ಸೆಪ್ಟೆಂಬರ್ 22 ರಂದು ಆರಂಭವಾಗಬೇಕಿರುವ ಜಾತಿ ಗಣತಿಯ (Caste census) ಕುರಿತು ಈಗಾಗಲೇ ಹಲವು ಆಕ್ಷೇಪ ಮತ್ತು ವಿರೋಧಗಳು ವ್ಯಕ್ತವಾಗಿತ್ತು. ಕ್ರಿಶ್ಚಿಯನ್ ಧರ್ಮಕ್ಕೆ (Christian) ಮತಾಂತರಗೊಂಡ (Conversion) ದಲಿತರು, ಗೌಡರು, ಲಿಂಗಾಯತರನ್ನು.. ಕ್ರಿಶ್ಚಿಯನ್ ಗೌಡ, ಕ್ರಿಶ್ಚಿಯನ್ ದಲಿತ ಅಥವಾ ಕ್ರಿಶ್ಚಿಯನ್ ಲಿಂಗಾಯತ ಎಂದು ಉಲ್ಲೇಖಿಸುವ ಕ್ರಮಕ್ಕೆ ವಿರೋಧ ಪಕ್ಷಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲೂ ತೀರ ವಿರೋಧ ವ್ಯಕ್ತವಾಗಿತ್ತು.

ಇದೀಗ ಈ ನಿರ್ಧಾರದಿಂದ ಹಿಂದೆ ಸರಿಯಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗಿದ್ದು, ಈ ವೇಳೆ ಬಹುತೇಕ ಸಚಿವರು.. ಕ್ರಿಶ್ಚಿಯನ್ ಕಲಂ ನಲ್ಲಿ ಹಿಂದೂ ಜಾತಿಗಳ ಹೆಸರು ಸೇರಿಸುವುದು ಸರಿಯಲ್ಲ.. ಇದ್ರಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ನಿರ್ಧಾರ ಕೈಬಿಡದಿದ್ದಲ್ಲಿ ಸರ್ಕಾರದ ಜಾತಿ ಸಮೀಕ್ಷೆ ವಿರುದ್ಧ ರಾಜ್ಯದ ಜನರಲ್ಲಿ ಬೇರೆ ರೀತಿಯ ಅಭಿಪ್ರಾಯಗಳು ಮೂಡಲಿದ್ದು, ಇದು ಸರ್ಕಾರಕ್ಕೆ ಡ್ಯಾಮೇಜ್ ಮಾಡಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ನಿರ್ಧಾರಿಂದ ಹಿಂದೆ ಸರಿಯಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.





