ಬೆಂಗಳೂರು: ಕೇರಳ, ತಮಿಳುನಾಡು ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಸಂಘರ್ಷ ಬಹಿರಂಗವಾಗಿದೆ. ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡುವ ಭಾಷಣದಲ್ಲಿ 11 ಪ್ಯಾರಾಗಳನ್ನು ಹೇಳಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್( Thawar Chand Gehlot) ಅವರು ನಿರಾಕರಿಸಿದ್ದಾರೆ.

ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿದ್ದ 11 ಪ್ಯಾರಾಗ್ರಾಫ್‌ಗಳ ಬಗ್ಗೆ ರಾಜ್ಯಪಾಲರ ಕಚೇರಿ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಕಾನೂನು ಸಚಿವ ಹೆಚ್ಕೆ ಪಾಟೀಲ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಆ ಪ್ಯಾರಾಗ್ರಾಫ್‌ಗಳು ಆಕ್ಷೇಪಾರ್ಹವೆಂದು ರಾಜ್ಯಪಾಲರ ಕಚೇರಿ ಹೇಳಿದ್ದರೂ, ಸರ್ಕಾರದ ದೃಷ್ಟಿಯಲ್ಲಿ ಅವು ಜನರ ಧ್ವನಿಯಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಾವು ಕಳುಹಿಸಿರುವ ಭಾಷಣದ 11 ಪ್ಯಾರಾಗ್ರಾಫ್‌ಗಳು ಒಪ್ಪಿಕೊಳ್ಳಲಾಗದು ಎಂದು ರಾಜ್ಯಪಾಲರ ಕಚೇರಿ ಹೇಳುತ್ತಿದೆ. ಆದರೆ ನಮಗೆ ಅವು ಆಕ್ಷೇಪಾರ್ಹವೆಂದು ಅನಿಸುವುದಿಲ್ಲ. ಅವು ಸರ್ಕಾರದ ಧ್ವನಿ, ಜನರ ಧ್ವನಿ ಎಂದು ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಇಂದಿನಿಂದ ವಿಶೇಷ ಅಧಿವೇಶನ: ಕುತೂಹಲ ಮೂಡಿಸಿದ ರಾಜ್ಯಪಾಲರ ನಡೆ
ಜನರ ಆಶಯಗಳು ಕೇಂದ್ರ ಸರ್ಕಾರ ಮತ್ತು ದೇಶದಾದ್ಯಂತ ಕೇಳಿಸಬೇಕು ಎಂಬ ಉದ್ದೇಶದಿಂದಲೇ ಆ ವಿಷಯಗಳನ್ನು ಭಾಷಣದಲ್ಲಿ ಸೇರಿಸಲಾಗಿದೆ ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ವಿಧಾನಸಭೆಗೆ ಬಂದು ಭಾಷಣ ಮಾಡುವಂತೆ ಸರ್ಕಾರ ಮನವಿ ಮಾಡಿದೆ ಎಂದು ಕೂಡಾ ಹೆಚ್ಕೆ ಪಾಟೀಲ್ ಹೇಳಿದ್ದಾರೆ.






