2015ರಲ್ಲಿ ವಿಶ್ವದ ನಾಯಕರು ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ನಿಗದಿಪಡಿಸಿದಾಗ 2025ರ ವೇಳೆಗೆ ಎಲ್ಲ ರೀತಿಯ ಬಾಲ ಶ್ರಮವನ್ನು ಅಂತ್ಯಗೊಳಿಸುವ ಗುರಿಯನ್ನು ನಿಗದಿಪಡಿಸಿದ್ದರು. ಜೂನ್ 12ರಂದುವಿಶ್ವ ಬಾಲ ಶ್ರಮ ವಿರೋಧಿ ದಿನವನ್ನು ಆಚರಿಸಿದ್ದೇವೆ. ಈ ಸಂದರ್ಭದಲ್ಲಿ ನಾವು ಎಷ್ಟು ಸಾಧಿಸಿದ್ದೇವೆ ಎಂದು ಪರಾಮರ್ಶಿಸುವ ಅವಶ್ಯಕತೆ ಇದೆ. ಕಳೆದ ವರ್ಷ ಜೂನ್ ಮಾಹೆಯಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಮತ್ತು ಯೂನಿಸೆಫ್ ಸಂಸ್ಥೆಗಳು ಆಗಲೇ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದ್ದವು. ಎರಡು ದಶಕಗಳ ಅವಧಿಯಲ್ಲಿ ವಿಶ್ವದಾದ್ಯಂತ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವ ಆಘಾತಕಾರಿ ಸುದ್ದಿಯನ್ನು ನೀಡಿದ್ದವು. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಘೋಷಿಸಿದ ನಂತರದ ನಾಲ್ಕು ವರ್ಷಗಳಲ್ಲಿ, 2016-19ರ ಅವಧಿಯಲ್ಲಿ ಈ ಹೆಚ್ಚಳ ಕಂಡುಬಂದಿತ್ತು.
ಐಎಲ್ಒ ಮತ್ತು ಯೂನಿಸೆಫ್ ಸಂಸ್ಥೆಗಳು ಒದಗಿಸಿರುವ ಜಾಗತಿಕ ಅಂದಾಜು ಸಂವೇದನಾರಹಿತವಾಗಿದೆ ಎನ್ನಬಹುದು. 2020ರ ಆರಂಭದಲ್ಲಿ 16 ಕೋಟಿ ಮಕ್ಕಳು, 6.30 ಕೋಟಿ ಹೆಣ್ಣುಮಕ್ಕಳು ಮತ್ತು 9.7 ಕೋಟಿ ಗಂಡುಮಕ್ಕಳು ದುಡಿಮೆಯಲ್ಲಿ ತೊಡಗಿದ್ದಾರೆ. ಅಂದರೆ ವಿಶ್ವದ ಪ್ರತಿ ಹತ್ತು ಮಕ್ಕಳಲ್ಲಿ ಒಬ್ಬರು ದುಡಿಮೆ ಮಾಡುತ್ತಿದ್ದಾರೆ. ಇವರ ಪೈಕಿ 7.9 ಕೋಟಿ ಮಕ್ಕಳು ಹಾನಿಕಾರಕ ಕೆಲಸಗಳಲ್ಲಿ ತೊಡಗಿದ್ದಾರೆ. ಸಬ್ ಸಹಾರ ಆಫ್ರಿಕಾ ದೇಶಗಳಲ್ಲಿ ಬಾಲಶ್ರಮದಲ್ಲಿ ತೊಡಗಿರುವ ಮಕ್ಕಳ ಸಂಖ್ಯೆ 8.6 ಕೋಟಿಗೆ ಏರಿದೆ. ಇದೇ ಅವಧಿಯಲ್ಲಿ ಕೋವಿದ್ ಸಾಂಕ್ರಾಮಿಕ ಅಪ್ಪಳಿಸುವ ಮುನ್ನವೇ ಜಗತ್ತಿನ ಸಂಪತ್ತು 10 ಟ್ರಿಲಿಯನ್ ಡಾಲರ್ಗಳಷ್ಟು ಹೆಚ್ಚಾಗಿದೆ. ಇದು ಜನಸಾಮಾನ್ಯರ ಆರೋಗ್ಯ, ಯೋಗಕ್ಷೇಮ, ರಕ್ಷಣೆ ಮತ್ತು ಈ ಮಕ್ಕಳ ಸಮಗ್ರ ಬೆಳವಣಿಗೆಯ ಮೇಲೆ ಆಘಾತಕಾರಿ ಪರಿಣಾಮವನ್ನು ಉಂಟುಮಾಡಿದೆ. ನಾವು ಖಂಡಿತವಾಗಿಯೂ ಮಕ್ಕಳನ್ನು ವಂಚಿಸಿದ್ದೇವೆ.
ಕೋವಿದ್ 19 ಸಾಂಕ್ರಾಮಿಕವು ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಒಂದಾದ ಮೇಲೊಂದರಂತೆ ಎರಗಿದ ಆರ್ಥಿಕ ಆಘಾತಗಳು, ಕುಸಿಯುತ್ತಲೇ ಹೋದ ಕೌಟುಂಬಿಕ ಆದಾಯ, ದೀರ್ಘ ಕಾಲ ಶಾಲೆಗಳನ್ನು ಮುಚ್ಚಿರುವುದು ಈ ಎಲ್ಲ ಕಾರಣಗಳಿಂದ ವಿಶ್ವದ 90 ಲಕ್ಷ ಮಕ್ಕಳು ಈ ವರ್ಷಾಂತ್ಯದ ವೇಳೆಗೆ ಬಾಲಶ್ರಮದ ಕೂಪಕ್ಕೆ ತಳ್ಳಲ್ಪಡುವ ಸಾಧ್ಯತೆಗಳಿವೆ. ಚೀನಾದಲ್ಲಾಗಲೀ, ಗ್ವಾತಮೇಲ, ಢಾಕಾ ಅಥವಾ ದೆಹಲಿಯಲ್ಲಾಗಲೀ, ಮಕ್ಕಳೇ ಹೆಚ್ಚಿನ ಹೊರೆ ಹೊರುತ್ತಿದ್ದಾರೆ. ಭಾರತದಲ್ಲೇ 2011ರ ಜನಗಣತಿಯ ಅನುಸಾರ ಬಾಲಕಾರ್ಮಿಕರ ಸಂಖ್ಯೆ 10.13 ದಶಲಕ್ಷಗಳಷ್ಟಿತ್ತು. ಆದರೂ ಬಾಲಶ್ರಮದ ವಿರುದ್ಧ ಕೈಗೊಂಡಿರುವ ಕ್ರಮಗಳು ತೃಪ್ತಿಕರವಾಗಿಲ್ಲ. ರಾಷ್ಟ್ರೀಯ ಅಪರಾಧ ಮಾಹಿತಿ ದಳ (ಎನ್ಸಿಆರ್ಬಿ) ಬಿಡುಗಡೆ ಮಾಡಿರುವ 2020ರ ವರದಿಯ ಪ್ರಕಾರ ಬಾಲಶ್ರಮ (ನಿರ್ಬಂಧಕ ಮತ್ತು ನಿಯಂತ್ರಣ) ಕಾಯ್ದೆಯ ಅಡಿಯಲ್ಲಿ ದಾಖಲಿಸಲಾದ 476 ಎಫ್ಐಆರ್ಗಳ ಪರಿಣಾಮ, 705 ಮಕ್ಕಳನ್ನು ಬಾಲಶ್ರಮದಿಂದ ಮುಕ್ತಗೊಳಿಸಲಾಗಿದೆ.
ಈ ಅಂಕಿ ಅಂಶಗಳು ವಾಸ್ತವ ಸನ್ನಿವೇಶಕ್ಕೆ ಕನ್ನಡಿ ಹಿಡಿದಂತಿದೆ. ಕೋಟ್ಯಂತರ ಡಾಲರ್ ಹಣವನ್ನು ಹೂಡಿಕೆ ಮಾಡಲಾಗಿದ್ದರೂ, ನೂರಾರು ಯೋಜನೆಗಳನ್ನು, ನೀತಿಗಳನ್ನು ಅಳವಡಿಸಲಾಗಿದ್ದರೂ, ಬಾಲಶ್ರಮ ಹೆಚ್ಚಾಗುತ್ತಲೇ ಇರುವುದು ಸ್ಪಷ್ಟವಾಗಿದ್ದು 2025ರ ಗುರಿಯನ್ನು ಸಾಧಿಸುವುದು ಅಸಾಧ್ಯವೇ ಎನಿಸುತ್ತದೆ. ಯೋಜನೆ ಮತ್ತು ಸವಲತ್ತುಗಳ ವಿತರಣೆಯ ನಡುವಿನ ಕಂದರವೂ ಹೆಚ್ಚಾಗುತ್ತಲೇ ಇದೆ. ಉದಾಹರಣೆಗೆ ಆಫ್ರಿಕಾ ಒಂದರಲ್ಲೇ ವಿಶ್ವದ ಅರ್ಧಕ್ಕೂ ಹೆಚ್ಚಿನ ಸಂಖ್ಯೆಯ ಬಾಲಕಾರ್ಮಿಕರಿದ್ದಾರೆ. ಇದು ಅಮೆರಿಕ ಮತ್ತು ಯೂರೋಪಿನ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ನಮ್ಮ ಜಾಗತಿಕ ವ್ಯವಸ್ಥೆಯಲ್ಲಿರುವ ವ್ಯವಸ್ಥಿತ ಅಸಮಾನತೆಗಳು. ಇದರ ಹೆಚ್ಚಿನ ಹೊರೆಯನ್ನು ಆಫ್ರಿಕಾದ ಮಕ್ಕಳು ಹೊರುತ್ತಿದ್ದಾರೆ.
ಇದು ನಮ್ಮೊಳಗಿನ ತಾರತಮ್ಯದ ಮನಸ್ಥಿತಿಯನ್ನು ಬಿಂಬಿಸುತ್ತದೆ. ಅಂದರೆ ವಿಶ್ವದ ಹಣಕಾಸು ಸಂಪನ್ಮೂಲಗಳಲ್ಲಿ ಮತ್ತು ಆಡಳಿತ ನೀತಿಗಳಲ್ಲಿ ಆಫ್ರಿಕಾದ ಮಕ್ಕಳಿಗೆ ನ್ಯಾಯಯುತವಾದ ಪಾಲು ದೊರೆಯುತ್ತಿಲ್ಲ ಎಂದು ಸ್ಪಷ್ಟವಾಗುತ್ತದೆ. ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ದಕ್ಷಿಣ ಭೂಖಂಡದ ಪ್ರಾತಿನಿಧ್ಯ ಕಡಿಮೆ ಇರುವುದೇ ಅಲ್ಲದೆ ನಮ್ಮ ಸಾಮಾಜಿಕ ಹಾಗೂ ರಾಜಕೀಯ ನಿರೂಪಣೆಗಳಲ್ಲಿ ಇದು ಹೆಚ್ಚಿನ ಆದ್ಯತೆಯನ್ನೂ ಪಡೆದುಕೊಳ್ಳುತ್ತಿಲ್ಲ. ಹಲವು ದಶಕಗಳ ಕಾಲ ಮಾಡಿದ ಅಭಿವೃದ್ಧಿಯ ಹಿಂಚಲನೆಗೆ ಕಾರಣರಾಗಿರುವ ನಾವು ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಮೊದಲ ನಾಲ್ಕು ವರ್ಷಗಳಲ್ಲೇ ಸಾಧಿಸುತ್ತೇವೆ ಎಂದು ಹೇಳಲಾಗುವುದಿಲ್ಲ. ನಮ್ಮ ಮಾತು ಮತ್ತು ಭರವಸೆಗಳು ಪೊಳ್ಳಾಗಿದ್ದು ಸಂಕಷ್ಟದಲ್ಲಿರುವ ಮಕ್ಕಳಿಗೆ ಅವು ಅರ್ಥಹೀನ ಎನಿಸುತ್ತವೆ. ನಮ್ಮ ಮಕ್ಕಳನ್ನು ನಾವು ವಂಚಿಸಿದರೆ ಒಂದು ಪೀಳಿಗೆಯನ್ನೇ ವಂಚಿಸಿದಂತಾಗುತ್ತದೆ.
ಕಳೆದ ವರ್ಷ ಡರ್ಬನ್ನಲ್ಲಿ ನಡೆದ ಬಾಲಶ್ರಮ ನಿರ್ಮೂಲನೆಯ ಐದನೆಯ ಜಾಗತಿಕ ಸಮಾವೇಶದ ಸಂದರ್ಭದಲ್ಲಿ 17 ವರ್ಷದ ತಾರಾ ಬಂಜಾರಾ ಪುನರುಚ್ಚರಿಸಿದ ಮಾತುಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆಯೇ ? ಐಎಲ್ಒ ಮಹಾ ನಿರ್ದೇಶಕ ಗೈ ರೈಡರ್ ಅವರೊಡನೆ ವೇದಿಕೆ ಹಂಚಿಕೊಂಡ ತಾರಾ ಬಂಜಾರಾ ತನ್ನನ್ನು ಹೇಗೆ ಬಾಲಶ್ರಮದ ಕೂಪದಿಂದ ಪಾರುಮಾಡಲಾಯಿತು, ತಾನು ಹೇಗೆ ತನ್ನ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯವಾಯಿತು ಎನ್ನುವುದನ್ನು ವಿವರಿಸಿದ್ದರು. ಪೊಲೀಸ್ ಅಧಿಕಾರಿಯಾಗಲು ದೃಢ ನಿಶ್ಚಯ ಮಾಡಿರುವ ತಾರಾ ಬಂಜಾರಾ ಅವಕಾಶವಂಚಿತ, ಅಧಿಕಾರವಂಚಿತ ಸಮುದಾಯಗಳ ಮಕ್ಕಳಿಗೆ ಶಾಲೆಗಳ ಬದಲಾಗಿ ಬಾಲಶ್ರಮದ ಕೂಪಗಳೇ ಸೂಕ್ತವಾದ ಜಾಗ ಎಂಬ ನಮ್ಮ ಮನಸ್ಥಿತಿಯನ್ನು ನಾವು ಬದಲಿಸಿಕೊಳ್ಳಬೇಕಿದೆ ಎಂದು ಹೇಳುತ್ತಾರೆ.
ಬಾಲಕಾರ್ಮಿಕನಾಗಿ ಇಟ್ಟಿಗೆ ಗೂಡಿನಲ್ಲಿ ದುಡಿಮೆ ಮಾಡುತ್ತಿದ್ದು ಬಚಪನ್ ಬಚಾವೋ ಅಂದೋಲನ್ ಸಂಘಟನೆಯ ಪರಿಶ್ರಮದೊಂದಿಗೆ ವಿಮೋಚನೆ ಪಡೆದ ಉದಯೋನ್ಮುಖ ವಕೀಲ ಅಮರ್ ಲಾಲ್ ಡರ್ಬನ್ನಲ್ಲಿ ಕಂಡುಬಂದಂತಹ ಮತ್ತೊಂದು ಮುಖ. ಸೇನಾ ಮೂಲ ಸೌಕರ್ಯಗಳನ್ನು ಉತ್ತಮಪಡಿಸುವ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುವ ವೆಚ್ಚದ ಒಂದು ತೃಣಾಂಶವನ್ನು ಖರ್ಚು ಮಾಡಿದರೂ ಬಾಲಶ್ರಮವ ಕಳಂಕವನ್ನು ತೊಡೆದುಹಾಕಬಹುದು ಎಂದು ಅಮರ್ ಲಾಲ್ ಹೇಳುತ್ತಾರೆ. ಬಾಲಶ್ರಮದ ವಿರುದ್ಧದ ಹೋರಾಟದಲ್ಲಿ ಸಾಮಾಜಿಕ ರಕ್ಷಣೆಯೇ ಅತ್ಯಂತ ಪ್ರಬಲ ಅಸ್ತ್ರವಾಗುತ್ತದೆ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಹೇಳುತ್ತಾರೆ. ನಮ್ಮ ಆಡಳಿತ ನೀತಿಗಳಲ್ಲಿ ಮತ್ತು ಸಂಪನ್ಮೂಲ ವಿತರಣೆಯಲ್ಲಿ ಮಕ್ಕಳಿಗೆ ನ್ಯಾಯಯುತವಾದ ಪಾಲು ನೀಡಲು ಆಗ್ರಹಿಸುವ ಸತ್ಯಾರ್ಥಿ ಮಕ್ಕಳಿಗೆ ನೇರ ಸಾಮಾಜಿಕ ರಕ್ಷಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಾಗತಿಕ ಸಮುದಾಯ ಇನ್ನೂ ಕ್ರಿಯಾಶೀಲವಾಗಿ ಪ್ರಯತ್ನಿಸಬೇಕಿದೆ ಎಂದು ಡರ್ಬನ್ ಸಮಾವೇಶದಲ್ಲಿ ಆಗ್ರಹಿಸಿದ್ದಾರೆ. ಇದರಿಂದ ಮಕ್ಕಳಿಗೆ ಶಿಕ್ಷಣ ಸೌಕರ್ಯ ಎಟಕುವುದೇ ಅಲ್ಲದೆ ಶಿಕ್ಷಣದ ಮುಂದುವರಿಕೆಯೂ ಸಾಧ್ಯವಾಗುತ್ತದೆ, ಹಾಗೆಯೇ ಮಕ್ಕಳನ್ನು ಅನಿಶ್ಚಿತತೆಯಿಂದ ಪಾರು ಮಾಡಿ ಹಲವು ಅಪಾಯಗಳಿಂದ ರಕ್ಷಿಸಲು ಸಾಧ್ಯವಾಗುತ್ತದೆ. ಈ ಅನಿಶ್ಚಿತತೆಗಳು ಮತ್ತು ಅಪಾಯಗಳೇ ಮಕ್ಕಳನ್ನು ಏಕದಂ ಶೋಷಣೆಗೊಳಪಡಿಸುತ್ತವೆ.
ವಿಶ್ವದಾದ್ಯಂತ ಶೇ 74ರಷ್ಟು ಮಕ್ಕಳು, ಕಡಿಮೆ ಆದಾಯ ಇರುವ ದೇಶಗಳ ಶೇ 90ರಷ್ಟು ಮಕ್ಕಳು ಯಾವುದೇ ಸಾಮಾಜಿಕ ರಕ್ಷಣೆ ಇಲ್ಲದೆ ಬದುಕುತ್ತಿರುವುದನ್ನು ಗಮನಿಸಿದರೆ ಇದನ್ನು ಸರಿಪಡಿಸುವುದು ನಮ್ಮ ಭವಿಷ್ಯದ ಗುರಿಯಾಗಬೇಕಾಗುತ್ತದೆ. ವರ್ಷಕ್ಕೆ ಕೇವಲ 53 ಬಿಲಿಯನ್ ಡಾಲರ್, ಅಂದರೆ 10 ದಿನಗಳ ಸೇನಾ ವೆಚ್ಚಗಳು, ಕಡಿಮೆ ಆದಾಯದ ದೇಶಗಳಲ್ಲಿರುವ ಗರ್ಭಿಣಿ ಮಹಿಳೆಯರಿಗೆ ಮತ್ತು ಎಲ್ಲ ಮಕ್ಕಳಿಗೂ ಸಾಮಾಜಿಕ ರಕ್ಷಣೆಯನ್ನು ಒದಗಿಸಲು ಸಾಕಾಗುತ್ತದೆ. ಪಶ್ಚಿಮ ರಾಷ್ಟ್ರಗಳಲ್ಲಿ ಬಹುಪಾಲು ವೆಚ್ಚವನ್ನು ಸಾಮಾಜಿಕ ಭದ್ರತೆಗಾಗಿಯೇ ವ್ಯಯ ಮಾಡಲಾಗುವುದರಿಂದ ಅಲ್ಲಿ ಬಾಲಶ್ರಮ ಬಹುತೇಕ ಇಲ್ಲವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೂ ಸಹ, ಬ್ರೆಜಿಲ್ನ ಉದಾಹರಣೆ ನಮ್ಮ ಮುಂದಿದೆ. ಇಲ್ಲಿ ಬಾಲಶ್ರಮದ ಪ್ರಮಾಣ ಹೆಚ್ಚಾಗಿದ್ದುದರಿಂದ ಕಡು ಬಡತನ ಇರುವ ಕುಟುಂಬಗಳಿಗೆ ಷರತ್ತುಬದ್ಧವಾಗಿ ನೇರ ನಗದು ಪಾವತಿ ಮಾಡುವ ನೀತಿಯನ್ನು ಜಾರಿಗೊಳಿಸಲಾಗಿದೆ. ಹಾಗಾಗಿ ಬ್ರೆಜಿಲ್ನಲ್ಲಿ ಬಾಲಶ್ರಮದ ಪ್ರಮಾಣ ಕಡಿಮೆಯಾಗಿರುವುದೇ ಅಲ್ಲದೆ ಶಾಲಾ ಪ್ರವೇಶಾತಿಯೂ ಹೆಚ್ಚಾಗಿದೆ.
ಭಾರತದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಫಲವಾಗಿ ಶಾಲೆಗಳಲ್ಲಿ ಪ್ರವೇಶಾತಿಯ ಪ್ರಮಾಣ ಶೇ 95ಕ್ಕಿಂತಲೂ ಹೆಚ್ಚಾಗಿದೆ. ಇದರೊಂದಿಗೇ ಮಕ್ಕಳ ಕುಂಠಿತ ಬೆಳವಣಿಗೆಯ ಪ್ರಮಾಣವೂ ಕಡಿಮೆಯಾಗಿದೆ. ಸಮಸ್ಯೆ ನಮ್ಮ ಕಣ್ಣೆದುರಿನಲ್ಲೇ ಇದೆ. ಇದನ್ನು ಸಹಜ ಪ್ರಕ್ರಿಯೆ ಎಂದು ಭಾವಿಸಬೇಕಿಲ್ಲ. ಪರಿಹಾರ ಮಾರ್ಗಗಳು ನಮ್ಮ ಮುಂದಿವೆ. ನಮಗೆ ಬೇಕಿರುವುದು ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವ, ಪ್ರತಿಯೊಬ್ಬರೂ ಪರಸ್ಪರರನ್ನು ಉತ್ತರದಾಯಿಯಾಗಿ ಕಾಣುವಂತಹ, ಆತ್ಮಸ್ಥೈರ್ಯ, ಅನುಕಂಪ ಮತ್ತು ಸಾಮೂಹಿಕ ಇಚ್ಚಾಶಕ್ತಿ ಮಾತ್ರ.
ನಮ್ಮ ಆಡಳಿತ ನೀತಿಗಳಲ್ಲಿ ಮತ್ತು ವಾರ್ಷಿಕ ಆಯವ್ಯಯ ಪತ್ರಗಳಲ್ಲಿ ಮಕ್ಕಳನ್ನು ಮುಖ್ಯವಾಹಿನಿಯಾಗಿ ಪರಿಗಣಿಸದೆ ಹೋದರೆ ಪ್ರತ್ಯೇಕವಾಗಿ ನಾವು ಬಾಲಶ್ರಮದ ಕಳಂಕವನ್ನು ತೊಡೆದುಹಾಕಲಾಗುವುದಿಲ್ಲ. ಕೋಟ್ಯಂತರ ಮಕ್ಕಳು ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ, ಕೃಷಿ ಭೂಮಿಯಲ್ಲಿ ದುಡಿಮೆಯಲ್ಲಿ ಸಿಲುಕಿರುವಾಗ ಯಾವುದೇ ಅಭಿವೃದ್ಧಿ ಕಾರ್ಯಸೂಚಿಗಳನ್ನು ಸಾಕಾರಗೊಳಿಸಲಾಗುವುದಿಲ್ಲ. ಬಾಲಶ್ರಮವನ್ನು ಹೋಗಲಾಡಿಸಲು ಇರುವುದು ಇದೊಂದೇ ಮಾರ್ಗ. ವರ್ತಮಾನದ ಮತ್ತು ಭವಿಷ್ಯದ ಪೀಳಿಗೆಯ ಕೋಟ್ಯಂತರ ಮಕ್ಕಳು ದಾಸ್ಯದ ಸಂಕೋಲೆಗಳಲ್ಲಿರುವಾಗ ಯಾವುದೇ ರೀತಿಯ ಆರ್ಥಿಕ ಅಭಿವೃದ್ಧಿಯೂ ಸಾಧ್ಯವಾಗುವುದಿಲ್. ನಾವು ನಮ್ಮ ಮಕ್ಕಳನ್ನು ವಂಚಿಸುತ್ತಲೇ ಇರುವುದು ನ್ಯಾಯಯುತವೇ ?
ಮೂಲ : ಸೌರವ್ ಸನ್ಯಾಲ್- ಎನ್ಡಿಟಿವಿ ಬ್ಲಾಗ್
ಅನುವಾದ : ನಾ ದಿವಾಕರ