ನವದೆಹಲಿ: ದೇಶದ ವಿವಿಧೆಡೆ ಇರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಕಚೇರಿಗಳ ಮೇಲೆ ಇಂದು ರಾಷ್ಟ್ರೀಯ ತನಿಖಾ ಆಯೋಗ(NIA) ಮತ್ತು ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದೆ. ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತೆಲಂಗಾಣ, ಉತ್ತರ ಪ್ರದೇಶ, ತಮಿಳುನಾಡು ಹಾಗೂ ಇತರ ರಾಜ್ಯಗಳ ಪಿಎಫ್‌ಐ ಕಚೇರಿ ಹಾಗೂ ಮುಖಂಡರ ಮನೆಗಳ ಮೇಲಿ ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, ವಿವಿಧ ಪ್ರಕರಣಗಳ ಅಡಿಯಲ್ಲಿ 100 ಕ್ಕೂ ಹೆಚ್ಚು ಪಿಎಫ್‌ಐ ಸದಸ್ಯರು ಹಾಗೂ ಅವರ ನಿಕಟವರ್ತಿಗಳನ್ನು ಬಂಧಿಸಲಾಗಿದೆ. ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈ ದಾಳಿ ನಡೆದಿದೆ.
ಇದುವರೆಗಿನ ಅತಿ ದೊಡ್ಡ ತನಿಖಾ ದಾಳಿ ಎಂದೇ ಇದನ್ನು ಕರೆಯಲಾಗುತ್ತಿದ್ದು, ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹ, ತರಬೇತಿ, ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರ ಮನವೊಲಿಸುವ ಪ್ರಯತ್ನ ಮತ್ತು ಉಗ್ರರೊಂದಿಗೆ ಸಂಪರ್ಕ ಸೇರಿದಂತೆ ಇನ್ನಿತರ ಗಂಭೀರ ಆರೋಪವನ್ನು PFI ಸಂಘಟನೆ ಎದುರಿಸುತ್ತಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಶಂಕಿತ ಉಗ್ರರು ಸೆರೆಯಾಗಿದ್ದರಿಂದ NIA ಹಲವೆಡೆ ದಾಳಿ ನಡೆಸಿದೆ.

10 ರಾಜ್ಯಗಳ 80 ಸ್ಥಳಗಳ ಮೇಲೆ 300ಕ್ಕೂ ಹೆಚ್ಚು ಎನ್‌ಐಎ ಮತ್ತು ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದ ಕುರಿತು ಮಾಹಿತಿ ಲಭ್ಯವಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿರುವ ಪಿಎಫ್‌ಐ ಅಧ್ಯಕ್ಷ ಒ ಎಂ ಎ ಸಲಾಂ ಮನೆ ಸೇರಿದಂತೆ ಪಿಎಫ್‌ಐ ಮುಖಂಡರ ಮನೆ ಮತ್ತು ಕಚೇರಿಗಳ ಮೇಲೆ ಮಧ್ಯರಾತ್ರಿಯಿಂದಲೇ ಎನ್‌ಐಎ ಮತ್ತು ಇಡಿ ದಾಳಿ ನಡೆಸಿದೆ. ದಾಳಿ ಆರಂಭವಾದ ಬೆನ್ನಲ್ಲೇ, ಮಲಪ್ಪುರಂನಲ್ಲಿರುವ ಒಎಂಎ ಸಲಾಂ ಅವರ ಮನೆಯ ಹೊರಗೆ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಗಳೂರಿನಲ್ಲಿಯೂ NIA ದಾಳಿ:
ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಚೇರಿ ಮೇಲೆ ಮುಂಜಾನೆ ಸುಮಾರು 3.30ರ ವೇಳೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಗೂ ಮುನ್ನ ಸ್ಥಳದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡಾ ಏರ್ಪಡಿಸಲಾಗಿದೆ.
ಎನ್‌ಐಎ ದಾಳಿಯನ್ನು ಖಂಡಿಸಿ ಪಿಎಫ್‌ಐ ಕಾರ್ಯಕರ್ತರು ತೀವ್ರವಾದ ಪ್ರತಿಭಟನೆ ನಡೆಸಿದ್ದಾರೆ. ಮುಂಜಾಗ್ರತ ಕ್ರಮವಾಗಿ ಪೊಲೀಸರು ನೆಲ್ಲಿಕಾಯಿ ರಸ್ತೆಯನ್ನು ಸಂಪೂರ್ಣ ಸೀಲ್ ಮಾಡಿದ್ದಾರೆ.
ಪಿಎಫ್‌ಐ, ಎಸ್ ಡಿಪಿಐ ಮುಖಂಡರ ಮನೆ ಮೇಲೆಯು ದಾಳಿ ನಡೆದಿದೆ. ಪಿಎಫ್‌ಐ ನಾಯಕರಾದ ಶರೀಫ್ ಬಜ್ಜಿ, ಅಶ್ರಫ್ ಜೋಕಟ್ಟೆ, ಮೊಯಿದಿನ್ ಹಳೆಯಂಗಡಿ, ನವಾಝ್ ಕಾವೂರು ಹಾಗೂ ಖಾದರ್ ಕುಳಾಯಿ ಮನೆ ಸೇರಿದಂತೆ ಒಟ್ಟು ಎಂಟು ಕಡೆಗಳಲ್ಲಿ ಎನ್‌ಐಎ ದಾಳಿ ಮಾಡಿದೆ.