ಬೆಂಗಳೂರು: ಮಾ.19: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಜೋರಾಗ್ತಿದೆ. ಈ ನಡುವೆ ರಾಜಕೀಯ ಪಕ್ಷಗಳ ಮುಖಂಡರು ಜನರನ್ನು ತಮ್ಮ ಕಡೆಗೆ ಸೆಳೆಯುವುದಕ್ಕೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿ ಯುಗಾದಿ ಹಬ್ಬದ ನೆಪದಲ್ಲಿ ಹಂಚಿಕೆ ಮಾಡಲು ಸಂಗ್ರಹ ಮಾಡಿರುವ ಫುಡ್ ಕಿಟ್ ಪ್ರಮುಖ ಆದದ್ದು. ತುಮಕೂರು ನಗರದ ಪಿ.ಎನ್ ಕೆ ಲೇಔಟ್ನಲ್ಲಿ ಇರುವ ಅಟ್ಟಿಕಾ ಬಾಬು ಮನೆಯಲ್ಲಿ ಸಂಗ್ರಹಿಸಿದ್ದ ಟನ್ಗಟ್ಟಲೆ ಫುಡ್ ಕಿಟ್ ಸೀಜ್ ಮಾಡಲಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿರುವ ಅಟ್ಟಿಕಾ ಬಾಬು ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಮತದಾರರಿಗೆ ಹಂಚಲು ತಂದಿಟ್ಟಿದ್ದ ಫುಡ್ ಕಿಟ್‌ಗಳು ಎನ್ನಲಾಗಿದೆ. ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳಿಂದ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಕೆಜಿಎಫ್ ಬಾಬು ಹಂಚುತ್ತಿದ್ದ ಚೆಕ್, ಸೀರೆ ಜಪ್ತಿ..!

ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತಯಾರಿ ಮಾಡಿಕೊಂಡಿರುವ ಕೆಜಿಎಫ್ ಬಾಬು ಅವರಿಗೆ ಸೇರಿದ 300 ಚೆಕ್ಗಳು ಹಾಗೂ 40 ಲಕ್ಷ ರೂಪಾಯಿ ಮೌಲ್ಯದ ಸೀರೆಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮೌಖಿಕ ಅದೇಶ ಆಗಿದೆ, ಯಾವುದೇ ಅಧಿಕೃತ ಆದೇಶ ಆಗಿಲ್ಲ ಎನ್ನುವ ಮೂಲಕ ಪೊಲೀಸ್ರು ಸೀಜ್ ಮಾಡಿದ್ದಾರೆ. ಚೆಕ್ ಸೀಝ್ ಮಾಡಲು ಪೊಲೀಸರಿಗೆ ಅಧಿಕಾರ ಇದ್ಯಾ..? ಹೆಸರು ಇಲ್ಲದ ಖಾಲಿ ಚೆಕ್ ಸೀಝ್ ಮಾಡಲು ಪೊಲೀಸರಿಗೆ ಅಧಿಕಾರ ಇದ್ಯಾ..? ಅನ್ನೋದು ಕೆಜೆಎಫ್ ಬಾಬು ಪ್ರಶ್ನೆ. ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತವಾಗಿ ಸಿಲಿಂಡರ್ ಕೊಡಲು ನಾನು ತಯಾರಿ ಮಾಡಿದ್ದೇನೆ. ನೀತಿ ಸಂಹಿತೆ ಜಾರಿಯಾಗದೆ ಇದ್ದರೂ ಪೊಲೀಸರಿಂದ ತೊಂದರೆ ಕೊಡುತ್ತಿರುವುದು ಯಾಕೆ..? ಅನ್ನೋದು ಕೆಜಿಎಫ್ ಬಾಬು ಪ್ರಶ್ನೆ
ಅಧಿಕಾರಿಗಳಿಗೆ ಚಳಿ ಬಿಡಿಸಿದ ಜೆಡಿಎಸ್ ಅಭ್ಯರ್ಥಿ..

ಯಲಹಂಕ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮುನೇಗೌಡ ಮನೆ ಮೇಕೆ ಜಿಎಸ್ಟಿ ಅಧಿಕಾರಿಗಳ ತಂಡ ದಾಳಿ ಮಾಡಿತ್ತು. ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಮನೆಗೆ ನುಗ್ಗಿದ ಅಧಿಕಾರಿಗಳಿಗೆ ಜೆಡಿಎಸ್ ಅಭ್ಯರ್ಥಿ ಮುನೇಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವ ಆಧಾರದ ಮೇಲೆ ಮನೆಗೆ ದಾಳಿ ಮಾಡಿದ್ರಿ..? ದಾಳಿ ಮಾಡುವ ಅಧಿಕಾರವನ್ನು ನಿಮಗೆ ಯಾರು ಕೊಟ್ಟರು ಅಂತಾ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮುನೇಗೌಡರ ಮಾತಿಗೆ ಅಧಿಕಾರಿಗಳು ಥಂಡ ಹೊಡೆದಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಂಡಿದ್ದ ಮುನೇಗೌಡರು ಬೃಹತ್ ಸಮಾವೇಶ ಹಾಗೂ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದರು. ಯಲಹಂಕದ ಹೊಯ್ಸಳ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೀರೆ ವಿತರಿಸಲು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಈ ವೇಳೆ 13 ಬ್ಯಾಗ್ಗಳಲ್ಲಿದ್ದ ಸೀರೆಯನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಜಪ್ತಿ ಮಾಡಿದ್ದಾರೆ. ಯಲಹಂಕ ಕ್ಷೇತ್ರದ ನೋಡಲ್ ಅಧಿಕಾರಿ ಮೋಹನ್ ಕುಮಾರ್ ದೂರು ನೀಡಿದ್ದಾರೆ ಎನ್ನಲಾಗಿದೆ.
ಅಭ್ಯರ್ಥಿ ಕೇಳುತ್ತಿರೋ ಪ್ರಶ್ನೆಯಲ್ಲಿ ನ್ಯಾಯವಿದೆ..
ಚುನಾವಣೆ ಪೂರ್ವದಲ್ಲಿ ಈ ವಸ್ತುಗಳನ್ನು ಮತದಾರರಿಗೆ ನೀಡುತ್ತಿರುವುದು ಆಮೀಷವೇ.. ಅದರಲ್ಲಿ ಯಾವುದೇ ಅನುಮಾನವಿಲ್ಲ. ಚುನಾವಣೆ ಪೂರ್ವದಲ್ಲಿ ಈ ರೀತಿ ಜನರನ್ನು ಸೆಳೆಯುವುದಕ್ಕೆ ಆಮೀಷ ಒಡ್ಡುವುದು ನೈತಿಕವಾಗಿ ಸರಿಯಲ್ಲ. ಆದರೆ ಕಾನೂನಿನಲ್ಲಿ ಓರ್ವ ವ್ಯಕ್ತಿ ತನ್ನ ಸ್ವಂತ ಹಣದಲ್ಲಿ ಏನನ್ನೇ ಖರೀದಿ ಮಾಡಿ ಬಡವರು, ದೀನದಲಿತರು ಸೇರಿದಂತೆ ತನ್ನಿಷ್ಟ ಬಂದವರಿಗೆ ವಿತರಣೆ ಮಾಡುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಅದೂ ಕೂಡ ಈ ನಾಯಕರು ಸಾಮಾನ್ಯವಾಗಿ ಟ್ರಸ್ಟ್ ಮೂಲಕ ವಿತರಣೆ ಮಾಡುತ್ತಿದ್ದರೆ ಸಮಸ್ಯೆ ಇರುವುದೇ ಇಲ್ಲ. ಒಂದು ವೇಳೆ ಚುನಾವಣೆ ಘೋಷಣೆ ಆದರ ಬಳಿಕ ಆಮೀಷ ಒಡ್ಡುವುದು ಸರಿಯಲ್ಲ, ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ. ಆದರೆ ಸ್ವಂತ ಹಣದಲ್ಲಿ ಸಾಮಾನ್ಯ ವ್ಯಕ್ತಿಯೋರ್ವ ಯುಗಾದಿ ಹಬ್ಬದ ಪ್ರಯುಕ್ತ ದಿನಸಿ ವಸ್ತುಗಳನ್ನು ವಿತರಣೆ ಮಾಡುವುದರಲ್ಲಿ ತಪ್ಪೇನು..? ಎನ್ನುವುದು ಪ್ರಶ್ನೆ.

ರಾಜ್ಯದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಆಗ್ತಿದ್ಯಾ..?
ಚುನಾವಣಾ ಆಮೀಷ ಎನ್ನುವುದೇ ಆದರೆ ಸಣ್ಣಪುಟ್ಟವರ ಮೇಲೆ ಮಾತ್ರ ಯಾಕೆ ಅಧಿಕಾರಿಗಳು ದರ್ಪವನ್ನು ಮರೆಯುತ್ತಿದ್ದಾರೆ..? ಕುಮಾರಸ್ವಾಮಿ ಹೊಸ ತಾಲೂಕು ರಚನೆ ಹೆಸರಲ್ಲಿ 30 ಸಾವಿರ ಜನರಿಗೆ ಭರ್ಜರಿ ಬಾಡೂಟ ಹಾಕಿದಾಗ ಅಧಿಕಾರಿಗಳು ಎಲ್ಲಿದ್ದರು..? ಮಾದೇಶ್ವರ ದೇವಸ್ಥಾನ ಉದ್ಘಾಟನೆ ಹೆಸರಲ್ಲಿ ಚನ್ನಪಟ್ಟಣ ಕ್ಷೇತ್ರದ ಜನರಿಗೆ ಯೋಗೇಶ್ವರ್ ಊಟ ಹಾಕಿಸಿದಾಗ ಅಧಿಕಾರಿಗಳು ಕಣ್ಮುಚ್ಚಿಕೊಂಡಿದ್ದು ಯಾಕೆ..? ಸಿಎಂ ಭಾಗವಹಿಸುವ ಕಾರ್ಯಕ್ರಮಗಳಲ್ಲೂ ಸೀರೆ ಹಂಚಿಕೆ ಆಗಿದೆ. ಆಗ ಅಧಿಕಾರಿಗಳು ಯಾರೂ ಬದುಕಿರಲಿಲ್ಲವೇ..? ಎನ್ನುವುದು ಮೂಲಭೂತ ಪ್ರಶ್ನೆಯಾಗಿದೆ. ಎದುರಾಳಿಗಳು ಪ್ರಭಾವಿಯಾಗಿದ್ದು, ತಾವು ನೀಡುವ ವಸ್ತುಗಳು ಮಾತ್ರ ಮತದಾರರಿಗೆ ಸಿಗಬೇಕು, ಎದುರಾಳಿಗಳು ಹಂಚುವುದನ್ನೇ ತಡೆಯಬೇಕು ಎನ್ನುವುದಕ್ಕಾಗಿ ಈ ರೀತಿ ಮಾಡಲಾಗ್ತಿದೆ ಎನ್ನುವುದು ಆರೋಪ. ಚುನಾವಣಾ ನೀತಿ ಸಂಹಿತೆಯೇ ಜಾರಿಯಾಗದೆ ಅಧಿಕಾರಿಗಳು ಕೆಲವು ಕಡೆ ಆಕ್ಟೀವ್ ಆಗಿರುವುದು ಮುಂದಿನ ದಿನಗಳಲ್ಲಿ ಕೋರ್ಟ್ನಲ್ಲಿ ಛೀಮಾರಿ ಹಾಕಿಸಿಕೊಳ್ತಾರೆ ಎನ್ನುವುದು ಕಾನೂನು ತಜ್ಞರ ಮಾತು.
ಕೃಷ್ಣಮಣಿ