ನಾಯಕಿ ಹರ್ಮನ್ ಪ್ರೀತ್ ಕೌರ್ ಸಿಡಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಭಾರತ ವನಿತೆಯರ ತಂಡ 88 ರನ್ ಗಳ ಭಾರೀ ಅಂತರದಿಂದ ಇಂಗ್ಲೆಂಡ್ ವನಿತೆಯರ ತಂಡವನ್ನು ಮಣಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-೦ರಿಂದ ವಶಪಡಿಸಿಕೊಂಡಿತು.
ಕೆಂಟ್ ಬರ್ರಿ ಮೈದಾನದಲ್ಲಿ ಬುಧವಸರ ತಡರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ ಗಳಲ್ಲಿ 5 ವಿಕೆಟ್ ಗೆ 333 ರನ್ ಕಲೆ ಹಾಕಿತು. ಇದು ಭಾರತ ಏಕದಿನ ಕ್ರಿಕೆಟ್ ನಲ್ಲಿ ಕಲೆ ದಾಖಲಿಸಿದ ಎರಡನೇ ಅತ್ಯಧಿಕ ಮೊತ್ತವಾಗಿದೆ.
ಕಠಿಣ ಗುರಿ ಬೆಂಬತ್ತಿದ ಆತಿಥೇಯ ಇಂಗ್ಲೆಂಡ್, ರೇಣುಕಾ ಸಿಂಗ್ ದಾಳಿಗೆ ತತ್ತರಿಸಿ 44.2 ಓವರ್ ಗಳಲ್ಲಿ 245 ರನ್ ಗಳಿಗೆ ಪತನಗೊಂಡಿತು.

ಈ ಗೆಲುವಿನೊಂದಿಗೆ ಲಾರ್ಡ್ಸ್ ನಲ್ಲಿ ನಡೆಯಲಿರುವ ಮೂರನೇ ಪಂದ್ಯ ಮಹತ್ವ ಕಳೆದುಕೊಂಡಿತು.
ರೇಣುಕಾ ಸಿಂಗ್ 4 ವಿಕೆಟ್ ಪಡೆದು ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇಂಗ್ಲೆಂಡ್ ಪರ ಡೆನ್ನಿ ವೈಟ್ (65), ನಾಯಕಿ ಆಮಿ ಜೊನ್ಸ್ (39) ಮತ್ತು ಚಾರ್ಲಿ ಡೀನ್ (34) ಪ್ರತಿರೋಧ ಒಡ್ಡಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ದಾಖಲೆ ಮೊತ್ತ ಪೇರಿಸಲು ಹರ್ಮನ್ ಪ್ರೀತ್ ಕೌರ್ ಶತಕ ನೆರವಾಯಿತು.
ಹರ್ಮನ್ ಪ್ರೀತ್ 111 ಎಸೆತಗಳಲ್ಲಿ 18 ಬೌಂಡರಿ, 4 ಸಿಕ್ಸರ್ ಸೇರಿದ ಅಜೇಯ 144 ರನ್ ಚಚ್ಚಿದರು.
ಹರ್ಮನ್ ಪ್ರೀತ್ ಮತ್ತು ಹರ್ಲಿನ್ ಡಿಯೊಲ್ 4ನೇ ವಿಕೆಟ್ ಗೆ 119 ರನ್ ಜೊತೆಯಾಟ ನಿಭಾಯಿಸಿದರು. ಹರ್ಲಿನ್ 58 ರನ್ ಬಾರಿಸಿ ಗಮನ ಸೆಳೆದರು. ಸ್ಮೃತಿ ಮಂದಾನ 40 ರನ್ ಬಾರಿಸಿದರು.