• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಮಾನತೆಯ ಕಲ್ಪನೆಯನ್ನು ಛೇದಿಸಿ ನೋಡುವುದು ವರ್ತಮಾನ ಭಾರತದ ತುರ್ತು

ಪ್ರತಿಧ್ವನಿ by ಪ್ರತಿಧ್ವನಿ
April 25, 2026
in ಅಂಕಣ
0
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ
Share on WhatsAppShare on FacebookShare on Telegram

ನಾ ದಿವಾಕರ
                            ಭಾಗ 2

ADVERTISEMENT

ಧಾರ್ಮಿಕ ನಂಬಿಕೆ-ಸಮಾನತೆ
ಭಾರತದ ಸಂವಿಧಾನ ಧಾರ್ಮಿಕ ಹಾಗೂ ಉಪಾಸನಾ ಸ್ವಾತಂತ್ರ್ಯವನ್ನು ಸಮಸ್ತ ಪ್ರಜೆಗಳಿಗೂ, ಯಾವುದೇ ತಾರತಮ್ಯಗಳಿಲ್ಲದೆ ಕಲ್ಪಿಸುತ್ತದೆ. ಧಾರ್ಮಿಕ ಸ್ವಾತಂತ್ರ್ಯ ಯಾವುದೇ ಮತ ಅಥವಾ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವುದು, ಉಪಾಸನಾ ಸ್ವಾತಂತ್ರ್ಯ ಧಾರ್ಮಿಕ ಆಚರಣೆಗಳಿಗೆ ಹಾಗೂ ಅದರೊಳಗಿನ ನಿರ್ಬಂಧ, ನಿಷೇಧ, ನಿಬಂಧನೆಗಳಿಗೆ ಸಂಬಂಧಿಸಿದ್ದು. 2014ರಲ್ಲಿ ರೂಪಾಂತರಗೊಂಡಿರುವ ನವ ಭಾರತದಲ್ಲಿ ಎರಡೂ ಸಾಂವಿಧಾನಿಕ ಹಕ್ಕುಗಳು ನಿರಂತರ ದಾಳಿಗೊಳಗಾಗುತ್ತಿದೆ. ಈ ದಾಳಿಯ ಜವಾಬ್ದಾರಿಯನ್ನು ಹೊತ್ತಿರುವ ತುಡುಗು ಪಡೆಗಳು (Fringe elements) ನಿರ್ಭೀತಿಯಿಂದ ತಮ್ಮ ಥಳಿತ, ಹತ್ಯೆ, ಗುಂಪು ಥಳಿತ, ಹಲ್ಲೆ ಇತ್ಯಾದಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿದ್ದು, ಪ್ರಭುತ್ವ ಮೌನ ಪ್ರೇಕ್ಷಕನಂತಿದೆ. ಇದು ಭವಿತವ್ಯದ ದಿಕ್ಸೂಚಿ ಎಂದೂ ಭಾವಿಸಬಹುದು.

ಮಹಿಳಾ ಸಮಾನತೆಯ ಪ್ರಶ್ನೆಯನ್ನು ಮುಂದಿಟ್ಟಾಗ, ಸ್ವತಂತ್ರ ಭಾರತದಲ್ಲಿ ಸಂವಿಧಾನದ ಪ್ರಾಮಾಣಿಕ ಅನುಸರಣೆಯಾಗುತ್ತಿದ್ದರೂ, ಮಹಿಳೆ ಧಾರ್ಮಿಕ ಆಚರಣೆಗಳಲ್ಲಿ ಪುರುಷರಿಗೆ ಸಮಾನವಾಗಿ ಸರ್ವ ಸ್ವತಂತ್ರಳಾಗಿದ್ದಾಳೆಯೇ ಎಂಬ ಮರುಪ್ರಶ್ನೆ ಉದ್ಭವಿಸುತ್ತದೆ. ಇದು ಕೇವಲ ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಮುಸ್ಲಿಂ, ಕ್ರೈಸ್ತ, ಸಿಖ್‌ ಹಾಗೂ ನವ ಬೌದ್ಧರಲ್ಲೂ ಸಹ ಮಹಿಳೆ ವಿಭಿನ್ನ ಎಳೆಗಳಲ್ಲಿ ಅಸಮಾನತೆಯನ್ನು ಎದುರಿಸುತ್ತಲೇ ಇದ್ದಾಳೆ. ಸಾಂಸ್ಥಿಕ ನಿಯಂತ್ರಣದ ಹಂತದಲ್ಲಿ ಇದು ಢಾಳಾಗಿ ಕಾಣುತ್ತದೆ. ಮಠಾಧೀಶ, ಪಾದ್ರಿ, ಇಮಾಮ್‌, ಬಂತೇಜಿ ಈ ಯಾವ ಹುದ್ದೆಗಳಲ್ಲೂ ಮಹಿಳೆಯನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಅಸ್ಪೃಶ್ಯರಲ್ಲೂ ಸೇರಿದಂತೆ ಎಲ್ಲ ಜಾತಿ ಸಮಾಜಗಳಲ್ಲೂ ಮಹಿಳೆ ಪರಿತ್ಯಕ್ತಳಾಗಿ, ಬಹಿಷ್ಕೃತಳಾಗಿ ಪರಿಗಣಿಸಲ್ಪಡುವ ಧಾರ್ಮಿಕ ಆಚರಣೆಗಳು, ವಿಧಿ ವಿಧಾನಗಳು ಚಾಲ್ತಿಯಲ್ಲಿವೆ. ವಿಶಾಲ ಸಮಾಜದ (Broader Society) ಪ್ರಾಥಮಿಕ ಘಟಕ (Primary Unit) ಎಂದು ಹೇಳಬಹುದಾದ ಕುಟುಂಬದ ಚೌಕಟ್ಟಿನಲ್ಲೇ ಈ ಅಸಮಾನತೆ-ತಾರತಮ್ಯ , ಸಂಪ್ರದಾಯ-ಸಂಸ್ಕೃತಿಯ ನೆಪದಲ್ಲಿ, ಅಧಿಕೃತವಾಗಿ ಮಾನ್ಯತೆ ಪಡೆಯುತ್ತದೆ.

ಹೆಣ್ಣು ಬಹಿಷ್ಕೃತಳಾಗುವ ವ್ಯವಸ್ಥೆ
ಹೆಣ್ಣು ಮಕ್ಕಳ ಜೈವಿಕ ಕ್ರಿಯೆಯಾದ ಋತುಸ್ರಾವ, ಬದುಕಿನ ಆಕಸ್ಮಿಕಗಳಾದ ವೈಧವ್ಯ , ದೈಹಿಕ ಕ್ರಿಯೆಯಾದ ಬಂಜೆತನ ಇವೆಲ್ಲವೂ ಸಹ ನಮ್ಮ ಸಾಂಪ್ರದಾಯಿಕ ಸಮಾಜದಲ್ಲಿ ನಿಷೇಧ, ನಿರ್ಬಂಧ, ನಿಬಂಧನೆಗಳಿಗೆ ಒಳಪಡುತ್ತವೆ. ಸಾಂವಿಧಾನಿಕ ಸಮಾನತೆಯ ಕಲ್ಪನೆಯಲ್ಲಿ ಈ ತಾರತಮ್ಯಗಳನ್ನು ಹೇಗೆ ನಿರ್ವಚಿಸುವುದು ? ಏಕೆಂದರೆ ಇದಾವುದೂ ಸಹ ಪುರುಷರಿಗೆ ಅನ್ವಯಿಸುವುದಿಲ್ಲ. ಇದೇ ರೀತಿಯ ಭಿನ್ನ ಜೈವಿಕ-ದೈಹಿಕ ಕ್ರಿಯೆಗಳು ಪುರುಷರಲ್ಲೂ ನಡೆಯುತ್ತವೆ. ಆದರೆ ಪುರುಷ ಸಮಾಜ ಮುಕ್ತವಾಗಿಯೇ ತನ್ನ ಸ್ಚಚ್ಚಂದ ಸ್ವಾಯತ್ತತೆ ಮತ್ತು ಸ್ವೇಚ್ಛಾಚಾರಗಳಿಗೆ ರಕ್ಷಣೆ ಪಡೆಯುತ್ತದೆ. ಈ ಅಸಮಾನತೆಯನ್ನು ಹೋಗಲಾಡಿಸಲು ಕಾನೂನು ನೆರವಾಗುವುದಿಲ್ಲ ಏಕೆಂದರೆ ಇದು ಮನಸ್ಥಿತಿಯ ಪ್ರಶ್ನೆ. ಹಾಗಾದರೆ ಏನು ಮಾಡಬೇಕು ?
ಶಬರಿಮಲೆ ಪ್ರಕರಣದಲ್ಲಿ ಈ ಪ್ರಶ್ನೆಯನ್ನು ಮುಂದಿಟ್ಟಾಗ ನಮಗೆ ಸಮಾಜ, ಸಂಪ್ರದಾಯ, ಧಾರ್ಮಿಕ ಕಟ್ಟಳೆಗಳು ಮತ್ತು ಪಿತೃಪ್ರಧಾನ ಪ್ರಭುತ್ವ ಎಲ್ಲವೂ ಪ್ರಶ್ನಾರ್ಹವಾಗಿ ಕಾಣುತ್ತದೆ. ಬೆಂಗಳೂರಿನ ಸಂಪ್ರದಾಯಬದ್ಧ, ಅತ್ಯಾಧುನಿಕ ಶಾಲೆಯೊಂದರಲ್ಲಿ ಶಿಕ್ಷಕಿಯರು ಮುಟ್ಟಾದ ದಿನಗಳಲ್ಲಿ ಕಡ್ಡಾಯವಾಗಿ, ಸ್ವಪ್ರೇರಣೆಯಿಂದಲೇ ರಜೆ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಇಲ್ಲಿ ಸ್ವಪ್ರೇರಣೆಯ ಹಿಂದೆ ಕೆಲಸ ಮಾಡುವುದು ವೈಯುಕ್ತಿಕ ಅಂಧಶ್ರದ್ಧೆ-ಅವೈಚಾರಿಕತೆ ಮತ್ತು ಸಾಂಸ್ಥಿಕ ಯಜಮಾನಿಕೆಯ ದಬ್ಬಾಳಿಕೆ. ಮುಸ್ಲಿಂ ಸಮಾಜದ ಬುರ್ಖಾ/ಹಿಜಾಬ್‌, ಕ್ರೈಸ್ತ ಸಮಾಜಗಳ ವಸ್ತ್ರ ಮತ್ತು ಚಿಹ್ನೆಗಳ ಸಂಹಿತೆ ಇವೆಲ್ಲವೂ ಮಹಿಳಾ ಸಮಾನತೆಯನ್ನು ನಿರಾಕರಿಸುವ ಪ್ರಕ್ರಿಯೆಗಳೇ ಆಗಿವೆ.

ಈ ಅವೈಚಾರಿಕತೆಯ ವಿಸ್ತರಣೆಯನ್ನು ನಾವು ಶಬರಿಮಲೆ ದೇವಾಲಯದಲ್ಲಿ ಕಾಣಬಹುದು. ಅಲ್ಲಿ ಹೆಣ್ಣಿನ ಪ್ರವೇಶವೇ ನಿರ್ಬಂಧಕ್ಕೊಳಗಾಗಿದೆ. ಮಹಿಳೆಯ ದೇಹದಲ್ಲಿ ನೈಸರ್ಗಿಕವಾಗಿ ನಡೆಯುವ ಋತುಸ್ರಾವ ಕ್ರಿಯೆಯನ್ನು ಮೈಲಿಗೆ ಎಂದು ಪರಿಗಣಿಸುವ ಸಂಪ್ರದಾಯದಲ್ಲಿ, ಮಹಿಳೆಯೇ ನಿಷಿದ್ಧಳಾಗುವುದು ಸಂವಿಧಾನ ವಿರೋಧಿ ಅಲ್ಲವೇ ? ಒಂದು ಸಮಾಜ ಅಥವಾ ಸಮುದಾಯದ ಧಾರ್ಮಿಕ ನಂಬಿಕೆ ಎಂಬ ಕಾರಣಕ್ಕೆ ಈ ಅವೈಜ್ಞಾನಿಕ, ಅಮಾನುಷ ಪದ್ಧತಿಗೆ ಮಾನ್ಯತೆ ನೀಡಿದರೆ ಅದು ಸಂವಿಧಾನದ ಸಮಾನತೆಯ ಕಲ್ಪನೆಯನ್ನು ಧಿಕ್ಕರಿಸಿದಂತೆ ಆಗುವುದಿಲ್ಲವೇ ? ಈ ವಿವಾದ ನ್ಯಾಯಾಲಯವನ್ನು ತಲುಪಿರುವುದೇ ನಮ್ಮ ಸಾಂಪ್ರದಾಯಿಕ ಸಮಾಜದ ಬೌದ್ಧಿಕ ದಾರಿದ್ರ್ಯವನ್ನು ಎತ್ತಿ ತೋರುತ್ತದೆ. ಆದರು ನ್ಯಾಯಾಂಗವಾದರೂ ಅಂತಿಮವಾಗಿ ಮಹಿಳೆಯ ವ್ಯಕ್ತಿ ಸ್ವಾಯತ್ತತೆ-ಉಪಾಸನಾ ಸ್ವಾತಂತ್ರ್ಯವನ್ನು ಕಾಪಾಡುತ್ತದೆ ಎಂದು ಆಶಿಸಬಹುದು.
ಮನುಕುಲದ ಸೃಷ್ಟಿಯ ಮೂಲ ಆಗಿರುವ ಹೆಣ್ಣಿನ ಜೈವಿಕ ಕ್ರಿಯೆ ʼ ಮುಟ್ಟು ʼ ಮೈಲಿಗೆಯಾಗಿ ಕಾಣುವುದು, ಈ ಕಾರಣಕ್ಕಾಗಿ ಮಹಿಳೆ ಬಹಿಷ್ಕೃತಳಾಗುವುದು, ಇದಕ್ಕೆ ಸಮಾಜದ ಸುಶಿಕ್ಷಿತ ವರ್ಗವೂ ಸಮ್ಮತಿಸುವುದು, ಪ್ರಭುತ್ವ ಇದಕ್ಕೆ ತಲೆದೂಗುವುದು ಇವೆಲ್ಲವೂ ಸಹ ನಮ್ಮ ಸಮಾಜ ಪ್ರಾಚೀನತೆಯ ಕಡೆಗೆ ಹೊರಳುತ್ತಿರುವುದಕ್ಕೆ ಸಾಕ್ಷಿಯಾಗಿ ಕಾಣುತ್ತದೆ. ಈ ನಿಟ್ಟಿನಲ್ಲಿ ಸಂವಿಧಾನ ನಮ್ಮನ್ನು ಎಲ್ಲಿಯವರೆಗೆ ರಕ್ಷಿಸಬಹುದು. ಸಮಾಜದ ಪ್ರಾಥಮಿಕ ಘಟಕವಾದ ಕುಟುಂಬದ ನೆಲೆಯಲ್ಲಿ ಎಷ್ಟರ ಮಟ್ಟಿಗೆ ಈ ವೈಚಾರಿಕತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗಿದೆ ? ಮಹಿಳಾ ಸಮಾನತೆಯ ಸಾಂವಿಧಾನಿಕ ಕಲ್ಪನೆಯನ್ನು ಸಮರ್ಥಿಸುವ-ಎತ್ತಿಹಿಡಿಯುವ ಎಷ್ಟು ಸಂಘಟನೆಗಳಲ್ಲಿ, ಪಕ್ಷಗಳಲ್ಲಿ, ಸಂಸ್ಥೆಗಳಲ್ಲಿ ಈ ಕುರಿತು ಸಮಾಲೋಚನೆ ನಡೆಸಲಾಗಿದೆ ?

ತಳಮಟ್ಟದಲ್ಲಿ ಈ ವೈಚಾರಿಕತೆಯನ್ನು ಬೆಳೆಸದೆ ಹೋದರೆ ಶಾಸನಸಭೆಯಲ್ಲಿ ಶೇಕಡಾ 33ರಷ್ಟು ಬಲ ಪಡೆಯುವ ಮಹಿಳೆಯರು ಮತ್ತೆ ಪಿತೃಪ್ರಧಾನ ವ್ಯವಸ್ಥೆಯ ಸಂಕೋಲೆಗಳಲ್ಲಿ ಸಿಲುಕುತ್ತಾರೆ. ಈ ಎಚ್ಚರ ನಮ್ಮಲ್ಲಿರಬೇಕಲ್ಲವೇ ?

3 . ಆರ್ಥಿಕ ನೆಲೆಯಲ್ಲಿ
ಮಹಿಳೆಯರ ದೈನಂದಿನ ದುಡಿಮೆಯನ್ನು ಅನುತ್ಪಾದಕ (Unproductive) ಎಂದೇ ಪರಿಗಣಿಸುವ ಬಂಡವಾಳಶಾಹಿಯ ಗುಣಗಳನ್ನು ಶತಮಾನಗಳಿಂದಲೂ ಅಳವಡಿಸಿಕೊಂಡಿರುವ ಭಾರತೀಯ ಸಮಾಜದಲ್ಲಿ , ಮಹಿಳಾ ಸಮೂಹ ತನ್ನ ಆರ್ಥಿಕ ಸ್ವಾವಲಂಬನೆ, ಸ್ವಾಯತ್ತತೆ, ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೋರಾಡುತ್ತಲೇ ಬಂದಿದೆ. ಇಂದಿಗೂ ಹೋರಾಡುತ್ತಿದೆ. “ ಸಮಾನ ದುಡಿಮೆಗೆ ಸಮಾನ ವೇತನ ” ( Equal pay for Equal Work) ತತ್ವವನ್ನು ದುಡಿಮೆಯ ಸ್ಥಳದಲ್ಲಿ, ದುಡಿಮೆಗಾರರ ನಡುವೆ ಅಳವಡಿಸಲಾಗುವುದೇ ಹೊರತು, ಲಿಂಗತ್ವದ ಆಧಾರದಲ್ಲಿ ಪರಿಗಣಿಸುವುದೂ ಇಲ್ಲ. ಕೃಷಿ ಚಟುವಟಿಕೆಯಿಂದ ಕಟ್ಟಡ ಕಾರ್ಮಿಕರನ್ನೂ ಸೇರಿದಂತೆ ಉನ್ನತ ಹುದ್ದೆಗಳವರೆಗೂ ವಿಸ್ತರಿಸುವ ಈ ಲಿಂಗ ತಾರತಮ್ಯ ಔದ್ಯಮಿಕ ಜಗತ್ತಿನಲ್ಲಿ ಮೇಲ್‌ ಸ್ತರದ ಹುದ್ದೆಗಳಲ್ಲಿ ಮಾತ್ರ ಕಾಣದೆ ಇರಬಹುದು.

ಮಹಿಳಾ ಮೀಸಲಾತಿಯನ್ನು ಸಬಲೀಕರಣದ ಒಂದು ಹೆಜ್ಜೆ ಎಂದೇ ಭಾವಿಸಿದರೂ, ಕೆಳಹಂತದ ಅಧಿಕಾರ ಕೇಂದ್ರಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾದಾಗಲೂ ಸಹ , ದುಡಿಮೆಯ ವಲಯದಲ್ಲಿರುವ ಈ ತಾರತಮ್ಯವನ್ನು ಹೋಗಲಾಡಿಸಲಾಗಿಲ್ಲ. ಕರ್ನಾಟಕ, ಮಹಾರಾಷ್ಟ್ರ ಮತ್ತಿತರ ಕೆಲವು ರಾಜ್ಯಗಳಲ್ಲಿ ಪಂಚಾಯತ್‌ ಮಟ್ಟದಲ್ಲಿ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಪ್ರಾತಿನಿಧ್ಯ ಇದ್ದರೂ ಸಹ ಗ್ರಾಮೀಣ ನಗರ ಪ್ರದೇಶಗಳಲ್ಲಿ ವೇತನ ತಾರತಮ್ಯ ಯಥಾಸ್ಥಿತಿಯಲ್ಲಿದೆ. ಏಕೆಂದರೆ ವೇತನ ನಿರ್ಧಾರ ಮಾಡುವ ಮೇಲ್ಮಟ್ಟದ ಶಾಸನ ಸಭೆಗಳಲ್ಲಿ ನೀತಿ ನಿರೂಪಣೆ ಪಿತೃಪ್ರಧಾನ ವ್ಯವಸ್ಥೆಗನುಗುಣವಾಗಿಯೇ ನಡೆಯುತ್ತದೆ. ಇದು ಅಧಿಕಾರ ವಿಕೇಂದ್ರೀಕರಣದ ಚೋದ್ಯ ಒಂದೆಡೆಯಾದರೆ, ಮತ್ತೊಂದೆಡೆ ಸಮಾನತೆಯ ಕಲ್ಪನೆಗೆ ಬಗೆಯುತ್ತಿರುವ ದ್ರೋಹವೂ ಆಗಿ ಕಾಣುತ್ತದೆ.

ಈ ಸಾಂವಿಧಾನಿಕ ಸಬಲೀಕರಣ ಕ್ರಮಗಳು ಫಲಪ್ರದವಾಗಬೇಕಾದರೆ, ಮಹಿಳೆಯರಿಗೆ ಸಾಂಘಿಕ-ಸಾಂಸ್ಥಿಕ ನೆಲೆಯಲ್ಲಿ ಮೇಲ್‌ ಚಲನೆಯ ಅವಕಾಶಗಳು ಮುಕ್ತವಾಗಿರಬೇಕು. ಹಾಗೂ ನೀತಿ ನಿರೂಪಣೆಯ ಪ್ರಕ್ರಿಯೆಯಲ್ಲಿ ಸಮಾನ ಅವಕಾಶಗಳು ಇರಬೇಕು. ಇವೆರಡೂ ಮರೀಚಿಕೆಯಾಗಿರುವುದು ವರ್ತಮಾನದ ದುರಂತ. ಮಹಿಳೆಯರಿಗೆ ಪ್ರಾತಿನಿಧ್ಯವನ್ನೇ ಅಂತಿಮ ನ್ಯಾಯ ಎಂದು ಭಾವಿಸುವ ಪಿತೃಪ್ರಧಾನ ಭಾವನೆ, ಮಹಿಳಾ ನಾಯಕತ್ವದ ಕಡೆ ಗಮನಹರಿಸಲೂ ಹಿಂಜರಿಯುತ್ತದೆ. ಇದನ್ನು ಸಾಮಾಜಿಕ ವ್ಯಾಧಿ (Social Malaise) ಎಂದೇ ನಾನು ಪರಿಗಣಿಸುತ್ತೇನೆ. ಏಕೆಂದರೆ ಮಹಿಳಾ ಪ್ರಾತಿನಿಧ್ಯವನ್ನೇ ʼ ಕೊಡಲ್ಪಡುವ-ಕಲ್ಪಿಸಲ್ಪಡುವ ʼ ಪ್ರಕ್ರಿಯೆಯಾಗಿ ಕಾಣುವ ಪುರುಷಾಳ್ವಿಕೆಯ ಕೇಂದ್ರಗಳು, ನಾಯಕತ್ವದ ಪ್ರಶ್ನೆ ಬಂದಾಗ ಜಾರಿಕೊಳ್ಳುತ್ತವೆ. ಇದನ್ನು ಎಡಪಂಥೀಯ ಕಾರ್ಮಿಕ ಸಂಘಟನೆಗಳಿಂದ ದಲಿತ ಸಂಘಟನೆಗಳವರೆಗೂ ಗುರುತಿಸಬಹುದು.

ಪಕ್ಷ ಸಂಘಟನೆಗಳ ಪ್ರಾತಿನಿಧಿಕ ರೂಪ
ಭಾರತದ ಕಮ್ಯುನಿಸ್ಟ್‌ ಚಳುವಳಿಗೆ ಶತಮಾನ ತುಂಬಿದೆ. ಕಾರ್ಮಿಕ ಚಳುವಳಿಗಳಿಗೂ ಅಷ್ಟೇ ವಯಸ್ಸಾಗಿದೆ. ಎರಡೂ ಕಡೆ ಮಹಿಳಾ ನಾಯಕತ್ವದ ಚರಿತ್ರೆಯನ್ನು ಶೋಧಿಸಿದಾಗ ನಿರಾಸೆಯಾಗುವುದು ಖಚಿತ. ಶತಮಾನ ಪೂರೈಸಿರುವ ಭಾರತೀಯ ಕಮ್ಯುನಿಸ್ಟ್‌ ಪಕ್ಷ (CPI), 60 ದಾಟಿರುವ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್‌ ಪಕ್ಷ (CPM), ಐವತ್ತು ದಾಟಿರುವ ಭಾರತೀಯ ಕಮ್ಯುನಿಸ್ಟ್‌ ಪಕ್ಷ-ಮಾರ್ಕ್ಸ್‌ವಾದಿ-ಲೆನಿನ್‌ವಾದಿ (CPI ML) ಲಿಬರೇಷನ್‌ ಈ ಯಾವುದೇ ಪಕ್ಷಗಳ ಪ್ರಧಾನ ಹುದ್ದೆಯಾದ ʼ ಪ್ರಧಾನ ಕಾರ್ಯದರ್ಶಿ ʼ ಸ್ಥಾನದಲ್ಲಿ ಒಬ್ಬ ಮಹಿಳೆಯನ್ನೂ ಗುರುತಿಸಲಾಗುವುದಿಲ್ಲ. ಎಂಟು ದಶಕಗಳನ್ನು ಪೂರೈಸಿರುವ ಭಾರತದ ಅತಿ ದೊಡ್ಡ ಬ್ಯಾಂಕ್‌ ನೌಕರರ ಸಂಘ ಎಐಬಿಇಎ (AIBEA) ಈವರೆಗೂ ಮಹಿಳಾ ಪ್ರಧಾನ ಕಾರ್ಯದರ್ಶಿ/ಅಧ್ಯಕ್ಷರನ್ನು ಕಂಡಿಲ್ಲ. ಬಿಎಮ್‌ಎಸ್‌, ಎಚ್‌ಎಮ್‌ಎಸ್‌ ಹೀಗೆ ಎಲ್ಲ ಕಾರ್ಮಿಕ ಸಂಘಟನೆಗಳಲ್ಲೂ ಇದೇ ದುರವಸ್ಥೆಯನ್ನು ಕಾಣಬಹುದು. ನೂರು ವರ್ಷ ಪೂರೈಸಿರುವ ಆರೆಸ್ಸೆಸ್‌ ಸಹ ಇದೇ ಸಾಲಿಗೆ ಸೇರುತ್ತದೆ.

ಮಹಿಳೆಯರ ದೃಷ್ಟಿಯಿಂದ ನೋಡಿದಾಗ, ಎಡ-ಬಲದ ನಡುವೆ ವ್ಯತ್ಯಾಸವೇನಿದೆ ? ಈ ಪ್ರಾತಿನಿಧ್ಯದ ಕೊರತೆಯನ್ನು ನೀಗಿಸಲು ಮಹಿಳಾ ವಾಹಿನಿಗಳನ್ನು, ವಿಭಾಗಗಳನ್ನು ರಚಿಸುವ ಪರಿಪಾಠವೂ ನಮ್ಮಲ್ಲಿದೆ. ಇದು ಎಲ್ಲ ರಾಜಕೀಯ ಪಕ್ಷಗಳಲ್ಲೂ ಇರುವ ಪದ್ಧತಿ. ಇದರರ್ಥ ಭಾರತದ ಆರ್ಥಿಕತೆಯಲ್ಲಿ ಹಾಗೂ ದುಡಿಮೆಯ ವಲಯಗಳಲ್ಲಿ ಪ್ರಧಾನ ಪಾತ್ರ ವಹಿಸುವ ವಲಯಗಳಲ್ಲಿ ಸಾಂಸ್ಥಿಕ ಪ್ರಜಾಪ್ರಭುತ್ವವಾಗಲೀ (Inistitutional Democracy) ಅಥವಾ ಸಾಂಘಿಕ ಪ್ರಜಾಪ್ರಭುತ್ವವಾಗಲೀ (Organisational Democracy) ಕಾಣಲಾಗುವುದಿಲ್ಲ. ಇಲ್ಲಿ ರಾಜ್ಯ ಅಥವಾ ಜಿಲ್ಲಾ ಮಟ್ಟದಲ್ಲಿ ಕೆಲವು ಅಪವಾದಗಳನ್ನು ಕಾಣಬಹುದು. ಅದು ಸಮಾಧಾನಕರ ಅಂಶ.

ಸಬಲೀಕರಣ, ಮೇಲ್‌ ಚಲನೆ, ಸದಾವಕಾಶ ಮತ್ತು ಸಮಪಾಲು ಈ ನಾಲ್ಕೂ ಉದಾತ್ತ ಚಿಂತನೆಗಳ ಮಿಶ್ರಣವನ್ನು ʼ ಸಮಾನತೆ ʼ ಎಂದು ಪರಿಗಣಿಸಬಹುದು. ಶಾಸನ ಸಭೆಗಳ ಮೀಸಲಾತಿ ಮಹಿಳಾ ಸಬಲೀಕರಣಕ್ಕೆ ಮಾತ್ರ ದಾರಿ ತೆರೆಯುತ್ತದೆ, ಸಮಾನತೆಯನ್ನು ಸಾಧಿಸಬೇಕಾದರೆ ತಳಮಟ್ಟದಲ್ಲಿ ಪ್ರಜಾಪ್ರಭುತ್ವೀಯ ಮೌಲ್ಯಗಳು ಗಟ್ಟಿಯಾಗಬೇಕು. ಶೇಕಡಾ 33ರಷ್ಟು ಮಹಿಳಾ ಮೀಸಲಾತಿಗಾಗಿ ಒಕ್ಕೊರಲಿನಿಂದ ಒತ್ತಾಯಿಸುವ ಕಾರ್ಮಿಕ ಸಂಘಟನೆಗಳು ಮೊದಲು ತಮ್ಮ ಚಹರೆಯನ್ನು ನೋಡಿಕೊಳ್ಳುವ ಕಾಲ ಬಂದಿದೆ. ದಲಿತ ಚಳುವಳಿಗಳಲ್ಲೂ ಸಹ ಇದೇ ಪರಿಸ್ಥಿತಿ ಇದೆ. ಸಾಂವಿಧಾನಿಕ ಹಕ್ಕುಗಳಿಗಾಗಿ ನಿರಂತರ ಹೋರಾಡುವ ಈ ಸಂಘ ಸಂಸ್ಥೆಗಳು, ಸಂವಿಧಾನ ಆಶಿಸುವ ಒಳಗೊಳ್ಳುವಿಕೆಯನ್ನು (Inclusiveness) ನಿರ್ಲಕ್ಷಿಸಿರುವುದು, ಸಾಂವಿಧಾನಿಕ ನೈತಿಕತೆಯ ಪ್ರಶ್ನೆಯಾಗಿ ಕಾಡುತ್ತದೆ.

ನೈತಿಕತೆಯ ನೆಲೆಯಲ್ಲಿ ಪ್ರಾತಿನಿಧ್ಯ
ಈ ನೈತಿಕತೆಯನ್ನು ಉಳಿಸಿಕೊಂಡಾಗಲೇ ಶಾಸನ ಸಭೆಯಲ್ಲಿ ಮಹಿಳಾ ಮೀಸಲಾತಿಗಾಗಿ ಆಗ್ರಹಿಸುವ ಶಕ್ತಿಯೂ ಹೆಚ್ಚಾಗುತ್ತದೆ. ಹಾಗೆಯೇ ಮೀಸಲಾತಿಯ ಕಾಯ್ದೆ ಜಾರಿಯಾಗಿ ಲೋಕಸಭೆ-ವಿಧಾನಸಭೆಗಳಿಗೆ ಆಯ್ಕೆಯಾಗುವ ಮಹಿಳೆಯರಿಗೆ ಹೋರಾಟದ ಬಲ ಹೆಚ್ಚಾಗುತ್ತದೆ. ದುರ್ಬಲ ಅಡಿಪಾಯದ ಮೇಲೆ ಕಟ್ಟುವ ಕಾಂಕ್ರೀಟ್‌ ಕಟ್ಟಡಗಳು ಯಾವ ಸಮಯದಲ್ಲಾದರೂ ಕುಸಿದುಬೀಳುವ ಸಾಧ್ಯತೆಗಳಿರುತ್ತವೆ. ಹಾಗೆಯೇ ತಳಮಟ್ಟದಲ್ಲಿ ಸಾಂಘಿಕ-ಸಾಂಸ್ಥಿಕ ಪ್ರಜಾಪ್ರಭುತ್ವದ ಅಡಿಪಾಯ ಗಟ್ಟಿಯಾಗದಿದ್ದರೆ, ಮೇಲ್‌ ಹಂತದ ಪ್ರಾತಿನಿಧಿಕ ಸಂರಚನೆಗಳೂ ಸಹ ಶಿಥಿಲವಾಗುತ್ತವೆ ನಿರರ್ಥಕವಾಗುತ್ತದೆ. ಮಹಿಳಾ ಸಮಾನತೆಗಾಗಿ ನಿರಂತರ ಹೋರಾಡುತ್ತಿರುವ ಸಂಘಟನೆಗಳು ಈ ವಾಸ್ತವವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ತಮ್ಮ ಕಾರ್ಯವೈಖರಿಯನ್ನು ಸರಿಪಡಿಸುವುದು ಅನಿವಾರ್ಯ.

ಮಹಿಳಾ ಮೀಸಲಾತಿಯು ಭಾರತದ ಮಹಿಳೆಯರ ಸಬಲೀಕರಣಕ್ಕೆ ಸೀಮಿತವಾಗದೆ ಸಮಾನತೆಯನ್ನು ಸಾಧಿಸಬೇಕಾದರೆ, ತಳಮಟ್ಟದಲ್ಲಿ ಕ್ರಿಯಾಶೀಲವಾಗಿರುವ ಎಲ್ಲ ಪುರೋಗಾಮಿ, ಸಂವಿಧಾನ ಬದ್ಧ ಸಂಘಟನೆಗಳೂ ಆಂತರಿಕ ಪರಿವರ್ತನೆಗೆ ಮುಂದಾಗಬೇಕು. ಮಹಿಳೆಯರು ನಾಯಕತ್ವದ ಸ್ಥಾನದಲ್ಲಿರುವುದೇ ಅಲ್ಲದೆ, ಪದಾಧಿಕಾರಿಗಳಲ್ಲಿ, ಸಮಾವೇಶ-ಸಮ್ಮೇಳನ-ವಿಚಾರ ಸಂಕಿರಣ ಮತ್ತಿತರ ಸಾರ್ವಜನಿಕ ವೇದಿಕೆಗಳಲ್ಲಿ, ಆಂತರಿಕ ಆಡಳಿತದಲ್ಲಿ, ಮಹಿಳೆಯರು ಇರುವಂತಾಗಬೇಕು. ಈ ಮನ್ವಂತರದ ಹಾದಿಯೇ ಎಲ್ಲರನ್ನೂ ಒಳಗೊಳ್ಳುವ (All Inclusive ) ಪ್ರಜಾಸತ್ತಾತ್ಮಕ ಸಮಾಜದ ನಿರ್ಮಾಣಕ್ಕೆ ಸುಭದ್ರ ಅಡಿಪಾಯವನ್ನು ಕಟ್ಟುವ ಹೆದ್ದಾರಿಯಾಗುತ್ತದೆ. ಗಾಂಧಿ, ಮಾರ್ಕ್ಸ್‌, ಅಂಬೇಡ್ಕರ್‌ , ಲೋಹಿಯಾ ಮೊದಲಾದವರ ಚಿತ್ರಪಟ, ಪ್ರತಿಮೆ, ಸ್ಮಾರಕ, ಗ್ರಂಥಗಳಿಂದಾಚೆಗೆ ನೋಡುವ ವಿಶಾಲ ದೃಷ್ಟಿಕೋನ ವರ್ತಮಾನದ ಅಗತ್ಯತೆಯಾಗಿದೆ.

ಆದ್ದರಿಂದ ಮಹಿಳಾ ಮೀಸಲಾತಿಯನ್ನು ಸಮಾನತೆಗೆ ಸಮೀಕರಿಸಿ ಮಾತನಾಡುವ ರಾಜಕೀಯ ನಾಯಕರು ಮತ್ತು ಬೌದ್ಧಿಕ ಚಿಂತಕರು , ದಲಿತ ಚಳುವಳಿಗಳು, ಎಡಪಕ್ಷಗಳು ಹಾಗೂ ಸಂವಿಧಾನಕ್ಕೆ ಬದ್ಧತೆ ತೋರುವ ಪ್ರತಿಯೊಬ್ಬರೂ ಸಹ ʼಸಮಾನತೆʼಯ ಪದಚ್ಛೇದ ಮಾಡಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಹೀಗೆ ತಳಮಟ್ಟದಲ್ಲಿ ವೈಚಾರಿಕ ಪ್ರಜ್ಞೆ ಬಲವಾದರೆ, ಮೇಲ್‌ ಮಟ್ಟದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ, ಅಲ್ಲಿರಬಹುದಾದ ಮಹಿಳಾ ಪ್ರತಿನಿಧಿಗಳ ದನಿಗೆ ಬಲ ಬರುತ್ತದೆ. ಇಲ್ಲವಾದರೆ ಈ ವ್ಯವಸ್ಥೆ ಎಲ್ಲವನ್ನೂ ನುಂಗಿಹಾಕಿ, ಚುನಾಯಿತ ಮಹಿಳೆಯರನ್ನೂ ಸಹ ಪಕ್ಷದ ವಿಪ್‌ಗಳಿಗೆ ಕಟ್ಟಿಹಾಕುವ ಮೂಲಕ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುತ್ತವೆ. ಮೀಸಲಾತಿಯ ಆಧಾರದಲ್ಲಿ ಚುನಾಯಿತರಾಗುತ್ತಿರುವ ದಲಿತ ಪ್ರತಿನಿಧಿಗಳಂತೆಯೇ ಮಹಿಳೆಯರೂ ಸಹ ಪಕ್ಷ ನಿಷ್ಠೆಯ ಸಂಕೋಲೆಗಳಲ್ಲಿ ಬಂಧಿಯಾಗುತ್ತಾರೆ.

(ಮುಂದಿನ ಭಾಗದಲ್ಲಿ ಮಹಿಳಾ ಮೀಸಲಾತಿಯ ರಾಜಕೀಯ ಆಯಾಮ )

Tags: ConstitutionDemocracyEconomicEqualityEqualityDebateGenderEqualityHumanRightsInclusivenessNaDiwakarOpinionArticlepatriarchypratidavaniReligiousFreedomSocialJusticeSocialReformWomenempowermentWomenEquality
Previous Post

ಗುಜರಾತ್ ವಿರುದ್ಧ ಆರ್‌ಸಿಬಿೆ ಭರ್ಜರಿ ಗೆಲುವು: ಪ್ಲೇಆಫ್‌ಗೆ ಇನ್ನಷ್ಟು ಬಾರಿ ಗೆಲ್ಲಬೇಕು ?

Next Post

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

Related Posts

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ
ಅಂಕಣ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

by ಪ್ರತಿಧ್ವನಿ
April 24, 2026
0

ನಾ ದಿವಾಕರ ಭಾಗ 1 ಸ್ವತಂತ್ರ ಭಾರತದ ಆಳ್ವಿಕೆಯ ವಾತಾವರಣಲ್ಲಿ ಹಾಗೂ ಸಾಮಾಜಿಕ ಸಂಕಥನಗಳಲ್ಲಿ ಸ್ಫಟಿಕ ಸ್ಪಷ್ಟವಾಗಿ ನಿರ್ವಚನೆಗೊಳಗಾಗದ ಒಂದು ಸಾಂವಿಧಾನಿಕ ಕಲ್ಪನೆ-ಆಶಯ ಎಂದರೆ ʼ ಸಮಾನತೆ...

Read moreDetails
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

April 20, 2026
Next Post
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada