ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್, ಕಾಂತಾರಾ ಚೆಲುವೆ ಸಪ್ತಮಿ ಗೌಡ ಜೋಡಿಯಾಗಿ ನಟಿಸುತ್ತಿರುವ ಕಾಳಿ ಚಿತ್ರವು ಸೆಟ್ಟೇರಿದೆ.
ನಗರದ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಚಿತ್ರತಂಡವು ಸರಳವಾಗಿ ಮುಹೂರ್ತ ನೆರವೇರಿಸಿಕೊಂಡಿದೆ.
ಚಿತ್ರಕ್ಕೆ ಹೆಬ್ಬುಲಿ ಕೃಷ್ಣ ಆಕ್ಷನ್ ಕಟ್ ಹೇಳುತ್ತಿದ್ದು ಅವರ ನಿರ್ಮಾಣ ಸಂಸ್ಥೆಯಾದ RRR ಬ್ಯಾನರ್ ನಡಿ ಅವರ ಪತ್ನಿ ಸ್ವಪ್ನ ಕೃಷ್ಣ ಬಂಡವಾಳ ಹೂಡುತ್ತಿದ್ದಾರೆ.

ಈಗಾಗಲೇ ಗಜಕೇಸರಿ, ಹೆಬ್ಬುಲಿ, ಪೈಲ್ವಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ನಿರ್ದೇಶಕನಾಗಿ ಸೈ ಎನ್ನಿಸಿಕೊಂಡಿರುವ ಕೃಷ್ಣ ನಿರ್ದೇಶನದ ನಾಲ್ಕನೇ ಚಿತ್ರ ಇದು. ಚಿತ್ರ 1990ರ ದಶಕದ ಕಾವೇರಿ ಗಲಭೆ ಸುತ್ತ ಸಾಗಲಿದ್ದು ಚಿತ್ರವು ಅಭಿಷೇಕ್ ಅಂಬರೀಶ್ ಜನುಮದಿನದಂದು ಘೋಷಣೆಯಾಗಿತ್ತು.
ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದು, ಛಾಯಾಗ್ರಾಹಕರಾಗಿ ಕರುಣಾಕರ್, ದೀಪು ಎಸ್ ಕುಮಾರ್ ಸಂಕಲನ, KGF ಖ್ಯಾತಿಯ ಚಂದ್ರಮೌಳಿ ಕಾಳಿ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.
2023ರಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.