
ಬೆಂಗಳೂರಿಗೆ ವಕ್ಕರಿಸಿದ ಘಜ್ನಿ, ಘೋರಿ!!
ಅಂದು ದೇಶ ಒಡೆದ ಕಾಂಗ್ರೆಸ್, ಇಂದು ಕೆಂಪೇಗೌಡರ ಬೆಂಗಳೂರನ್ನು ಒಡೆಯುತ್ತಿದೆ!!
ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ
ಲೂಟಿಗೆ 7 ದಾರಿ ಹುಡುಕುತ್ತಿರುವ ಬೆಂಗಳೂರು ಘಜ್ನಿ, ಘೋರಿ!!

ಬೆಂಗಳೂರು: ಬಿಬಿಎಂಪಿಯನ್ನು ಏಳು ಭಾಗ ಮಾಡುವುದಕ್ಕೆ ಹೊರೆಟಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹರಿಹಾಯ್ದಿದ್ದಾರೆ.
ಸಂಪದ್ಭರಿತ ಬೆಂಗಳೂರು ನಗರವನ್ನು ಲೂಟಿ ಮಾಡಲು ಈಗೊಬ್ಬ ಘಜ್ನಿ, ಘೋರಿ ವಕ್ಕರಿಸಿದ್ದಾನೆ. ಅವನು ನಗರದ ಲೂಟಿಗೆ 7 ದಾರಿ ಹುಡುಕುತ್ತಿದ್ದಾನೆ!! ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಬಿಬಿಎಂಪಿಯನ್ನು ಛಿದ್ರ ಮಾಡುವ ಸರಕಾರದ ನಡೆಯನ್ನು ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಾರೆ.

ಹೋಳು ಮಾಡವುದು, ಒಡೆದಾಳುವುದರಲ್ಲಿ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಸಾಟಿ!! 75 ವರ್ಷದಿಂದ ಇದನ್ನೇ ಮಾಡಿದೆ, ಮುಂದುವರಿಸಿದೆ.
ಕಾಂಗ್ರೆಸ್ ನೀತಿಯೇ Divide and Rule (ಒಡೆದು ಅಳುವುದು). ಅಂದು ಅಖಂಡ ಭಾರತವನ್ನು ಹೋಳು ಮಾಡಿತು! ಇಂದು ಬೆಂಗಳೂರು ಮಹಾನಗರವನ್ನು ಹೋಳು ಮಾಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ನಾಡಪ್ರಭು ಕೆಂಪೇಗೌಡರ ಪರಂಪರೆಯನ್ನು ಬೇರುಸಹಿತ ಹಾಳು ಮಾಡುವುದೇ ಕಾಂಗ್ರೆಸ್ ಸರಕಾರದ ದುರಿದ್ದೇಶವಾಗಿದೆ. ಇವರಿಗೆ ಗ್ರೇಟರ್ ಬೆಂಗಳೂರು ಎನ್ನುವುದು ಹೆಸರಿಗಷ್ಟೇ. ಲೂಟರ್ ಉದ್ದೇಶ ಕೊಳ್ಳೆ ಹೊಡೆಯುವುದಷ್ಟೇ ಎಂದಿರುವ ಅವರು ಲೂಟರ್ ಯಾರು ಎಂಬುದನ್ನು ಹೇಳಿಲ್ಲ, ಅದಕ್ಕೆ ಅವರು ಯಾರ ಹೆಸರನ್ನೂ ತೆಗೆದುಕೊಂಡಿಲ್ಲ.
ಬಿಬಿಎಂಪಿ ವಿಭಜನೆ ಅಧಿಕಾರ, ಅಭಿವೃದ್ಧಿ ವಿಕೇಂದ್ರೀಕರಣವಲ್ಲ, ಇದು ಲೂಟಿಯ ವಿಕೇಂದ್ರೀಕರಣ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು; ಲೂಟಿಕೋರರಾದ ಮಹಮ್ಮದ್ ಘಜ್ನಿ, ಮೊಹಮದ್ ಘೋರಿ ಸಂಪದ್ಭರಿತ ಭಾರತವನ್ನು ಲೂಟಿಗೈದರು. ಬೆಂಗಳೂರಿಗೆ ಈಗೊಬ್ಬ ಘಜ್ನಿ, ಘೋರಿ ವಕ್ಕರಿಸಿದ್ದಾನೆ. ಲೂಟಿಗೆ 7 ದಾರಿ ಹುಡುಕುತ್ತಿದ್ದಾನೆ ಎಂದಿದ್ದಾರೆ.
ಅಲ್ಲದೆ, ಏಳು ಪಾಲಿಕೆ ಹಾಳು ಪಾಲಿಕೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.