ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು ಆಗಸ್ಟ್ 12ಕ್ಕೆ ಕೊನೆಗೊಳ್ಳಲಿದೆ. ಈ ಬಾರಿ ಕೇಂದ್ರ ಸರ್ಕಾರ ಒಟ್ಟು 32 ಮಸೂದೆಗಳನ್ನು ಪರಿಚಯಿಸುವ ಉದ್ದೇಶ ಹೊಂದಿದೆ. ಆ ಪೈಕಿ ಬಹುತೇಕ ಮಸೂದೆಗಳು ಚರ್ಚೆಯಾಗದೆ ಅಂಗೀಕಾರವಾಗುವ ಸಾಧ್ಯತೆ ಇದೆ. ಏಕೆಂದರೆ ಈ ಬಾರಿ ಒಟ್ಟಾರೆಯಾಗಿ ಸಂಸತ್ ಅಧಿವೇಶನದಲ್ಲಿ ಚರ್ಚೆ, ಸಂವಾದಗಳು ನಡೆಯುವುದೇ ಅನುಮಾನವಾಗಿದೆ.
ಏಕೆಂದರೆ ಮೊದಲ ಎರಡು ದಿನ ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಕಳೆದುಹೋಗಲಿದೆ. ನಂತರ ಪ್ರತಿಪಕ್ಷಗಳು ಹಲವಾರು ಪ್ರಮುಖ ವಿಷಯಗಳನ್ನು ಚರ್ಚೆ ಮಾಡಲು ಅವಕಾಶ ಕೇಳಲಿವೆ. ಆದರೆ ನಿರೀಕ್ಷೆಯಂತೆ ಆಡಳಿತ ಪಕ್ಷ ನಿರಾಕರಿಸಲಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನದ ಅಂತ್ಯದವರೆಗೂ ಜಗಳ, ಗದ್ದಲ, ಪ್ರತಿಭಟನೆಯನ್ನೇ ಕಾಣಬಹುದಾಗಿದೆ.
ಪ್ರತಿಪಕ್ಷಗಳು ಚರ್ಚೆ ಮಾಡಲೆತ್ನಿಸುವ ವಿಚಾರಗಳು ಸಕಾಲಿಕವಾಗಿವೆ. ಉದಾಹರಣೆಗೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತಿತರರ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ. ಹಾಗೆಯೇ ದೇಶವನ್ನು ಬಹುವಾಗಿ ಕಾಡುತ್ತಿರುವ ಹಣದುಬ್ಬರ, ನಿರುದ್ಯೋಗ ಮತ್ತಿತರರ ಮಹತ್ವದ ಸಮಸ್ಯೆಗಳ ಬಗ್ಗೆ ಪ್ರತಿಪಕ್ಷಗಳು ಚರ್ಚೆಗೆ ಅವಕಾಶ ಕೇಳಲಿವೆ. ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇದರ ಬಗ್ಗೆ ಈಗಾಗಲೇ ಸುಳಿವು ನೀಡಿದ್ದಾರೆ. ರಜೆಗಳನ್ನು ಹೊರತುಪಡಿಸಿ ಈ ಬಾರಿ ಕೇವಲ 14 ದಿನಗಳು ಮಾತ್ರ ಅಧಿವೇಶನ ನಡೆಯಲಿದೆ. ಇಷ್ಟು ಕಡಿಮೆ ಸಮಯದಲ್ಲಿ ಪ್ರಮುಖ ವಿಷಯಗಳನ್ನು ಚರ್ಚೆ ಮಾಡಲು ಹೇಗೆ ಸಾಧ್ಯ? ಅಲ್ಲದೆ ಕೇಂದ್ರ ಸರ್ಕಾರ ಮಂಡಿಸುವ 30ಕ್ಕೂ ಹೆಚ್ಚು ಮಸೂದೆಗಳ ಬಗ್ಗೆ ಚರ್ಚೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರದ ಕಡೆಯಿಂದ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಶ್ನೆಗಳಿಗೆ ಉತ್ತರಗಳು ಹೊರಬಿದ್ದಿಲ್ಲ.
ಇದಲ್ಲದೆ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ, ಸಿಬಿಐ ಮತ್ತಿತರರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದರ ಬಗ್ಗೆ ವ್ಯಾಪಕವಾದ ಚರ್ಚೆ ಆಗುತ್ತಿದೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎನ್ ಸಿಪಿ ನಾಯಕರಾದ ಶರದ್ ಪವಾರ್, ನವಾಬ್ ಮಲ್ಲಿಕ್, ಶಿವಸೇನೆ ನಾಯಕ ಸಂಜಯ್ ರಾವತ್, ಖ್ಯಾತ ಪತ್ರಕರ್ತೆ, ಮಾನವಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಕ್ಟ್‌ಚೆಕ್ಕರ್, ಪತ್ರಕರ್ತ ಮೊಹಮ್ಮದ್ ಜುಬೇರ್ ಮತ್ತಿತರರ ಪ್ರಮುಖರ ಮೇಲೆ ದುರುದ್ದೇಶಪೂರ್ವಕವಾಗಿ ದಾಳಿ ಮಾಡಲಾಗುತ್ತಿದೆ.
ತನಿಖಾ ಸಂಸ್ಥೆಗಳು ಮಾತ್ರವಲ್ಲ, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಐಟಿ ಮತ್ತು ಇಡಿಗಳನ್ನು ಬಳಸಿಕೊಂಡು ಮಹಾರಾಷ್ಟ್ರದಲ್ಲಿದ್ದ ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನೆಯ ಮಹಾವಿಕಾಸ ಆಘಾಡಿ ಸರ್ಕಾರವನ್ನು ಕೆಡವಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ‘ಬುಲ್ಡೋಜರ್ ಸಂಸ್ಕೃತಿ’ ಬಗ್ಗೆ ಕೂಡ ಚರ್ಚೆ ಮಾಡಲು ಪ್ರತಿಪಕ್ಷಗಳು ಸಜ್ಜಾಗಿವೆ. ಎಂದಿನಂತೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡುವುದಿಲ್ಲ. ಹಾಗಾಗಿ ಜಗಳ, ಗದ್ದಲ, ಪ್ರತಿಭಟನೆಗಳು ನಿರೀಕ್ಷಿತ.

ಕೇಂದ್ರ ಸರ್ಕಾರಕ್ಕೂ ಈ ಬಾರಿಯ ಮುಂಗಾರಿನ ಸಂಸತ್ ಅಧಿವೇಶನ ದೆಹಲಿ ಬೇಸಿಗೆಯ ಬಿಸಿಯನ್ನೂ ಮೀರಿಸಲಿದೆ ಎಂಬ ಅಂದಾಜು ಇದೆ. ಅದೇ ಕಾರಣಕ್ಕೆ ಸಂಸತ್ ಕಲಾಪದಲ್ಲಿ ಕೆಲವು ಪದಗಳನ್ನು ಹೊಸದಾಗಿ ಅಸಂವಿಧಾನಿಕ ಪದಗಳ ಪಟ್ಟಿಗೆ ಸೇರಿಸಲಾಗಿದೆ. ಹಾಗೆ ಸೇರಿಸಿರುವ ಹೊಸ ಇಂಗ್ಲಿಷ್ ಅಸಂಸದೀಯ ಪದಗಳೆಂದರೆ…’ರಕ್ತಪಾತ’, ‘ರಕ್ತಸಿಕ್ತ’, ‘ಬಿಟ್ರೆಡ್’, ‘ಶೇಮ್ಡ್’, ‘ಅಬ್ಯುಸ್ಡ್’, ‘ಚೀಟೆಡ್, ‘ಚಮ್ಚಾ’, ‘ಚಮಚಗಿರಿ’, ‘ಚೇಲಾಸ್’, ‘ಬಾಲ್ಡಿಶ್ನೆಸ್’, ‘ಭ್ರಷ್ಟ’ ‘ಹೇಡಿ’, ‘ಅಪರಾಧ’ ಮತ್ತು ‘ಮೊಸಳೆ ಕಣ್ಣೀರು’ ಹೀಗಿರುವ ಪದಗಳಿವೆ. ‘ಅವಮಾನ’, ‘ಕತ್ತೆ’, ‘ನಾಟಕ’, ‘ಕಣ್ಣು ತೊಳೆಯುವುದು’, ‘ಮಿಠಿ’, ‘ಗೂಂಡಾಗಿರಿ’, ‘ಬೂಟಾಟಿಕೆ’, ‘ಅಸಮರ್ಥ’, ‘ತಪ್ಪುದಾರಿ’, ‘ಸುಳ್ಳು’ ಮತ್ತು ‘ಅಸತ್ಯ’. ಹಿಂದಿಯ ಅಸಂಸದೀಯ ಪದಗಳೆಂದರೆ… ‘ಅರಾಜಕತಾವಾದಿ’, ‘ಗದ್ದರ್’, ‘ಗಿರ್ಗಿಟ್’, ‘ಗೂಂಡಾಗಳು’, ‘ಘಡಿಯಲಿ ಅನ್ಸು’, ‘ಅಪ್ಮಾನ್’, ‘ಅಸತ್ಯ’, ‘ಅಹಂಕಾರ’, ‘ಭ್ರಷ್ಟ’, ‘ಕಾಲಾ ದಿನ’, ‘ಕಲಾ ಬಜಾರಿ’ ಮತ್ತು ‘ಖರೀದ್ ಫರೋಖ್ತ್’.
ಸಂಸದರು ಈ ಪದಗಳನ್ನು ಬಿಟ್ಟು ಮಾತನಾಡಬೇಕಾಗುತ್ತದೆ. ಕೇಂದ್ರ ಸರ್ಕಾರವನ್ನು, ಸಚಿವರನ್ನು ತರಾಟೆಗೆ ತೆಗದುಕೊಳ್ಳಬೇಕಾಗುತ್ತದೆ. ಆದರೆ ಇದು ಅಸಾಧ್ಯ. ಈ ಪದಪುಂಜಗಳಿಗೆ ಹೊಸದಾಗಿ ಅಸಂಸದೀಯ ಎಂದು ಮೊಹರು ಹೊತ್ತಿರುವುದರ ಹಿಂದಿನ ಉದ್ದೇಶ ಏನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಜೊತೆಗೆ ಇದು ಸರ್ವಾಧಿಕಾರಿ ಧೋರಣೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಕೂಡ ಸದನದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಘರ್ಷಣೆ ಆಗಲಿದೆ. ಒಟ್ಟಿನಲ್ಲಿ ಜನರ ತೆರಿಗೆ ಹಣದಿಂದ ನಡೆಸಲಾಗುವ ಸಂಸತ್ ಅಧಿವೇಶನದಲ್ಲಿ ಜನರ ನಿಜವಾದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಅವಕಾಶ ಕೊಡದಿದ್ದರೆ ಅದು ಕೇಂದ್ರ ಸರ್ಕಾರದ ವೈಫಲ್ಯವೆಂದೇ ವ್ಯಾಖ್ಯಾನಿಸಬೇಕಾಗುತ್ತದೆ.