ಕೋಲಾರ : ಮಾ.19: ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡೋದು ಬಹುತೇಕ ಡೌಟ್. ಕಾರಣ ಏನಂದ್ರೆ ಕಾಂಗ್ರೆಸ್ ಹೈಕಮಾಂಡ್ ನಾಯಕರೇ ಸಿದ್ದರಾಮಯ್ಯಗೆ ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರಮುಖ ಕಾರಣ ಕೋಲಾರದಲ್ಲಿ ಕಾಂಗ್ರೆಸ್ ಪಾಲಿಗೆ ಸೂಕ್ತ ಕ್ಷೇತ್ರವಲ್ಲ ಅನ್ನೋದು. ಇದರ ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ಮತ್ತೊಂದು ರೀತಿಯಲ್ಲೂ ಚಿಂತನೆ ನಡೆಸಿದ್ದು, ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಿದ್ರೆ ಸ್ವಂತ ಕ್ಷೇತ್ರದಲ್ಲೇ ಪ್ರಚಾರಕ್ಕೆ ಕಾಲ ವ್ಯರ್ಥ ಮಾಡಬೇಕಾಗುತ್ತದೆ. ಕೊಲಾರದಲ್ಲಿ ಸಿದ್ದರಾಮಯ್ಯಗೆ ಕಠಿಣ ಪೈಪೋಟಿ ಎದುರಾಗುವ ಕಾರಣಕ್ಕೆ ಇಡೀ ರಾಜ್ಯವನ್ನು ಸುತ್ತುವುದಕ್ಕೆ ಅಡ್ಡಿಯಾಗುತ್ತದೆ. ಸಿದ್ದರಾಮಯ್ಯ ರಾಜ್ಯ ಸುತ್ತಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡದೆ ಇದ್ದರೆ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಅನ್ನೋದು ಹೈಕಮಾಂಡ್ ನಾಯಕರಿಗೆ ಮನವರಿಕೆ ಆಗಿದೆ. ಇದೇ ಕಾರಣದಿಂದ ಸಿದ್ದರಾಮಯ್ಯ ಕಾಂಗ್ರೆಸ್ ಹೆಚ್ಚು ಶಕ್ತಿಯುತವಾಗಿರುವ ಕ್ಷೇತ್ರದಿಂದ ಸ್ಪರ್ಧೆ ಮಾಡಿದೆ ಗೆಲುವಿನ ಚಿಂತೆ ಬಿಟ್ಟು ಪ್ರಚಾರ ಮಾಡಲು ಅವಕಾಶ ಇರುತ್ತದೆ ಎನ್ನುವುದು ನಂಬಿಕೆ.
ಕೋಲಾರ ಕಾಂಗ್ರೆಸ್ನಲ್ಲಿ ಒಗ್ಗಟ್ಟು ಅನ್ನೋದೇ ಮರಿಚಿಕೆ..!!
ಕೋಲಾರ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಹೆಚ್ಚು. ಕಳೆದ 24 ವರ್ಷಗಳಿಂದ ಕಾಂಗ್ರೆಸ್ ಒಂದು ಬಾರಿಯೂ ಗೆದ್ದಿಲ್ಲ. ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್ನಲ್ಲಿ ಒಗ್ಗಟ್ಟು ಆಗುವ ನಂಬಿಕೆ ಇತ್ತು. ಆದರೆ ಇದೀಗ ಮತ್ತೆ ಬಿಕ್ಕಟ್ಟು ಭೀತಿ ಎದುರಾಗಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ಹಾಲಿ ಶಾಸಕ ಶ್ರೀನಿವಾಸಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ಸಿಗರಲ್ಲಿ ಪೈಪೋಟಿ ಶುರುವಾಗುವ ಭಯ ಕಾಂಗ್ರೆಸ್ ಮುಖಂಡರಿಗೆ ಶುರುವಾಗಿದ್ದು, ಟಿಕೆಟ್ಗಾಗಿ ಹತ್ತಾರು ಆಕಾಂಕ್ಷಿಗಳು ಅಖಾಡಕ್ಕೆ ಇಳಿಯುವ ಸಾಧ್ಯತೆಗಳಿವೆ. ಒಂದು ವೇಳೆ ಆಕಾಂಕ್ಷಿಗಳು ಹೆಚ್ಚಾದ್ರೆ ಮತಗಳು ಛಿದ್ರ ಆಗುವ ಭೀತಿಯಲ್ಲಿ ಜಿಲ್ಲಾ ಕಾಂಗ್ರೆಸ್ ಇದೆ. ಸಿದ್ದರಾಮಯ್ಯ ಸ್ಪರ್ಧೆ ಮಾಡದೆ ಇದ್ದರೆ ನನಗೆ ಟಿಕೆಟ್ ಕೊಡಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಹೇಳಿದ್ರೆ, ಕಾಂಗ್ರೆಸ್ ನಾಯಕ ವಿ.ಆರ್ ಸುದರ್ಶನ್, ಊರು ಬಾಗಿಲು ಶ್ರೀನಿವಾಸ್, ಎಲ್.ಎ ಮಂಜುನಾಥ್, ಮುಬಾರಕ್, ಪರಿಷತ್ ಸದಸ್ಯ ನಸೀರ್ ಅಹಮದ್ ಕೂಡ ಸ್ಪರ್ಧೆ ಮಾಡುವ ಇಂಗಿತದಲ್ಲಿದ್ದಾರೆ.

ಕೋಲಾರದಲ್ಲಿ ದಲಿ ವರ್ಸಸ್ ಬ್ರಾಹ್ಮಣ ಪೈಪೋಟಿ..!
ಕೋಲಾರ ರಾಜಕಾರಣದಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರಾದ ಕೆ.ಹೆಚ್ ಮುನಿಯಪ್ಪ ಹಾಗು ಕೆ.ಆರ್ ರಮೇಶ್ ಕುಮಾರ್ ಮೇಲಾಟದಿಂದಲೇ ಕಾಂಗ್ರೆಸ್ ನಾಯಕರಲ್ಲಿ ಬಣಗಳು ಹೆಚ್ಚಾಗಿದ್ದು, ಈ ಇಬ್ಬರು ನಾಯಕರು ಹೊಂದಾಣಿಕೆ ಕಷ್ಟ ಸಾಧ್ಯ ಅನ್ನೋದು ಕಾಂಗ್ರೆಸ್ನಲ್ಲೇ ಕೇಳಿ ಬರುತ್ತಿರೋ ಮಾತು. ಇನ್ನು ಕೋಲಾರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸಿದ್ದರಾಮಯ್ಯ ಹೇಳಿದ ಕೂಡಲೇ K.H ಮುನಿಯಪ್ಪ ಒಳ ಏಟಿನ ಬಗ್ಗೆ ಎಚ್ಚರಿಸಿದ್ದರು ಎನ್ನಲಾಗಿದ್ದು, ಕೋಲಾರ ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಹೆಚ್ಚಿದೆ, ಪಕ್ಷ ಸಂಘಟನೆ ತುಂಬಾ ತಳಮಟ್ಟದಲ್ಲಿದೆ ಎಂದಿದ್ದರು ಎನ್ನಲಾಗಿದೆ. ಆದರೂ ಎಲ್ಲವನ್ನೂ ಸರಿ ಮಾಡಿಕೊಂಡು ಗೆದ್ದು ಬರ್ತೇನೆ ಎಂದಿದ್ದ ಸಿದ್ದರಾಮಯ್ಯಗೆ ಇತ್ತೀಚಿಗೆ ದಲಿತ ವಿರೋಧಿ ಸಿದ್ದರಾಮಯ್ಯ ಅನ್ನೋ ಅಭಿಯಾನ ಆತಂಕವನ್ನು ಉಂಟು ಮಾಡಿತ್ತು. ಇದೀಗ ಸಿದ್ದರಾಮಯ್ಯ ವರುಣಾ ಕಡೆಗೆ ಮುಖ ಮಾಡಲು ನಿರ್ಧಾರ ಮಾಡಿರುವುದು ಕೋಲಾರ ಕ್ಷೇತ್ರ ಸುಲಭವಾಗಿ ಜೆಡಿಎಸ್ ಪಾಲಾಗುವ ಸಾಧ್ಯತೆ ಬಗ್ಗೆ ಚರ್ಚೆಗಳು ಶುರುವಾಗಿದೆ. ಕಾಂಗ್ರೆಸ್ ಒಡೆದ ಮನೆ ಆದರೆ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.
ಜೆಡಿಎಸ್ ಭದ್ರಕೋಟೆ, ವ್ಯಕ್ತಿಗಿಂತಾ ಪಕ್ಷಕ್ಕೆ ಶಕ್ತಿ..!

ಸಿದ್ದರಾಮಯ್ಯ ಕೋಲಾರಕ್ಕೆ ಬಂದಿದ್ದರೆ ಜೆಡಿಎಸ್ಗೆ ಸ್ವಲ್ಪ ಪ್ರಾಸದಾಯಕ ಗೆಲುವು ಆಗ್ತಿತ್ತು. ಆದರೆ ಸಿದ್ದರಾಮಯ್ಯ ಕಣದಿಂದ ಹಿಂದೆ ಸರಿಯುತ್ತಿರೋದ್ರಿಂದ ಜೆಡಿಎಸ್ಗೆ ಗೆಲುವು ಸುಲಭದಲ್ಲೇ ಸಿಗಲಿದೆ ಎನ್ನಲಾಗಿದೆ. ಇನ್ನು ಬಹುತೇಕ ಕಾಂಗ್ರೆಸ್ ನಾಯಕರು ಜೆಡಿಎಸ್ ಕಡೆಗೆ ವಲಸೆ ಹೋಗುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಈಗಾಗಲೇ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಅಲ್ಪಸಂಖ್ಯಾತ ಮತದಾರರ ಮನಗೆದ್ದಿದ್ದು, ಮುಂದಿನ ದಿನಗಳಲ್ಲಿ ಒಕ್ಕಲಿಗರ ಜೊತೆಗೆ ದಲಿತರು, ಮುಸ್ಲಿಂ ಮತಗಳು ಜೆಡಿಎಸ್ ಪಕ್ಷಕ್ಕೆ ಸೇರಿಕೊಂಡು ಗೆದ್ದು ಬರಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಹಾಲಿ ಜೆಡಿಎಸ್ ಶಾಸಕ ಕೆ. ಶ್ರೀನಿವಾಸಗೌಡ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಕಡೆಗೆ ಹೆಜ್ಜೆ ಹಾಕಿದ್ರೂ ಜನರು ಮಾತ್ರ ಜೆಡಿಎಸ್ ಪಕ್ಷವನ್ನೇ ಗೆಲ್ಲಿಸುತ್ತಾರೆ ಎನ್ನಲಾಗ್ತಿದೆ. ಇದೀಗ ಅತ್ತ ಸಿದ್ದರಾಮಯ್ಯನೂ ಇಲ್ಲ, ಇತ್ತ ಕಾಂಗ್ರೆಸ್ನಲ್ಲಿ ಒಗ್ಗಟ್ಟಿಲ್ಲದೆ ಅತಂತ್ರ ಆಗಿರುವ ಶ್ರೀನಿವಾಸಗೌಡ, ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡದೆ ಇದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಎಂದಿದ್ದಾರೆ.
ಕೃಷ್ಣಮಣಿ