ಈ ಉಪಖಂಡವು ಕಳೆದ ಐದು ಸಾವಿರ ವರ್ಷಗಳಲ್ಲಿ ಪರಕೀಯರ ದಾಳಿಯಿಂದ ನಲುಗಿಹೋದರೂ ಕೂಡ ತನ್ನತನವನ್ನು ಉಳಿಸಿಕೊಂಡು ಬದುಕಿದೆ. ಇಲ್ಲಿನ ಬಹುಸಂಸ್ಕೃತಿ, ಸಹಿಷ್ಣತೆ, ಜಾತ್ಯಾತೀತ ತತ್ವಗಳು ಜಗತ್ತಿಗೆ ಮಾದರಿಯಾಗಿ ಉಳಿದಿವೆ. ಉಪಖಂಡವನ್ನು ಅತಿಕ್ರಮಿಸಿದ್ದ ಮಧ್ಯ ಏಷಿಯಾದ ಉರೇಷಿಯನ್ ಮೂಲದ ಪಶುಪಾಲಕ ಬುಡಕಟ್ಟಿನ ಆರ್ಯರು ಬುದ್ಧಪೂರ್ವದಲ್ಲಿ ಇಲ್ಲಿ ಮಹಾ ತಲ್ಲಣವನ್ನು ಸೃಷ್ಟಿಸಿದ್ದರು. ಉತ್ತರ ಭಾರತದ ನೆಲದಲ್ಲಿ ಗೌತಮ ಬುದ್ಧ ಹುಟ್ಟುಹಾಕಿದ ವೈಚಾರಿಕ ಚಳುವಳಿ ಮತ್ತು ಅನೇಕ ಜನಪದಿಯ ಚಳುವಳಿಗಳು ಆರ್ಯ ಗಿಡುಗಗಳಿಂದ ಈ ನೆಲವನ್ನು ಅಂದು ರಕ್ಷಿಸಿದವು.
ಮುಂದೆ ಪುಷ್ಯಮಿತ್ರ ಶುಂಗನ ಮೂಲಕ ಮತ್ತು ದಕ್ಷಿಣದ ಆಚಾರ್ಯರ ಕಾರಸ್ಥಾನದಿಂದ ಆರ್ಯರ ಕುಟಿಲತೆ ಮರುಜೀವ ಪಡೆಯಿತು. ಆಮೇಲೆ ಬಸವಾದಿ ಶಿವಶರಣರು ಕನ್ನಡ ನೆಲದಲ್ಲಿ ಹುಟ್ಟುಹಾಕಿದ ವಚನ ಚಳುವಳಿ ಸನಾತನಿ ಆರ್ಯ ಗಿಡುಗಗಳ ಪುಂಡಾಟಕ್ಕೆ ಒಂದಷ್ಟು ಪ್ರತಿರೋಧ ತೋರಿತಾದರೂ ಅದು ವ್ಯಾಪಕವಾಗಿ ಬೆಳೆಯುವ ಮೊದಲೇ ದುರಂತ ಅಂತ್ಯ ಕಂಡಿತು. ಆಮೇಲೆ ಪರಕೀಯ ಮುಸ್ಲಿಮರೊಂದಿಗೆ ಕೈಜೋಡಿಸಿದ ಆರ್ಯಪಡೆ ಅವರ ದಿವಾನಗಿರಿ, ಚಮಚಾಗಿರಿ, ಗುಲಾಮಗಿರಿ ಮಾಡುತ್ತ ಈ ನೆಲವನ್ನು ಅವನತಿಗೆ ದೂಡಿತು.
ಆರಂಭದಲ್ಲಿ ಬ್ರಿಟೀಷರೊಂದಿಗೂ ಕೈಜೋಡಿಸಿದ್ದ ಆರ್ಯರು ಆಂಗ್ಲರ ಜನಪರ ಕಾನೂನುಗಳ ವಿರುದ್ಧ ಸಿಡಿದೆದ್ದರೂ ಅವರ ವಿರುದ್ಧದ ಸ್ವರಾಜ್ಯ ಚಳುವಳಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗಲಿಲ್ಲ. ಗಾಂಧಿ ನೇತೃತ್ವದ ಕಾಂಗ್ರೆಸ್ ನಡೆಸುತ್ತಿದ್ದ ಸ್ವರಾಜ್ಯ ಚಳುವಳಿಯಿಂದ ವಿಮುಖವಾದ ಆರ್ಯಪಡೆ ಹಿಂದುತ್ವದ ಹೆಸರಿನಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ಬ್ರಿಟೀಷರೊಡನೆ ಮತ್ತು ಮುಸ್ಲಿಮ್ ಲೀಗ್ ನೊಂದಿಗೆ ಏಕಕಾಲಕ್ಕೆ ಕೈಜೋಡಿಸಿ ಸ್ವತಂತ್ರ ಚಳುವಳಿಯನ್ನು ದಿಕ್ಕುತಪ್ಪಿಸುವ ಕಾರ್ಯ ಮಾಡಿತು. ಕೊನೆಗೆ ಆರ್ಯರ ಮತ್ತು ಮುಸ್ಲಿಮರ ಮೂಲಭೂತವಾದ ಹಾಗು ಧರ್ಮದಾಹ ಈ ಭೂಖಂಡದ ವಿಭಜನೆಗೆ ಕಾರಣವಾಯಿತು. ಸ್ವಾತಂತ್ರಾ ನಂತರ ಜನತಂತ್ರ, ಬಹುತ್ವ ಮತ್ತು ಜಾತ್ಯಾತೀತ ತತ್ವಗಳನ್ನು ಜೀರ್ಣಿಸಿಕೊಳ್ಳದೆ ಗಾಂಧಿ ಹತ್ಯೆಗೆ ಆರ್ಯರು ಕಾರಣಿಭೂತರಾದರು.
ಕಳೆದ ಎಪ್ಪತ್ತು ವರ್ಷಗಳಿಂದ ದೇಶದ ಸಂವಿಧಾನ, ಬಹುತ್ವˌ ಸ್ವಾವಲಂಬಿತ್ವ, ಸದೃಢ ಆರ್ಥಿಕತೆ, ಜನತಂತ್ರ ವ್ಯವಸ್ಥೆಯನ್ನು ಹಾಳುಗೆಡವಲು ಅಧಿಕಾರದ ಕನಸು ಕಾಣುತ್ತಿದ್ದ ಆರ್ಯ ಮೂಲಭೂತವಾದಿಗಳು ಕಳೆದ ಮೂರು ದಶಕಗಳಿಂದ ಅದರಲ್ಲಿ ಭಾಗಶಃ ಯಶಸ್ವಿಯಾಗಿದ್ದು ಕಳೆದ ಒಂದು ದಶಗಳಿಂದ ಪೂರ್ಣ ಯಶಸ್ಸನ್ನು ಸಾಧಿಸಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಇಡೀ ಭೂಖಂಡದ ಆರ್ಥಿಕತೆ ಕೇವಲ ಆಯ್ದ ಮೂರ್ನಾಲ್ಕು ಉದ್ಯಮಿಗಳ ಕೈಯಲ್ಲಿರಬೇಕು ಮತ್ತು ಆ ಉದ್ಯಮಿಗಳು ಆರ್ಯ ಮೂಲಭೂತವಾದಿಗಳ ನಿಯಂತ್ರಣದಲ್ಲಿರಬೇಕು ಎನ್ನುವ “ಬಂಚ್ ಆಫ್ ಥಾಟ್ಸ್” ಸಿದ್ಧಾಂತವನ್ನು ಸಂಪೂರ್ಣವಾಗಿ ಅನುಷ್ಟಾನಕ್ಕೆ ತರಲಾಗುತ್ತಿದೆ. ಸ್ವಾತಂತ್ರಾ ನಂತರ ದೂರದೃಷ್ಟಿಯುಳ್ಳ ನಮ್ಮ ನಾಯಕರುಗಳು ಕಟ್ಟಿದ ದೇಶವಿಂದು ಮರು ನಿರ್ಮಾಣವಾಗದ ರೀತಿಯಲ್ಲಿ ಶಾಸ್ವತವಾಗಿ ನಾಶಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಅದರ ಮುಂದುವರೆದ ಭಾಗವಾಗಿ ಮೋದಿ ಸರಕಾರ ೫.೯೬ ಲಕ್ಷ ಕೋಟಿ ರೂಪಾಯಿಗಳಿಗೆ ನಮ್ಮ ದೇಶದ ಹಿಂದಿನ ಆಡಳಿತಗಾರರು ಸ್ಥಾಪಿಸಿದ ಈ ಕೆಳಗೆ ನಮೂದಿಸಿದ ಸರಕಾರಿ ಆಸ್ತಿಗಳನ್ನು ಬಿಜೆಪಿ ಸಖ್ಯದಲ್ಲಿರುವ ಖಾಸಗಿ ಉದ್ಯಮಿಗಳಿಗೆ ಮಾರಲು ಸಿದ್ಧತೆ ಮಾಡಿಕೊಂಡಿದೆ:

೧. ೨೫ ವಿಮಾನ ನಿಲ್ದಾಣಗಳು
೨. ೨೬೭೦೦ ಕಿ.ಮೀ. ಹೆದ್ದಾರಿ
೩. ೬ ಜಿಜಿಡಬ್ಲ್ಯೂ ಸಾಮರ್ಥ್ಯದ ರಿಫ್ರೆಸ್ಮೆಂಟ್ ಮತ್ತು ಸೋಲಾರ್ ಘಟಕಗಳು
೪. ಕಲ್ಲಿದ್ದಲು ಗಣಿಗಳ ೧೬೦ ಪ್ರಾಜೆಕ್ಟ್ ಗಳು
೫. ೮೧೫೪ ಕಿ. ಮೀ. ಗ್ಯಾಸ್ ಪೈಪ್ಲೈನ್
೬. ೨.೮೬ ಲಕ್ಷ ಟೆಲಿಕಾಮ್ ಫೈಬರ್
೭. ೧೪೯೧೭ ಟೆಲಿಕಾಮ್ ಟವರ್ ಗಳು
೮. ೨೧೦ ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಎಲ್ಲಾ ವೇರ್ ಹೌಸ್ ಗಳು
೯. ೪೦೦ ರೈಲು ನಿಲ್ದಾಣಗಳು
೧೦. ಇನ್ನೂ ಅನೇಕ ಸರಕಾರಿ ಆಸ್ತಿ ಮತ್ತು ಜಮೀನುಗಳು
ಈ ಎಲ್ಲ ಸಂಪತ್ತುಗಳು ಕಳೆದ ಎಪ್ಪತ್ತು ವರ್ಷಗಳ ಆಡಳಿತ ಕಾಲದಲ್ಲಿ ನಿರ್ಮಿಸಿದಂತವು. ವಿಶೇಷವಾಗಿ ಹೆದ್ದಾರಿಗಳು, ಟೆಲಿಕಾಮ್ ಟವರ್, ಫೈಬರ್, ಉಗ್ರಾಣಗಳು ಡಾ. ಮನಮೋಹನಸಿಂಗ್ ಆಡಳಿತಾವಧಿಯಲ್ಲಿ ಸ್ಥಾಪಿಸಲಾಗಿವೆ. ಆದರೆ ದೇಶದ ಜನರಿಗೆ ಕಳೆದ ೭೦ ವರ್ಷಗಳಲ್ಲಿ ಹಿಂದಿನ ಆಡಳಿತಗಾರರು ಯಾವ ಅಭಿವೃದ್ಧಿಯೂ ಮಾಡಿಲ್ಲ ಹಾಗು ದೇಶ ಏನನ್ನೂ ಸಾಧಿಸಿಲ್ಲ ಎಂಬ ಸುಳ್ಳನ್ನು ಹೇಳಿ ನಂಬಿಸಲಾಗಿದೆ.
ಮೋದಿ ನೇತೃತ್ವದ ಬಿಜೆಪಿ ಸರಕಾರ ಇನ್ನೊಂದು ಅವಧಿ ಅಧಿಕಾರಕ್ಕೆ ಬಂದರೆ ನಮ್ಮ ಹಿಂದಿನ ಹಿರಿಯರು ಸ್ಥಾಪಿಸಿದ ಸಾವಿರಾರು ಸಂಶೋಧನಾ ಕೇಂದ್ರಗಳು, ವಿಶ್ವವಿದ್ಯಾಲಯಗಳು, ವೈದ್ಯಕೀಯ ಕಾಲೇಜುಗಳು, ಲಕ್ಷಾಂತರ ಶಿಕ್ಷಣ ಸಂಸ್ಥೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಶಾಲೆಗಳನ್ನು ಉದ್ದೇಶವೂರ್ವಕವಾಗಿ ಹಾಳುಗೆಡವಿ, ನಷ್ಟದ ಕಾರಣ ನೀಡಿ ತಮಗೆ ಆಪ್ತರಾಗಿರುವ ಉದ್ಯಮಿಗಳಿಗೆ ಮಾರುವ ಯೋಜನೆಗಳು ಸಿದ್ಧಗೊಂಡಿವೆ.
ದೇಶದ ಪ್ರತಿ ನಗರಗಳಲ್ಲಿರುವ ರಸ್ತೆಗಳು, ಉದ್ಯಾನವನಗಳು, ಉಪರಸ್ತೆಗಳು ಕೂಡ ಖಾಸಗಿ ಉದ್ಯಮಿಗಳಿಗೆ ಮಾರಿ ನೀವು ರಸ್ತೆ ದಾಟಿ ಮಾರುಕಟ್ಟೆಗೆ ಹೋಗಿ ವಾಪಸ್ಸು ಮನೆಗೆ ಬರಬೇಕಾದರು ಕೂಡ ಗೂಂಡಾ ಉದ್ಯಮಿಗಳು ನಿಮ್ಮಿಂದ ಟೋಲ್ ವಸೂಲಿ ಮಾಡುವ ಕಾಲ ದೂರವಿಲ್ಲ. ಸರಕಾರಿ ಸ್ವಾಮ್ಯದ ಸ್ವತ್ತುಗಳು ಮಾರುವುದರ ಹಿಂದೆ ಒಂದು ಬಹುದೊಡ್ಡ ಹುನ್ನಾರವಿರುವುದು ಈ ದೇಶದ ಪರಿಶಿಷ್ಟ ಜಾತಿ, ವರ್ಗ ಮತ್ತು ಇತರೆ ಹಿಂದುಳಿದ ಜನಾಂಗಕ್ಕೆ ತಿಳಿಯುತ್ತಿಲ್ಲ.

ಖಾಸಗೀಕರಣ ದೇಶದಲ್ಲಿ ಮೀಸಲಾತಿ ಸೌಲಭ್ಯವನ್ನು ಕ್ರಮೇಣವಾಗಿ ಸಂಪೂರ್ಣ ಅಳಿಸಿಹಾಕಲಿದೆ. ಈಗಾಗಲೇ ೫೦% ಮೀಸಲಾತಿ ರಹಿತ ಕೋಟಾ ಇದ್ದಾಗ್ಯೂ ಮೇಲ್ವರ್ಗದವರು ಎಲ್ಲಾ ಕ್ಷೇತ್ರಗಳಲ್ಲಿ ೮೦% ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಸಾಲದೆಂಬಂತೆ ಯಾವ ಬೇಡಿಕೆˌ ಚರ್ಚೆˌ ವಿರೋಧಗಳಿಲ್ಲದೆ ಮೇಲ್ವರ್ಗಕ್ಕೆ ೧೦% ಮೀಸಲಾತಿ ನೀಡಲಾಗುತ್ತಿದೆ. ಈ ಬೆಳವಣಿಗೆ ಕೇವಲ ದಲಿತರು ಮತ್ತು ಹಿಂದುಳಿದವರಿಗೆ ಮಾತ್ರವಲ್ಲದೆ ಶೂದ್ರ ಮೇಲ್ವರ್ಗಗಳಾದ ಲಿಂಗಾಯತ, ಒಕ್ಕಲಿಗ, ಬಲಿಜ, ರೆಡ್ಡಿ, ಕಮ್ಮಾ, ಮರಾಠಾ, ರಾಜಪೂತ, ಕಾಯಸ್ಥ ಮುಂತಾದ ಸಮುದಾಯಗಳ ಜನರಿಗೂ ಅಪಾಯ ತಂದೊಡ್ಡುವ ಬೆಳವಣಿಗೆಯಾಗಿದೆ.
೨೦೨೪ ರಲ್ಲಿ ಈ ಸರಕಾರ ಮತ್ತೆ ಅಧಿಕಾರ ಹಿಡಿದರೆ ಕೇವಲ ರಸ್ತೆ, ಉದ್ಯಾನಗಳಷ್ಟೇ ಅಲ್ಲದೆ ತಾನೇ ಕಟ್ಟಿಸಿದ ಶೌಚಾಲಯಗಳನ್ನು ಕೂಡ ಖಾಸಗಿಯವರಿಗೆ ಮಾರಲಿದೆ. ಆಗ ನೀವು ನಿಮ್ಮದೇ ಶೌಚಾಲಯಗಳು ಬಳಸಬೇಕಾದರೂ ಕೂಡ ಶುಲ್ಕ ತೆರಬೇಕು ಇಲ್ಲವೆ ಪೊಲಿಸರಿಂದ ಬೂಟುಗಾಲಿನ ಒದೆತ ತಿನ್ನಬೇಕಾಗಬಹುದು. ಇದರ ಜೊತೆಗೆ, ಬ್ರಿಟೀಷರಿಂದ ಸಾರ್ವತ್ರೀಕರಣಗೊಂಡ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಿ ಗುರುಕುಲ ಮಾದರಿಯ ನೆಪದಲ್ಲಿ ಶಿಕ್ಷಣವು ಸಂಪೂರ್ಣವಾಗಿ ಆರ್ಯ ಗಿಡುಗಗಳ ಕಪಿಮುಷ್ಟಿ ಸೇರಲಿದೆ. ಹಿಂದಿನ ಸರಕಾರ ಸ್ಥಾಪಿಸಿದ ಕೇಂದ್ರೀಯ ವಿದ್ಯಾಲಯಗಳನ್ನು ಗುರುಕುಲ ಶಾಲೆಗಳಾಗಿ ಪರಿವರ್ತಿಸುವ ಗೂಪ್ತ ಯೋಜನೆ ಜಾಲನೆಯಲ್ಲಿದೆ ಎನ್ನುವ ಸುದ್ದಿಗಳಿವೆ. ಸಾಂಪ್ರದಾಯ, ಸಂಸ್ಕೃತಿಗಳ ನೆಪದಲ್ಲಿ ಜನರಲ್ಲಿನ ವೈಜ್ಞಾನಿಕ ಮನೋಭಾವವನ್ನು ಅಳಿಸಿಹಾಕಿ ವಿಜ್ಞಾನ ಶಿಕ್ಷಣವನ್ನು ಸಂಪೂರ್ಣ ನಾಶಗೊಳಿಸಿ ಸನಾತನ ಆರ್ಯ ಸಾಂದ್ರದಾಯದ ಮೌಢ್ಯಗಳನ್ನು ಪುನರ್ ಪ್ರತಿಷ್ಠಾಪಿಸಲಾಗುತ್ತದೆ.
ಈ ದೇಶದ ಮೂಲ ಸಂಸ್ಕೃತಿ ಮತ್ತು ಪರಂಪರೆಗಳಿಗೆ ಎಂಟು ಶತಮಾನಗಳ ಮುಸ್ಲಿಮರ ಮತ್ತು ಎರಡು ಶತಮಾನಗಳ ಯುರೋಪಿಯನ್ನರ ಆಡಳಿತದಲ್ಲಿ ಆಗದ ನಷ್ಟವು ಆರ್ಯ ಪ್ರಣೀತ ಹಿಂದಿ-ಹಿಂದೂ-ಸಂಸ್ಕೃತಗಳ ಹೇರುವಿಕೆಯ ಮೂಲಕ ಆಗಲಿದೆ. ಎಂಟು ದಶಕಗಳ ನಂತರ ಭಾರತ ಮತ್ತೆ ಪರಕೀಯ ಆರ್ಯರ ದಾಸ್ಯಕ್ಕೆ ತುತ್ತಾಗಲಿದೆ. ಮುಂದಿನ ದಿನಗಳು ನೆಲಮೂಲಿಗರ ಪಾಲಿಗೆ ಇನ್ನೂ ಭಯಾನಕವಾಗಲಿವೆ.