ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿರುವುದಾಗಿ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿಕೆ ಸರ್ಕಾರದಲ್ಲಿ ಕಿಚ್ಚು ಹಚ್ಚಿದೆ. ಲೋಕಸಭೆ ಚುನಾವಣೆ ಹೊತ್ತಲ್ಲೇ ಹೇಳಿಕೆ ನೀಡಿರುವುದು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿದೆ. ಸದ್ಯ ಈ ವಿಚಾರವಾಗಿ ಯಾವ ಹೈಕಮಾಂಡ್ನಿಂದಲೂ ನನಗೆ ನೋಟಿಸ್ ಬಂದಿಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಲಿಂಗಾಯತರಿಗೆ ಕೈ ಸರ್ಕಾರದಲ್ಲಿ ನಿಜಕ್ಕೂ ಪ್ರಾತಿನಿಧ್ಯ ಸಿಗ್ತಿಲ್ವಾ..?
ಲೋಕಸಭಾ ಚುನಾವಣೆ ಸಮಯದಲ್ಲೇ “ಕೈ”ಗೆಶ್ಯಾಮನೂರು ಬಿಗ್ ಶಾಕ್..!
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳೂ ಕಳೆದಿಲ್ಲ. ಆಗಲೇ ಬಹಿರಂಗ ಹೇಳಿಕೆ ನೀಡುವ ಮೂಲಕ ಸರಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಅವರ ಕಿತ್ತಾಟ ಗಮನಿಸಿದರೆ; 1989ರ ರಾಜಕೀಯ ಸನ್ನಿವೇಶ ನೆನಪಿಸುತ್ತಿದೆ. ಕಾಂಗ್ರೆಸ್ನವರಿಗೆ ಅತ್ಯಧಿಕ ಬಹುಮತ ಅರಗಿಸಿಕೊಳ್ಳುವ ಶಕ್ತಿಯೇ ಇಲ್ಲ ಎನ್ನುವುದನ್ನು ರುಜುವಾತು ಪಡಿಸುತ್ತಿದ್ದಾರೆ. ಆಗ ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗಿತ್ತು. ಕಾಂಗ್ರೆಸ್ ಪಕ್ಷದಿಂದ 178 ಶಾಸಕರು ಆಯ್ಕೆಯಾಗಿದ್ದರು. ಸುಭದ್ರ ಸರಕಾರ ಅಸ್ತಿತ್ವಕ್ಕೆ ಬಂತು ಎಂದೇ ಭಾವಿಸಿದ್ದರು. ಲಿಂಗಾಯತರು ಸೇರಿದಂತೆ ಎಲ್ಲಾ ಸಮುದಾಯದವರ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ದೊರಕಿತ್ತು. ಜನತಾ ಪರಿವಾರದ ಒಳಜಗಳದಿಂದ ಬೇಸತ್ತ ಕರ್ನಾಟಕದ ಜನತೆ ‘ಕಿತ್ತಾಟ’ವಿಲ್ಲದ ಸರಕಾರವನ್ನು ಬಯಸಿದ್ದರು. ಅತ್ಯುತ್ತಮ ಆಡಳಿತ ನೀಡಿ ಒಗ್ಗಟ್ಟು ಪ್ರದರ್ಶಿಸಿದ್ದರೆ ಮುಂದಿನ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವೇ ಜಯಭೇರಿ ಬಾರಿಸುತ್ತಿತ್ತು. ಕೇವಲ 11 ತಿಂಗಳಿಗೇ ಮುಖ್ಯಮಂತ್ರಿ ವೀರೇಂದ್ರ ಪಾಟಿಲರನ್ನು ಪದಚ್ಯುತಗೊಳಿಸಲಾಯಿತು. ಆನಂತರ ಬಂದ ಎಸ್. ಬಂಗಾರಪ್ಪ ಅವರನ್ನು ಉಳಿದ ಅವಧಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಿದ್ದರೆ ಜನತೆಯ ಪ್ರೀತಿ ವಿಶ್ವಾಸ ಗಳಿಸುವ ಅವಕಾಶಗಳಿದ್ದವು. ಎರಡು ವರ್ಷಗಳ ನಂತರ ಎಸ್. ಬಂಗಾರಪ್ಪ ಅವರನ್ನ್ನೂ ಸ್ಥಾನಪಲ್ಲಟಗೊಳಿಸಲಾಯಿತು. ಮೂರನೆಯ ಮುಖ್ಯಮಂತ್ರಿ ಆಗಿ ಬಂದ ವೀರಪ್ಪ ಮೊಯ್ಲಿ ಅವರು ಎಷ್ಟೇ ಒಳ್ಳೆಯದು ಮಾಡಲು ಯತ್ನಿಸಿದರೂ ‘ಡ್ಯಾಮೇಜ್ ಕಂಟ್ರೋಲ್’ ಮಾಡಲು ಸಾಧ್ಯವಾಗಲೇ ಇಲ್ಲ. ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದರಿಂದ ಲಿಂಗಾಯತರು ಕಾಂಗ್ರೆಸ್ನಿಂದ ದೂರವಾದರು. ಎಸ್. ಬಂಗಾರಪ್ಪನವರಿಗೆ ಡಿಸ್ಟರ್ಬ್ ಮಾಡಿದ್ದರಿಂದ ಅವರ ಅಭಿಮಾನಿಗಳು ಕೆಸಿಪಿ ಭಾಗವಾದರು. ಈ ಎಲ್ಲಾ ಬೆಳವಣಿಗೆಯ ಒಟ್ಟು ಪರಿಣಾಮ; 1994ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟವಾಯಿತು. ಜನತಾದಳ ಅಧಿಕಾರ ಹಿಡಿಯಿತು.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 135 ಶಾಸಕರು ಆಯ್ಕೆಯಾಗಿದ್ದಾರೆ. ಇದು ಅತ್ಯಧಿಕ ಬಹುಮತವೇ. ಬಿಜೆಪಿ; ದುರಾಡಳಿತ ಮತ್ತು ಆಂತರಿಕ ಕಚ್ಚಾಟದಿಂದ 66 ಸ್ಥಾನ ಪಡೆದು ಬೀದಿಗೆ ಬಂದು ನಿಂತಿದೆ. ಹಾಗೆ ನೋಡಿದರೆ; ಈ ಬಾರಿಯ ಗೆಲುವು ಕರ್ನಾಟಕ ಜನತೆಯದು. ಅಧಿಕಾರ ಹಿಡಿದ ಕಾಂಗ್ರೆಸ್ ಮುಖಂಡರು ಹಿಂದಿನ ತಪ್ಪುಗಳಿಂದ ಪಾಠ ಕಲಿತು ಅತ್ಯಂತ ಸಮಚಿತ್ತದಿಂದ ಆಡಳಿತ ನಡೆಸಬೇಕಿತ್ತು. 2013ರಿಂದ 2018ರವರೆಗೆ ಅತ್ಯುತ್ತಮ ಆಡಳಿತ ನೀಡಿದ್ದ ಸಿದ್ದರಾಮಯ್ಯನವರು ಅಪಸ್ವರಕ್ಕೆ ಆಸ್ಪದವಾಗದಂತೆ ಕಾರ್ಯನಿರ್ವಹಿಸಿದ್ದರು. ಆಗಲೂ ಬಿ.ಕೆ. ಹರಿಪ್ರಸಾದ್, ಶಾಮನೂರು ಶಿವಶಂಕರಪ್ಪ, ಬಸವರಾಜ ರಾಯರೆಡ್ಡಿ, ಬಿ. ಆರ್. ಪಾಟೀಲ, ಎಚ್. ವಿಶ್ವನಾಥರಂತಹ ಪಾತ್ರಧಾರಿಗಳಿದ್ದರು. ಆಗ ಬಿ.ಕೆ. ಹರಿಪ್ರಸಾದ್ ಅವರು ಒಮ್ಮೆ ಕೂಡಾ ಬಾಯಿತಪ್ಪಿಯೂ ‘‘ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ನನ್ನ ಶ್ರಮವೂ ಇದೆ’’ ಎಂದು ಹೇಳಿಕೊಂಡಿರಲಿಲ್ಲ.
ಹಿಂದುಳಿದ ಸಮುದಾಯಕ್ಕೆ ಸೇರಿರುವ ಬಿ.ಕೆ. ಹರಿಪ್ರಸಾದ್ರವರು ಸಹಜವಾಗಿಯೇ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿರುತ್ತಾರೆ. ಆಗ ಮೊದಲ ಬಾರಿಗೆ ರಚಿಸಿದ ಸಚಿವ ಸಂಪುಟದಲ್ಲಿ ಬಸವರಾಜ ರಾಯರೆಡ್ಡಿಯವರಿಗೆ ಸ್ಥಾನ ಸಿಕ್ಕಿರಲಿಲ್ಲ. ಹಾಗಂತ ರಾಯರೆಡ್ಡಿ ‘ಭಿನ್ನ’ಮಾತು ಆಡಿರಲಿಲ್ಲ. ಬಿ.ಆರ್. ಪಾಟೀಲರಂತೂ ಕೆಜೆಪಿಯಿಂದ ಶಾಸಕರಾಗಿ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದರಿಂದ ‘ಸಿಟ್ಟು’ ಮಾಡಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ. ಆಗಲೂ ಅಧಿಕಾರಿಗಳಿದ್ದರು, ಶಾಮನೂರು ಶಿವಶಂಕರಪ್ಪ ವೀರಶೈವ ಮಹಾಸಭಾ ಭಾಗವಾಗಿದ್ದರು. ಆದರೆ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಿದೆ ಎಂದು ಒಮ್ಮೆಯೂ ಹೇಳಿರಲಿಲ್ಲ. ಹಾಗೆ ನೋಡಿದರೆ ಆಗ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ಮಾತ್ರ ದೊರೆತಿತ್ತು. ಆಗ ಸಿದ್ದರಾಮಯ್ಯನವರಿಗೆ ಎಚ್. ವಿಶ್ವನಾಥ್ ತಲೆನೋವು ಆಗಿದ್ದರು. ಆಗಾಗ ಸರಕಾರದ ವಿರುದ್ಧ ಚಾಟಿ ಬೀಸುತ್ತಿದ್ದರು. 2014ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಸೋತ ಮೇಲಂತೂ ವಿಶ್ವನಾಥ್ ನೇರ ನಿಷ್ಠುರ ಮಾತುಗಳು ಪ್ರಖರವಾಗಿದ್ದವು.
ಕಾಂಗ್ರೆಸ್ನ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರ ಅಸಮಾಧಾನವನ್ನು ತಣಿಸುವ ಜವಾಬ್ದಾರಿಯನ್ನು ಸಚಿವರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ವಹಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಕರೆದಿದ್ದ ಕಾಂಗ್ರೆಸ್ನ ಸಚಿವರು ಹಾಗೂ ಶಾಸಕರ ಔತಣಕೂಟದಲ್ಲಿ ಹಲವಾರು ಮಹತ್ವದ ವಿಚಾರಗಳು ಚರ್ಚೆಯಾಗಿವೆ. ಅದರಲ್ಲಿ ಶ್ಯಾಮನೂರು ಶಿವಶಂಕರಪ್ಪ ನೀಡಿರುವ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂಬ ಹೇಳಿಕೆ ಪ್ರಮುಖವಾಗಿ ವಿಮರ್ಶೆಗೆ ಒಳಗಾಗಿದೆ.
ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಯಾಮನೂರು ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮನ್ನೇ ಗುರಿಯಾಗಿಸಿಕೊಂಡು ಮಾಡುತ್ತಿರುವ ಟೀಕೆಗೆ ಸಂಪುಟದ ಸಚಿವರುಗಳು ಮೌನ ಸಮ್ಮತಿ ವ್ಯಕ್ತಪಡಿಸುತ್ತಿದ್ದಾರೆ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿ.ಕೆ.ಹರಿಪ್ರಸಾದ್ ಅವರು ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡಿಲ್ಲ. ಅವರ ಟೀಕೆಗಳು ಬೇರೆಯ ಸ್ವರೂಪದಲ್ಲಿರುತ್ತವೆ. ಆದರೆ ಶ್ಯಾಮನೂರು ಶಿವಶಂಕರಪ್ಪ ಅವರು ಸಂಪುಟದಲ್ಲಿ ಸಚಿವರಾಗಿದ್ದವರು, ಹಿರಿಯ ನಾಯಕರು, ಶಾಸಕರಾಗಿ ಸುದೀರ್ಘ ಅನುಭವ ಹೊಂದಿದ್ದಾರೆ. ಆಡಳಿತ ಯಂತ್ರ ಹೇಗೆ ಕೆಲಸ ಮಾಡುತ್ತದೆ ಎಂಬ ಮಾಹಿತಿ ಅವರಿಗಿದೆ. ಅಂತವರು ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಬೇಕಿರಲಿಲ್ಲ ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಯಾರಿಗಾದರೂ ತೊಂದರೆಯಾಗಿದ್ದರೆ ಅದನ್ನು ನೇರವಾಗಿ ತಮ್ಮ ಬಳಿ ಚರ್ಚೆ ಮಾಡಬಹುದಿತ್ತು. ಎಲ್ಲರ ಮಾತನ್ನೂ ಕೇಳಲು ತಾವು ಸಿದ್ಧರಿದ್ದು, ಯಾರನ್ನೂ ನಿರ್ಲಕ್ಷಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ನಾಯಕರುಗಳ ಟೀಕೆಗಳು ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಹಾನಿ ಉಂಟುಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರಬೇಕು ಎಂದು ಹೇಳಿದ್ದಾರೆ.
ಇಂತಹ ವಿವಾದಾತ್ಮಕ ಹೇಳಿಕೆ ಕೇಳಿಬಂದ ಸಂದರ್ಭದಲ್ಲಿ ಸಚಿವರು ತಕ್ಷಣ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಬೇಕು. ಶ್ಯಾಮನೂರು ಅವರ ಹೇಳಿಕೆಗೆ ಶಾಸಕರಾದ ಬಸವರಾಜರಾಯರೆಡ್ಡಿ ಅವರು ಪತ್ರಿಕಾಗೋಷ್ಠಿ ನಡೆಸಿ, ಸ್ಪಷ್ಟನೆ ನೀಡಿದ್ದಾರೆ. ಉಳಿದಂತೆ ಎಲ್ಲಾ ಸಚಿವರೂ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಪುಟದಲ್ಲಿ 8 ಮಂದಿ ಲಿಂಗಾಯತ ಸಮುದಾಯ ಸಚಿವರಿದ್ದಾರೆ. ಶ್ಯಾಮನೂರು ಶಿವಶಂಕರಪ್ಪ ಅವರು ಹೇಳಿಕೆ ನೀಡಿದ ಬಳಿಕ ಯಾರೂ ಅವರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿಲ್ಲ. ಇದು ಬೇರೆ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಲಿದೆ. ಮುಂದಿನ ದಿನಗಳಲ್ಲಿ ಸಚಿವರು ಜಾಗರೂಕರಾಗಿರಬೇಕು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರತಿಯೊಂದು ವಿಷಯವೂ ಸೂಕ್ಷ್ಮ ಹಾಗೂ ಸಂಕೀರ್ಣವಾಗಿದ್ದು, ನಾವು ಕಾಲಕಾಲಕ್ಕೆ ಅದಕ್ಕೆ ಪ್ರತಿಕ್ರಿಯಿಸದೇ ಇದ್ದರೆ ರಾಜಕೀಯವಾಗಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಷ್ಟೆಲ್ಲಾ ರಾಜಕೀಯ ಅಸಮಾಧಾನಕ್ಕೆ ಕಾರಣವಾಗಿರುವ ಶ್ಯಾಮನೂರು ಅವರ ಹೇಳಿಕೆಗಳಿಗೆ ಪರೋಕ್ಷವಾಗಿ ಎಲ್ಲಾ ಶಾಸಕರುಗಳು ಸಮ್ಮತಿಸುತ್ತಿದ್ದಾರಾ ಎನ್ನುವ ಅನುಮಾನ ಕೆಲವೊಂದೆಡೆ ಆದ್ರೆ ಶಾಮನೂರು ಅವರ ಹೇಳಿಕೆಯಿಂದ ಕೈ ಪಾಳಯದಲ್ಲಿ ಇದೀಗ ಜಾತಿವಾರು ರಾಜಕೀಯದ ಅಸಮಾದಾನ ಶುರುವಾಗಿದೆ ಎನ್ನುವುದು ಖಚಿತವಾಗುತ್ತಿದೆ.