ಬೆಂಗಳೂರು : ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (BCB) ಗುರುವಾರ ಭಾರತಕ್ಕೆ ತಂಡವನ್ನು ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತಕ್ಕೆ ಆಗಮಿಸಿ ಪಂದ್ಯಗಳನ್ನು ಆಡಲು ಬಾಂಗ್ಲಾ ತಂಡಕ್ಕೆ ಯೂನಸ್ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಭಾರತ ವಿರೋಧಿಯಾಗಿ ಅಲ್ಲಿನ ಕ್ರಿಕೆಟ್ ಮಂಡಳಿ ನಡೆದುಕೊಳ್ಳುತ್ತಿದೆ.
ಇನ್ನೂ ಇದೇ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಾಂಗ್ಲಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಮಿನುಲ್ ಇಸ್ಲಾಂ ಹಾಗೂ ಕ್ರೀಡಾ ಸಲಹೆಗಾರ ಅಸಿಫ್ ನಜ್ರುಲ್ ಸರ್ಕಾರದ ನಿರ್ಧಾರವನ್ನು ಖಚಿತಪಡಿಸಿದ್ದಾರೆ. ಸರ್ಕಾರದ ನಿರ್ಧಾರವನ್ನು ನಾವು ಕೂಡ ಅವಲೋಕಿಸುತ್ತಿದ್ದೇವೆ, ನಮ್ಮ ಮಂಡಳಿಯು ಈ ವಿಚಾರದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಜೊತೆಗೆ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರಲ್ಲಿ ಬಾಂಗ್ಲಾದೇಶದ ಮುಂದಿನ ನಡೆಯು ಚರ್ಚೆಯ ವಿಷಯವಾಗಿದೆ. ಬಾಂಗ್ಲಾದೇಶ ಮತ್ತು ಐಸಿಸಿ ನಡುವಿನ ಸಂಘರ್ಷದ ಬಳಿಕ ಪಂದ್ಯಗಳನ್ನು ಎಲ್ಲಿ ಆಡಬೇಕು ಎಂಬುದರ ಬಗ್ಗೆ ಗೊಂದಲದಲ್ಲಿದೆ. ಮುಖ್ಯವಾಗಿ ಬಾಂಗ್ಲಾದೇಶ ಭಾಗವಹಿಸುವ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸಿ ಶ್ರೀಲಂಕಾದಲ್ಲಿ ಆಯೋಜಿಸಬೇಕೆಂದು ಒತ್ತಾಯಿಸಿದೆ. ಅಲ್ಲದೆ ರಾಜಕೀಯ, ರಾಜತಾಂತ್ರಿಕ ವಾತಾವರಣಗಳೂ ಸಹ ಹದಗೆಡುತ್ತಿರುವುದರಿಂದ ಭದ್ರತೆಯ ಕಳವಳಗಳನ್ನು ವ್ಯಕ್ತಪಡಿಸಿದೆ.
ಆದರೆ ಐಸಿಸಿ ಈ ವಿನಂತಿಯನ್ನು ತಿರಸ್ಕರಿಸಿದ್ದು, ಭಾರತದಂತಹ ದೇಶದಲ್ಲಿ ಬಾಂಗ್ಲಾ ತಂಡಕ್ಕೆ ಯಾವುದೇ ಅಪಾಯಗಳಿಲ್ಲ. ಅಲ್ಲದೆ ಪೂರ್ವ ನಿಯೋಜಿತ ವೇಳಾಪಟ್ಟಿಯಲ್ಲಿ ಬದಲಾವಣೆ ಅಥವಾ ಸ್ಥಳ ಬದಲಾಯಿಸುವುದು ಪಂದ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಐಸಿಸಿ ಬಾಂಗ್ಲಾ ದೇಶಕ್ಕೆ ಚಾಟಿ ಬೀಸಿದೆ.
ಬಾಂಗ್ಲಾದೇಶದ ತಂಡವು ಪ್ರಕಟಿತ ವೇಳಾಪಟ್ಟಿಯಂತೆ ಪಂದ್ಯದಲ್ಲಿ ಭಾಗವಹಿಸುವಿಕೆಯನ್ನು ಒಂದು ದಿನದೊಳಗೆ ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಟೂರ್ನಮೆಂಟ್‌ನಲ್ಲಿ ಸಾಕಷ್ಟು ಮಾರ್ಪಾಡುಗಳ ಮಾಡುವ ಬಗ್ಗೆ ಎಚ್ಚರಿಕೆ ನೀಡಿದೆ.













