ ಆಗಿ ಅಧಿಕಾರ ಸ್ವೀಕರಿಸಿ ಈ ಆರು ವಾರಗಳಲ್ಲೇ ಜನರ ಅಂತಹ ಭರವಸೆಗಳನ್ನು ನಿಜ ಮಾಡುವ ಹಲವು ಬೆಳವಣಿಗೆಗಳು ನಡೆದಿವೆ. ಅದರಲ್ಲೂ, ನ್ಯಾ. ರಮಣ ಅವರು ಸಿಜೆಐ ಆಗಿ ಅಧಿಕಾರ ಸ್ವೀಕರಿಸುವ ಹೊತ್ತಿಗಾಗಲೇ ದೇಶದಲ್ಲಿ ಅನಾಹುತಕಾರಿ ಸ್ವರೂಪದಲ್ಲಿ ಹರಡಿದ್ದ ಕರೋನಾ ಎರಡನೇ ಅಲೆಯ ಸಾವು-ನೋವುಗಳ ವಿಷಯದಲ್ಲಿ ಮುಖ್ಯನ್ಯಾಯಮೂರ್ತಿಗಳು ಮತ್ತು ಅವರನ್ನೊಳಗೊಂಡ ದೇಶದ ಸುಪ್ರೀಂಕೋರ್ಟ್, ವಿವಿಧ ರಾಜ್ಯಗಳ ಹೈಕೋರ್ಟ್ ಗಳು ಪ್ರತಿಕ್ರಿಯಿಸಿದ ರೀತಿ, ಸಂಕಷ್ಟದ ಹೊತ್ತಲ್ಲೂ ಒಂದು ಭರವಸೆಯ ನಿಟ್ಟುಸಿರುವ ಹೊಮ್ಮಿಸಿದೆ.

ಅದರಲ್ಲೂ ಆಮ್ಲಜನಕ ಮತ್ತು ಆಸ್ಪತ್ರೆಯ ಹಾಸಿಗೆಗಳ ಕೊರತೆಯಿಂದ ದೇಶದ ಉದ್ದಗಲಕ್ಕೆ ಜನಸಾಮಾನ್ಯರು ಹಾದಿಬೀದಿ ಹೆಣವಾಗುತ್ತಿರುವಾಗ, ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿಯ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಕಣ್ಣುಮುಚ್ಚಿ ಹೃದಯ ಮತ್ತು ಮೆದುಳು ನಿಷ್ಕ್ರಿಯಗೊಂಡಂತೆ ಜಡ್ಡುಹಿಡಿದು ಕುಳಿತಿದ್ದಾಗ, ಸ್ವಯಂಪ್ರೇರಿತ ಪ್ರಕರಣ ಕೈಗೆತ್ತಿಕೊಂಡು ಜನರ ಜೀವ ಉಳಿಸಲು ಕಣಕ್ಕಿಳಿದ ನ್ಯಾ. ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ ದೇಶದಲ್ಲಿ ನ್ಯಾಯಾಂಗ ಇನ್ನೂ ಜನಸಾಮಾನ್ಯರ ಕೈಬಿಟ್ಟಿಲ್ಲ ಎಂಬ ದೊಡ್ಡ ಸಮಾಧಾನ ತಂದಿತು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೇವಲ ಲಾಕ್ ಡೌನ್ ಹೇರಿ, ಕಂಟೈನ್ ಮೆಂಟ್ ಝೋನ್ ಘೋಷಿಸಿ ಕೋವಿಡ್ ಪರಿಸ್ಥಿತಿ ನಿರ್ವಹಣೆಯ ತಮ್ಮ ಜವಾಬ್ದಾರಿ ಅಲ್ಲಿಗೇ ಮುಗಿಯಿತು ಎಂಬಂತೆ ಕೈಕಟ್ಟಿ ಕುಳಿತ ಹೊತ್ತಲ್ಲಿ, ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸಕಾಲದಲ್ಲಿ ಹಾಸಿಗೆ ಸಿಗದೆ, ಆಮ್ಲಜನಕ ಸಿಗದೆ ಜನ ಜೀವ ಕಳೆದುಕೊಳ್ಳತೊಡಗಿದ್ದರು. ಕರೋನಾ ಎರಡನೇ ಅಲೆಯ ಭೀಕರತೆ ಮತ್ತು ಅದನ್ನು ಎದುರಿಸುವ ತಯಾರಿಗಳ ಕುರಿತ ತಜ್ಞರ ಸಮಿತಿಗಳ ಶಿಫಾರಸುಗಳನ್ನು ಕಸದಬುಟ್ಟಿಗೆ ಎಸೆದು ಕೂತಿದ್ದ ಮೋದಿ ಸರ್ಕಾರವಂತೂ ಆಮ್ಲಜನಕ ಮತ್ತು ಹಾಸಿಗೆ ಬಿಕ್ಕಟ್ಟಿಗೂ ತಮಗೂ ಸಂಬಂಧವಿಲ್ಲವೆಂಬಂತೆ ಇತ್ತು. ಇಂತಹ ಹೊತ್ತಲ್ಲಿ ಮೇಲಿಂದ ಮೇಲೆ ವಿವಿಧ ರಾಜ್ಯ ಹೈಕೋರ್ಟುಗಳು ಆಮ್ಲಜನಕದ ವಿಷಯದಲ್ಲಿ ಬಂದ ದೂರುಗಳು ಮತ್ತು ಕೆಲವು ಸ್ವಯಂಪ್ರೇರಿತ ಪ್ರಕರಣಗಳನ್ನು ಕೈಗೆತ್ತಿಕೊಂಡು ಸರ್ಕಾರಕ್ಕೆ ಚಾಟಿ ಬೀಸಿದವು. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ಸರ್ಕಾರದ ವಿರುದ್ಧ, ಮತ್ತು ಜನರ ಪರವಾಗಿ ನ್ಯಾಯಾಂಗ ಮೊದಲ ಬಾರಿಗೆ ದಿಟ್ಟ ದನಿ ಎತ್ತಿದ ಅಪರೂಪದ ಬೆಳವಣಿಗೆ ಅದಾಗಿತ್ತು.

ಆ ದನಿಯನ್ನೇ ಇನ್ನಷ್ಟು ವಿಸ್ತರಿಸಿದ ನ್ಯಾ. ಚಂದ್ರಚೂಡ್ ಅವರ ನೇತೃತ್ವದ ಸುಪ್ರೀಂಕೋರ್ಟ್ ಪೀಠ, ಆಮ್ಲಜನಕ ಸರಬರಾಜು ಸೇರಿದಂತೆ ಕೋವಿಡ್ ಸಂಬಂಧಿತ ಸಮಸ್ಯೆಗಳನ್ನು ನಿರ್ವಹಿಸಲು ಪ್ರತ್ಯೇಕ ಟಾಸ್ಕ್ ಫೋರ್ಸ್ ನೇಮಿಸಿ, ಪರ್ಯಾಯವಾಗಿ ಭೀಕರ ಪರಿಸ್ಥಿತಿ ನಿರ್ವಹಣೆಗೆ ಮುಂದಾಯಿತು. ದೆಹಲಿ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಆಮ್ಲಜನಕ ಹಾಹಾಕಾರದ ಪರಿಸ್ಥಿತಿ ಸುಧಾರಿಸುವಲ್ಲಿ ಸುಪ್ರೀಂಕೋರ್ಟಿನ ಈ ಪೀಠದ ಮಧ್ಯಪ್ರವೇಶದ ಮಹತ್ವದ ಪಾತ್ರ ವಹಿಸಿತು ಮತ್ತು ಸರ್ಕಾರಗಳು ಅನಿವಾರ್ಯವಾಗಿ ಒತ್ತಡಕ್ಕೆ ಸಿಲುಕಿ, ನಿದ್ದೆಯಿಂದ ಎದ್ದು ಆಮ್ಲಜನಕ ಆಮದು, ಆಮ್ಲಜನಕ ಉತ್ಪಾದನೆ, ಸರಬರಾಜು ವಿಷಯದಲ್ಲಿ ಚುರುಕುಗೊಂಡವು. ಆವರೆಗೆ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದ್ದ ಆಮ್ಲಜನಕ ವ್ಯವಸ್ಥೆಯಲ್ಲಿ ಕನಿಷ್ಟ ಶಿಸ್ತು ಬರಲು ನ್ಯಾ. ಚಂದ್ರಚೂಡ್ ಅವರ ಪೀಠದ ಪಾತ್ರ ದೊಡ್ಡದಿದೆ.

ಆ ಬಳಿಕ, ಅದೇ ಪೀಠ ಲಸಿಕೆ ವಿಷಯವನ್ನು ಕೈಗೆತ್ತಿಕೊಂಡು ಯಾಕೆ ಲಸಿಕೆ ಕೊರತೆ ಕಾಡುತ್ತಿದೆ? ದೇಶದಲ್ಲಿ 44ವರ್ಷ ಮೇಲ್ಪಟ್ಟವರಿಗೆ ಮಾತ್ರ ಉಚಿತ ಲಸಿಕೆ ವ್ಯವಸ್ಥೆ ಮಾಡಿ, ಅದನ್ನೂ ಸರಿಯಾಗಿ ಸಕಾಲದಲ್ಲಿ ಸರಬರಾಜು ಮಾಡದೆ ಕೈಚೆಲ್ಲಿದ ಕೇಂದ್ರ ಸರ್ಕಾರ, 44 ವರ್ಷದೊಳಗಿನವರಿಗೆ ಉಚಿತ ಲಸಿಕೆ ನೀಡಲಾಗದು ಎಂದು ಹೇಳಿದ್ದು ಯಾಕೆ? ಜೊತೆಗೆ ಲಸಿಕೆ ಕಂಪನಿಗಳಿಂದ ಲಸಿಕೆ ಖರೀದಿಗೆ ಏಕರೂಪದ ದರ ನಿಗದಿ ಮಾಡದೆ ಕೇಂದ್ರ ಸರ್ಕಾರಕ್ಕೆ ಒಂದು ದರ ಮತ್ತು ವಿವಿಧ ರಾಜ್ಯ ಸರ್ಕಾರಗಳಿಗೆ ಒಂದೊಂದು ದರ ನಿಗದಿ ಮಾಡಿವುದರ ಉದ್ದೇಶವೇನು? ದೇಶದ ಜನರನ್ನು ಕರೋನಾದಿಂದ ಕಾಪಾಡಲು ಸದ್ಯಕ್ಕೆ ಇರುವ ಪರಿಣಾಮಕಾರಿ ಅಸ್ತ್ರ ಲಸಿಕೆಯೊಂದೇ. ಹಾಗಿರುವಾಗ ಸರ್ಕಾರ ತನ್ನ ಪ್ರಜೆಗಳೆಲ್ಲರಿಗೆ ಉಚಿತ ಲಸಿಕೆ ನೀಡುವಷ್ಟು ಕನಿಷ್ಟ ಹೊಣೆಗಾರಿಕೆಯನ್ನೂ ಪ್ರದರ್ಶಿಸುತ್ತಿಲ್ಲ ಯಾಕೆ? ಲಸಿಕೆ ವಿಷಯದಲ್ಲಿ ಸರ್ಕಾರದ ಮುಂದೆ ಒಂದು ಸ್ಪಷ್ಟ ನೀತಿ ಎಂಬುದೊಂದು ಇದೆಯೇ? ಇದ್ದರೆ ಅದನ್ನು ಹಾಜರುಪಡಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮೇಲಿಂದ ಮೇಲೆ ಕಪೋಳಮೋಕ್ಷ ಮಾಡಿತ್ತು.

ಸ್ವತಃ ಕೋವಿಡ್ ಸೋಂಕಿಗೆ ಒಳಗಾದರೂ, ಶೀಘ್ರ ಚೇತರಿಸಿಕೊಂಡು ಬಂದು ಮತ್ತೆ ಕೋವಿಡ್ ಸಂಬಂಧಿತ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ಆರಂಭಿಸಿದ ನ್ಯಾ. ಚಂದ್ರಚೂಡ್ ಅವರು, ಕಳೆದ ವಾರವಷ್ಟೇ ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಹೇಳಿ ಮೋದಿ ಸರ್ಕಾರ, ಕಳೆದ ಬಜೆಟ್ ನಲ್ಲಿ ಘೋಷಿಸಿ, ಅದಕ್ಕಾಗಿ 35 ಸಾವಿರ ಕೋಟಿ ರೂ. ತೆಗೆದಿರಿಸುವುದಾಗಿ ಹೇಳಿದ್ದನ್ನು ಪ್ರಸ್ತಾಪಿಸಿ, ಆ 35 ಸಾವಿರ ಕೋಟಿ ಜನರ ತೆರಿಗೆ ಹಣದ ಲೆಕ್ಕ ಕೇಳಿದ್ದರು. ಆ ಹಣವನ್ನು ಹೇಗೆ, ಯಾವ ಉದ್ದೇಶಕ್ಕೆ ವೆಚ್ಚ ಮಾಡಲಾಗುತ್ತಿದೆ ಎಂಬ ಬಗ್ಗೆ ಸಂಪೂರ್ಣ ವಿವರ ಕೊಡಿ ಎಂದು ತಾಕೀತು ಮಾಡಿತ್ತು.

ಭೀಕರ ಸಾಂಕ್ರಾಮಿಕದ ದವಡೆಗೆ ಸಿಕ್ಕು ದೇಶದ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳುತ್ತಿರುವಾಗ, ಸೋಂಕು ತಡೆಯ ಕ್ರಮವಾಗಿ ಹೇರಲಾದ ಅವೈಜ್ಞಾನಿಕ ಮತ್ತು ವಿವೇಚನಾರಹಿತ ಲಾಕ್ ಡೌನ್ ನಿಂದಾಗಿ 138 ಕೋಟಿ ಜನರ ಬದುಕೇ ಸ್ಥಗಿತವಾಗಿರುವಾಗ, ಕೋಟ್ಯಂತರ ಜನರ ಬದುಕು ಈಗಾಗಲೇ ನಾಶವಾಗಿರುವಾಗ, ಭಾರೀ ಬಹುಮತದ ಒಂದು ಸರ್ಕಾರವಾಗಿ, ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಜಪ ಮಾಡುವ ಒಬ್ಬ ಪ್ರಧಾನಿಯಾಗಿ, ಆಡಳಿತದ ಚುಕ್ಕಾಣಿ ಹಿಡಿದವರು ದೇಶದ ಜನರಿಗೆ ಉಚಿತ ಲಸಿಕೆ ಕೊಡಲು ಕೂಡ ಸಿದ್ಧರಿಲ್ಲ ಎಂದಾದರೆ ಸರ್ಕಾರದ ಲಸಿಕೆ ನೀತಿ ಏನು? ಈ ಹಿಂದಿನ ಹಲವು ಸಂದರ್ಭಗಳಲ್ಲಿ ಸಿಡುಬು, ಪೋಲಿಯೋದಂತಹ ಸೋಂಕುಗಳ ವಿರುದ್ಧ ಆಯಾ ಸರ್ಕಾರಗಳು ದೇಶವ್ಯಾಪಿ ಉಚಿತ ಲಸಿಕೆ ನೀಡಿ ಜನರ ಆರೋಗ್ಯ ಕಾದಿರುವಾಗ, ಟ್ರಿಲಿಯನ್ ಡಾಲರ್ ಎಕಾನಮಿಯ ಮಾತನಾಡುವ ಪ್ರಧಾನಿ ಮೋದಿ ಲಸಿಕೆಗೆ ಕಾಸಿಲ್ಲ ಎಂದರೆ ಅದರಂತಹ ನಯವಂಚಕತನ ಮತ್ತೊಂದು ಯಾವುದಿದೆ ಎಂಬ ಪ್ರಶ್ನೆ ದೇಶದ ಜನಸಾಮಾನ್ಯರದ್ದೂ ಆಗಿತ್ತು. ನ್ಯಾ. ಚಂದ್ರಚೂಡ್ ಜನರ ಆ ಭಾವನೆಗೆ ದನಿಯಾಗಿದ್ದರು. ಆ ಮೂಲಕ ದೇಶದ ಕಟ್ಟಕಡೆಯ ಮನುಷ್ಯನ ಮನದ ಮಾತಿಗೆ ದೇಶದ ಸರ್ವೋಚ್ಛ ನ್ಯಾಯಾಲಯ ದನಿಯಾಗುವ ಒಂದು ಐತಿಹಾಸಿಕ ಕ್ಷಣವನ್ನು ನ್ಯಾ. ಚಂದ್ರಚೂಡ್ ನಿಜ ಮಾಡಿದ್ದರು.

ಇದೀಗ, ನ್ಯಾಯಾಂಗದ ಆ ಐತಿಹಾಸಿಕ ದಿಟ್ಟತನದ, ಜನಪರ ದನಿಯ ಪರಿಣಾಮವಾಗಿ ದೇಶದ ಪ್ರಧಾನಿ ಮೋದಿಯವರು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ. ಲಸಿಕೆಗಾಗಿ ಘೋಷಿಸಿದ್ದ 35 ಸಾವಿರ ಕೋಟಿಯ ಲೆಕ್ಕ ಮತ್ತು ಲಸಿಕಾ ತಯಾರಿಕಾ ಕಂಪನಿಗಳೊಂದಿಗಿನ ಒಪ್ಪಂದಗಳು ಸೇರಿದಂತೆ ಸಮಗ್ರ ಲಸಿಕಾ ನೀತಿಯ ದಾಖಲೆ ಕೇಳಿದ ಬೆನ್ನಲ್ಲೇ ಬೆಚ್ಚಿಬಿದ್ದಿರುವ ಸರ್ಕಾರ, ಬೀಸುವ ದೊಣ್ಣೆಯಿಂದ ಪಾರಾಗುವ ಯತ್ನವಾಗಿ, ಪೀಠದ ಮುಂದಿನ ವಿಚಾರಣೆಗೆ ಮುಂಚೆಯೇ ಉಚಿತ ಲಸಿಕೆ ಘೋಷಿಸಿ ಇನ್ನಷ್ಟು ಕಪೋಳಮೋಕ್ಷದಿಂದ ಪಾರಾಗುವ ದಾರಿ ಕಂಡುಕೊಂಡಿದೆ.

ಆ ಹಿನ್ನೆಲೆಯಲ್ಲಿ; ಕೇರಳದ ಲದ್ವಿನಾ ಜೋಸೆಫ್ ಎಂಬ ಐದನೇ ತರಗತಿಯ ಬಾಲಕಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಪತ್ರ ಬರೆದು, “ದೇಶದ ಕೋವಿಡ್ ಸಂಕಷ್ಟದ ಹೊತ್ತಲ್ಲಿ ನಿಮ್ಮ ಘನ ನ್ಯಾಯಾಲಯ ಜನರ ಜೀವ ಮತ್ತು ಜೀವನ ಕಾಪಾಡಲು ಮುಂದೆ ಬಂದಿದೆ. ಆಮ್ಲಜನಕ ವ್ಯವಸ್ಥೆ ಸೇರಿದಂತೆ ಕೋವಿಡ್ ಸಂಬಂಧಿತ ವಿಷಯಗಳಲ್ಲಿ ನ್ಯಾಯಾಲಯ ಜನರ ಪರ ನಿಂತಿದೆ. ಆ ಮೂಲಕ ಕೋವಿಡ್ ಸಾವಿನ ದರವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅದಕ್ಕಾಗಿ ನಿಮಗೆ ಧನ್ಯವಾದ ಮತ್ತು ನನಗೆ ನನ್ನ ದೇಶದ ನ್ಯಾಯಾಂಗದ ಬಗ್ಗೆ ಅಪಾರ ಹೆಮ್ಮೆ ಇದೆ” ಎಂದು ಹೇಳಿರುವ ಮಾತುಗಳು ನಿಜಕ್ಕೂ ದೇಶದ ಪ್ರತಿಯೊಬ್ಬರ ಮಾತುಗಳೇ ಆಗಿ ಪ್ರತಿಧ್ವನಿಸತೊಡಗಿವೆ. ಮೇ ಕೊನೆಯ ವಾರದ ಹೊತ್ತಿಗೆ ಆ ಬಾಲಕಿ ಬರೆದಿದ್ದ ಪತ್ರಕ್ಕೆ ಪ್ರತ್ಯುತ್ತರ ಬರೆದಿರುವ ಸಿಜೆಐ ರಮಣ ಅವರು, “ನಿನ್ನ ವಯಸ್ಸಿನ ಮಕ್ಕಳ ಜನಪರ ಕಾಳಜಿ ಕಂಡು ಖುಷಿಯಾಯಿತು. ನಿನ್ನಂಥ ಮಕ್ಕಳು ಪ್ರಜ್ಞಾವಂತ, ತಿಳಿವಳಿಕೆಯ ಮತ್ತು ಜವಾಬ್ದಾರಿಯುತ  ಪ್ರಜೆಗಳಾಗಿ, ದೇಶ ಕಟ್ಟಲು ಮಹತ್ತರ ಕೊಡುಗೆ ನೀಡುತ್ತಾರೆ ಎಂಬ ಭರವಸೆ ಇದೆ” ಎಂದಿದ್ದಾರೆ!

ಹೌದು, ಭರವಸೆ ಇನ್ನೂ ಉಳಿದಿದೆ. ಅದಕ್ಕೆ ಕಾರಣ; ಐದನೇ ತರಗತಿ ಓದುವ ಎಳೆಯ ಮಗುವಿನಲ್ಲೂ ಭರವಸೆ ಮತ್ತು ಹೆಮ್ಮೆ ಮೂಡಿಸಿರುವ ದೇಶದ ಬದಲಾದ ನ್ಯಾಯಾಂಗ ವ್ಯವಸ್ಥೆ ಮತ್ತು ಆ ಬದಲಾವಣೆಗೆ ಕಾರಣವಾಗಿರುವ ಸಿಜೆಐ ಎನ್ ವಿ ರಮಣ ಮತ್ತು ನ್ಯಾ. ಚಂದ್ರಚೂಡ್ ಅವರಂಥ ನೈಜ ನ್ಯಾಯಪಕ್ಷಪಾತಿ ನ್ಯಾಯಮೂರ್ತಿಗಳು! ಅಲ್ಲವೆ?

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...