ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಹಾಗೂ ಪವರ್ ಶೇರಿಂಗ್ ಚರ್ಚೆ ಮತ್ತೆ ಜೋರಾಗಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, “ಹೈಕಮಾಂಡ್ ಹೇಳಿದರೆ ನಾನು 5 ವರ್ಷವೂ ಮುಖ್ಯಮಂತ್ರಿ ಆಗಿರುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ನಾನು ಹೈಕಮಾಂಡ್ ಮಾತನ್ನೇ ಕೇಳುತ್ತೇನೆ. ನೀವು ಎಷ್ಟು ಬಾರಿ ಇದೇ ಪ್ರಶ್ನೆ ಕೇಳಿದರೂ ನನ್ನ ಉತ್ತರ ಒಂದೇ – ಹೈಕಮಾಂಡ್ ತೀರ್ಮಾನ” ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
“5 ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತದೆ. ನೀವೇ ಮುಖ್ಯಮಂತ್ರಿ ಆಗಿ ಮುಂದುವರಿಯಿರಿ ಎಂದು ಹೈಕಮಾಂಡ್ ಹೇಳಿದರೆ ನಾನು ಇರುತ್ತೇನೆ. ಬೇರೆ ನಾಯಕರು ಏನು ಮಾತನಾಡುತ್ತಾರೆ ಎಂಬುದು ಅವರ ವೈಯಕ್ತಿಕ ಅಭಿಪ್ರಾಯ” ಎಂದು ಹೇಳಿದ್ದಾರೆ.

ಇದೇ ವೇಳೆ ದೆಹಲಿ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ, “ರಾಹುಲ್ ಗಾಂಧಿ ಇನ್ನೂ ನನ್ನನ್ನು ದೆಹಲಿಗೆ ಕರೆದಿಲ್ಲ. ನಾನು ಕೂಡ ಅಪಾಯಿಂಟ್‌ಮೆಂಟ್ ಕೇಳಿಲ್ಲ. ಅವರು ಕರೆದರೆ ಮಾತ್ರ ಹೋಗುತ್ತೇನೆ” ಎಂದು ತಿಳಿಸಿದ್ದಾರೆ.ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಬಗ್ಗೆ ಚರ್ಚೆಯಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಸಭೆ ನಿಗದಿಯಾಗದೇ ಅಜೆಂಡಾ ಹೇಗೆ ಗೊತ್ತಾಗುತ್ತದೆ? ಸದ್ಯಕ್ಕೆ ದೆಹಲಿ ಪ್ರವಾಸದ ಯಾವುದೇ ಯೋಜನೆ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಕುರಿತ ಚರ್ಚೆ ನಡುವೆ ಸಿದ್ದರಾಮಯ್ಯ ನೀಡಿರುವ ಈ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.






