ಸಮಾಜದ ದುರ್ಬಲ ವರ್ಗದ ಜನರು ವಾಸದ ಹಕ್ಕು, ವಾಸ್ತವ್ಯದ ಹಕ್ಕು ಮತ್ತು ಬದುಕುವ ಹಕ್ಕುಗಳಿಂದ ವಂಚಿತರಾಗಿರುವುದನ್ನು ಗಮನಿಸಿ ಗುಜರಾತ್ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಸರ್ಕಾರ, ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಗಳು, ಸಾರಿಗೆ ಇಲಾಖೆಯ ಆಯುಕ್ತರು ಹಾಗೂ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಸಮಾಜದ ದುರ್ಬಲ ವರ್ಗದ ಜನರಿಗೆ ಅವರ ಹಕ್ಕುಗಳನ್ನು ಪಡೆಯಲು ತೀವ್ರತರವಾದ ತೊಂದರೆಗಳು ಉಂಟಾಗುತ್ತಿವೆ, ಎಂದು ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ವಿಕ್ರಮ್ ನಾಥ್ ಮತ್ತು ಜಸ್ಟೀಸ್ ಅಶುತೋಷ್ ಶಾಸ್ತ್ರಿ ಅವರಿದ್ದ ದ್ವಿಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ʼರಸ್ತೆ ನಿಯಮಗಳ ಪಾಲನೆ ನಿಯಂತ್ರಣ ಹಾಗೂ ದುರ್ಬಲ ವರ್ಗದವರಿಗೆ ವಸತಿ ನೀಡುವ ಕುರಿತುʼ ಎಂಬ ಹಣೆಪಟ್ಟಿಯನ್ನು ನೀಡಲಾಗಿದೆ.
ಕೆಲ ದಿನಗಳ ಹಿಂದೆ, ಸೂರತ್ನಲ್ಲಿ ಟ್ರಕ್ ಒಂದು 15 ಜನ ವಲಸೆ ಕಾರ್ಮಿಕರ ಪ್ರಾಣವನ್ನು ಬಲಿ ಪಡೆದುಕೊಂಡಿತ್ತು. ಈ ಘಟನೆಯನ್ನು ಮುಂದಿಟ್ಟುಕೊಂಡು ಹೈಕೋರ್ಟ್ ಪ್ರಕರಣ ದಾಖಲಿಸಿಕೊಂಡಿದೆ.
ಗುಜರಾತಿನಲ್ಲಿ ಅತೀ ದೊಡ್ಡ ಸರ್ಕಾರಿ ಮತ್ತು ಖಾಸಗಿ ಕಾಮಗಾರಿಗಳು ನಡೆಯುತ್ತಿರುವುದರಿಂದ ರಾಜ್ಯದಲ್ಲಿ ವಲಸೆ ಕಾರ್ಮಿಕರ ಬರುವಿಕೆ ಹಾಗೂ ಹೋಗುವಿಕೆಯಲ್ಲಿ ಹೆಚ್ಚಳವಾಗಿದೆ. ಇವರಿಗೆ ಖಾಲಿ ಇರುವ ಸರ್ಕಾರಿ ಜಮೀನಿನಲ್ಲಿ ವಸತಿ ವ್ಯವಸ್ಥೆ ಮಾಡುವುದು ರಾಜ್ಯ ಸರ್ಕಾರ ಮತ್ತು ಸ್ಥಳಿಯಾಡಳಿತಗಳ ಸಾಂವಿಧಾನಿಕ ಜವಾಬ್ದಾರಿ ಎಂದು ಕೋರ್ಟ್ ಹೇಳಿದೆ.
ಒಟ್ಟಿನಲ್ಲಿ, ಗುಜರಾತ್ ಮಾದರಿ ಎಂದು ದೇಶದ ಜನರ ಕಣ್ಣಿಗೆ ಮಣ್ಣೆರಚಿ, ಓಟುಗಳನ್ನು ಗಿಟ್ಟಿಸಿಕೊಂಡ ಬಿಜೆಪಿ ನಾಯಕರ ಮಾತುಗಳಿಗೆ ವಿರುದ್ದವಾಗಿ ಗುಜರಾತಿನ ಅಸಲೀಯತ್ತು ಒಂದೊಂದಾಗಿ ಬಯಲಾಗುತ್ತಿದೆ. ಈ ಹಿಂದೆ, ಅಮೇರಿಕಾದ ಅಧ್ಯಕ್ಷರಾಗಿದ್ದಂತಹ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಬಂದಾಗ ಕಳಗೇರಿಗಳು ಕಾಣದಂತೆ ಗೋಡೆಯನ್ನು ಕಟ್ಟಲಾಗಿತ್ತು. ಇದು ಕೂಡಾ ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿತ್ತು.