ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿಕೆ; ಹೈ ಕೋರ್ಟ್ನಿಂದ ಮೂರೂ ಪಕ್ಷಗಳಿಗೆ ಶಾಕ್

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿದ್ದು, ಚುನಾವಣೆಗಾಗಿ ಮೂರು ಪಕ್ಷಗಳು ತಮ್ಮದೇ ಸಿದ್ಧತೆ ಮಾಡಿಕೊಂಡಿದ್ದರ ಬೆನ್ನಲ್ಲೇ ಚುನಾವಣೆ ಮುಂದೂಡುವ ಕುರಿತಂತೆ ಹೈಕೋರ್ಟ್ ಆದೇಶ ನೀಡಿರುವುದು ದೊಡ್ಡಮಟ್ಟದ ಶಾಕ್ ನೀಡಿದೆ. ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ನೂತನ ಮೇಯರ್ ಆಯ್ಕೆಗೆ ಜೂ.11ರಂದು ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಪ್ರಮುಖವಾಗಿ ಮೇಯರ್ ಗದ್ದುಗೆ ಏರಲು ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಮಾತುಕತೆ ನಡೆದು, ಮೇಯರ್ ಸ್ಥಾನವನ್ನ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡುವ ಬಗ್ಗೆ ಮಾತುಕತೆ ನಡೆದಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ಎರಡೂ ಪಕ್ಷಗಳು ತಮ್ಮ ಪಕ್ಷದ ಪಾಲಿಕೆ ಸದಸ್ಯರಿಗೆ ವಿಪ್ ಸಹ ಜಾರಿ ಮಾಡಿತ್ತು.ಈ ಎಲ್ಲಾ ಬೆಳವಣಿಗೆ ನಡುವೆಯೇ ಚುನಾವಣೆ ಮುಂದೂಡುವ ಬಗ್ಗೆ ಗುರುವಾರ ಸಂಜೆ ಹೊರಬಿದ್ದ ಆದೇಶ, ಎಲ್ಲಾ ಕಾರ್ಪೋರೇಟರ್ಗಳು ಹಾಗೂ ಮೇಯರ್ ಸ್ಥಾನದ ಆಕಾಂಕ್ಷಿಗಳಿಗೆ ಶಾಕ್ ನೀಡಿದೆ. ಸದ್ದಿಲ್ಲದೆ ನಡೆದ ಈ ಬೆಳವಣಿಗೆ ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಪಕ್ಷದ ಹಿರಿಯರಿಗೆ ಮಾಹಿತಿ ನೀಡಿದ ಕೋರ್ಟ್ ಮೂಲಕ ಮೇಯರ್ ಚುನಾವಣೆಗೆ ಸ್ಟೇ ತಂದಿರುವ ಬಗ್ಗೆ ಸ್ಥಳೀಯ ಕಾಂಗ್ರೆಸ್ನಲ್ಲಿ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆ ಎದುರಾಗಿದೆ.

ಮೇಯರ್ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿಯಿರುವ ವೇಳೆ ಚುನಾವಣೆ ನಡೆಸದಂತೆ ಸ್ಟೇ ತಂದಿರುವ ಬಗ್ಗೆ ಸ್ಥಳೀಯ ಕಾಂಗ್ರೆಸ್ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಕ್ಷದ ವರಿಷ್ಟರು, ಸ್ಥಳೀಯ ನಾಯಕರಿಗೆ ಕಿಂಚಿತ್ತು ಸುಳಿವು ನೀಡದೆ, ಕೊನೆಯಗಳಿಗೆಯಲ್ಲಿ ರಾಜಕೀಯ ಧಾಳ ಉರುಳಿಸಿ ಯಶಸ್ವಿಯಾದ ಮೈಸೂರಿನ ಕಾಂಗ್ರೆಸ್ ಮುಖಂಡ ಯಾರು ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನು ಕಾಡುತ್ತಿದೆ.ಪಕ್ಷದ ಪ್ರಮುಖ ನಾಯಕರು ಮೇಯರ್ ಚುನಾವಣೆಗೆ ತಯಾರಿ ಮಾಡಿಕೊಂಡು, ಮೇಯರ್ ಅಭ್ಯರ್ಥಿ ಆಯ್ಕೆಯಲ್ಲಿ ತೊಡಗಿದ್ದರು. ಪಕ್ಷದಲ್ಲಿ ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದ ಬೆನ್ನಲ್ಲೇ, ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರು ತಮ್ಮ ಮಾಸ್ಟರ್ ಪ್ಲ್ಯಾನ್ ನಿಂದ ಸ್ವಪಕ್ಷದವರನ್ನೇ ಬೆಚ್ಚಿ ಬೀಳಿಸಿದ್ದಾರೆ. ಆ ಮೂಲಕ ಹೈಕಮಾಂಡ್ಗೆ ತನ್ನ ವರ್ಚಸ್ಸು ತೋರಿಸಿಕೊಟ್ಟಿರುವ ಕೈ ನಾಯಕ, ಕಳೆದ ಬಾರಿಯ ಮೇಯರ್ ಚುನಾವಣೆ ವೇಳೆ ತಮಗಾದ ಹಿನ್ನಡೆಗೆ ತಿರುಗೇಟು ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಮೇಯರ್ ಚುನಾವಣೆಗೆ ಸ್ಟೇ ತಂದಿರುವುದರ ಹಿಂದಿರುವ ಸ್ಥಳೀಯ ನಾಯಕ, ಮೇಯರ್ ಚುನಾವಣೆ ಸಂಬಂಧ ನಡೆದ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದರು. ಇಲ್ಲೆಲ್ಲೂ ಸ್ಟೇ ತರುವ ಬಗ್ಗೆ ಪ್ರಸ್ತಾಪಿಸದ ನಾಯಕ,ತೆರೆಮರೆಯಲ್ಲಿ ತಮ್ಮ ಶಿಷ್ಯನಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ,ನ್ಯಾಯಾಲಯದಿಂದ ಸ್ಟೇ ತರುವುದರಲ್ಲಿ ಯಶಸ್ವಿಯಾಗಿದ್ದಾರೆ

ಜೂ.11ರಂದು ಮೇಯರ್ ಚುನಾವಣೆ ನಡೆಸದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದ ಕಾಂಗ್ರೆಸ್ ಕಾರ್ಪೋರೇಟರ್ ಪ್ರದೀಪ್ ಚಂದ್ರ ಇದೀಗ ಕೈನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಕ್ಷಕ್ಕೆ ಮಾಹಿತಿ ನೀಡದೆ ಕೋರ್ಟ್ ಹೋಗಿ ಸ್ಟೇ ತಂದ ವಿಚಾರವಾಗಿ ಸೋಕಾಸ್ ನೋಟಿಸ್ ನೀಡಿದ್ದು, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಶಿಸ್ತು ಕ್ರಮಕೈಗೊಳ್ಳುವುದಾಗಿ ನೋಟಿಸ್ ಜಾರಿ ಮಾಡಲಾಗಿದೆ.ಅಲ್ಲದೇ ಮೂರು ದಿನದೊಳಗೆ ನೋಟಿಸ್ ಗೆ ಉತ್ತರ ನೀಡದಿದ್ದಲ್ಲಿ ಕಾನೂನಿನ ಅಡಿಯಲ್ಲಿ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ನಡುವೆ ಮೇಯರ್ ಚುನಾವಣೆಗೆ ಸ್ಟೇ ತಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಪಾಲಿಕೆ ಮೇಯರ್ ಚುನಾವಣೆ ರದ್ದು ವಿಚಾರ, ನಮ್ಮ ಅರಿವಿಗೆ ಬರದೆ ನಡೆದಿದೆ. ಈ ಬಗ್ಗೆ ಮಾಹಿತಿ ಪಡೆಯಲು ನಗರಾಧ್ಯಕ್ಷ ಆರ್.ಮೂರ್ತಿ ಅವರಿಗೆ ತಿಳಿಸಿದ್ದೇನೆ. ಅಲ್ಲದೇ ಈ ಬಗ್ಗೆ ರಾಜ್ಯ ನಾಯಕರಿಗೂ ಮಾಹಿತಿ ಕೊಟ್ಟಿದ್ದೇನೆ ಎಂದಿದ್ದಾರೆ. ಮೇಯರ್ ಚುನಾವಣೆ ಮುಂದೂಡಿರುವ ಹಿನ್ನೆಲೆಯಲ್ಲಿ ಹಂಗಾಮಿ ಮೇಯರ್ ಆಗಿರುವ ಅನ್ವರ್ ಬೇಗ್ ಅವರಿಗೆ ಮತ್ತಷ್ಟು ದಿನಗಳ ಕಾಲ ಮೇಯರ್ ಚೇಂಬರ್ ನಲ್ಲಿ ಮಿಂಚುವ ಅದೃಷ್ಟ ಸಿಕ್ಕಿದೆ. ಕಳೆದ ಬಾರಿ ನಡೆದ ಮೇಯರ್, ಉಪ-ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ನ ಅನ್ವರ್ ಬೇಗ್ ಉಪ ಮೇಯರ್ ಆಗಿ ಆಯ್ಕೆಯಾಗಿದ್ದರು.ಈ ನಡುವೆ ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ಅನ್ವರ್ ಬೇಗ್ ಅವರು ಹಂಗಾಮಿ ಮೇಯರ್ ಆಗಿ ಪಾಲಿಕೆಯ ಅಧಿಕಾರದ ಗದ್ದುಗೆ ಏರಿದ್ದರು.

ತಮ್ಮ ಕಾರ್ಪೋರೇಟರ್ ಸ್ಥಾನವನ್ನು ಕೋರ್ಟು ರದ್ದು ಪಡಿಸಿದ ಕೂಡಲೇ ರುಕ್ಮಿಣಿ ಮಾದೇ ಗೌಡ ಅವರು ತಮ್ಮ ವಕೀಲರೊಂದಿಗೆ ಚರ್ಚಿಸಿ ರಾಜ್ಯ ಹೈ ಕೋರ್ಟಿನ ಆದೇಶದ ವಿರುದ್ದ ಸುಪ್ರೀಂ ಕೋರ್ಟಿಗೆ ಅಪೀಲು ಹೋಗುವ ಕುರಿತು ಆಶಯ ವ್ಯಕ್ತಪಡಿಸಿದ್ದರು.ಇದು ಅವರಿಗೆ ಅನಿವಾರ್ಯ ಕೂಡ ಆಗಿತ್ತು. ನಂತರ ಸುಮ್ಮನಾಗಿದ್ದರು.ಕೋರ್ಟು ವಾರ್ಡ್ ನಂಬರ್ 36 ರಲ್ಲಿ ಮರುಚುನಾವಣೆಯ ಆದೇಶ ಮಾಡಿದೆ. ಆದರೆ ಮರುಚುನಾವಣೆ ನಡೆದರೂ ಕೂಡ ರುಕ್ಮಿಣಿ ಅವರು ಗೆಲ್ಲುವ ಸಾಧ್ಯತೆ ಕಡಿಮೆ ಇದೆ.ಒಂದು ವೇಳೆ ಗೆದ್ದರೂ ಕೂಡ ಮೇಯರ್ ಪಟ್ಟವೇನೂ ಸಿಗುವುದಿಲ್ಲ.ಏಕೆಂದರೆ ಈಗಾಗಲೇ ಬೇರೆ ಮೇಯರ್ ಆಯ್ಕೆ ಆಗಿರುತ್ತಾರೆ. ಅವರನ್ನು ಇಳಿಸಿ ಇವರಿಗೆ ಪಟ್ಟ ಕೊಡಲು ಹೈಕಮಾಂಡ್ ಒಪ್ಪುವುದಿಲ್ಲ. ಹೀಗಾಗಿ ರುಕ್ಮಿಣಿ ಅವರು ಮತ್ತೆ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ ಎಂಬ ವದಂತಿ ದಟ್ಟವಾಗಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...