ಕೆಪಿಎಸ್ಸಿ (Karnataka Public Service Commission)ನಲ್ಲಿ ಸಾಕಷ್ಟು ಗೊಂದಲಕಾರಿ ಘಟನೆಗಳು ನಡೆಯುತ್ತಲೇ ಇವೆ. ಕಾರ್ಯದರ್ಶಿ ವಿಚಾರದಲ್ಲೂ ಗೊಂದಲ ಉಂಟಾಗಿತ್ತು. ಕೆ.ಎಸ್ ಲತಾಕುಮಾರಿಗೆ 10 ದಿನ ರಜೆ ಮೇಲೆ ಕಳುಹಿಸಿದ್ದ ಸರ್ಕಾರ, ಆ ಬಳಿಕ ಏಕಏಕಿ ವರ್ಗಾವಣೆ ಮಾಡಿತ್ತು. ಕೆಪಿಎಸ್ಸಿ ಅಧ್ಯಕ್ಷರು ಹಾಗು ಸದಸ್ಯರ ಒತ್ತಡದಿಂದಲೇ ಸರ್ಕಾರ ಇದನ್ನೆಲ್ಲಾ ಮಾಡುತ್ತಿದೆ. ಅಕ್ರಮಕ್ಕೆ ಸರ್ಕಾರ ಸಾಥ್ ಕೊಡ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದೀಗ ಕೆಪಿಎಸ್ಸಿಯಲ್ಲಿ ಅಂತಿಮ ಆಯ್ಕೆ ಪಟ್ಟಿಯೇ ನಾಪತ್ತೆ ಆಗಿದೆ ಎಂದು ದೂರು ದಾಖಲಾಗಿದೆ.

ಕೆಪಿಎಸ್ಸಿ ನೇಮಕಾತಿ ಅಂದ್ರೆ ಗಜಪ್ರಸವ ಎನ್ನುವಂತೆ ಆಗುತ್ತದೆ ಎಂದು ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ಬರೆಯುವ ಆಕಾಂಕ್ಷಿಗಳು ಆರೋಪಿಸುತ್ತಾರೆ. ಇದೀಗ ಕೆಪಿಎಸ್ಸಿ ನೇಮಕಾತಿ ಆಯ್ಕೆ ಪಟ್ಟಿಯೇ ನಾಪತ್ತೆ ಆಗಿದೆ. ಆಯ್ಕೆ ಪಟ್ಟಿ ನಾಪತ್ತೆ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಕೆಪಿಎಸ್ಸಿ ಅಧಿಕಾರಿ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. 2016ರಲ್ಲಿ ನಡೆದ ಕೊಳಗೇರಿ ಮಂಡಳಿ ಜೂನಿಯರ್ ಇಂಜಿನಿಯರ್ ನೇಮಕಾತಿ ಹಾಗು 2018 ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ ಮಾಡಲಾಗಿತ್ತು. ಇದನ್ನ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಆಕಾಂಕ್ಷಿ. ಆ ಬಳಿಕ ಹೈಕೋರ್ಟ್ ಆದೇಶದಂತೆ ಆಯ್ಕೆ ಪಟ್ಟಿ ತಯಾರಿ ಮಾಡಲಾಗಿತ್ತು. ಇದೀಗ ಆ ಪಟ್ಟಿಯೇ ನಾಪತ್ತೆ ಆಗಿದೆ.
ಕೆಪಿಎಸ್ಸಿ ಗೌಪ್ಯ ಘಟಕ -3 ರಲ್ಲಿ ಆಯ್ಕೆ ಪಟ್ಟಿ ತಯಾರಿಸಲಾಗಿತ್ತು. ಜನವರಿ 22 ರಂದು ಕಾರ್ಯದರ್ಶಿಯವರ ಆಪ್ತ ಶಾಖೆಯಲ್ಲಿ ಕಡತ ಸ್ವೀಕಾರ ಮಾಡಿದ್ದಾರೆ. ಆ ಬಳಿಕ ಕಡತ ನಾಪತ್ತೆ ಆಗಿದೆ ಎಂದು ದೂರು ಸಲ್ಲಿಸಲಾಗಿದೆ. ಕೆಪಿಎಸ್ಸಿಯ ಎಲ್ಲಾ ಶಾಖೆಗಳಲ್ಲೂ ಕಡತಕ್ಕಾಗಿ ಶೋಧ ಕಾರ್ಯ ನಡೆಸಲಾಗಿದೆ. ಕಡತ ಪತ್ತೆಯಾದಲ್ಲಿ ಕೂಡಲೇ ಶಾಖೆ-2 ಕ್ಕೆ ಹಿಂದಿರುಗಿಸುವಂತೆ ಜ್ಞಾಪನ ಪತ್ರ ಕೂಡ ಹೊರಡಿಸಲಾಗಿತ್ತು. ಸುಮಾರು ಒಂದು ತಿಂಗಳ ಕಾಲ ಕಡತಕ್ಕಾಗಿ ಅಧಿಕಾರಿಗಳು ಹಾಗು ಸಿಬ್ಬಂದಿ ಶೋಧ ನಡೆಸಿದ ಬಳಿಕ ದೂರು ಎಂದು ಉಲ್ಲೇಖ. ಕಡತ ನಾಪತ್ತೆ ಬಗ್ಗೆ ದೂರು ದಾಖಲಿಸಲು ಆಯೋಗದ ಸಭೆಯಲ್ಲಿ ನಿರ್ಧಾರ ಮಾಡಿ ದೂರು ನೀಡಿದ್ದೇವೆ ಎನ್ನಲಾಗಿದೆ.

ಕೆಪಿಎಸ್ಸಿ ಸಹಾಯಕ ಕಾರ್ಯದರ್ಶಿ ದೂರು ನೀಡಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ವಿಭಾಗ ಡಿಸಿಪಿ ಶೇಖರ್, ಕಡತ ನಾಪತ್ತೆ ಬಗ್ಗೆ ಕೆಪಿಎಸ್ಸಿ ಕಾರ್ಯದರ್ಶಿ ದೂರು ಕೊಟ್ಟಿದ್ದಾರೆ. ಆಯೋಗದಲ್ಲಿ ಕಡತ ನಾಪತ್ತೆಯಾಗಿತ್ತು. 2016ರಲ್ಲಿ ಕೊಳಗೇರಿ ಮಂಡಳಿ JE ಸಿವಿಲ್ ನೇಮಕಾತಿ ನಡೆದಿತ್ತು. 2018ರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ ಆಗಿತ್ತು. ಇದನ್ನ ಪ್ರಶ್ನಿಸಿ ಅಭ್ಯರ್ಥಿಯೊಬ್ಬರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ರು. ಹೈಕೋರ್ಟ್ ಆದೇಶ ಪಾಲನೆಗೆ ಆಯ್ಕೆ ಪಟ್ಟಿ ಸಿದ್ದವಾಗಿತ್ತು. ನಂತರ ಕಾರ್ಯದರ್ಶಿ ಕಚೇರಿಯಲ್ಲಿ ಕಡತ ಸ್ವೀಕಾರಗೊಂಡಿದೆ. ಆ ನಂತರ ಆ ಕಡತ ನಾಪತ್ತೆಯಾಗಿತ್ತು. ಸದ್ಯಕ್ಕೆ ಗುಮಾನಿ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ನಾವು ಎಲ್ಲಾ ಮಾಹಿತಿ ಕೇಳಿದ್ದೇವೆ, ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಕೆಪಿಎಸ್ಸಿ ಮೂಲಕ ಕೆಲಸ ತೆಗೆದುಕೊಳ್ಳುವುದು ಎಂದರೆ ಬಿಳಿಯಾಣೆಯನ್ನು ಸಾಕಿದಂತೆ ಅನ್ನೋ ಮಾತು ಜನಜನಿತವಾಗಿದೆ. ರಾಜಕಾರಣಿಗಳೂ ಈ ಭ್ರಷ್ಟಾಚಾರದ ಪ್ರಮುಖ ಪಾತ್ರಧಾರಿಗಳು ಎನ್ನಲಾಗುತ್ತದೆ. ಅಲ್ಲಿಗೆ ನೇಮಕವಾಗುವ ಅಧ್ಯಕ್ಷರು, ಸದಸ್ಯರ ಮೇಲೂ ಒಳ್ಳೆಯ ಮಾತುಗಳು ಕೇಳಿ ಬರುವುದಿಲ್ಲ. ಇನ್ನು ನೇಮಕಾತಿ ವಿಳಂಬದ ಬಗ್ಗೆ ಪದೇ ಪದೇ ಹೋರಾಟಗಳು ನಡೆಯುತ್ತಲೇ ಇರುತ್ತವೆ. ಯಾರೇ ಅಧಿಕಾರಕ್ಕೆ ಬಂದರು ಕೆಪಿಎಸ್ಸಿ ಕರ್ಮಕಾಂಡ ಸರಿ ಮಾಡುವ ಮನಸ್ಸು ಮಾಡುವುದಿಲ್ಲ ಎನ್ನುವ ಬೇಸರ ಆಕಾಂಕ್ಷಿಗಳಲ್ಲಿ. ಇದೀಗ ನೇಮಕಾತಿ ಪಟ್ಟಿಯೇ ನಾಪತ್ತೆ ಎಂದರೆ ಎಷ್ಟರ ಮಟ್ಟಿಗೆ ಆಡಳಿತ ನಡೆಯುತ್ತಿದೆ ಎನ್ನುವುದನ್ನು ಸರಳವಾಗಿ ಊಹೆ ಮಾಡಬಹುದಾಗಿದೆ.
