ಬೆಂಗಳೂರು : ರಾಜ್ಯ ಸರ್ಕಾರದ ಇಂದಿರಾ ಕಿಟ್ ಯೋಜನೆಯ ವಿಳಂಬದ ಬಗ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ಈ ಹಿಂದಿನ ಅವಧಿಯಲ್ಲಿ ಪಡೀತರ ಆಹಾರ ಧಾನ್ಯಗಳ ಬದಲಿಗೆ ಇಂದಿರಾ ಕಿಟ್ ನೀಡುವ ಮೂಲಕ ಅದರಲ್ಲಿಯೇ ಆಹಾರ ಧಾನ್ಯಗಳನ್ನು ವಿತರಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಾರದಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಘೋಷಣೆಗಷ್ಟೇ ಸೀಮಿತವಾದ ‘ಇಂದಿರಾ ಕಿಟ್’,ಈ ದಿವಾಳಿ ಸರ್ಕಾರದಲ್ಲಿ ‘ಇಂದಿರಾ ಕಿಟ್’ಗೂ ಕಂಟಕವಾಗಿದೆ. ಕಾಂಗ್ರೆಸ್ ಸರ್ಕಾರದ ಮತ್ತೊಂದು ಬಹುಪ್ರಚಾರಿತ ಭರವಸೆ ನೆಲಕಚ್ಚಿದೆ. ಬಡ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಜೊತೆಗೆ ತೊಗರಿಬೇಳೆ, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಒಳಗೊಂಡ ‘ಇಂದಿರಾ ಕಿಟ್’ ನೀಡುವುದಾಗಿ ರಾಜ್ಯದ ಜನತೆಗೆ ಭರವಸೆ ನೀಡಲಾಗಿತ್ತು. ಆದರೆ ಯೋಜನೆ ಜಾರಿಯಾಗುವ ಮೊದಲೇ ಕೈಬಿಡಲಾಗಿದೆ ಎಂಬ ವರದಿಗಳು ಸರ್ಕಾರದ ಅಸಮರ್ಥತೆ, ದಿವಾಳಿತನ ಮತ್ತು ಆಡಳಿತ ವೈಫಲ್ಯವನ್ನು ಬಯಲಿಗೆಳೆದಿವೆ ಎಂದು ಟೀಕಿಸಿದ್ದಾರೆ.
ಘೋಷಣೆ ಜೋರಾಗಿತ್ತು, ಅನುಷ್ಠಾನ ಮಾತ್ರ ಶೂನ್ಯ. ವರದಿಗಳ ಪ್ರಕಾರ, ಟೆಂಡರ್ ಪ್ರಕ್ರಿಯೆ ವಿವಾದ, ಆಡಳಿತಾತ್ಮಕ ಗೊಂದಲ ಮತ್ತು ಭಾರೀ ವಿಳಂಬದ ನಡುವೆ ಸಿಲುಕಿ, ಎಂಟು ತಿಂಗಳಾದರೂ ಅಂತಿಮಗೊಳ್ಳಲಿಲ್ಲ. ಈಗ ಇಡೀ ಯೋಜನೆಯನ್ನೇ ಕೈಬಿಟ್ಟಿರುವುದು, ನಾಡಿನ ಕೋಟ್ಯಂತರ ಬಡ ಕುಟುಂಬಗಳ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ರದ್ದಾಗಿದ್ದ ಭಾರತ-ಬಾಂಗ್ಲಾದೇಶ ಸರಣಿ ಮತ್ತೆ ಆಯೋಜನೆ? BCB ಅಧ್ಯಕ್ಷರಿಂದ ದೊಡ್ಡ ಮಾಹಿತಿ
ಟೆಂಡರ್ ಪ್ರಕ್ರಿಯೆಯಲ್ಲಿನ ಗೊಂದಲಗಳಿಗೆ ಯಾರು ಹೊಣೆ? ಘೋಷಿಸಿದ ಯೋಜನೆಯನ್ನು ಜಾರಿಗೊಳಿಸುವ ಸಾಮರ್ಥ್ಯವೇ ಸರ್ಕಾರಕ್ಕೆ ಇರಲಿಲ್ಲವೇ? 1.25 ಕೋಟಿ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ನೀಡುವ ಮಾತು ಕೊಟ್ಟ ಸರ್ಕಾರ, ಈಗ ಆ ಮಾತಿನಿಂದ ಏಕೆ ಹಿಂದೆ ಸರಿಯಿತು? ಗ್ಯಾರಂಟಿಗಳ ಹೆಸರಿನಲ್ಲಿ ಬೊಕ್ಕಸ ಖಾಲಿ ಮಾಡಿ, ಈಗ ಬಡವರ ಹೊಟ್ಟೆಯ ಮೇಲೆಯೇ ತಣ್ಣೀರು ಬಟ್ಟೆ ಹಾಕುತ್ತಿದ್ದೀರಾ? ಸಿಎಂ ಡಿಕೆ ಶಿವಕುಮಾರ್ ಅವರೇ, ಇದು ಕೇವಲ ಒಂದು ಯೋಜನೆ ರದ್ದಾಗಿರುವ ವಿಷಯವಲ್ಲ. ಇದು ನಿಮ್ಮ ಸರ್ಕಾರದ ಆಡಳಿತ ವೈಫಲ್ಯ, ಆರ್ಥಿಕ ದಿವಾಳಿತನ ಮತ್ತು ಕೊಟ್ಟ ಮಾತಿಗೆ ಬೆಲೆ ಇಲ್ಲದ ವಚನ ಭ್ರಷ್ಟ, ವಿಶ್ವಾಸಘಾತುಕ ರಾಜಕಾರಣಕ್ಕೆ ಜೀವಂತ ಸಾಕ್ಷಿ ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳುವ ಮೂಲಕ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಮೊದಲು ಭರ್ಜರಿ ಘೋಷಣೆ… ನಂತರ ಕೋಟ್ಯಾಂತರ ರೂಪಾಯಿ ಪ್ರಚಾರ… ಕೊನೆಗೆ ಮೌನವಾಗಿ ಯೋಜನೆಗೆ ಕತ್ತರಿ. ಇದೇನಾ ನಿಮ್ಮ “ಕರ್ನಾಟಕ ಮಾದರಿ”? ಜನರ ವಿಶ್ವಾಸದೊಂದಿಗೆ ಆಟವಾಡಿ, ಬಡವರ ಹೆಸರಿನಲ್ಲಿ ರಾಜಕೀಯ ಮಾಡಿ, ಕೊನೆಗೆ ಅವರ ಪಾಲಿನ ಯೋಜನೆಗಳನ್ನೇ ಕೈಬಿಡುವ ಸರ್ಕಾರಕ್ಕೆ ಜನತಾ ನ್ಯಾಯಾಲಯದಲ್ಲೇ ಉತ್ತರ ಸಿಗಲಿದೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸಮಯ ಬಂದಾಗ ಈ ಜನವಿರೋಧಿ, ವಿಶ್ವಾಸಘಾತುಕ ಆಡಳಿತಕ್ಕೆ ಮಟಪೆಟ್ಟಿಗೆ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ. ಘೋಷಣೆ ಬೆಟ್ಟದಷ್ಟು… ಸಾಧನೆ ಶೂನ್ಯ!
ಭರವಸೆ ಕಾಂಗ್ರೆಸ್‌ನದು… ಮೋಸ ಮಾತ್ರ ಬಡವರ ಪಾಲು! ಎಂದು ಅಶೋಕ್ ಲೇವಡಿ ಮಾಡಿದ್ದಾರೆ.






