ಈಗಾಗಲೇ ಪೆಟ್ರೋಲ್, ಡಿಸೇಲ್, ಎಲ್ ಪಿಜಿ ಸಿಲಿಂಡರ್, ಆಹಾರಧಾನ್ಯಗಳು, ಖಾದ್ಯ ತೈಲಗಳ ದರ ಏರಿಕೆಯಿಂದ ತತ್ತರಿಸುವ ಜನರಿಗೆ ಈಗ ಮತ್ತಷ್ಟು ಮತ್ತಷ್ಟು ಹೊರೆಗಳು ಸೋಮವಾರದಿಂದ ಸಿದ್ದವಾಗಿವೆ.
ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಇತ್ತೀಚಿನ ತೆರಿಗೆ ಪರಿಷ್ಕರಣೆ ಜುಲೈ 18 ರಿಂದ ಜಾರಿಯಾಗುತ್ತಿದೆ. ಅಂದರೆ, ಗ್ರಾಹಕರ ಮೇಲಿನ ತೆರಿಗೆ ಭಾರ ಮತ್ತಷ್ಟು ಏರಲಿದೆ. ತೆರಿಗೆ ಹೇರಿಕೆಯ ಹೊಸ ಅಧ್ಯಾಯಕ್ಕೆ ಗ್ರಾಹಕರು ತೆರೆದುಕೊಳ್ಳಬೇಕಿದೆ. ಜಿಎಸ್ಟಿ ಬಂದ ನಂತರ ತೆರಿಗೆ ವ್ಯವಸ್ಥೆ ಸುದಾರಿಸುತ್ತದೆ. ತೆರಿಗೆ ಪ್ರಮಾಣ ತಗ್ಗುತ್ತದೆ ಎಂಬ ನಿರೀಕ್ಷೆಗಳೆಲ್ಲವೂ ಸುಳ್ಳಾಗಿವೆ. ಗೋಧಿ ಹಿಟ್ಟು, ಮೊಸರಿಗೂ ತೆರಿಗೆ ಹೇರಲಾಗುತ್ತಿದೆ. ಸೋಮವಾರದಿಂದ ತೆರಿಗೆ ವ್ಯಾಪ್ತಿಗೆ ಬರುವ ಮತ್ತು ತೆರಿಗೆ ಹೆಚ್ಚಳವಾಗುವ ವಸ್ತುಗಳ ಪಟ್ಟಿ ಕೆಳಕಂಡಂತಿದೆ.
5,000 ರೂ.ಗಿಂತ ಹೆಚ್ಚಿನ ಬಾಡಿಗೆ ಇರುವ ಆಸ್ಪತ್ರೆಯ ಕೊಠಡಿಗಳಿಗೆ ಶೇ.5ರಷ್ಟು ಜಿಎಸ್ಟಿ ಹೇರಲಾಗುತ್ತಿದೆ.
ಪ್ಯಾಕ್ ಮಾಡಿ ಮಾರಾಟ ಮಾಡಲಾಗುವ ಆಟಾ ಅಂದರೆ ಗೋಧಿ ಹಿಟ್ಟು ಮೊಸರು ಮತ್ತು ಪನೀರ್ ಮತ್ತು ಆಹಾರ ಪದಾರ್ಥಗಳ ಮೇಲೆ ಗ್ರಾಹಕರು 5% ಜಿಎಸ್‌ಟಿ ಪಾವತಿಸಬೇಕಾಗುತ್ತದೆ.
1000 ರೂಪಾಯಿಗಿಂತಲೂ ಹೆಚ್ಚಿನ ಬಾಡಿಗೆ ಹೊಂದಿರುವ ಹೊಟೆಲ್ ರೂಮುಗಳಿಗೆ ಶೇ.12ರಷ್ಟು ತೆರಿಗೆ.
ಶೈಕ್ಷಣಿಕ ಮತ್ತು ಇತರ ಉದ್ದೇಶಗಳಿಗೆ ಬಳಸಲಾಗುವ ನಕ್ಷೆಗಳು ಮತ್ತು ಚಾರ್ಟ್‌ಗಳು, ಅಟ್ಲಾಸ್‌ಗಳ ಶೇ.12 ರಷ್ಟು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಬರುತ್ತವೆ.
ಟೆಟ್ರಾ ಪ್ಯಾಕ್‌ಗಳು ಮತ್ತು ಚೆಕ್‌ಗಳ ವಿತರಣೆಗೆ (ಸಡಿಲ ಅಥವಾ ಪುಸ್ತಕ ರೂಪದಲ್ಲಿ) ಬ್ಯಾಂಕ್‌ಗಳು ವಿಧಿಸುವ ಶುಲ್ಕಗಳ ಮೇಲೆ ಶೇ. 18 ಪ್ರತಿಶತ ಜಿಎಸ್‌ಟಿ ವಿಧಿಸಲಾಗುತ್ತದೆ.

ಮುದ್ರಣ, ಬರವಣಿಗೆ ಅಥವಾ ಶಾಯಿಯಂತಹ ಉತ್ಪನ್ನಗಳ, ಕತ್ತರಿಸುವ ಬ್ಲೇಡ್‌ಗಳು, ಪೇಪರ್ ಚಾಕುಗಳು ಮತ್ತು ಪೆನ್ಸಿಲ್ ಶಾರ್ಪನರ್‌ಗಳೊಂದಿಗೆ ಚಾಕುಗಳು; ಎಲ್ಇಡಿ ದೀಪಗಳ ಮೇಲಿನ ತೆರಿಗೆಯನ್ನು ಪ್ರಸ್ತುತ ಶೇ. 12 ರಿಂದ ಸೋಮವಾರದಿಂದ ಶೇ. 18 ಕ್ಕೆ ಹೆಚ್ಚಿಸಲಾಗುವುದು.
ಕಚ್ಚಾ ವಸ್ತು ಮತ್ತು ಸಿದ್ಧವಸ್ತುಗಳ ನಡುವಿನ ತೆರಿಗೆಯಲ್ಲಿನ ಅಂತರವನ್ನು ನಿವಾರಿಸುವ ಸಲುವಾಗಿ ಈ ತೆರಿಗೆ ಪರಿಷ್ಕರಣೆ ಮಾಡಲಾಗುತ್ತಿದೆ ಎಂಬುದು ಜಿಎಸ್ಟಿ ಮಂಡಳಿ ಸಮರ್ಥನೆ.
ಡ್ರಾಯಿಂಗ್ ಮತ್ತು ಮಾರ್ಕ್ ಔಟ್ ಉಪಕರಣಗಳನ್ನು ಸೋಲಾರ್ ವಾಟರ್ ಹೀಟರ್ ಮೇಲಿನ ತೆರಿಗೆ ಇನ್ನು ಮುಂದೆ ಶೇ. 5 ರಿಂದ ಶೇ. 12 ಕ್ಕೆ ಏರಲಿದೆ.
ರಸ್ತೆಗಳು, ಸೇತುವೆಗಳು, ರೈಲು ಮಾರ್ಗಗಳು, ಮೆಟ್ರೋ, ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳು ಮತ್ತು ಸ್ಮಶಾನಗಳಂತಹ ಕೆಲವು ಸೇವೆಗಳ ಕೆಲಸದ ಗುತ್ತಿಗೆ ಒಪ್ಪಂದಗಳ ಮೇಲಿನ ತೆರಿಗೆಯು ಸಹ ಪ್ರಸ್ತುತ ಸೇ. 12 ರಿಂದ ಶೇ. 18 ಜಿಗಿಯುತ್ತಿದೆ.
ಆರ್‌ಬಿಐ, ಐಆರ್‌ಡಿಎ ಮತ್ತು ಸೆಬಿಯಂತಹ ನಿಯಂತ್ರಕರು ಸಲ್ಲಿಸುವ ಸೇವೆಗಳಿಗೆ ಶೇ.18 ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಜೈವಿಕ- ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳು ಶೇಕಡಾ 12 ರಷ್ಟು ಜಿಎಸ್‌ಟಿಯನ್ನು ಆಕರ್ಷಿಸುತ್ತವೆ. ಆದರೆ ಐಸಿಯು ಅಲ್ಲದ ಆಸ್ಪತ್ರೆಯ ಕೊಠಡಿಗಳ ಬಾಡಿಗೆ ದಿನಕ್ಕೆ ರೂ 5,000 ಮೀರಿದರೆ, ಕೊಠಡಿಗೆ ವಿಧಿಸಲಾದ ಮೊತ್ತದ ಮಟ್ಟಿಗೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಇಲ್ಲದೆ ಶೇ. 5 ಜಿಎಸ್‌ಟಿ ವಿಧಿಸಲಾಗುತ್ತದೆ.
ಪಿಪಿಎಫ್ ಉಳತಾಯಕ್ಕೂ ತೆರಿಗೆ ಬರೆ
ಇದುವರೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದ್ದ ಕಾರ್ಮಿಕರ ಭವಿಷ್ಯ ನಿಧಿಯ ಮೇಲೂ 2022 ಏಪ್ರಿಲ್ 1ರಿಂದ ತೆರಿಗೆ ಹೇರಲು ನಿರ್ಧರಿಸಲಾಗಿದೆ. ಈ ಮೊದಲು ಕಾರ್ಮಿಕರು ತಮ್ಮ ಭವಿಷ್ಯ ನಿಧಿ ಖಾತೆಗೆ ವಾರ್ಷಿಕ ಎಷ್ಟಾದರೂ ಪಾವತಿ ಮಾಡಬಹುದಿತ್ತು. ಹಾಗೆಯೇ ಭವಿಷ್ಯನಿಧಿಯಲ್ಲಿರುವ ಮೊತ್ತಕ್ಕೆ ಬರುವ ಬಡ್ಡಿಯ ಮೇಲೂ ಯಾವುದೇ ತೆರಿಗೆ ಇರಲಿಲ್ಲ. ಈಗ ಪರಿಷ್ಕೃತ ಆದೇಶದಂತೆ ಒಬ್ಬ ಕಾರ್ಮಿಕ 2.5 ಲಕ್ಷ ಮೀರಿ ಭವಿಷ್ಯ ನಿಧಿಗೆ ಪಾವತಿ ಮಾಡಿದ್ದರೆ, ಅದರ ಮೇಲೆ ತೆರಿಗೆ ಹೇರಲಾಗುತ್ತದೆ. ಅದೇ ವೇಳೆ ಕಾರ್ಮಿಕನ ಭವಿಷ್ಯ ನಿಧಿಯ ಮೇಲೆ ವಾರ್ಷಿಕ 2.5 ಲಕ್ಷ ಕ್ಕಿಂತ ಹೆಚ್ಚು ಬಡ್ಡಿ ಬಂದರೆ ಅದಕ್ಕೂ ತೆರಿಗೆ ವಿಧಿಸಲಾಗುತ್ತದೆ. ಅಂದರೆ, ಇನ್ನು ಮುಂದೆ ಭವಿಷ್ಯ ನಿಧಿ ಸಂಪೂರ್ಣ ತೆರಿಗೆ ಮುಕ್ತವಲ್ಲ. ತೆರಿಗೆ ವಿನಾಯಿತಿ ಇದೆ ಎಂಬ ಕಾರಣಕ್ಕೆ ಬಹಳಷ್ಟು ಜನ ಭವಿಷ್ಯನಿಧಿಗೆ ಹೆಚ್ಚಿನ ಪಾಲು ಹೂಡಿಕೆ ಮಾಡುತ್ತಿದ್ದರು. ಹಾಗೆಯೇ ಬಡ್ಡಿ ಸಹ ಬ್ಯಾಂಕುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿತ್ತು. ಇದೀಗ 2.5 ಲಕ್ಷ ಮೀರಿದ ಪಾವತಿ ಮತ್ತು 2.5 ಲಕ್ಷ ಮೀರಿದ ಬಡ್ಡಿ ಆದಾಯದ ಮೇಲೆ ತೆರಿಗೆ ಬೀಳಲಿದೆ. ಹೇಗಾದರೂ ಸರಿ ತೆರಿಗೆ ಹೇರಲೇಬೇಕೆಂಬ ನಿರ್ಧಾರ ಮಾಡಿದಂತಿರುವ ಕೇಂದ್ರ ಸರ್ಕಾರ ಈಗಾಗಲೇ 1.50 ಲಕ್ಷ ಕೋಟಿ ತೆರಿಗೆಯನ್ನು ಪ್ರತಿ ತಿಂಗಳೂ ಸಂಗ್ರಹಿಸುತ್ತಿದೆ. ಈ ಮೊತ್ತವನ್ನು 2 ಲಕ್ಷ ಕೋಟಿಗೆ ಏರಿಸಿ ಕೊಳ್ಳುವ ಉಮೇದು ಕೇಂದ್ರ ಸರ್ಕಾರಕ್ಕೆ ಇದ್ದಂತಿದೆ.