ಡಾ. ಜೆ ಎಸ್ ಪಾಟೀಲ.
ಈ ಸಮಿತಿಯು ತನ್ನ ವರದಿಯಲ್ಲಿ ಆರ್ಎಸ್ಎಸ್ ನಡೆಸುತ್ತಿರುವ ಶಾಲೆಗಳಲ್ಲಿ ಬಳಸುವ ಪಠ್ಯಪುಸ್ತಕಗಳ ಬಗ್ಗೆ ಕಟುವಾದ ಅವಲೋಕನಗಳನ್ನು ಈ ಕೆಳಗಿನಂತೆ ಮಾಡಿದೆ: “ಪಠ್ಯ ಸಾಮಗ್ರಿಗಳು ಪ್ರಾಚೀನ ಭಾರತದ ಸಾಧನೆಗಳನ್ನು ಅಗತ್ಯವಾದ ಯಾವುದೇ ವಾಸ್ತವಿಕ ಮತ್ತು ಪ್ರಾಯೋಗಿಕ ಆಧಾರವಿಲ್ಲದೆ ಉತ್ಪ್ರೇಕ್ಷೆ ಮಾಡುತ್ತವೆ. ಈ ಪುಸ್ತಕಗಳು ಪುನರಾವರ್ತಿತ ವಿದೇಶಿ ಆಕ್ರಮಣಗಳಿಂದ ವಿಶೇಷವಾಗಿ ಮುಸ್ಲಿಮ್ ಆಡಳಿತಗಾರಿಂದ ಭಾರತವು ಹೆಚ್ಚು ಅನ್ಯಾಯಕ್ಕೊಳಗಾಗಿದೆ ಎಂದು ಪ್ರಸ್ತುತಪಡಿಸುವ ಹಿಂದುತ್ವದ ಕೋಮುವಾದಿ ನಿರೂಪಣೆಗಳನ್ನು ಪ್ರತಿಧ್ವನಿಸುತ್ತವೆ. ದೇಶದ ಎಲ್ಲಾ ಸಾಧನೆಗಳನ್ನು ಇಸ್ಲಾಮಿಕ್ ಯುಗಕ್ಕಿಂತ ಮುಂಚಿನವು ಎಂದು ಉಲ್ಲೇಖಿಸಲಾಗಿದೆ. ಇತಿಹಾಸವು ಒಂದೇ ಅಕ್ಷದ ಸುತ್ತ ಅಭಿವೃದ್ಧಿ ಹೊಂದಿದೆ ಎಂದು ತೋರಿಸಲಾಗಿದೆ. ಭಾರತದ ವಾಸ್ತುಶಿಲ್ಪ ˌ ಸಂಗೀತˌ ಕುಶಲ ಕಲೆ ಇವುಗಳ ಅಭಿವೃದ್ದಿಗೆ ಮುಸ್ಲಿಮ್ ಆಡಳಿತಗಾರರ ಕೊಡುಗೆಗಳನ್ನು ಉತ್ಪ್ರೇಕ್ಷೆ ಮಾಡಲಾಗಿದೆ. ಹೀಗೆ ಅನೇಕ ಸುಳ್ಳು ಕತೆಗಳ ಮೂಲಕ ಕೇವಲ ಹಿಂದುತ್ವವನ್ನು ವೈಭವೀಕರಿಸುವ ಅಂಶಗಳು ಈ ಪುಸ್ತಕಗಳ ತುಂಬ ತುಂಬಿಕೊಂಡಿವೆ.
ಈ ಪುಸ್ತಕದಲ್ಲಿನ ಅಂಶಗಳು ಇಡೀ ಭಾರತೀಯರನ್ನು ನೈಜ ಭಾರತೀಯರು ಮತ್ತು ವಿದೇಶಿಯರೆಂತಲು, ಹಿಂದೂಗಳು ಮತ್ತು ಇತರರೆಂತಲು, ಬಲಿಪಶುಗಳಾದವರು ಮತ್ತು ನಿರಂಕುಶ ಆಡಳಿತಗಾರರೆಂತಲು, ಆಕ್ರಮಣಕಾರರು ಮತ್ತು ಸೋತು ಸುಣ್ಣವಾದವರು ಎನ್ನುವ ದಾಟಿಯಲ್ಲಿ ವಿಭಜಿಸುತ್ತ ಹಾಗು ವಿಘಟಿಸುತ್ತ ಸಾಗುತ್ತವೆ. ಆದರೆ ವಾಸ್ತವದಲ್ಲಿ ಭಾರತವು ಪ್ರಾಚೀನ ಕಾಲದಿಂದಲೂ ಬಹುಸಂಸ್ಕೃತಿ, ಬಹು ಪರಂಪರೆˌ ಬಹು-ಧರ್ಮೀಯ, ಸಿಂಕ್ರೆಟಿಕ್ ಸಮಾಜವಾಗಿದೆ ಎಂಬ ಅಂಶವನ್ನು ಹಿಂದುತ್ವವಾದಿಗಳು ಬಹಳ ಕುಟಿಲತನದಿಂದ ಮರೆಮಾಚಿದ್ದಾರೆ, ಹೀಗಾಗಿ ಭವಿಷ್ಯದ ಪೀಳಿಗೆಯನ್ನು ಸಂಕುಚಿತ ಮನಸ್ಸಿನ ಮತ್ತು ಅಸಹಿಷ್ಣು ಚಿಂತನೆಯ ಮಾದರಿಯಲ್ಲಿ ಕುಶಲತೆಯಿಂದ ನಿರ್ವಹಿಸುವ ತಂತ್ರಗಳು ಪುಸ್ತಕದಲ್ಲಿ ರಾಜಾರೋಷವಾಗಿ ಮೆರೆದಾಡುತ್ತಿವೆ” ಎಂದು ಸಮಿತಿ ಖಾರವಾಗಿಯೆ ತನ್ನ ವರದಿಯಲ್ಲಿ ದಾಖಲಿಸಿದೆ.
ಈ ಪುಸ್ತಕಗಳಲ್ಲಿ ಅಖಂಡ ಭಾರತವೆಂಬ ಹುಸಿ ಪರಿಕಲ್ಪನೆಯನ್ನು ವೈಭವೀಕರಿಸಲಾಗಿದೆ. ವಿದ್ಯಾಭಾರತಿ ಶಾಲೆಗಳ ತರಗತಿ ಕೊಠಡಿ ಮತ್ತು ಕಾರಿಡಾರ್ ಗೋಡೆಗಳನ್ನು ಹೊಳೆಯುವ ನಕಾಶೆಗಳು ಮತ್ತು ಭಾರತ ಮಾತೆಯನ್ನು ಬಿಂಬಿಸುವ ದೊಡ್ಡ ಗೀಚುಬರಹದಿಂದ ಅಲಂಕರಿಸಲಾಗಿದೆ, ಸಿಂಹದ ಮುಂದೆ ನಿಂತಿರುವ ಕೇಸರಿ ಸೀರೆಯನ್ನು ಧರಿಸಿದ ಮಹಿಳೆ ಕೈಯಲ್ಲಿ ಹಿಂದುತ್ವದ ಸಂಕೇತವಾಗಿರುವ ಕೇಸರಿ ಧ್ವಜವನ್ನು ಹಿಡಿದಿದ್ದಾಳೆ. ಅವಳ ಹಿಂದೆ ‘ಅಖಂಡ ಭಾರತ’ದ ನಕ್ಷೆಯಿದೆ. ಆರ್ಎಸ್ಎಸ್ ನ ಆದರ್ಶವಾಗಿ ಬಿಂಬಿತವಾಗಿರುವ ಅವಿಭಜಿತ ಭಾರತ, ಇದನ್ನು ಸಾಮಾನ್ಯವಾಗಿ ‘ವೃಹತ್ತರ ಭಾರತ’ ಅಥವಾ ಬೈಹತ್ ಭಾರತ ಎಂದು ಉಲ್ಲೇಖಿಸಲಾಗುತ್ತದೆ, ಇದು ಒಂದು ಕಾಲದಲ್ಲಿ ಭಾರತದ ಭಾಗವಾಗಿದ್ದ ಆಧುನಿಕ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ಪಾಕಿಸ್ತಾನ ಮತ್ತು ಶ್ರೀಲಂಕಾಗಳನ್ನು ಒಳಗೊಂಡಿದೆ.
ಆಗಸ್ಟ್ ೧೪, ೧೯೪೭ ರವರೆಗೆ ಭಾರತ ಅವಿಭಜಿತವಾಗಿತ್ತು ಎಂದು ಆರ್ಎಸ್ಎಸ್ ನಂಬಿರುವುದರಿಂದ ಆರ್ಎಸ್ಎಸ್ ಶಾಲೆಗಳಲ್ಲಿ ಆಗಸ್ಟ್ ೧೪ ಅನ್ನು ಅಖಂಡ ಭಾರತ್ ದಿವಸ್ ಎಂದು ಆಚರಿಸಲಾಗುತ್ತದೆ ಎಂದು ಅನೇಕ ವಿದ್ಯಾರ್ಥಿಗಳು ದೃಢಪಡಿಸಿದ್ದಾರೆ. ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ಆರ್ಎಸ್ಎಸ್ ನಡೆಸುತ್ತಿರುವ ಶಾಲೆಯಾದ ಭಂದರ್ನ ಸರಸ್ವತಿ ಶಿಶು ವಿದ್ಯಾ ಮಂದಿರದ ಹಳೆಯ ವಿದ್ಯಾರ್ಥಿ ತಿಲಕ್ ಪಾಲ್ ಸಿಂಗ್ ಬಘೇಲ್ (೨೦೦೩-೦೫) ದಿ ವೈರ್ಗೆ: “ಹಿಂದುತ್ವವಾದಿಗಳು ಆಗಸ್ಟ್ ೧೫ ಸ್ವಾತಂತ್ರ್ಯಕ್ಕಿಂತ ಆಗಸ್ಟ್ ೧೪ ಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ” ಎಂದು ಹೇಳಿದ್ದಾರೆ. ಇದು ಸಂಘ ಸಂಚಾಲಾತ ಶಾಲೆಗಳಲ್ಲಿ ಭಾರತದ ಸ್ವಾತಂತ್ರೋತ್ಸವಕ್ಕೆ ನೀಡುತ್ತಿರುವ ಮಹತ್ವವನ್ನು ಸಾಂಕೇತಿಸುತ್ತದೆ. ಹಿಂದುತ್ವವಾದಿಗಳು ಭಾರತದ ಸ್ವಾತಂತ್ರ ಸಂಗ್ರಾಮವನ್ನು ವಿರೋಧಿಸಿದನ್ನು ಇದು ಎತ್ತಿ ತೋರಿಸುತ್ತದೆ.
ಈ ಭೋದಮಾಲಾ ಪಠ್ಯಕ್ರಮವು ‘ಅಖಂಡ ಭಾರತ’ದ ಅನೇಕ ಉಲ್ಲೇಖಗಳನ್ನು ಸಹ ಮಾಡುತ್ತದೆ. ಅದು ಜಗತ್ತಿನ ವಿವಿಧ ದೇಶಗಳ ‘ಪ್ರಾಚೀನ ಹೆಸರುಗಳನ್ನು’ ಹೀಗೆ ಉಲ್ಲೇಖಿಸುತ್ತದೆ: ಮೋಯ್ (ಮೆಕ್ಸಿಕೋ), ಆರ್ಯನ್/ಪರ್ಶು-ದೇಶ್ (ಇರಾನ್), ಉಪಗಣಸ್ಥಾನ (ಅಫ್ಘಾನಿಸ್ತಾನ್), ಲಾವಾ ಡೀಪ್ (ಲಾವೋಸ್), ವರುಣ್ ದ್ವೀಪ (ಬೋರ್ನಿಯೊ), ಶ್ಯಾಮ್ ದೇಶ್ (ಥೈಲ್ಯಾಂಡ್), ಚಂಪಾ ದೇಶ್ (ವಿಯೆಟ್ನಾಂ), ಬ್ರಹ್ಮ ದೇಶ್ (ಮ್ಯಾನ್ಮಾರ್), ಮತ್ತು ಮಲಯ ದ್ವೀಪ್ (ಮಲೇಷ್ಯಾ). ಬೋಧಮಾಲಾ ೫ ರಲ್ಲಿ “ನಮ್ಮ ಶತ್ರುಗಳು ಅಖಂಡ ಭಾರತವನ್ನು ವಿಭಜಿಸಿದ್ದಾರೆ” ಎಂದು ಒತ್ತಿಹೇಳುತ್ತದೆ ಮತ್ತು “ನಾವು ಆರಾಧಿಸುವ ಅಖಂಡ ಭಾರತವನ್ನು ಪುನಃಸ್ಥಾಪಿಸುತ್ತೇವೆ ಎಂದು ನಾವು ಪ್ರತಿಜ್ಞೆ ಮಾಡಬೇಕು” ಎಂದು ವಿದ್ಯಾರ್ಥಿಗಳಿಗೆ ಆಗ್ರಹಿಸುತ್ತದೆ. ಈ ರೀತಿಯಾಗಿ ದಾಖಲೆಯಿಲ್ಲದ ಅನೇಕ ಅಸಂಗತ ಸಂಗತಿಗಳನ್ನು ಈ ಭೋದಮಾಲಾ ಪಠ್ಯಕ್ರಮ ವಿದ್ಯಾರ್ಥಿಗಳ ಮಿದುಳಿಗೆ ವಿಷವುಣ್ಣಿಸುವ ಕೃತ್ಯ ಮಾಡುತ್ತಿದೆ.
ಮಾನವಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ಹಾಗು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ತಿಲಕ್ ಎನ್ನುವ ಸಂಘಿ ಶಾಲೆಯ ಹಳೆಯ ಹಿಂದುತ್ವವಾದಿ ವಿದ್ಯಾರ್ಥಿ: “ನಮ್ಮ ಶಾಲೆಯು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸುತ್ತಿತ್ತು. ಸಾಮಾನ್ಯವಾಗಿ, ಹಿಂದುತ್ವ ಮತ್ತು ಅಖಂಡ ಭಾರತ ಸಿದ್ಧಾಂತವನ್ನು ಪ್ರತಿಬಿಂಬಿಸುವ ವಿಷಯಗಳನ್ನೆ ಸ್ಪರ್ಧೆಗೆ ನೀಡಲಾಗುತ್ತಿತ್ತು. ಸ್ಪರ್ಧೆಯೊಂದರಲ್ಲಿ ನನಗೆ ‘ಅಖಂಡ ಭಾರತ್ ಕಿ ಪರಿಕಲ್ಪನಾ ಔರ್ ಉಸ್ ಮೇ ಹಿಂದುತ್ವ ಕಾ ಸ್ಥಾನ್ (ಅಖಂಡ ಭಾರತದ ಪರಿಕಲ್ಪನೆ ಮತ್ತು ಅದರಲ್ಲಿ ಹಿಂದುತ್ವದ ಪ್ರಸ್ತುತತೆ) ಎಂಬ ವಿಷಯ ಸಿಕ್ಕಿದ್ದು ನನಗೆ ನೆನಪಿದೆ ಎಂದು ಆತ ಜ್ಞಾಪಿಸಿಕೊಂಡಿದ್ದಾನೆಂದು ವೈರ್ ವರದಿಗಳು ಹೇಳುತ್ತವೆ. ಬಿಹಾರದ ವಿದ್ಯಾಭಾರತಿ ಶಾಲೆಗಳಲ್ಲಿ ಬಳಸಲಾದ ಪುಸ್ತಕಗಳನ್ನು CABE ವರದಿಯು ಗಮನಿಸಿದ್ದು, ಅದರಲ್ಲಿ ‘ಯೋಗ್ಯ ಸಂಸ್ಕಾರವನ್ನು ಸಾಧಿಸಿದ ಜನರನ್ನು ಆರ್ಯರು ಎಂದು ಕರೆಯಲು ಪ್ರಾರಂಭಿಸಿದರು” ಎಂದು ಹೇಳಲಾಗಿದೆಯಂತೆ.
ಮುಂದೆ ಆ ಆರ್ಯರು ವೈದಿಕ ಸಂಸ್ಕೃತಿಯನ್ನು ಹರಡಲು ಪೂರ್ವ ಮತ್ತು ದಕ್ಷಿಣಕ್ಕೆ ಪ್ರಯಾಣಿಸಿದರಂತೆ. ಅದೇ ರೀತಿ, ಉತ್ತರಪ್ರದೇಶದಲ್ಲಿ ಬಳಸಲಾದ ಪುಸ್ತಕಗಳ ಕುರಿತು ಸಮಿತಿಯ ವರದಿಯು: “ಆಧುನಿಕ ಅರ್ಥದಲ್ಲಿ ‘ಅಖಂಡ ಭಾರತ’ ದ ಪರಿಕಲ್ಪನೆಯು ಮಗುವಿನ ಮನಸ್ಸಿನಲ್ಲಿ ಜನಾಂಗೀಯ ಭೇದವುಳ್ಳ ರಾಷ್ಟ್ರೀಯತೆಯ ಹೆಮ್ಮೆ ತುಂಬುವಂತೆ ಈ ಪಠ್ಯಗಳು ರೂಪಿಸಲಾಗಿದೆ” ಎಂದು ಕಮೆಂಟ್ ಮಾಡಿದೆ. ಬೋಧಮಾಲಾ ಸರಣಿ ಪುಸ್ತಕಗಳ ಜೊತೆಗೆ, ಶಿಕ್ಷಕರಿಗೆ ಮಾರ್ಗದರ್ಶಿ ಪುಸ್ತಕಗಳನ್ನು ಸಹ ಪ್ರಕಟಿಸಿˌ ಪ್ರವೇಶಿಕಾ, ಮಧ್ಯಮಿಕಾ ಮತ್ತು ಉತ್ತಮ ಎಂಬ ಮೂರು ಶ್ರೇಣಿಯ ಈ ಗೈಡ್ ಗಳಲ್ಲೂ ಸಹ ಅಖಂಡ ಭಾರತದ ಕಲ್ಪನೆಯನ್ನು ಸೇರಿಸಲಾಗಿದೆಯಂತೆ. “ಇಂದಿನ ಸ್ವತಂತ್ರ ದೇಶಗಳಾದ ತ್ರಿವಿಷ್ಟಪ (ಟಿಬೆಟ್), ಉಪಗಣಸ್ಥಾನ (ಅಫ್ಘಾನಿಸ್ತಾನ), ಬ್ರಹ್ಮದೇಶ್ (ಮ್ಯಾನ್ಮಾರ್), ಸಿಂಹಳ (ಶ್ರೀಲಂಕಾ) ಮತ್ತು ರಾಜಪುರುಷ (ನೇಪಾಳ) ಒಂದು ಕಾಲದಲ್ಲಿ ಭಾರತದ ಭಾಗವಾಗಿದ್ದವುˌ ಇದೇ ಅಖಂಡ ಭಾರತ ಎಂಬುವಂತೆ ಆ ಪುಸ್ತಕಗಳಲ್ಲಿ ಗಳಲ್ಲಿ ಬಿಂಬಿಸಲಾಗಿದೆಯಂತೆ.
ಮುಂದುವರೆಯುವುದು…