ಕಳೆದ ಬಾರಿ ಸಚಿವ ಸ್ಥಾನ ಸಿಗದಿದ್ದಕ್ಕೆ ಬಂಡಾಯವೆದ್ದಿದ್ದ ಬಿಜೆಪಿ ಹಿರಿಯ ನಾಯಕ ಉಮೇಶ್ ಕತ್ತಿ, ಈ ಬಾರಿ ಸಚಿವ ಸ್ಥಾನ ಸಿಕ್ಕ ಬಳಿಕ ತಮಗೂ ಮುಖ್ಯಮಂತ್ರಿಯಾಗುವ ಬಯಕೆ ಇರುವುದನ್ನು ಬಹಿರಂಗಪಡಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್ ಕತ್ತಿ, “ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ. ಬಿಜೆಪಿಯಲ್ಲಿ 75 ವರ್ಷದವರೆಗೂ ಮುಖ್ಯಮಂತ್ರಿಯಾಗುವ ಅವಕಾಶ ಇದೆ. ಎಲ್ಲರಿಗೂ ಮುಖ್ಯಮಂತ್ರಿಯಾಗುವ ಆಸೆ ಇರುವ ಹಾಗೆಯೇ ನನಗೂ ಇದೆ” ಎಂದು ಹೇಳಿದ್ದಾರೆ.
“ಮುಖ್ಯಮಂತ್ರಿ ಯಡಿಯೂರಪ್ಪ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಂತಹ ವಿಶೇಷ ಜವಾಬ್ದಾರಿ ಕೊಟ್ಟಿದ್ದಾರೆ. ಈ ಖಾತೆ ಸಿಕ್ಕಿರುವುದಕ್ಕೆ ನನಗೆ ಸಂತೋಷವಿದೆ. ನನಗೆ ಶ್ರೀಗಳ ಆಶೀರ್ವಾದವಿದೆ. ಮುಂದಿನ ದಿನಗಳಲ್ಲಿ ಯಾವ ಸ್ಥಾನ ಸಿಕ್ಕರೂ ನಿಭಾಯಿಸುತ್ತೇನೆ.” ಎಂದು ಹೇಳಿದ್ದಾರೆ.
“ನಾನು ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಇಬ್ಬರು ಹಿರಿಯರಿದ್ದೀವಿ. ಆದರೆ, ಯತ್ನಾಳ್ ಅವರಿಗಿಂತ ನಾನು ಸೀನಿಯರ್, ಆದರೆ ಸದ್ಯ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ಆದರೂ, ಎಂಟು ಬಾರಿ ಶಾಸಕನಾಗಿದ್ದೀನಿ. ಒಂದು ದಿನ ತಾನು ಮುಖ್ಯಮಂತ್ರಿಯಾಗುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.
ಆ ಮೂಲಕ, ಒಂದು ವೇಳೆ ಯಡಿಯೂರಪ್ಪ ಅವರ ಸ್ಥಾನ ಬದಲಾವಣೆಯಾಗುವುದಿದ್ದರೆ, ಮುಖ್ಯಮಂತ್ರಿ ಸ್ಥಾನ ಪೈಪೋಟಿಯಲ್ಲಿ ಯಾನೂ ಇರುವುದಾಗಿ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಅದಾಗ್ಯೂ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗನ್ನು ಸಮರ್ಥಿಸಿರುವ ಕತ್ತಿ, ʼಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಈಗಲೂ ಇದೆ. ಮುಂದಕ್ಕೂ ಇರಲಿದೆ” ಎಂದಿದ್ದಾರೆ.