ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆ ಇನ್ನೂ ದೂರ ಇದ್ದು, ನಾನು ಮಂಡ್ಯ ಕ್ಷೇತ್ರದ ಚುನಾವಣಾ ಸ್ಪರ್ಧಾಕಾಂಕ್ಷಿಯಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವ ಚಿಂತನೆ ನಡೆಸಿಲ್ಲ. ಚುನಾವಣೆ ಇನ್ನೂ ದೂರ ಇದ್ದು, ಸಿದ್ಧತೆಗೆ ಅವಕಾಶ ಇದೆ. ಪಕ್ಷವನ್ನು ಸಂಘಟಿಸುವ ಅಗತ್ಯ ಇರುವ ಹಿನ್ನೆಲೆಯಲ್ಲಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇನೆ ಎಂದು ಹೇಳಿದರು. ಎನ್‌ಡಿಎ-ಜೆಡಿಎಸ್ ಮೈತ್ರಿಯ ಕುರಿತು ಚರ್ಚೆ ನಡೆಸಲಾಗಿದೆ. ಆದರೆ, ಸೀಟು ಹಂಚಿಕೆ ಕುರಿತು ಮಾತುಕತೆ ನಡೆದಿಲ್ಲ.
ಈ ಬಗ್ಗೆ ಉಭಯ ಪಕ್ಷಗಳ ನಾಯಕರು ಮುಂದಿನ ದಿನದಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂದು ಹೇಳಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಯುವಕರು ಮೆಚ್ಚಿದ್ದು, ನಾನು ಸಹ ಅವರನ್ನು ಮೆಚ್ಚಿದ್ದೇನೆ ಎಂದರು. ಇದೇ ವೇಳೆ ಕಾವೇರಿ ನದಿ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಅಸಡ್ಡೆ ತೋರಿಸಿದೆ. ಸರ್ಕಾರವು ರೈತರನ್ನು ಉಳಿಸುವ ಕೆಲಸ ಮಾಡಬೇಕು. ಕಾವೇರಿ ನೀರು ಸಂಕಷ್ಟದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯುತ್ತೇವೆ ಎಂದು ತಿಳಿಸಿದರು.