ಹಾಸನ ಸೇರಿದಂತೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ವಿಡಿಯೋ ಹಿಂದಿನ ಮಾಸ್ಟರ್ ಮೈಂಡ್ ಎಂದು ಆರೋಪ ಮಾಡಲಾಗಿತ್ತು. ಇದೀಗ ಬಿಜೆಪಿ ಕೊರಳಿಗೆ ಸುತ್ತಿಕೊಂಡಿದೆ ವಿಡಿಯೋ ವೈರಲ್ ಪ್ರಕರಣ. ಮಾಜಿ ಶಾಸಕ ಪ್ರೀತಂಗೌಡ ಆಪ್ತರಿಬ್ಬರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಬಿಜೆಪಿ ಕಾರ್ಯಕರ್ತರಾದ ಲಿಖಿತ್ಗೌಡ, ಯಲಗುಂದ ಚೇತನ್ ಎಂಬುವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೆನ್ಡ್ರೈವ್ ಹಂಚಿಕೆ ಹಿಂದೆ ಮಾಜಿ ಶಾಸಕ ಪ್ರೀತಂಗೌಡರ ಸಹಚರರ ಕೈವಾಡ ಇದೆಯಾ ಎನ್ನುವುದು ತನಿಖೆ ಬಳಿಕ ತಿಳಿದು ಬರಬೇಕಿದೆ. ಪ್ರೀತಂಗೌಡ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಹಾಗು ಪ್ರೀತಂಗೌಡ ಜೊತೆ ಒಡನಾಟ ಹೊಂದಿದ್ದ ಲಿಖಿತ್ಗೌಡನನ್ನು ಪೊಲೀಸ್ರು ಬಂಧಿಸಿದ್ದಾರೆ.
ಎಸ್ಐಟಿ ಅಧಿಕಾರಿಗಳು ಹಾಸನ ಸೆನ್ ಠಾಣೆಯಲ್ಲಿ ಬಂಧಿತರ ವಿಚಾರಣೆ ನಡೆಸಿದ್ದಾರೆ. ಹಾಸನ ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ. ವಿಡಿಯೋ ವೈರಲ್ಗೆ ಸಂಬಂಧಿಸಿದಂತೆ ಸುಮೋಟೊ ದೂರಿನ ಅನ್ವಯ ವಿಚಾರಣೆ ಮಾಡಲಾಗಿದೆ. ಆ ಬಳಿಕ ಆರೋಪಿ ಚೇತನ್ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು ಸ್ಥಳ ಮಹಜರ್ ಮಾಡಿದ್ದಾರೆ. ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಮಹಜರ್ ಮಾಡಿದ್ದಾರೆ.
ಶ್ರವಣಬೆಳಗೊಳದಲ್ಲಿ ಲಿಖಿತ್ಗೌಡ ಮನೆಯಲ್ಲೂ ಸ್ಥಳ ಮಹಜರ್ ನಡೆಸಲಾಗಿದೆ. ವೀಡಿಯೋ ವೈರಲ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಆದರೆ ಈ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಎಂದು ನಾಯಕರು ಆರೋಪ ಮಾಡಿದ್ದರು. ಇದೀಗ ಬಿಜೆಪಿ ನಾಯಕರ ಆಪ್ತರೇ ಸಿಕ್ಕಿಬಿದ್ದಿದ್ದಾರೆ. ಆರೋಪ ಮಾಡಿದ್ದರಲ್ಲಿ ಪ್ರಮುಖರಾಗಿದ್ದ ವಕೀಲ ದೇವರಾಜೇಗೌಡ ಕೂಡ ಅರೆಸ್ಟ್ ಆಗಿದ್ದು, ಅವರ ಬೆನ್ನಲ್ಲೇ ಇನ್ನಿಬ್ಬರ ಬಂಧನ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ.