ಬೆಂಗಳೂರಿನ ವಿವಿ ಪುರಂನಲ್ಲಿ ಮಂಗಳವಾರ ನಡೆಯುವ ಬೆಳ್ಳಿರಥ ಜಾತ್ರಾ ಮಹೋತ್ಸವಕ್ಕೆ ಧರ್ಮ ಲೇಪನ ಅಂಟಿಕೊಂಡಿದೆ. ವಿವಿ ಪುರಂ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆಯಲ್ಲಿ ಕೇವಲ ಹಿಂದೂಗಳು ಮಾತ್ರ ವ್ತಾಪಾರ ಮಾಡಬೇಕು ಅಂತಾ ಆಗ್ರಹ ಮಾಡಿದ್ದರು. ಬಿಬಿಎಂಪಿ ಮುಖ್ಯ ಆಯುಕ್ತರಿಗೂ ಈ ಬಗ್ಗೆ ಮನವಿ ಕೊಡಲಾಗಿತ್ತು. ಆದರೆ ಸರ್ಕಾರದ ಕಡೆಯಿಂದ ಯಾವುದೇ ಆದೇಶ ಬಾರದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು, ಆಂತರಿಕ ಸಭೆ ನಡೆಸಿ, ಜಾತ್ರೆಯಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯ ಮಾಡಿದ್ದರು. ಆದ್ರೆ ಈ ಬಗ್ಗೆ ಯಾವುದೇ ಬದಲಾವಣೆ ಇಲ್ಲದ ಹಿನ್ನೆಲೆ ನಾಳೆ ಜಾತ್ರೆಯಲ್ಲಿ ಕಾರ್ಯಕರ್ತರು ಹೇಗೆ ಜನರಿಗೆ ಜಾಗೃತಿ ಮೂಡಿಸಬೇಕು. ಅನ್ಯ ಧರ್ಮೀಯರ ಅಂಗಡಿಗೆ ಹೋಗದಂತೆ ಜಾಗೃತಿ ಮೂಡಿಸಲು ಮುಂದಾಗಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸುಬ್ರಹ್ಮಣ್ಯ ಸ್ವಾಮಿ ಜಾತ್ರೆಗೆ ತಟ್ಟುತ್ತಾ ಧರ್ಮ ದಂಗಲ್ ?
ಹಿಂದೂ ಸಂಘಟನೆಗಳ ಆಂತರಿಕ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ನಾಳೆ ನಡೆಯುವ ಜಾತ್ರೆಯಲ್ಲಿ ಅನ್ಯಧರ್ಮೀಯರು ವ್ಯಾಪಾರ ಮಾಡಲು ಬಂದಾಗ, ಮುಸ್ಲಿಂರ ಅಂಗಡಿಗಳಲ್ಲಿ ವ್ಯಾಪಾರ ಮಾಡದಂತೆ ಹಿಂದೂಗಳಿಗೆ ಜಾಗೃತಿ ಮೂಡಿಸುತ್ತೇವೆ, ಮನೆ ಮನೆಗಳಿಗೂ ತೆರಳಿ ಹಿಂದೂಗಳಿಗೆ ಮನವಿ ಮಾಡುತ್ತೇವೆ ಅನ್ಯ ಧರ್ಮದವರ ಅಂಗಡಿಗಳಿಗೆ ಹೋಗದಂತೆ ಮನವಿ ಮಾಡುತ್ತಿದ್ದೇವೆ ಎಂದು ಭಜರಂಗದಳ ಮುಖಂಡ ತೇಜಸ್ ಗೌಡ ಹೇಳಿದ್ದಾರೆ. ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿಲ್ಲವಾದರೂ ದೇವಾಲಯದ ಎದುರಿನ ಜಾಗ ಬಿಬಿಎಂಪಿಯದ್ದು. ಹೀಗಾಗಿ ನಾವು ಬಿಬಿಎಂಪಿಗೆ ವಿಶೇಷ ಮನವಿ ಮಾಡಿದ್ದೆವು. ಮಂಗಳೂರು ಕುಕ್ಕರ್ ಸ್ಫೋಟ, ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆಗುತ್ತಿರೋ ಬಗ್ಗೆ ತಿಳಿಸಿ ಹೇಳಿದ್ದೆವು. ಆದರೂ ಬಿಬಿಎಂಪಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸುಬ್ರಹ್ಮಣ್ಯ ಸ್ವಾಮಿ ವಿಶೇಷ ಶಕ್ತಿ, ಶಕ್ತಿ ಕೇಂದ್ರದಲ್ಲಿ ಯಾವುದೇ ಗಲಾಟೆ ಮಾಡಲು ನಾವು ಇಚ್ಛಿಸುವುದಿಲ್ಲ. ನಾವು ಶಾಂತಿಯುತವಾಗಿ ಹಿಂದೂಗಳನ್ನು ಎಚ್ಚರಿಸೋ ಕೆಲಸ ಮಾಡುತ್ತೇವೆ ಅಷ್ಟೆ ಎಂದಿದ್ದಾರೆ.

ಮೌನಕ್ಕೆ ಶರಣಾದ ಆಡಳಿತ ಮಂಡಳಿ, ಬಿಜೆಪಿ ಶಾಸಕರು ಗರಂ
ಸುಬ್ರಮಣ್ಯ ಸ್ವಾಮಿ ಬೆಳ್ಳಿ ರಥೋತ್ಸವದಲ್ಲಿ ಅನ್ಯ ಧರ್ಮೀಯರ ವ್ಯಾಪಾರಕ್ಕೆ ಅನುಮತಿ ನೀಡುವ ವಿಚಾರದ ಬಗ್ಗೆ ಸುಬ್ರಹ್ಮಣ್ಯ ಸ್ವಾಮಿ ಆಡಳಿತ ಮಂಡಳಿ ಮೌನಕ್ಕೆ ಶರಣಾಗಿದೆ. ವ್ಯಾಪಾರಕ್ಕೆ ಅನುಮತಿ ನಿರಾಕರಣೆ ಬಗ್ಗೆಯೂ ಮೌನ ವಹಿಸಿದ್ದಾರೆ ಟ್ರಸ್ಟಿಗಳು. ಆದರೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್, ಹಿಂದೂ ಸಂಘಟನೆಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಾಳೆ ನಡೆಯಲಿರೋ ಸುಬ್ರಹ್ಮಣ್ಯ ಜಾತ್ರಾ ಮಹೋತ್ಸವದಲ್ಲಿ ಗಲಭೆಗೆ ಅವಕಾಶ ಇಲ್ಲ. ಹಾಗೇನಾದ್ರೂ ಗಲಭೆ ಮಾಡಲು ಮುಂದಾದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ವಿವಿ ಪುರಂನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಶಾಸಕರು, ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದೆಂಬ ಹಿಂದುಪರ ಸಂಘಟನೆಗಳ ಮನವಿ ಬಗ್ಗೆ ಮಾತನಾಡಿ, ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದೀನಿ. ಶಾಸಕ ಸ್ಥಾನದಲ್ಲಿ ಕುಳಿತ ಮೇಲೆ ನನಗೆ ಜಾತಿ, ಧರ್ಮದ ಬೇಧಭಾವ ಇಲ್ಲ, ಎಲ್ಲಾ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕಟುವಾಗಿಯೇ ಚಾಟಿ ಬೀಸಿದ್ದಾರೆ.
ನಾನು ಮನೆಯಲ್ಲಿ ಬ್ರಾಹ್ಮಣ, ಹೊರಗೆ ವಿಶ್ವಮಾನವ
ಜಾತ್ರೆಯಲ್ಲಿ ಎಲ್ಲಾ ಸಮುದಾಯಕ್ಕೂ ಅವಕಾಶ ಎಂದಿರುವ ಶಾಸಕ ಉದಯ್ ಗರುಡಾಚಾರ್, ನಾನು ಮನೆಯಲ್ಲಿ ಬ್ರಾಹ್ಮಣ ಮನೆಯಿಂದ ಆಚೆ ಬಂದರೆ ನಾನು ವಿಶ್ವ ಮಾನವ ಎಂದಿದ್ದಾರೆ. ದರ್ಗಾ, ಮಸೀದಿಗಳ ಮುಂದೆ ಹಿಂದುಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಆ ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ. ಕೆಲವು ಹಿಂದೂ ಕಾರ್ಯಕರ್ತರು ತರಲೆ ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಈ ರೀತಿ ಕಿರಿಕಿರಿ ಮಾಡುತ್ತಿದ್ದಾರೆ. ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ ಎಂದು ಹಿಂದೂ ಸಂಘಟನೆಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿ ಸಲವೂ ಪ್ರತಿಕ್ರಿಯೆ ನೀಡುತ್ತಿದ್ದ ಸರ್ಕಾರ, ಈ ಬಾರಿ ಮೌನಕ್ಕೆ ಶರಣಾಗಿದೆ. ನಾಳೆ ನಡೆಯುವ ಜಾತ್ರೆ ವೇಳೆ ಹಿಂದೂ ಮುಸಲ್ಮಾನರ ನಡುವೆ ಸಂಘರ್ಷ ಏರ್ಪಡುವ ಬಗ್ಗೆ ಪೊಲೀಸ್ ಇಲಾಖೆ ಭಾರೀ ಕಟ್ಟೆಚ್ಚರ ವಹಿಸಿದೆ.