ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಎಸಗಿದ ಅಕ್ರಮಗಳ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಜಿಲ್ಲಾಧಿಕಾರಿಯಾಗಿ ಸರಕಾರಿ ಹಣವನ್ನು ಅಕ್ರಮವಾಗಿ ಬಳಸಿದ್ದು, ಸ್ವಂತ ಮನೆಯಲ್ಲಿ ಈಜುಕೊಳ ನಿರ್ಮಾಣಕ್ಕಾಗಿ ಹೆಚ್ಚುವರಿ 50 ಲಕ್ಷ ರೂ. ಬಳಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಲಾಖಾ ತನಿಖೆಗೆ ಆದೇಶಿಸಲಾಗಿತ್ತು.
ವಸತಿ ಇಲಾಖೆ ಶುಕ್ರವಾರ ರೋಹಿಣಿ ಸಿಂಧೂರಿಗೆ ನೋಟಿಸ್ ಜಾರಿ ಮಾಡಿದ್ದು, ನಾಳೆ (ಜುಲೈ ೩೦) ವಿಚಾರಣೆಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಲಾಗಿದೆ.

ಶನಿವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿನ ವಸತಿ ಇಲಾಖೆಯ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ವಸತಿ ಇಲಾಖೆ ಪತ್ರದಲ್ಲಿ ಸೂಚಿಸಿದೆ.
ವಸತಿ ಇಲಾಖೆ ಕಾರ್ಯದರ್ಶಿ ಅವರನ್ನು ಪ್ರಕರಣದ ತನಿಖಾಧಾರಿಯಾಗಿ ನೇಮಕ ಮಾಡಲಾಗಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪ್ರಸ್ತುತ ಮುಜರಾಯಿ ಇಲಾಖೆ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.






