ಭಾರತದ ರಾಜ್ಯಗಳು ಹಾಗೂ ಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ 116 ನಾಗರಿಕ ಸೇವಾ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಗುರುವಾರ ಪತ್ರ ಬರೆದಿದ್ದು, ದೇಶದಲ್ಲಿ ಕೋವಿಡ್ 19 ಗೆ ಸಂಬಂಧಿಸಿದಂತೆ ನಿರ್ಣಾಯಕ ಸಂಗತಿಗಳ ಬಗ್ಗೆ ಗಮನಹರಿಸುವುದನ್ನು ಬಿಟ್ಟು ಅದರ ಕುರಿತ ವಿವಿಧ ವ್ಯಖ್ಯಾನಗಳ ಬಗ್ಗೆ ಸರಕಾರವು ಚಿಂತಿತವಾಗಿರುವಂತೆ ತೋರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಪತ್ರದ ವಿವರ ಹೀಗಿದೆ:
ಆತ್ಮೀಯ ಪ್ರಧಾನ ಮಂತ್ರಿಯವರೇ,
ನಾವು, ಭಾರತದ ಸಂವಿಧಾನದ ಬಗ್ಗೆ ಗಾಢವಾದ ಬದ್ಧತೆ ಇರುವ ಮತ್ತು ಯಾವುದೇ ರಾಜಕೀಯಗಳಿಗೆ ಹೊರತಾದ ಅಖಿಲ ಭಾರತ ಮತ್ತು ಕೇಂದ್ರ ಸೇವೆಗಳ ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳ ಒಂದು ಸಮೂಹವಾಗಿದ್ದು, ಈ ಹಿಂದೆಯೂ ಕಾರ್ಯನಿರ್ವಾಹಕ ಕ್ರಮಗಳು ಸಂವಿಧಾನದ ನಿಬಂಧನೆಗಳನ್ನು ಉಲ್ಲಂಘನೆಯಾಗಿರುವುದಾಗಿ ನಮಗೆ ಅನಿಸಿದಾಗ, ನಿಮಗೆ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳಿಗೆ ಹಲವಾರು ಸಂದರ್ಭಗಳಲ್ಲಿ ಪತ್ರ ಬರೆದವರಿದ್ದೇವೆ. ಇಂದು, ಕೋವಿಡ್ ಸಾಂಕ್ರಾಮಿಕದ ಸಂಕಷ್ಟದ ನಡುವೆ ಮತ್ತು ನಮ್ಮ ದೇಶದ ಜನರನ್ನು ಅದರ ಪರಿಣಾಮಗಳು ಉಂಟು ಮಾಡಿರುವ ನೋವುಗಳ ಆವರಿಸಿರುವ ಮಧ್ಯೆ, ನಾವು ನಿಮಗೆ ಸಂಕಟ ಮತ್ತು ಮುನಿಸಿನಿಂದ ಈ ಪತ್ರ ಬರೆಯುತ್ತಿದ್ದೇವೆ. ಈ ಸಾಂಕ್ರಾಮಿಕ ಪಿಡುಗು ಇಡೀ ಜಗ್ಗತ್ತನ್ನು ಭೀತಿಗೊಳಪಡಿಸಿದೆ ಮತ್ತು ಅದು ಭಾರತದ ನಾಗರಿಕರನ್ನು ಕೂಡ ತಟ್ಟದೆ ಬಿಡಲಾರದು ಎಂದು ನಮಗೆ ತಿಳಿದಿದೆ. ಆದಾಗ್ಯೂ, ಕೇವಲ ವೈದ್ಯಕೀಯ ನೆರವಿಗಾಗಿ ಮೊರೆ ಇಡುತ್ತಿರುವ ನಾಗರಿಕರ ಅಳಲು ಮತ್ತು ಅದರ ಸಾವಿರಾರು ಸಂಖ್ಯೆಯಲ್ಲಿ ಉಂಟಾಗುತ್ತಿರುವ ಸಾವುಗಳ ಸಂಖ್ಯೆ ಮಾತ್ರವಲ್ಲ, ಆದರೆ ಬಿಕ್ಕಟ್ಟಿನ ಅಗಾಧತೆಗೆ ಮತ್ತು ಅದರ ಭಾರತೀಯ ಸಮುದಾಯದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅದರ ಪರಿಣಾಮಗಳ ಬಗ್ಗೆ ಗಮನ ಕೊಡದ ನಿಮ್ಮ ವರ್ತನೆ ನಮ್ಮ ಇಂದ್ರಿಯಗಳನ್ನು ಪ್ರತಿದಿನ ನಿಶ್ಚೇಷ್ಟಗೊಳಿಸುತ್ತಿದೆ.
ಕೇಂದ್ರ ಸಂಪುಟದ ಆಡಳಿತದ ಅವಿರತವಾದ ಜೀರ್ಣವಾಗುವಿಕೆ, ಬೇರೆ ಬೇರೆ ರಾಜ್ಯಗಳೊಂದಿಗೆ, ಅದರಲ್ಲೂ ವಿಶೇಷವಾಗಿ ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷದ, ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳೊಂದಿಗೆ ಒಕ್ಕೂಟದ ಸಂಬಂಧದ ಕ್ಷೀಣಿಸುವಿಕೆ, ತಜ್ಞರು ಮತ್ತು ಸಂಸದೀಯ ಸಮಿತಿಗಳೊಂದಿಗೆ ಮಾಹಿತಿಪೂರ್ಣ ಸಮಾಲೋಚನೆಗಳ ಕೊರತೆ, ಸಮಯೋಚಿತವಾಗಿ ತಜ್ಞರ ಸಮಿತಿಗಳ ಸಲಹೆಗಳನ್ನು ಸ್ವೀಕರಿಸುವಲ್ಲಿನ ವೈಫಲ್ಯ ಮತ್ತು ರಾಜ್ಯ ಸರಕಾರಗಳೊಂದಿಗೆ ಪರಿಣಾಮಕಾರಿ ಸಮನ್ವಯದ ಅನುಪಸ್ಥಿತಿಯು ಬಡವರಿಗೆ ಮತ್ತು ಹಿಂದುಳಿದವರಿಗೆ ಹಾನಿಕಾರಕ ಪರಿಣಾಮಗಳನ್ನು ಬೀರಿದೆ. ಅಂತರರಾಷ್ಟ್ರೀಯ ಸಮುದಾಯ ಮತ್ತು ನಮ್ಮದೇ ವಿಜ್ಞಾನಿಗಳ ಎಚ್ಚರಿಕೆಗಳ ಹೊರತಾಗಿಯೂ, ಮೊದಲನೆಯ ಮತ್ತು ಎರಡನೆಯ ಅಲೆಗಳ ನಡುವೆ ಸಿಕ್ಕಿದ್ದ ಅವಧಿಯನ್ನು ಸೂಕ್ತ ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಸರಬರಾಜು, ವೆಂಟಿಲೇಟರ್‌ಗಳು ಮತ್ತು ಔಷಧಗಳು ಮತ್ತು ಇತರ ವೈದ್ಯಕೀಯ ಸರಬರಾಜುಗಳಂತಹ ನಿರ್ಣಾಯಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಬಳಸಲಾಗಲಿಲ್ಲ. ಇನ್ನೂ ಹೆಚ್ಚು ಖಡಕ್ಕಾಗಿ ಹೇಳಬೇಕೆಂದರೆ, ಭಾರತವು ವಿಶ್ವದ ಪ್ರಮುಖ ಲಸಿಕೆ ಪೂರೈಕೆದಾರರಲ್ಲಿ ಒಂದೆನಿಸಿದ್ದರೂ, ಸಾಕಷ್ಟು ಪ್ರಮಾಣದ ಲಸಿಕೆಗಳ ದಾಸ್ತಾನುಗಳನ್ನು ವ್ಯವಸ್ಥೆ ಮಾಡಲು ಯಾವುದೇ ಮುಂಗಡ ಯೋಜನೆಯನ್ನು ಮಾಡಲಾಗಿಲ್ಲ, ನೀವು ಮತ್ತು ನಿಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ವಿವಿಧ ವೇದಿಕೆಗಳಲ್ಲಿ ಪ್ರದರ್ಶಿಸಿದ ‘ಹೊಂದಾಣಿಕೆ’ಯು ಅಸ್ತಿತ್ವದಲ್ಲಿದ್ದ ಭೀತಿಯ ಗಮನವನ್ನು ಬೇರೆಡೆ ಸೆಳೆದಿದ್ದು ಮಾತ್ರವಲ್ಲ, ರಾಜ್ಯ ಸರಕಾರಗಳು ಮತ್ತು ನಾಗರಿಕರು ತಮ್ಮ ನಿರ್ಣಾಯಕ ಘಟ್ಟದಲ್ಲಿ ತಮ್ಮ ಅಸ್ತ್ರ ತ್ಯಾಗ ಮಾಡಲು ಕಾರಣವಾಗಿತ್ತು. ಇದರ ಫಲವಾಗಿ, ನಿಮ್ಮ ಸರಕಾರದಿಂದಾಗಿ ತನ್ನ ಸ್ವಂತ ಜನರ ಮೇಲೆ ಉಂಟಾಗಿರುವ ಸಂಕಟವನ್ನು ಕಡಿಮೆ ಮಾಡಲು ನಿಮ್ಮ ಆತ್ಮನಿರ್ಭರ ಭಾರತವು ಬಾಹ್ಯ ಜಗತ್ತಿನ ನೆರವು ಪಡೆಯುವಂತಾಗಿದೆ.
ಮಾರ್ಚ್ 2020 ರಲ್ಲಿ ಸಾಂಕ್ರಾಮಿಕ ರೋಗದ ಪ್ರಾರಂಭದ ದಿನದಿಂದಲೂ ನಿಮ್ಮ ಸರಕಾರವು ಸಾಂಕ್ರಾಮಿಕ ಪಿಡುಗನ್ನು ನಿಭಾಯಿಸಲು ರಾಜ್ಯ ಸರಕಾರಗಳಿಗೆ ಅಗತ್ಯವಿರುವ ಹಣವನ್ನು ಎಂದಿಗೂ ವ್ಯವಸ್ಥಿತವಾಗಿ ಅಂದಾಜು ಮಾಡಿಲ್ಲ. ಈಗಾಗಲೇ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಇದ್ದರೂ ಪಿಎಂ-ಕೇರ್ಸ್ ನಿಧಿಯನ್ನು ಸ್ಥಾಪಿಸಲಾಯಿತು. ಅದರ ಮೂಲಕ ಸಂಗ್ರಹಿಸಲಾದ ಹಣ ಮತ್ತು ಆಗಿರುವ ವಿವಿಧ ವಸ್ತುಗಳ ಮೇಲಿನ ಖರ್ಚಿನ ಯಾವುದೇ ವಿವರ ಬಹಿರಂಗಪಡಿಸಲಾಗಿಲ್ಲ. ಕಾರ್ಪೊರೇಟ್‌ಗಳು ಮತ್ತು ಸಾರ್ವಜನಿಕರಿಂದ ವಿವಿಧ ಮುಖ್ಯಮಂತ್ರಿ ಪರಿಹಾರ ನಿಧಿಗಳಿಗೆ ಮತ್ತು ಎನ್‌ಜಿಒಗಳಿಗೆ ಹೋಗಬಹುದಾಗಿದ್ದ ಹಣವನ್ನು ಈ ನಿಧಿಯು ಸ್ವತಃ ಸೆಳೆದುಕೊಂಡಿತು. ರಾಜ್ಯಗಳಿಗೆ ಬಾಕಿ ಇರುವ ಜಿ.ಎಸ್.ಟಿ. ಬಾಕಿಯನ್ನು ಸಕಾಲದಲ್ಲಿ ಪಾವತಿಸಲು ನಿಮ್ಮ ಸರಕಾರವು ತಡ ಮಾಡಿರದಿದ್ದರೆ, ಕೋವಿಡ್ ಗೆ ಸಂಬಂಧಿಸಿದ ಆರೋಗ್ಯ ಸೇವಾ ವೆಚ್ಚವನ್ನು ಭರಿಸಲು ರಾಜ್ಯಗಳಿಗೆ ಅನುಕೂಲವಾಗುತ್ತಿತ್ತು. ಇದೇ ವೇಳೆ , ನಿಮ್ಮ ಸರಕಾರವು ಸೆಂಟ್ರಲ್ ವಿಸ್ತಾ ಜೀರ್ಣೋದ್ಧಾರ ಯೋಜನೆಗೆ ಅನಗತ್ಯ ಖರ್ಚು ಮಾಡುತ್ತಿದ್ದು, ಈ ಹಣವನ್ನು ಈಗಿನ ಬಿಕ್ಕಟ್ಟನ್ನು ನಿಭಾಯಿಸಲು ಹೆಚ್ಚು ಪರಿಣಾಮಕಾರಿಯಾಗಿ ಬಳಸಬಹುದಿತ್ತು. ಇದಲ್ಲದೆ, ಎನ್‌ಜಿಒಗಳಿಗೆ, ವಿಶೇಷವಾಗಿ ವಿದೇಶಿ ದೇಣಿಗೆಗಳನ್ನು ಪಡೆಯುವವರಿಗೆ ವಿಧಿಸಿರುವ ಕಠಿಣ ನಿರ್ಬಂಧಗಳು ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಪರಿಹಾರ ಒದಗಿಸುವ ಅವರ ಪ್ರಯತ್ನಗಳಿಗೆ ಹಿನ್ನಡೆ ಉಂಟುಮಾಡಿದೆ
ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತದ ವಿಧಾನ ಸಭೆಗಳಿಗೆ ಚುನಾವಣೆ ನಡೆಸುವುದು ಅನಿವಾರ್ಯವಾಗಿದ್ದರೂ, ನೀವು, ಶ್ರೀಯುತ ಪ್ರಧಾನ ಮಂತ್ರಿ ಮತ್ತು ನಿಮ್ಮ ಪಕ್ಷದ ಕಾರ್ಯಕರ್ತರು ವಿವಿಧ ರಾಜ್ಯಗಳಲ್ಲಿ ಬೃಹತ್ ಸಾರ್ವಜನಿಕ ಸಮಾವೇಶಗಳನ್ನು ನಡೆಸುವ ವೇಳೆ ಎಲ್ಲಾ ಎಚ್ಚರಿಕೆಗಳನ್ನು ಗಾಳಿಗೆ ತೂರಿದಿರಿ. ಬದಲಿಗೆ ನಿಮ್ಮ ಪಕ್ಷದ ಪ್ರಚಾರವು ಇತರೆ ರಾಜಕೀಯ ಪಕ್ಷಗಳಿಗೆ ಒಂದು ಉತ್ತಮ ಉದಾಹರಣೆಯಾಗಬಹುದಿತ್ತು. ಕೋವಿಡ್ ಸುರಕ್ಷತಾ ನಿಯಮಗಳಿಗೆ ಸಂಬಂಧಿಸಿದಂತೆ ಅತಿ ಕಡಿಮೆ ಪ್ರಮಾಣದ ಸ್ಪಂದನೆಯೊಂದಿಗೆ ಹರಿದ್ವಾರದಲ್ಲಿ ಕುಂಭಮೇಳವನ್ನು ಆಯೋಜಿಸಲಾಯಿತು. ವೈರಸ್ ನ ಎರಡನೇ ಅಲೆಯು ಉಲ್ಬಣವಾಗುವ ಗಂಭೀರ ಬೆದರಿಕೆ ಇರುವಾಗಲೇ ಇಂಥ ಎರಡು “ಸೂಪರ್ ಸ್ಪ್ರೆಡರ್” ಘಟನೆಗಳು ನಡೆದ ಪರಿಣಾಮವಾಗಿ, ನಾವಿಂದು ದೇಶದ ಗ್ರಾಮೀಣ ಒಳನಾಡಿನಾದ್ಯಂತ ಕೋವಿಡ್ ವೈರಸ್ ವ್ಯಾಪಕವಾಗಿ ಹರಡಿರುವ ಭಯಾನಕ ದೃಶ್ಯಕ್ಕೆ ನಾವೀಗ ಸಾಕ್ಷಿಯಾಗುತ್ತಿದ್ದೇವೆ.
ಅಸ್ತಿತ್ವದಲ್ಲಿರುವ ನಿರ್ಣಾಯಕ ವಿಷಯಗಳಿಗೆ ಗಮನಕೊಡುವುದರ ಬದಲು ನಿಮ್ಮ ಸರಕಾರವು ಕೋವಿಡ್ ಬಿಕ್ಕಟ್ಟಿನ ನಿಮ್ಮ ‘ಸಮರ್ಥ’ ನಿರ್ವಹಣೆಯ ವ್ಯಾಖ್ಯಾನಗಳನ್ನು ನಿರ್ವಹಿಸುವ ಬಗ್ಗೆ ಹೆಚ್ಚು ಕಾಳಜಿಯನ್ನು ತೋರಿಸುತ್ತಿದೆ. ವಿವಿಧ ರಾಜ್ಯಗಳಲ್ಲಿ ನಡೆಸಲಾಗುತ್ತಿರುವ ಕೋವಿಡ್ ಪರೀಕ್ಷೆಗಳ ಅಧಿಕೃತ ದತ್ತಾಂಶಗಳು, ಸಕ್ರಿಯ ಪ್ರಕರಣಗಳ ಸಂಖ್ಯೆ, ಆಸ್ಪತ್ರೆಗೆ ದಾಖಲಾದ ವ್ಯಕ್ತಿಗಳ ಸಂಖ್ಯೆ ಮತ್ತು ಸಾವುನೋವಿನ ನಿಖರ ಅಂಕಿ ಸಂಖ್ಯೆಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಿಲ್ಲ. ಇದು ಬೇರೆ ಬೇರೆ ರಾಜ್ಯಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವುದರೊಂದಿಗೆ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ವಿವಿಧ ರಾಜ್ಯಗಳು ರೂಪಿಸಬೇಕಾದ ಸೂಕ್ತ ಕ್ರಮಗಳ ಬಗೆಗೂ ಗಂಭೀರ ಪರಿಣಾಮಗಳನ್ನು ಬೀರಿದೆ.
ಈ ಕೆಳಗಿನ ಕ್ರಮಗಳನ್ನು ತಕ್ಷಣವೇ ಕೈಗೊಳ್ಳುವಂತೆ ನಾವು ಭಾರತ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ:
ಭಾರತದ ಎಲ್ಲಾ ನಾಗರಿಕರಿಗೆ ಉಚಿತ, ಸಾರ್ವತ್ರಿಕ ಲಸಿಕೀಕರಣ ಮಾಡಬೇಕು. ಲಭ್ಯವಿರುವ ಎಲ್ಲಾ ಮೂಲಗಳಿಂದ ಲಸಿಕೆಗಳನ್ನು ಖರೀದಿಸುವುದನ್ನು ಭಾರತ ಸರಕಾರವು ಕೇಂದ್ರೀಕರಣ ಮಾಡಬೇಕು ಮತ್ತು ಅವುಗಳನ್ನು ರಾಜ್ಯ ಸರಕಾರಗಳು ಹಾಗೂ ಕಾರ್ಯಗತಗೊಳಿಸುವ ಆದರ ಇತರೆ ಸಂಸ್ಥೆಗಳಿಗೂ ಪೂರೈಸಬೇಕು.
ದೇಶದ ಎಲ್ಲಾ ರಾಜ್ಯಗಳಲ್ಲೂ ಆಮ್ಲಜನಕ ಸೌಲಭ್ಯಗಳು, ಜೀವ ಉಳಿಸುವ ಅಗತ್ಯ ಔಷಧಗಳು ಮತ್ತು ಉಪಕರಣಗಳು ಹಾಗೂ ಆಸ್ಪತ್ರೆಯ ಹಾಸಿಗೆಗಳ ಲಭ್ಯತೆಯ ಸಮರ್ಪಕತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ರಾಜ್ಯ ಸರಕಾರಗಳೊಂದಿಗೆ ಪರಿಣಾಮಕಾರಿಯಾದ ಸಮನ್ವಯ ಏರ್ಪಡಿಸಬೇಕು.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರ್.ಟಿ-ಪಿಸಿಆರ್ ಪರೀಕ್ಷೆಯ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬೇಕು.
ರಾಜ್ಯಗಳು ದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸಾಕಷ್ಟು ಹಣ ಲಭ್ಯವಾಗುವಂತೆ ಮಾಡಬೇಕು ಮತ್ತು ಸೆಂಟ್ರಲ್ ವಿಸ್ತಾ ಜೀರ್ಣೋದ್ಧಾರ ಯೋಜನೆಯಂತಹ ಅನಿವಾರ್ಯವಲ್ಲದ ಯೋಜನೆಗಳ ಮೇಲಿನ ಖರ್ಚನ್ನು ಸ್ಥಗಿತಗೊಳಿಸಬೇಕು.
- ಸಾಂಕ್ರಾಮಿಕತೆಯ ತೀವ್ರತೆ ಮತ್ತು ಹಸಿವು ಹಾಗೂ ಜೀವನೋಪಾಯದ ಬಿಕ್ಕಟ್ಟು ಕಡಿಮೆಯಾಗುವವರೆಗೂ ಉದ್ಯೋಗಾವಕಾಶಗಳನ್ನು ಕಳೆದುಕೊಂಡಿರುವ ಸಮಾಜದ ವಂಚಿತ ಮತ್ತು ಬಡ ವರ್ಗದ ಕುಟುಂಬಗಳಿಗೆ ಮತ್ತು ಅಸಂಘಟಿತ ಕಾರ್ಮಿಕರ ಕುಟುಂಬಗಳಿಗೆ ಉಚಿತ ಪಡಿತರವನ್ನು ಒದಗಿಸಲು ಅಸ್ತಿತ್ವದಲ್ಲಿರುವ ಆಹಾರ ಧಾನ್ಯದ ದಾಸ್ತಾನುಗಳನ್ನು ಹೆಚ್ಚಿಸುವ ವ್ಯವಸ್ಥೆ ಮಾಡಬೇಕು.
- ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗಾಗಿ ಅಸ್ತಿತ್ವದಲ್ಲಿರುವ ಪೌಷ್ಠಿಕಾಂಶ ಯೋಜನೆಗಳಿಗಾಗಿ ಮತ್ತು ಅಂಗನವಾಡಿ ಮಕ್ಕಳ ವಯೋಮಾನದ ಮಕ್ಕಳು ಮತ್ತು ತಾಯಂದಿರಿಗೆ ಪೂರಕ ಪೌಷ್ಠಿಕಾಂಶ ಒದಗಿಸಲು ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸುವುದಲ್ಲದೆ, ಅಗತ್ಯ ಸೌಲಭ್ಯವನ್ನು ಸಂಪೂರ್ಣವಾಗಿ ಒದಗಿಸಬೇಕು.
- ಸಮಾಜದ ಅಗತ್ಯವಿರುವ ವರ್ಗಗಳು ತಮ್ಮ ಆಕಸ್ಮಿಕ ಖರ್ಚುಗಳು ಮತ್ತು ಅನಿರೀಕ್ಷಿತ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾಸಿಕ ಆದಾಯದ ಬೆಂಬಲವನ್ನು ಒದಗಿಸಬೇಕು. ಅರ್ಥಶಾಸ್ತ್ರಜ್ಞರು ಪ್ರತಿ ಮನೆಗೆ ತಿಂಗಳಿಗೆ 7 ಸಾವಿರ ರೂಪಾಯಿ ಶಿಫಾರಸು ಮಾಡಿದ್ದು, ಇದು ಕನಿಷ್ಠ ವೇತನಕ್ಕೆ ಸಮಾನವಾಗಿರುತ್ತದೆ.
- ಎನ್.ಜಿ.ಒಗಳಿಗೆ ವಿಧಿಸಲಾಗಿರುವ ಎಫ್.ಸಿ.ಆರ್.ಎ. ನಿರ್ಬಂಧಗಳನ್ನು ತಕ್ಷಣವೇ ತೆಗೆದುಹಾಕಬೇಕು. ಇದರಿಂದಾಗಿ ಅವರು ವಿದೇಶಿ ಸರಕಾರಗಳು ಮತ್ತು ದತ್ತಿ ಸಂಸ್ಥೆಗಳು ಕೋವಿಡ್ ನಿರ್ವಹಣೆ ಹಾಗೂ ಮತ್ತಿತರ ಸಂಬಂಧಿತ ಚಟುವಟಿಕೆಗಳಿಗೆ ಒದಗಿಸುವ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.
- ಎಲ್ಲಾ ದತ್ತಾಂಶಗಳನ್ನು ಸಾರ್ವಜನಿಕ ಕ್ಷೇತ್ರಗಳಲ್ಲಿ ಇರಿಸಬೇಕು ಮತ್ತು ಸಾಕ್ಷಿ ಆಧಾರಿತ ನೀತಿ ಕ್ರಮಗಳನ್ನು ಜಾರಿಗೊಳಿಸಲಾಗಿದೆಯೆ ಎಂಬುದನ್ನು ಖಾತರಿಪಡಿಸಿಕೊಳ‍್ಳಬೇಕು.
- ಸಲಹೆ ನೀಡಲು ಮತ್ತು ಸರಕಾರದ ಎಲ್ಲಾ ತೀರ್ಮಾನಗಳ ಬಗ್ಗೆ ಪರಿಶೀಲಿಸಲು ಹಾಗೂ ದೇಶದ ನಾನಾ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗದ ನಿಯಂತ್ರಣದ ಮೇಲ್ವಿಚಾರಣೆ ಮಾಡಲು ಕೇಂದ್ರೀಯ ಮಟ್ಟದಲ್ಲಿ ಸರ್ವಪಕ್ಷಗಳ ಸಮಿತಿಯೊಂದನ್ನು ರಚಿಸಬೇಕು.
ಮೇಲಿನವುಗಳು ರಾಜಕೀಯ-ಆಡಳಿತಾತ್ಮಕ ಹಂತದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ರೂಪಿಸುವುದಾದರೂ, ಅತ್ಯಂತ ಪ್ರಮುಖವಾದ ಕ್ರಮವು, ತಮ್ಮ ಹತ್ತಿರದ ಬಂಧುಗಳು ಮತ್ತು ಆತ್ಮೀಯರ ಅಗಲುವಿಕೆಯಿಂದ ತೀವ್ರವಾಗಿ ಘಾಸಿಗೊಳಗಾಗಿರುವ ಜನಸಾಮಾನ್ಯರ ಆತ್ಮವಿಶ್ವಾಸ ಮತ್ತು ಸ್ಥೈರ್ಯವನ್ನು ವೃದ್ಧಿಸುವುದಕ್ಕೆ ಸಂಬಂಧಿಸಿದೆ. ಸಹಾನುಭೂತಿ ಮತ್ತು ಕಾಳಜಿಯು ಸದಾ ಸರಕಾರದ ನೀತಿಯ ಮೂಲಾಧಾರಗಳಾಗಿರಬೇಕು. ಈ ಬಿಕ್ಕಟ್ಟನ್ನು ನಾವು ಎಷ್ಟು ಪರಿಣಾಮಕಾರಿಯಾಗಿ ನಿಭಾಯಿಸುತ್ತೇವೆ ಎಂಬುದು ಇತಿಹಾಸವು ನಮ್ಮ ಸಮಾಜವನ್ನು, ನಿಮ್ಮ ಸರಕಾರವನ್ನು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಬಗ್ಗೆ ವೈಯಕ್ತಿಕವಾಗಿ ನಿರ್ಣಯಿಸುತ್ತದೆ.
ಸತ್ಯಮೇವ ಜಯತೆ
ನಿಮ್ಮ ವಿಶ್ವಾಸಿ,
ಸಾಂವಿಧಾನಿಕ ಆಚರಣೆಯ ಸಮೂಹ
(ಕಾನ್ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್ )
(116 ಸಹಿಗಳು)